ಮರುಭೂಮಿಯಲ್ಲಿ ಗಜೇಂದ್ರ ಮೋಕ್ಷ
Team Udayavani, Feb 28, 2020, 3:45 AM IST
ಹವ್ಯಾಸಿ ಸಂಘವೊಂದು ದುಬಾಯಿಯಲ್ಲಿ ವೃತ್ತಿ ಪರ ಕಲಾವಿದರಿಗೆ ಸರಿಸಾಟಿಯಾಗಿ ತೆಂಕುತಿಟ್ಟು ಯಕ್ಷಗಾನ ಪ್ರದರ್ಶನ ನೀಡಿ ಸೈ ಎನಿಸಿಕೊಂಡಿತು.
ಯಕ್ಷಗುರು ರಾಕೇಶ್ ರೈ ಅಡ್ಕರವರ ನೇತೃತ್ವದಲ್ಲಿ ಪಣಂಬೂರು ವೆಂಕಟ್ರಾಯ ಐತಾಳ ಸಾಂಸ್ಕೃತಿಕ ಪ್ರತಿಷ್ಠಾನ ಉಡುಪಿ ಇದರ ಯಕ್ಷಾಂಬುಧಿ ಉಡುಪಿ ಹವ್ಯಾಸಿ ತೆಂಕುತಿಟ್ಟು ಯಕ್ಷಗಾನ ಬಳಗದಿಂದ ದುಬಾಯಿಯಲ್ಲಿ ಗಜೇಂದ್ರ ಮೋಕ್ಷ ಎಂಬ ತೆಂಕುತಿಟ್ಟು ಯಕ್ಷಗಾನ ಕಥಾನಕವನ್ನು ಜ.24ರಂದು ಆಡಿ ತೋರಿಸಲಾಯಿತು.
ಸಿರಿಬಾಗಿಲು ರಾಮಕೃಷ್ಣ ಮಯ್ಯರ ಭಾಗವತಿಕೆ, ಪ್ರಶಾಂತ್ ಶೆಟ್ಟಿ ವಗೆನಾಡು ಇವರ ಮದ್ದಳೆಯೊಂದಿಗೆ ಚೆಂಡೆಯ ಮಾಂತ್ರಿಕ ಮುರಾರಿ ಕಡಂಬಳಿತ್ತಾಯರ ಹಾಗೂ ಕೃಷ್ಣ ಪ್ರಸಾದ ರಾಯರ ಚಕ್ರತಾಳದ ಹಿಮ್ಮೇಳವಿತ್ತು.
ವಿಶೇಷ ಪಾತ್ರದಲ್ಲಿ ಪರಂಪರೆಯ ಇಂದ್ರದ್ಯುಮ್ನನ ಒಡ್ಡೋಲಗದಿಂದ ರಾಕೇಶ್ ರೈಯವರು ಶಿಷ್ಯರಾದ ಮಿಲನ್(ದೃಷ್ಟದ್ಯುಮ್ನು) ಮತ್ತು ಶರತ್ ಶೆಟ್ಟಿಯವರ (ಚಂದ್ರದ್ಯುಮ್ನ) ಜತೆ ಪ್ರವೇಶಿಸಿದರು. ಶಿಷ್ಯರೊಂದಿಗೆ ನಡೆಸಿದ ತೆರೆ ಪಾರ್ಪಾಟು ಸುಂದರವಾಗಿತ್ತು. ಯವನಾಶ್ವನಾಗಿ ಕಾಣಿಸಿಕೊಂಡ ಅಶ್ವತ್ ಸರಳಾಯ ಪ್ರಬುದ್ಧ ಅಭಿನಯದೊಂದಿಗೆ ಹೆಜ್ಜೆಗಾರಿಕೆ ಹಾಗೂ ಮಾತುಗಾರಿಕೆಯಲ್ಲಿ ಮನಸೆಳೆದರು.
ಇವರಿಗೆ ಸಮರ್ಥವಾಗಿ ಬಲಗಳಾಗಿ ರಂಜಿಸಿದ ಮಾ| ಸುಧನ್ವ ಮುಂಡ್ಕೂರ್ (ಕಾಲ ಜಂಘ) ಮತ್ತು ಮಾ| ಸುಮನ್ಯು ಮುಂಡ್ಕೂರ್ (ನಾಡಿ ಜಂಘ) ಏಕಕಾಲದ ಪ್ರವೇಶ ಮತ್ತು ಹೊಂದಾಣಿಕೆಯ ಸಮಯೋಚಿತ ಚಲನೆಗಳು ಮನಮೋಹಕವಾಗಿತ್ತು. ಪ್ರಬುದ್ಧ ಅಭಿನಯ, ಸ್ಪಷ್ಟ, ನಿರರ್ಗಳ ಮಾತುಗಾರಿಕೆ, ಮೋಹಕ ಕುಣಿತದಲ್ಲಿ ಈ ಮಕ್ಕಳ ಕ್ರಿಯಾಶೀಲತೆ ವ್ಯಕ್ತಗೊಂಡಿತು.
ಗಂಧರ್ವನಾಗಿ ಪ್ರವೇಶಿಸಿದ ಕು| ವಿಂಧ್ಯಾ ಆಚಾರ್ಯ ಸೊಗಸಾಗಿ ಪಾತ್ರ ನಿರ್ವ ಹಿಸಿದರು. ಸುಂದರ ಮುಖವರ್ಣಿಕೆಗೆ ಪೂರಕವಾಗಿದ್ದ ಮುಖಾಭಿನಯ, ಏರಿಳಿತ ಸಹಿತವಾದ ಸ್ಪಷ್ಟ ಮಾತುಗಾರಿಕೆ, ವೈವಿಧ್ಯತೆಯಿಂದ ತುಂಬಿದ್ದ ಯಕ್ಷನೃತ್ಯ, ವನಸಂಚಾರ ಹಾಗೂ ಜಲಕ್ರೀಡೆ ನಯನ ಮನೋಹರವಾಗಿತ್ತು. ಪೂರಕವಾಗಿ ಸ್ಪಂದಿಸಿದ ಕು| ವನ್ಯಶ್ರೀಯವರ (ಗಂಧರ್ವ ಪತ್ನಿ) ನಾಟ್ಯ, ಒನಪು ವಯ್ನಾರ, ಬಳುಕುಗಳಿಂದ ತುಂಬಿತ್ತು. ಕ್ರೋಧದಿಂದ ಶಪಿಸುವ ಮುನಿಗಳಾಗಿ ರೌದ್ರ ರಸವನ್ನು ಸಮರ್ಥವಾಗಿ ನಿರ್ವಹಿಸಿದ ರವಿನಂದನ ಭಟ್(ಅಗಸ್ತ್ಯ ಮುನಿ) ಹಾಗೂ ಶರತ್ ಶೆಟ್ಟಿ (ದೇವಳ ಮುನಿ) ಪೋಷಕ ಪಾತ್ರಗಳಿಗೆ ಜೀವ ತುಂಬಿದರು.
ಗಜೇಂದ್ರನಾಗಿ ಡಾ| ಸುನೀಲ್ ಸಿ. ಮುಂಡ್ಕೂರ್‌ರವರು ಮದಗಜದ ಸ್ಪಷ್ಟ ಚಿತ್ರಣ ನೀಡುವಲ್ಲಿ ಸಫಲರಾದರು. ಗತ್ತಿನ ಲಯಬದ್ಧ ಹೆಜ್ಜೆಗಾರಿಕೆ, ಶ್ರುತಿಬದ್ಧವಾದ ಮಾತುಗಾರಿಕೆ, ಹಿತಮಿತವಾದ ಅಭಿನಯ, ಅಮೋಘ ಮುಖವರ್ಣಿಕೆ ಹಾಗೂ ಪಾತ್ರೋಚಿತವಾದ ಶರೀರ ಗಜೇಂದ್ರನ ಪಾತ್ರಕ್ಕೆ ಜೀವ ತುಂಬಿತು. ಅದಕ್ಕೆ ಪೂರಕವಾಗಿ ಮಕರನಾಗಿ ಸಂದೀಪ್ ಶೆಟ್ಟಿಗಾರ್ ಸುಂದರ ಮುಖವರ್ಣಿಕೆ, ಪರಿಣಾಮಕಾರಿ ಅಭಿನಯ, ನೇರವಾದ ನುಡಿಗಳು ಹಾಗೂ ಸಮರ್ಪಕ ರಂಗ ನಡೆಯಿಂದ ತಾನು ಯಾವುದೇ ವೃತ್ತಿ ಕಲಾವಿದನಿಗೆ ಕಡಿಮೆಯಿಲ್ಲ ಎಂದು ತೋರಿಸಿಕೊಟ್ಟರು. ಮಹಾವಿಷ್ಣು (ಮಿಲನ್) ತನ್ನ ಅಮೋಘ ಗಿರಕಿಗಳಿಂದ ರಂಜಿಸಿದರು.
ಒಟ್ಟಿನಲ್ಲಿ ಪರಂಪರೆಯ ಚೌಕಟ್ಟಿಗೆ ಮೀರದಂತೆ, ನವರಸಗಳನ್ನು ಪ್ರದರ್ಶಿಸಿ, ನೃತ್ಯ ವೈವಿಧ್ಯ, ಪಾತ್ರ ವೈವಿಧ್ಯ, ಅಭಿನಯ ಪ್ರಾವೀಣ್ಯ, ಮಾತುಗಾರಿಕೆ, ಹೆಜ್ಜೆಗಾರಿಕೆಯಿಂದ ಪ್ರೇಕ್ಷಕರನ್ನು ಮೂರು ತಾಸುಗಳ ಕಾಲ ಹಿಡಿದಿಟ್ಟುಕೊಳ್ಳುವಲ್ಲಿ ಸಫಲವಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ
ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ
Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್ ಜೈಕಾರ !
Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ
Idu Entha Lokavayya: “ಕೋಸ್ಟಲ್” ನಿಂದ ಕರುನಾಡು!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.