ವಿದ್ಯಾರ್ಥಿಗಳ ಪ್ರತಿಭೆಯನ್ನು ಅನಾವರಣಗೊಳಿಸಿದ ಯಕ್ಷೋತ್ಸವ
ಅಂತರ್ ಕಾಲೇಜು ಯಕ್ಷಗಾನ ಸ್ಪರ್ಧೆ
Team Udayavani, Mar 13, 2020, 6:28 PM IST
ಒಟ್ಟಿನಲ್ಲಿ ಯಕ್ಷೋತ್ಸವ ಹಲವಾರು ಯುವ ಯಕ್ಷ ಪ್ರತಿಭೆಗಳನ್ನು ಅನಾವರಣಗೊಳಿಸುವ ಮೂಲಕ ಕಾಲೇಜು ವಿದ್ಯಾರ್ಥಿಗಳು ಯಕ್ಷಗಾನದ ಆಸಕ್ತಿಯಿಂದ ದೂರ ಸರಿಯುತ್ತಿದ್ದಾರೆ ಎಂಬ ಆರೋಪಕ್ಕೆ ತಕ್ಕ ಉತ್ತರ ಕೊಟ್ಟಿತು ಎಂದರೆ ಅತಿಶಯೋಕ್ತಿಯಾಗಲಾರದು.
ಯುವ ಜನತೆ ಯಕ್ಷಗಾನದ ಆಸಕ್ತಿಯಿಂದ ವಿಮುಖರಾಗುತ್ತಿದ್ದಾರೆ ಎನ್ನುವುದು ಸಾಮಾನ್ಯವಾಗಿ ಕೇಳಿ ಬರುತ್ತಿರುವ ಆರೋಪ. ಆದರೆ ಇದಕ್ಕೆ ಅಪವಾದ ಎನ್ನುವ ರೀತಿಯಲ್ಲಿ ಮೂಡಿಬಂದ ಯಕ್ಷ ಹಬ್ಬವೇ ಯಕ್ಷೊàತ್ಸವ -2020.ಮಂಗಳೂರಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಮಹಾವಿದ್ಯಾಲಯವು ಡಾ| ಡಿ. ವಿರೇಂದ್ರ ಹೆಗ್ಗಡೆಯವರ ಆಶಯದಂತೆ 1991ರಲ್ಲಿ ಪ್ರಾರಂಭಿಸಿದ ಅಂತರ್ ಕಾಲೇಜು ಯಕ್ಷಗಾನ ಸ್ಪರ್ಧೆ “ಯಕ್ಷೋತ್ಸವ’ ಯಶಸ್ವಿ 28 ಸಂವತ್ಸರಗಳನ್ನು ಪೂರೈಸಿ 29ನೇ ವರ್ಷಕ್ಕೆ ಪಾದಾರ್ಪಣೆ ಮಾಡಿತು. ಫೆ. 22 ಮತ್ತು 23 ರಂದು ಕಾಲೇಜಿನ ಆವರಣದಲ್ಲಿ ಅದ್ದೂರಿಯಾಗಿ ನಡೆದ ಈ ಯಕ್ಷಹಬ್ಬ ಹಲವಾರು ಯುವ ಯಕ್ಷ ಪ್ರತಿಭೆಗಳ ಅನಾವರಣಕ್ಕೆ ಸಾಕ್ಷಿಯಾಯಿತು.
ಯಕ್ಷ ಸ್ಪರ್ಧೆಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಗೆ ಒಳಪಟ್ಟ 8 ಮಹಾವಿದ್ಯಾಲಯಗಳು ಸ್ಪರ್ಧಿಸಿದ್ದವು. ಅತಿಥೇಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜಿನ ವಿದ್ಯಾರ್ಥಿಗಳು ಪ್ರದರ್ಶಿಸಿದ “ಏಕಾದಶಿ ಶ್ರೀ ದೇವಿ ಮಹಾತ್ಮೆ’ ಪ್ರಸಂಗ ಯಕ್ಷ ಪ್ರೇಮಿಗಳನ್ನು ಸಭಾಂಗಣದೊಳಕ್ಕೆ ಸೆಳೆಯುವಲ್ಲಿ ಯಶಸ್ವಿಯಾಯಿತು. ಬಳಿಕ ಪ್ರಾರಂಭಗೊಂಡ ಸ್ಪರ್ಧೆಯಲ್ಲಿ ಮೊದಲಿಗೆ ಪ್ರದರ್ಶಿಸಲ್ಪಟ್ಟ ಪ್ರಸಂಗ “ದಕ್ಷಾಧ್ವರ’. ಸುಬ್ರಹ್ಮಣ್ಯದ ಕೆ.ಎಸ್.ಎಸ್. ಕಾಲೇಜಿನ ವಿದ್ಯಾರ್ಥಿಗಳು ಪ್ರದರ್ಶಿಸಿದ ಈ ಪ್ರಸಂಗ ಆರಂಭದಲ್ಲಿ ಕೊಂಚ ನೀರಸವೆನಿಸಿದರೂ ಆ ಬಳಿಕ ತನ್ನ ಲಯವನ್ನು ಕಂಡುಕೊಂಡಿತು. ದಾಕ್ಷಾಯಣಿ ಪಾತ್ರದಾರಿ ಕು| ಅನಘಾ ಎಂ.ಜಿ. ಅಭಿನಯದಲ್ಲಿ ತೋರಿದ ಪ್ರೌಢಿಮೆ ಮೆಚ್ಚುಗೆಗೆ ಪಾತ್ರವಾಯಿತು. ಆ ಬಳಿಕ ಶ್ರೀ ದುರ್ಗಾಪರಮೇಶ್ವರಿ ಪ್ರಥಮ ದರ್ಜೆ ಕಾಲೇಜು, ಕಟೀಲು ಇವರು ಪ್ರದರ್ಶಿಸಿದ “ನರಕಾಸುರ ಮೋಕ್ಷ’ ಪ್ರಸಂಗದಲ್ಲಿ ವಿದ್ಯಾರ್ಥಿಗಳು ತೋರಿದ ವೃತ್ತಿಪರತೆ ಯಾವುದೇ ಯಕ್ಷಗಾನ ಮೇಳಗಳಿಗಿಂತ ಕಡಿಮೆಯಾಗಿರಲಿಲ್ಲ. ಮೊದಲ ದಿನದ ಕೊನೆಯ ಪ್ರಸಂಗ “ಕೃಷ್ಣಲೀಲೆ ಕಂಸವಧೆ’. ಪ್ರದರ್ಶನ ನೀಡಿದವರು ಡಾ| ದಯಾನಂದ ಪೈ ಮತ್ತು ಸತೀಶ್ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜು ರಥಬೀದಿ ಮಂಗಳೂರು. ಕೊನೆಯ ಪ್ರದರ್ಶನವಾದರೂ ಪ್ರೇಕ್ಷಕರನ್ನು ಕೊನೆಯವರೆಗೂ ಉಳಿಸಿಕೊಳ್ಳುವಲ್ಲಿ ಸಫಲವಾಯಿತು.
ಯಕ್ಷ ಹಬ್ಬದ ಎರಡನೇ ದಿನ ಆರಂಭಗೊಂಡಿದ್ದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಉದ್ಯಮಾಡಳಿತ ಕಾಲೇಜಿನ “ನರಕಾಸುರ ಮೋಕ್ಷ’ ಪ್ರಸಂಗದೊಂದಿಗೆ. ಇಲ್ಲಿಯೂ ವಿದ್ಯಾರ್ಥಿಗಳು ತಾವು ಯಾವುದೇ ವೃತ್ತಿಪರ ಕಲಾವಿದರಿಗೆ ಸರಿಸಾಟಿಯಾಗಿ ನಿಲ್ಲಬಲ್ಲೆವು ಎಂಬುದನ್ನು ತೋರಿಸಿಕೊಟ್ಟರು. ಅನಂತರ ಪ್ರದರ್ಶನಗೊಂಡ ಪ್ರಸಂಗ “ಸಾಯುಜ್ಯ ಸಂಗ್ರಾಮ’. ಪ್ರದರ್ಶಿಸಿದವರು ಆಳ್ವಾಸ್ ಕಾಲೇಜು ಮೂಡಬಿದ್ರೆ. ಯಕ್ಷೋತ್ಸವದ ಒಟ್ಟು ಪ್ರದರ್ಶನಗಳಲ್ಲಿ ಶ್ರೇಷ್ಠ ಪ್ರದರ್ಶನ ನೀಡುವ ಮೂಲಕ ಅಗ್ರಸ್ಥಾನವನ್ನು ಪಡೆಯುವಲ್ಲಿ ಯಶಸ್ವಿಯಾಯಿತು. ತರಣಿಸೇನ ಪಾತ್ರದಾರಿ ಶಬರೀಶ ಆಚಾರ್ಯ ಮೆಚ್ಚುಗೆಯನ್ನು ಗಳಿಸುವುದರ ಜೊತೆಗೆ ಸ್ಪರ್ಧೆಯಲ್ಲಿ ಪ್ರಥಮ ವೈಯಕ್ತಿಕ ಪ್ರಶಸ್ತಿಯನ್ನೂ ತನ್ನದಾಗಿಸಿಕೊಂಡರು. ಶ್ರೀ ಗೋವಿಂದ ದಾಸ ಕಾಲೇಜು ಸುರತ್ಕಲ್ ಇವರು ಪ್ರದರ್ಶಿಸಿದ “ಸುಧನ್ವಮೋಕ್ಷ’ ಪ್ರಸಂಗ ಆಳ್ವಾಸ್ ಕಾಲೇಜಿನ ಪ್ರದರ್ಶನವನ್ನು ಸರಿಗಟ್ಟುವಂತೆ ಕಂಡಿತು. ಸುಧನ್ವ ಪಾತ್ರದಾರಿ ಕು| ಪೂಜಾ ಯು.ಎ. ಅದ್ಭುತ ಹಾವಭಾವ ಹಾಗೂ ಕುಣಿತದ ಮೂಲಕ ಪದೇಪದೆ ಚಪ್ಪಾಳೆ ಗಿಟ್ಟಿಸಿಕೊಂಡರು.
ಸ್ಪರ್ಧೆಯ ಅಂತಿಮ ಭಾಗದಲ್ಲಿ ಎಸ್.ಡಿ.ಎಂ. ಕಾಲೇಜು ಉಜಿರೆ ಇವರಿಂದ ಪ್ರದರ್ಶಿಸಲ್ಪಟ್ಟ “ಸುದರ್ಶನ ಗರ್ವಭಂಗ’ ಪ್ರಸಂಗ ಉತ್ಕೃಷ್ಟ ಮಟ್ಟವನ್ನೇ ಕಾಯ್ದುಕೊಂಡಿತು ಶತ್ರುಪ್ರಸೂದನ ಪಾತ್ರದಾರಿ ಮುಖೇಶ್ ದೇವಧರ ಉತ್ತಮ ಪ್ರದರ್ಶನದ ಮೂಲಕ ತೃತೀಯ ವೈಯಕ್ತಿಕ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರು.
ಒಟ್ಟಿನಲ್ಲಿ ಯಕ್ಷೋತ್ಸವ ಹಲವಾರು ಯುವ ಯಕ್ಷ ಪ್ರತಿಭೆಗಳನ್ನು ಅನಾವರಣಗೊಳಿಸುವ ಮೂಲಕ ಕಾಲೇಜು ವಿದ್ಯಾರ್ಥಿಗಳು ಯಕ್ಷಗಾನದ ಆಸಕ್ತಿಯಿಂದ ದೂರ ಸರಿಯುತ್ತಿದ್ದಾರೆ ಎಂಬ ಆರೋಪಕ್ಕೆ ತಕ್ಕ ಉತ್ತರ ಕೊಟ್ಟಿತು ಎಂದರೆ ಅತಿಶಯೋಕ್ತಿಯಾಗಲಾರದು. ಯಾವುದೇ ನಿಯಮಗಳಲ್ಲಿಯೂ ಕಿಂಚಿತ್ತೂ ರಾಜಿ ಮಾಡಿಕೊಳ್ಳದೆ ಯಕ್ಷಗಾನದ ಘನತೆ, ಗಾಂಭೀರ್ಯವನ್ನು ಉಳಿಸಿಕೊಂಡು ಪ್ರೇಕ್ಷಕರ ಮೆಚ್ಚುಗೆಯನ್ನು ಪಡೆಯುವಲ್ಲಿ ಎಸ್.ಡಿ.ಎಂ. ಕಾನೂನು ಕಾಲೇಜಿನ ತಂಡ ಯಶಸ್ವಿಯಾಯಿತು.
ಪುಷ್ಪರಾಜ್ ಕೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ
ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ
Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್ ಜೈಕಾರ !
Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ
Idu Entha Lokavayya: “ಕೋಸ್ಟಲ್” ನಿಂದ ಕರುನಾಡು!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.