ರಾಜಾಂಗಣದಲ್ಲಿ ಹರಿದ ಹರಿಭಕ್ತಿ
Team Udayavani, Jun 7, 2019, 5:45 AM IST
ಯಕ್ಷಗಾನ ಕಲಾರಂಗವು ಶ್ರೀಕೃಷ್ಣ ಮಠ ಮತ್ತು ಕನ್ನಡ-ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ ತಾಳಮದ್ದಲೆ ಸಪ್ತಾಹದಲ್ಲಿ ಹರಿಭಕ್ತಿ ಪಾರಮ್ಯ ಶೀರ್ಷಿಕೆಯಲ್ಲಿ ಪ್ರಸ್ತುತಪಡಿಸಿದ ಏಳು ಪ್ರಸಂಗಗಳು ಯಕ್ಷ ರಸಿಕರಿಗೆ ಜ್ಞಾನಸತ್ರವಾಯಿತು. ಹರಿಭಕ್ತಿ ಪಾರಮ್ಯ ಎಂಬ ಶೀರ್ಷಿಕೆಯಡಿ 9 ಭಕ್ತರ ಪರಿಚಯವನ್ನು ಮಾಡಿ ಶ್ರೋತೃಗಳಿಗೆ ಅರಿವು ಮೂಡುವಂತೆ ಮಾಡಲಾಗಿದೆ.
ಮೊದಲ ದಿನ ಧ್ರುವ ಪ್ರಸಂಗದಲ್ಲಿ ಕಲಾವಿದ ಉತ್ಥಾನಪಾದ (ಸೇರಾಜೆ ಸೀತಾರಾಮ ಭಟ್), ಧ್ರುವ (ಸಂಕದಗುಂಡಿ ಗಣಪತಿ ಭಟ್), ಸೇರಾಜೆ ಅವರ ನಿಧಾನಗತಿಯ ಪೀಠಿಕೆ ಸೊಗಸಾಗಿತ್ತು. ತಾಯಿ ದೇವರು ಎಂಬುದು ಅಮ್ಮ ಹೇಳಿದ ಪಾಠ. ತಾಯಿ ದೇವರಾದರೆ ದೇವರು ಕೂಡ ತಾಯಿಯೇ ಅಲ್ಲವೇ? ಹಾಗಾದರೆ ತಪಸ್ಸಿಗೆ ಹೋಗುವ ನನಗೆ ಅಲ್ಲಿ ದೇವರೇ ತಾಯಿಯಾಗಿ ಕಾಣಿಸುವನಲ್ಲವೇ ಎಂಬ ಮಾತು ಮನತಟ್ಟಿತು. ನಾ.ಕಾರಂತ ಪೆರಾಜೆಯವರು ಸುನೀತಿಯಾಗಿ, ಮಗನು ತಪಸ್ಸಿಗೆ ಹೋಗುವಾಗ ತೋಡಿಕೊಂಡ ತುಮುಲ ಮನಮುಟ್ಟುವಂತಿತ್ತು.
ಬಾಳ್ಕಲ ಪ್ರಸನ್ನ ಭಟ್ ಅವರ ಕಂಠಸಿರಿಯಲ್ಲಿ ಮೂಡಿಬಂದ ಮರುಳಾದೆಯೇನು ಬಾಲ, ಜಯ ಜಯ ರಮಾಕಾಂತ ಜಯತು ಹಾಡು ಇಂಪಾಗಿತ್ತು. ಪ್ರಹ್ಲಾದ ಪ್ರಸಂಗದಲ್ಲಿ ಹಿರಣ್ಯ ಕಶ್ಯಪು (ಸುಣ್ಣಂಬಳ ವಿಶ್ವೇಶ್ವರ ಭಟ್), ಪ್ರಹ್ಲಾದ (ರವಿರಾಜ ಪನೆಯಾಲ) ಕಾವ್ಯಾತ್ಮಕ ಮಾತುಗಳಿಂದ ಗಮನ ಸೆಳೆದರು. ಪ್ರಹ್ಲಾದನು ಗುರುಗಳ ಜೀವನವೇ ನನಗೆ ಜೀವನ ಪಾಠವಾಗಿದೆ ಎಂದಾಗ ಉನ್ನತ ಸ್ಥಾನದಲ್ಲಿರುವವರೆಲ್ಲರೂ ನಮಗೆ ಪಾಠವೇ ಎಂಬ ಮಾತು ಖುಷಿ ನೀಡಿತು. ಕಯಾದು(ರಮೇಶ್ ಆಚಾರ್ಯ) ಪತಿಯ ಆಜ್ಞೆಯಂತೆ ಪುತ್ರನಿಗೆ ವಿಷ ಉಣಿಸುವಾಗ ಉಗುಳ್ಳೋಣವೆಂದರೆ ಊರು ಕೆಡುತ್ತದೆ, ನುಂಗೋಣವೆಂದರೆ ಗಂಟಲು ಸುಡುತ್ತದೆ ಎಂಬಂತಾಗಿದೆ ಎಂಬ ಮಾತು ಅರ್ಥಗರ್ಭಿತ. ಎನಗೆ ಬಲ ಒಬ್ಬನದು ಕೇಳೈ ಪುಣಚಿತ್ತಾಯರ ಹಾಡು ಕರ್ಣಾನಂದಕರವಾಗಿತ್ತು.
ಅಂಬರೀಶ ಪ್ರಸಂಗದಲ್ಲಿ ಅಂಬರೀಶ (ರಾಧಾಕೃಷ್ಣ ಕಲ್ಚಾರ್)ನ ಸಾತ್ವಿಕ ಮಾತುಗಳು ಸತ್ವಭರಿತ ವಾಗಿದ್ದವು. ದೂರ್ವಾಸ (ಡಾ|ಪ್ರಭಾಕರ ಜೋಶಿ) ಉತ್ತಮ ಸಾಥ್ ನೀಡಿದರು. ಸುದರ್ಶನನ(ಸದಾಶಿವ ಆಳ್ವರ) ಅಬ್ಬರದ ನುಡಿ ಹಿತ ನೀಡಿತು. ವಿಷ್ಣು(ವೆಂಕಟರಾಮ್ ಭಟ್), ಕೃತ್ಯ(ರಮಣ ಆಚಾರ್ಯ)ನ ಪಾತ್ರ ನಿರ್ವಹಣೆ ಚೆನ್ನಾಗಿತ್ತು. ಅಂದು ಭಾಗವತರಾಗಿ ಗಿರೀಶ್ ರೈ ಕಕ್ಕೆಪದವು ಸಹಕರಿಸಿದರು.
ರುಕ್ಮಾಗದ ಚರಿತ್ರೆಯಲ್ಲಿ ರುಕ್ಮಾಗದನು (ವಾಸುದೇವ ಸಾಮಗ) ಏಕಾದಶಿ ವ್ರತದ ರಹಸ್ಯವನ್ನು ವಿವರಿಸಿದ ಪರಿ ಚೆನ್ನಾಗಿತ್ತು. ಮೋಹಿನಿಯ (ಶಶಿಕಾಂತ ಶೆಟ್ಟಿ) ಮೊನಚು ಮಾತುಗಳು ಮನಮುಟ್ಟಿದವು. ದೇವರನ್ನು ಆರಾಧಿಸಲು ದೇವರ ಕೋಣೆಯೇ ಬೇಕಾಗಿಲ್ಲ, ದೇಹವೇ ದೇಗುಲ, ಮಾನಸ ಪೂಜೆಯೇ ಸಾಕ್ಷಾತ್ಕಾರಕ್ಕೆ ಸಾಕಾಗುತ್ತದೆ ಎಂಬ ಮಾತುಗಳು ಖಷಿ ನೀಡಿತು. ಮಾತು-ಮಾತೆ ವ್ಯತ್ಯಾಸ ಕಾಣಬಾರದು ಲೋಕದ ಸಕಲ ಸಮಸ್ಯೆಗಳಿಗೆ ನಾರಾಯಣ ಉತ್ತರವಂತೆ ಎಂಬ ಧರ್ಮಾಂಗದನ ಮಾತು ಸೊಗಸಾಗಿತ್ತು. ಯತಿಗಳಿಗೆ ವ್ರತ ಸಹಜ, ವರ ಮನೋಹರ ಲಾಲಿಸು ಧಾರೇಶ್ವರರ ಇಂಪಾದ ಹಾಡಿಗೆ ಚಪ್ಪಾಳೆಯ ಸ್ವಾಗತ ಲಭಿಸಿತು.
ಜಟಾಯು-ಶಬರಿ-ಹನುಮಂತ ಪ್ರಸಂಗದಲ್ಲಿ ರಾಮ(ಉಜಿರೆ ಅಶೋಕ ಭಟ್), ಲಕ್ಷ್ಮಣ(ವಾಟೆಪಡು³ ವಿಷ್ಣು ಶರ್ಮ)ನ ಮಾತು ಸೊಗಸಾಗಿತ್ತು. ಅತಿಕಾಯ ಪ್ರಸಂಗದಲ್ಲಿ ಅತಿಕಾಯ (ಉಮಾಕಾಂತ ಭಟ್), ರಾವಣ (ಶಂಭುಶರ್ಮ)ನ ಪಾತ್ರದಲ್ಲಿ ಸೀತಾಪಹಾರಕ್ಕೆ ಶೂರ್ಪನಖೀಯ ಮೇಲೆ ರಾಮ-ಲಕ್ಷ್ಮಣರು ಘಾಸಿ ಮಾಡಿದ್ದೇ ಕಾರಣ ಎಂಬ ರಾವಣನಿಗೆ ಅತಿಕಾಯನ ವಿಮರ್ಶೆಯು ಸೊಗಸಾಗಿತ್ತು. ಸಂಸಾರ ಸಾಗರದಲ್ಲಿ ದುಃಖಗಳನ್ನು ಕಂಡ ನೀವು ವಿರಕ್ತಿ ಭಾವದಿಂದ ಮೋಕ್ಷ ಆಕಾಂಕ್ಷಿಗಳಾಗಿ ನನ್ನೊಡನೆ ಬನ್ನಿ ಎಂದು ಪ್ರಜೆಗಳಿಗೆ ಕರೆ ನೀಡಿದ ಅತಿಕಾಯನ ಮಾತುಗಳು ಮನಮುಟ್ಟಿದವು.
ರಾವಣನು ಜಟಾಯುವಿನಲ್ಲಿ ಹೋರಾಟಕ್ಕೆ ಉಪಾಯವನ್ನು ಆಶ್ರಯಿಸುವಂತಾದದ್ದು ಒಳಗಿನ ಬಲ ಇಲ್ಲವಾದ್ದರಿಂದ ಎಂಬ ರಾಮನ (ಡಾ|ಪ್ರದೀಪ ಸಾಮಗ)ಮಾತು ಖುಷಿ ನೀಡಿತು. ಪ್ರೊ|ಎಂ.ಎಲ್. ಸಾಮಗರು ಲಕ್ಷ್ಮಣನ ಪಾತ್ರ ನಿರ್ವಹಿಸಿದ್ದರು. ಸೀತೆಯನು ರಘುವರನಿಗಿತ್ತು, ಬನ್ನಿರಿ ಸಂಸಾರ ಶರಧಿಯನು ದಾಟಲು ದಿನೇಶ ಅಮ್ಮಣ್ಣಾಯರ ಹಾಡುಗಳನ್ನು ಶ್ರೋತೃಗಳು ಆಸ್ವಾದಿಸಿದರು.
ಕೊನೆಯ ದಿನ ಧರ್ಮರಾಯ-ಭೀಷ್ಮ ಪ್ರಸಂಗದಲ್ಲಿ ಧರ್ಮರಾಯ (ವಾಸುದೇವ ರಂಗ ಭಟ್), ಕೃಷ್ಣ (ನೇವಣಿ ಗಣೇಶ ಭಟ್), ಭೀಷ್ಮ (ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ)ನ ಪಾತ್ರಗಳು ಒಂದಕ್ಕಿಂತ ಒಂದು ಸೊಗಸು ಎಂಬಂತೆ ಮೂಡಿಬಂತು. ಒಬ್ಬ ರಾವಣನ ತಪ್ಪಿನಿಂದ ಕುಲವೇ ನಾಶ, ಒಬ್ಬನಿಂದಾಗಿ ಎಲ್ಲರನ್ನೂ ಕೊಂದು ಕಳೆಯ ಕೂಡದು ಎನ್ನುತ್ತಾ ಭೀಷ್ಮ-ದ್ರೋಣರನ್ನು ಕೊಂದು ಕಳೆದ ಪರಿಗೆ ಧರ್ಮಜ ಪರಿತಪಿಸಿದ ರೀತಿ ಮನಮುಟ್ಟಿತು. ಚಕ್ರವರ್ತಿ ಆನಂದವಾಗಿದ್ದಲ್ಲಿ ರಾಜ್ಯವಿಡೀ ಆನಂದ, ದುಃಖದಲ್ಲಿದ್ದರೆ ರಾಜ್ಯವಿಡೀ ದುಃಖದಲ್ಲಿರುತ್ತದೆ ಎಂಬ ಕೃಷ್ಣನ ಮಾತು, ಕೃಷ್ಣ ಬೋಧಿಸಿದ ಅಮೃತ(ಗೀತೆ)ವನ್ನು ಎಲ್ಲರೂ ಉಣ್ಣುತ್ತಿದ್ದಾರೆ, ಎಲ್ಲ ಬೋಧೆ ಅಲ್ಲಿರುವಾಗ ನಿಮಗೆ ಚಿಂತೆ ಏಕೆ? ಎಂಬ ಭೀಷ್ಮನ ಮಾತು ಅರ್ಥಗರ್ಭಿತ.
ನಮಿಸುತ ನುಡಿದ ಧರ್ಮನಂದನಾ, ಹರಿಯೆ ಸರ್ವೋತ್ತಮ ಜಗದೊಳಗೆ ಪಟ್ಲ ಸತೀಶ ಶೆಟ್ಟರ ಕಂಠಸಿರಿಯ ಹಾಡುಗಳಿಗೆ ಚಪ್ಪಾಳೆಯ ಸುರಿಮಳೆಯಾಯಿತು.
ಎನ್. ರಾಮ ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ
ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ
Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್ ಜೈಕಾರ !
Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ
Idu Entha Lokavayya: “ಕೋಸ್ಟಲ್” ನಿಂದ ಕರುನಾಡು!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.