ಇಂಪ್ರಷನ್‌ನಲ್ಲಿ ಭಾವಾಭಿವ್ಯಕ್ತಿ
Team Udayavani, Oct 11, 2019, 3:18 AM IST
ಉಡುಪಿಯ ಚಿತ್ರಕಲಾ ಮಂದಿರ ಕಲಾ ವಿದ್ಯಾಲಯದ ಹದಿನೆಂಟು ಮಂದಿ ವಿದ್ಯಾರ್ಥಿಗಳು ಜಂಗಮ ಮಠದ ವಿಭೂತಿ ಆರ್ಟ್ ಗ್ಯಾಲರಿಯಲ್ಲಿ ಇಂಪ್ರಷನ್ ಎನ್ನುವ ಶೀರ್ಷಿಕೆಯಡಿ ಮೂವತ್ತೆರಡು ಕಲಾಕೃತಿಗಳನ್ನು ಪ್ರದರ್ಶಿಸಿದ್ದರು. ವಿಶೇಷವಾಗಿ ಈ ಕೃತಿಗಳು ಇಂಕ್ ಪೆನ್ ವರ್ಕ್ ಎನ್ನುವ ಏಕವರ್ಣ ಕಲಾಕೃತಿಗಳಾಗಿದ್ದವು. ಕೃತಿಗಳಲ್ಲಿರುವ ದಪ್ಪನೆಯ ಹಾಗೂ ತೆಳುವಾದ ಕಪ್ಪು ರೇಖೆಗಳು ಮತ್ತು ಚುಕ್ಕೆಗಳೊಂದಿಗೆ ಸೂಕ್ಷ್ಮ ಕುಸುರಿ ಕೆಲಸದ ವಿನ್ಯಾಸಗಳು ಕಪ್ಪು ಬಿಳುಪು ಛಾಯಾಚಿತ್ರಗಳಲ್ಲಿ ನಾವು ಕಾಣಬಹುದಾದಂತಹ ಅತೀ ನೆರಳಿನ ಛಾಯೆ, ಅತೀ ಬೆಳಕಿನ ಛಾಯೆ ಮತ್ತು ಮಧ್ಯಮ ಛಾಯೆಯನ್ನು ಪ್ರತಿನಿಧಿಸುವುದರ ಜೊತೆಗೆ ಕೃತಿಕಾರನ ಚಿಂತನಾಭಿವ್ಯಕ್ತಿಯೊಂದಿಗೆ ಆತನ ಕೌಶಲ್ಯವನ್ನೂ ಅನಾವರಣಗೊಳಿಸಿತ್ತು.
ಸಮಕಾಲೀನ ಚಿಂತನೆಯ ಕಲಾಕೃತಿಗಳೊಂದಿಗೆ ಪೌರಾಣಿಕ ಹಿನ್ನೆಲೆಯ ಕೃತಿಗಳೂ ಜೊತೆಗಿದ್ದವು. ಹಸಿರು ಪರಿಸರವನ್ನೇ ನುಂಗಿ ಸಾಗುತ್ತಿರುವ ಬೃಹತ್ ಕಟ್ಟಡಗಳ ಸಾಲುಗಳು, ಗ್ರಾಮೀಣ ಜನರ ನೆಮ್ಮದಿಯ ಬದುಕನ್ನು ಕಸಿಯುತ್ತಿರುವ ಆಧುನಿಕತೆ, ನಮ್ಮ ಸಂಸ್ಕೃತಿಯ ಪ್ರತೀಕವಾದ ಶಿಲಾ ಶಾಸನ ಮತ್ತು ಶಿಲ್ಪ ಕಲಾಕೃತಿಗಳ ನಾಶ, ಅನ್ಯಗ್ರಹದ ಕಾಲ್ಪನಿಕ ಜೀವಿಗಳ ಲೋಕ, ಬಲಾಡ್ಯರ ಕಪಿಮುಷ್ಟಿಯೊಳಗೆ ಅಸಹಾಯಕರು, ಬದುಕು ಮತ್ತು ಚದುರಂಗದಾಟ, ಕಡಲಾಳದ ಮತ್ಸ್ಯ ಸಂಕುಲದ ಸುಂದರ ಬದುಕು, ಭ್ರೂಣಾವಸ್ಥೆಯಲ್ಲಿರುವ ಶಿಶು ಹಾಗೂ ಹೊರಗಿನ ಕ್ರೂರ ಜಗತ್ತು, ಹೆಣ್ಣಿನ ಶೋಷಣೆ, ಮಾನಸಿಕ ಒತ್ತಡ, ಸ್ತ್ರೀ ಸಂವೇದನೆ ಹೀಗೆ ಹಲವಾರು ಕೃತಿಗಳು ಪ್ರದರ್ಶನಾಂಗಣದಲ್ಲಿದ್ದವು. ಜಾನ್ಹವಿ ಉಪಾಧ್ಯ, ಪ್ರದೀಪ್ ಕುಮಾರ್, ಭರತ್ ಹಾವಂಜೆ, ತೇಜರಾಜು, ರಾಘವೇಂದ್ರ ಆಚಾರಿ, ಅರವಿಂದ ಭಟ್, ಸಹನಾ ಆರ್. ಕೆ., ಪ್ರಶಾಂತ್ ಶ್ರೀಯಾನ್, ಪವಿತ್ರಾ, ಪಾರ್ವತಿ, ಅರ್ಜುನ್ ಜಿ, ತಿಲಕ್ ನಾೖಕ್, ಮನೋಜ್, ವಿನಯ ಆಚಾರ್ಯ, ಭವಿತ್ ಬಾಬು, ರಮೇಶ್ ಆಚಾರ್ಯ, ರವಿಕಾಂತ ಆಚಾರ್ಯ ಮತ್ತು ಹರ್ಷಲ್ ಸುವರ್ಣ ಇವರುಗಳು ತಮ್ಮ ಮನದ ಅಭಿವ್ಯಕ್ತಿಯನ್ನು ಕಲಾಕೃತಿಗಳಲ್ಲಿ ಜಾಣ್ಮೆ, ತಾಳ್ಮೆ ಮತ್ತು ಕೌಶಲ್ಯತೆಯೊಂದಿಗೆ ಅನಾವರಣಗೋಳಿಸಿರುವುದು ಪ್ರಶಂಸಾರ್ಹವಾಗಿತ್ತು.
-ಕೆ. ದಿನಮಣಿ ಶಾಸ್ತ್ರಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.