ದೇವದಾಸರ ಜೀವನದ ರೇಖೆ “ದೇವುದಾಸ’
Team Udayavani, Jan 19, 2018, 2:41 PM IST
“ಕುಂಚ ಮತ್ತು ಬಣ್ಣ ನನ್ನ ಹೋರಾಟದ ವಸ್ತುವಾಗಿದ್ದು, ಅದು ಸೂತ್ರ ಕಡಿದು ಬೇರೆಯವರ ದಾರದಿಂದ ಕತ್ತರಿಸಿ ದೂರ ಹಾರಿ ಬೀಳುವ ಹೋರಾಟದಂತಾಗಿದ್ದರೂ ನಾನು ಹೋರಾಡಿದ್ದೆ ಜಗದ ಕಣ್ಣುಗಳಿಗೆ… ದೇವರೆಲ್ಲೋ ನಿದ್ರಾವಸ್ಥೆಯಲ್ಲಿ ನನ್ನ ನಿರ್ಮಿಸಿ ದೂರ ಬಹು ದೂರ ಬಿಸಾಡಿದಂತಿತ್ತು. ನಿರಂತರ ಹೋರಾಟದಿಂದಾಗಿ ಶೂನ್ಯದಿಂದ ಅನಂತಕ್ಕೆ ಏರುವ ಫಲಿತಾಂಶವು ನನ್ನ ಮಡಿಲನ್ನಾವರಿಸಿತ್ತು.’ ಇದು ಮಂಬಯಿಯ ಖ್ಯಾತ ಕಲಾವಿದರಾದ ದೇವದಾಸ ಶೆಟ್ಟಿಯವರು ತನ್ನ ಬದುಕಿನ ಅನುಭವಗಳನ್ನು ವಿವರಿಸಿದ ರೀತಿ. ಇವರು “ದೇವುದಾಸ’ಎಂಬ ತನ್ನದೇ ಜೀವನದ ರೇಖೆಗಳನ್ನು ಚಿತ್ರಿಸಿ ಕೃತಿ ರೂಪದಲ್ಲಿ ತಂದಿರುವುದು ಒಂದು ವಿಶಿಷ್ಟ ಪರಿಕಲ್ಪನೆಯ ಮೆಟ್ಟಿಲಾಗಿರುತ್ತದೆ. ಮಹಾನಗರ ಮುಂಬಯಿಗೆ ಹೋಗಿ ಬದುಕೇ ಶೂನ್ಯವಾದಾಗ, ಶೂನ್ಯದೊಳಗೂ ಮೆಟ್ಟಿಲುಗಳನ್ನು ಕಟ್ಟಿ ಆಕಾಶವೇರಬಹುದೆಂಬುದನ್ನು ಈ ಪುಸ್ತಕದಲ್ಲಿ ತನ್ನದೇ ಆದ ವಿಶಿಷ್ಟ ರೇಖಾ ಚಿತ್ರಗಳೊಂದಿಗೆ ಭಾವನಾತ್ಮಕವಾಗಿ, ಕಲಾತ್ಮಕವಾಗಿ ಛಾಪಿಸಿದ್ದಾರೆ. ಇವರ ಬಾಲ್ಯದ ಬಡತನವು ಜಡತನವನ್ನು ನಿರ್ಮಿಸದೇ ದುಡಿತದ ತುಡಿತವನ್ನು ಹೆಚ್ಚಿಸಿಕೊಂಡ ಕಾರಣ ಮಿತ್ರತ್ವವನ್ನು, ಮಾನವತ್ವವನ್ನು ಹೆಚ್ಚಿಸಿಕೊಳ್ಳುತ್ತಾ ತನ್ನ ಒಂಟಿ ಬದುಕಿಗೆ ಒಂದು ತತ್ವವನ್ನು ಕಟ್ಟಿಕೊಳ್ಳಬೇಕೆಂಬ ಧ್ಯೇಯ ಹಾಗೂ ಹಠ ಸಾಧನೆಗಳಿಂದ ಊರೂರು ಅಲೆಯುತ್ತಾ ಕಲೆಯ ಅನ್ವೇಷಣೆಯಲ್ಲಿ ಅಲೆಮಾರಿಯಾದರೂ ಒಂಟಿ ಜೀವನದಲ್ಲಿ ಬಣ್ಣ, ಕುಂಚಗಳೆ ಜಂಟಿಯಾಗಿದ್ದಾಗ ಏನೋ ಇದೆ, ಎಲ್ಲೋ ಇದೆ ಎಂಬ ಪ್ರಶ್ನೆಗಳಿಲ್ಲದ ಉತ್ತರಗಳು ಲಭಿಸಿದವು. ಬಣ್ಣದ ಜಾತ್ರೆಯನ್ನು ಅರಸುವ ನಿರಂತರ ಯಾತ್ರೆಯಲ್ಲಿ ಗಳಿಸಿದ್ದೊಂದೇ ಭ್ರಮೆ ನಿರಸನ, ಜೊತೆಗೊಂದಷ್ಟು ಬಣ್ಣ ರಹಿತ ವೇದನೆಗಳು.
ಪಯಣದುದ್ದಕ್ಕೂ ಕಲಾಜೀವನದ ಅನ್ವೇಷಣೆಯಲ್ಲಿ ಈಜಿ ಈಜಿ ಸುಸ್ತಾಗಿ ಬಳಲಿ ಬೆಂಡಾದದ್ದೇ ಹೊರತು ದೂರ ತೀರವ ಸೇರುವ ಆಸೆ ಈಡೇರಲೇ ಇಲ್ಲ. ಆಗ ಅದೆಷ್ಟೋ ಬಾರಿ ಸತ್ತು ಬದುಕಿದರೂ ಕಂಬನಿ ಹಾಕುವವರಿಲ್ಲ, ಸಂಕಟ ಪಡುವವರಿಲ್ಲ, ಸಂತಸ ಕೊಡುವವರಿಲ್ಲ ಎಂಬಂತಹ ಬದುಕು ಇವರದ್ದಾಗಿತ್ತು. ಕಲಾ ಮಿತ್ರರ ಹುಡುಕಾಟದಲ್ಲಿ ಮಿತ್ರರು ಲಭಿಸದಿದ್ದರೂ ಬಾಳ ಸಂಗಾತಿ ಸುಮಿತ್ರರವರು ಹತ್ತಿರವಾದಾಗ ಸಾಧಿಸುವ ಸಾಧ್ಯತೆಗೆ ಸಂಗಾತಿಯ ಕರ ಮತ್ತು ಸ್ವರಗಳು ಶಕ್ತಿ ನೀಡಿದವು. ಕತ್ತಲೆಯಾದ ಬದುಕಿಗೆ ಅಳುಕು ಹೇಗೆ ಸಹಜವೋ, ಅಳುಕಿಗೆ ಬೆಳಕು ನೀಡಿ ಶೋಭಿಸುವ ಧೈರ್ಯವನ್ನು ಕೈ ಹಿಡಿದ ಸಂಗಾತಿಯೇ ನೀಡಿದಾಗ ಹಣತೆ ದೀಪ ಹಚ್ಚಿರುವ ಕೈಯೇ ದೀವಟಿಗೆಯನ್ನು ಉರಿಸಿ ಜ್ವಾಲಾ ಬೆಳಕನ್ನು ಆಕಾಶಕ್ಕೆ ಏರಿಸುವ ಪ್ರಯತ್ನವೂ ಸಾಧಿಸುವ ಪಥದಲ್ಲೇ ಲಭಿಸಿದಂತಾಯಿತು.
ಕಲ್ಪನೆಯ ಬಣ್ಣಗಳೆಲ್ಲವೂ ಅನಂತವೆಂಬ ಗುರಿ ಸೇರುವ ಕ್ಯಾನ್ವಾಸ್ ಚೌಕಟ್ಟುಗಳೊಳಗೆ ಸೇರಿ ಬಣ್ಣದ ಪಯಣ ಭುವಿಯಿಂದ ಬಾನಿಗೇರಲಾರಂಭಿಸಿತು. ಕಪ್ಪು ಬಿಳುಪಿನಲ್ಲಿದ್ದ ಕನಸುಗಳು ಬಣ್ಣಗಳಾಗಿ, ಬಣ್ಣಗಳು ಕ್ಯಾನ್ವಾಸಿನ ತೋರಣಗಳಾಗಿ ನೆಲಕ್ಕೂ ಆಗಸಕ್ಕೂ ಸಂಕಲೆಯಾಗಿ ಇವರ ಯಾತ್ರೆಯು ಆರೋಹಣವಾಗಿ ಕನಸಿನ ಬಣ್ಣದ ಜಾತ್ರೆಯನ್ನೇ ನೋಡುವಂತಾಯಿತು. ಕಲಾ ಪ್ರಪಂಚದ ಅಂಕುಡೊಂಕು ಹಾದಿಯಲ್ಲಿ ರಾತ್ರಿಯ ನೀರವತೆಯ ಚಂದ್ರನಲ್ಲಿ ಹಗಲಿನ ಸೂರ್ಯನ ಬೆಳಕನ್ನು ಕಾಣುವ ಶಕ್ತಿಗೆ ಮನಸಿನ ಧ್ಯೇಯೋಕ್ತಿ ಮುಖ್ಯವೇ ಹೊರತು ಭ್ರಮೆ ನಿರಸನವಲ್ಲ ಎಂಬುದು ಅರಿವಾದಾಗ ಖಾಲಿ ಕ್ಯಾನ್ವಾಸ್‌ಗಳೆಲ್ಲವೂ ಬಣ್ಣ ತುಂಬಿದವು. ಖಾಲಿಯಾದ ಶೂನ್ಯ ಮನಸುಗಳೆಲ್ಲವೂ ಬಣ್ಣ ತುಂಬಿದ ಸಂಭ್ರಮದಲ್ಲಿ ಹೋರಾಟದ ಸಫಲತೆಗೆ ಧನ್ಯವಾದವು ಮಾತ್ರವಲ್ಲ ಶೂನ್ಯದಿಂದ ಅನಂತರಕ್ಕೇರಿದವು, ಕತ್ತಲೆಯಿಂದ ಬೆಳಕಿನತ್ತ ಸಾಗಿದವು. ದೇವದಾಸರ ನಿರಂತರ ಬಣ್ಣದ ಹೋರಾಟದಿಂದ ತನ್ನದೇ ಆದ ಶೈಲಿಯೊಂದಿಗೆ ಸಮಾಜದ ವಾಸ್ತವ ವಿಚಾರಗಳ ಕಲಾಕೃತಿಗಳಾಗಿ ಗ್ಯಾಲರಿಯಿಂದ ಮನೆಮನೆಗಳಲ್ಲಿ ಬದುಕಿನ ಪಾಠ ಹೇಳಿದವು.
ಎಲ್ಲೋ ಯಾರೋ ಕಳೆದುಕೊಂಡ ಬದುಕಿಗೆ, ಮೌನಕ್ಕೆ ಸ್ವರವಾಗುವ, ಕರವಾಗುವ ತಾಕತ್ತುಗಳು ಮಾತಾಡಲಾರಂಭಿಸಿದವು. ತನ್ನನ್ನೇ ತಾನು ಕಳೆದುಕೊಂಡು ಹೋಗಿದ್ದ ದೇವದಾಸರು ಕತ್ತು ಎಬ್ಬಿಸಿ ಕತ್ತಲೆಯನ್ನು ಅಟ್ಟಿಸಿ ಬಣ್ಣಗಳ ಯಾನದಲ್ಲಿ ಕ್ಷಿತಿಯಿಲ್ಲದ ಶಿಖರದತ್ತ, ಅಂತ್ಯವಿಲ್ಲದ ಸಾಗರದತ್ತ ದಾಟಿದರು. ಮುಂಬಯಿಯಂತಹ ಶಹರದ ಬೆಳಕಿನಲ್ಲಿ ದೇವದಾಸರ ಬಣ್ಣದ ಬೆಳಕು ಕೂಡಾ ಶೋಭಿಸಿತೆಂದರೆ ಇದುವೇ ಅವರ ಹೋರಾಟದ ಯಶಸ್ಸಿನ ದೀವಟಿಗೆ. 75ಕ್ಕೂ ಹೆಚ್ಚು ಏಕ ವ್ಯಕ್ತಿ ಚಿತ್ರಕಲಾ ಪ್ರದರ್ಶನವನ್ನು ಮಾಡಿರುವರೆಂದರೆ ಇವರ ಗೆಲುವಿಗೆ, ಗುರಿ ಸೇರುವ ನಿಲುವಿಗೆ ಬೇರೆ ನಿದರ್ಶನ ಬೇಕೇ? ತನ್ನ ಬಾಲ್ಯದ ದಾರಿದ್ರ್ಯಗಳು ಇನ್ನೂ ಮುಂಬೈಯ ಗಲ್ಲಿಯಲ್ಲಿ ಜೀವಂತವಾಗಿರುವುದನ್ನೇ ಮತ್ತೆ ಬಣ್ಣಗಳಲ್ಲಿ ಸೂತ್ರ ಕಟ್ಟುವ ಪಾತ್ರಧಾರಿಯಾದರು. ಕಲಾಕೃತಿಗಳಿಂದ ಎಷ್ಟು ಬದಲಾವಣೆಯೋ, ಎಷ್ಟು ಸಂಚಲನವೋ…? ಆದರೆ ತನ್ನ ಕಲಾತ್ಮಕ ಧೋರಣೆಗಳು ಸಂವಹನದ ಸಂಕಲನಗಳಾಗಬೇಕೆಂಬ ಪರಿಕಲ್ಪನೆ ಇವರ ನಿತ್ಯ ಸಂಕಲ್ಪಗಳಾಗಿರುತ್ತವೆ. ದೇವದಾಸರ ಜೀವನದ ರೇಖೆಗಳು ಇವರ ಕಳೆದು ಹೋದ ಸ್ವಂತಿಕೆಯ ನಿರ್ಧಾರಗಳು ನಿಧಾನವಾಗಿಯಾದರೂ ಜೀವಂತಿಕೆ ಪಡೆದು ಶೋಭಿಸಿರುವುದು ಸತ್ಯ ಸಾಕ್ಷಾತ್ಕಾರಕ್ಕೊಂದು ಸಾರ್ವತ್ರಿಕ ಉದಾಹರಣೆಯಾಗಿರುತ್ತದೆ.
ದಿನೇಶ್ ಹೊಳ್ಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ
ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ
Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್ ಜೈಕಾರ !
Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ
Idu Entha Lokavayya: “ಕೋಸ್ಟಲ್” ನಿಂದ ಕರುನಾಡು!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.