ಗಾಯನ ರಂಗದ ಸುವರ್ಣ ಸಂಭ್ರಮ
Team Udayavani, Nov 22, 2019, 4:00 AM IST
“ಜೂನಿಯರ್ ರಾಜಕುಮಾರ್’ ಖ್ಯಾತಿಯ ಜಗ ದೀಶ ಆಚಾರ್ಯ ಶಿವಪುರ ಅವರು ಗಾಯನ ರಂಗದಲ್ಲಿ 50 ವರ್ಷಗಳನ್ನು ಪೂರೈಸುತ್ತಿರುವ ಹಿನ್ನೆಲೆಯಲ್ಲಿ ನ. 22ರಂದು ಸಂಜೆ ಮಂಗಳೂರು ಪುರಭವನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಾಯೋಜಕತ್ವದಲ್ಲಿ “ಸಾಧನಾ ತರಂಗ’ ಹೆಜ್ಜೆಗುರುತು ಎಂಬ ಹೆಸರಿನಲ್ಲಿ ಭಾವಗೀತೆ, ಜನಪದ ಗೀತೆ ಮತ್ತು ದೇಶಭಕ್ತಿ ಗೀತೆಗಳ ಸಮೂಹ ಗಾಯನ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಮಂಗಳೂರಿನ ಶಕ್ತಿನಗರದಲ್ಲಿ 1965ರಲ್ಲಿ ಎಸ್. ದಾಸಪ್ಪ ಆಚಾರ್ಯ ಮತ್ತು ಕಲ್ಯಾಣಿ ದಂಪತಿಯ ಚತುರ್ಥ ಪುತ್ರನಾಗಿ ಜಗದೀಶ್ ಜನಿಸಿದರು. ಕುಂಟೆರಾಮೆ ನಾಟಕ ಅಣ್ಣ ಜಿ.ಎಸ್. ಆಚಾರ್ಯರ ಮೂಲಕ ರೇಡಿಯೋದಲ್ಲಿ ಚಿತ್ರಗೀತೆಗಳನ್ನು ಕೇಳುತ್ತಿದ್ದ ಜಗದೀಶ್, 1970ರಲ್ಲಿ ವಿಶ್ವನಾಥ ಅಂಚನ್ ಬೋಳೂರು ನಡೆಸಿಕೊಟ್ಟ ರಸಮಂಜರಿಯಲ್ಲಿ “ಗುಡಿಯಲಿರುವ ಶಿಲೆಗಳೆಲ್ಲ ದೇವರಂತೆ’ ಹಾಡನ್ನು ಹಾಡಿದರು.
ಒಂದನೇ ತರಗತಿಯಲ್ಲಿದ್ದಾಗ ಮುಸ್ಸಂಜೆ ವೇಳೆ ಮನೆಯಲ್ಲಿ ದೇವರಿಗೆ ದೀಪ ಹಚ್ಚಿ ಜಗದೀಶ್ ಅವರು ಹಾಡುತ್ತಿದ್ದ ಭಜನೆಗಳನ್ನು ಕೇಳಿಸಿಕೊಂಡ ಕೆ.ವಿ. ಶೆಟ್ಟರು 1970ರಲ್ಲಿ “ಉಂದು ಎನ್ನ ಭಾಗ್ಯ’ ತುಳು ನಾಟಕದಲ್ಲಿ ಹಿನ್ನೆಲೆ ಗಾಯನದ ಅವಕಾಶ ಕಲ್ಪಿಸಿಕೊಟ್ಟರು.
ವಸಂತ ಕದ್ರಿ ಅವರ ವಾದ್ಯಗೋಷ್ಠಿಯಲ್ಲಿ ಹಾಡುತ್ತಿದ್ದ ಸಂದರ್ಭದಲ್ಲಿ ಕದ್ರಿಯ ಜಯಮಾರುತಿ ಯುವಕ ಸಂಘ “ಜೂನಿಯರ್ ರಾಜಕುಮಾರ್’ ಬಿರುದು ಪ್ರದಾನ ಮಾಡಿತು. ಶಿವರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್, ವಿನೋದ್ ರಾಜ್, ಡಬ್ಬಿಂಗ್ ಕಲಾವಿದೆ ಸರ್ವಮಂಗಳಾ, ಹಿನ್ನೆಲೆ ಗಾಯಕಿ ಚಂದ್ರಿಕಾ ಗುರುರಾಜ್ ಮುಂತಾದವರ ಪ್ರೋತ್ಸಾಹ ಲಭಿಸಿತು. ಪ್ರೇಮಾ ಶ್ರೀನಾಥ್, ವಾಯ್ಸ ಆಫ್ ಮ್ಯೂಸಿಕ್ ರಾಜೇಶ್ ಹಾಡುವ ಅವಕಾಶಗಳನ್ನು ಒದಗಿಸಿದರು. ಉಮಾಶಂಕರ ಪುತ್ತೂರು ಹಾಗೂ ಎಲ್‌ಐಸಿಯ ನಿವೃತ್ತ ಅಧಿಕಾರಿ ರಿಹತ್ ಕುಮಾರ್ ಅವರ ಪ್ರೋತ್ಸಾಹವನ್ನು ಜಗದೀಶ್ ಸ್ಮರಿಸುತ್ತಾರೆ.
1990ರಲ್ಲಿ ಮಾಜಿ ಸಚಿವ ಬಿ. ನಾಗರಾಜ ಶೆಟ್ಟಿ ನೇತೃತ್ವದಲ್ಲಿ ಮಧುರ ತರಂಗ ಸಂಗೀತ ಸಂಸ್ಥೆ ಆರಂಭಿಸಿದ ಜಗದೀಶ್, 28 ವರ್ಷಗಳ ಕಾಲ ಅದರ ಸ್ಥಾಪಕಾಧ್ಯಕ್ಷರಾಗಿದ್ದರು. ಸಂಗೀತದ ಅಭಿರುಚಿಯುಳ್ಳ ವಿದ್ಯಾರ್ಥಿಗಳನ್ನು ಬೆಳೆಸಿ, ವೇದಿಕೆಗಳನ್ನು ಒದಗಿಸಿದರು. ಯುವ ಕಲಾವಿದರಿಗೆ ಧ್ವನಿಸುರುಳಿಗಳಲ್ಲಿ ಹಾಡುವ ಅವಕಾಶವೂ ಲಭಿಸಿತು.
ಗಂಡು ಹಾಗೂ ಹೆಣ್ಣಿನ ಧ್ವನಿಗಳಲ್ಲಿ ನಾಟಕಗಳಿಗೆ ಹಿನ್ನೆಲೆ ಗಾಯನ ಮಾಡುತ್ತ ಜನಮನ ಗೆದ್ದರು. ಧ್ವನಿಮುದ್ರಿತ ವಾದ್ಯ ಸಂಗೀತದೊಂದಿಗೆ ಕಾರ್ಯಕ್ರಮ ನೀಡಿ ರಂಚಿಸಿದ ಏಕೈಕ ವ್ಯಕ್ತಿ ಎಂಬ ಕೀರ್ತಿಗೂ ಜಗದೀಶ್ ಪಾತ್ರರಾಗಿದ್ದಾರೆ. ಮುಂಬಯಿಯ ಲಿವೋನ್ ಕಂಪನಿ “ಸ್ವರತಪಸ್ವಿ’ ಬಿರುದು ನೀಡಿದೆ.
ಮುಂಬಯಿ, ಪುಣೆ ನಗರಗಳಲ್ಲಿ ಕಿಶೋರ್ ಡಿ. ಶೆಟ್ಟಿ ಅವರ ಲಕುಮಿ ತಂಡದ ಜತೆಯಲ್ಲಿ, ಉತ್ತರ ಭಾರತದ ಗುರುಗ್ರಾಮ, ಹರಿಯಾಣ, ಫರೀದಾಬಾದ್, ಗುಜರಾತ್‌ನ ಸಿಲ್ವಾಸ, ಹವೇಲಿ, ದಾದ್ರಾ ನಗರಗಳಲ್ಲಿ ಕನ್ನಡ ಸಂಘದ ಆಶ್ರಯದಲ್ಲಿ ಗೀತಾಂಜಲಿ ಶೀರ್ಷಿಕೆಯಲ್ಲಿ ಹಾಡಿದ್ದಾರೆ. ಕೊಲ್ಲಿ ರಾಷ್ಟ್ರಗಳಾದ ದುಬಾೖ, ಬಹರೈನ್, ಅಬುಧಾಬಿ, ಕತಾರ್ ಮುಂತಾದೆಡೆ ದಯಾ ಕಿರೋಡಿಯನ್, ರಾಜಕುಮಾರ್, ಪ್ರದೀಪ್ ಕಿರೋಡಿಯನ್, ಸುರೇಶ್ ಸಾಲ್ಯಾನ್, ದಯಾನಂದ ಬಂಗೇರ ಹಾಗೂ ಮನೋಹರ ತೋನ್ಸೆ ಅವರೊಂದಿಗೆ ಕಾರ್ಯಕ್ರಮಗಳನ್ನು ನೀಡಿದ್ದಾರೆ.
ಗುರುಕುಲ ಪದ್ಧತಿಯಲ್ಲಿ ಸಂಗೀತ ಶಿಕ್ಷಣ ನೀಡಿ ಕಲಾವಿದರನ್ನು ರೂಪಿಸುವ ಯೋಜನೆ ಜಗದೀಶ್ ಅವರಿಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.