ನೃತ್ಯದ ಜ್ಞಾನ ವಿಸ್ತರಿಸಿದ ಶಿಬಿರ
Team Udayavani, Mar 1, 2019, 12:30 AM IST
ಪುತ್ತೂರಿನ ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ (ರಿ.) ಇವರು ಸಂಯೋಜಿಸಿದ ಮಲೇಷಿಯಾದ ಭರತನಾಟ್ಯ ಕಲಾವಿದ ವಿ. ಶಂಕರ ಕಂದಸ್ವಾಮಿಯವರ ಮೂರು ದಿನಗಳ ನೃತ್ಯಶಿಬಿರದಲ್ಲಿ ಶಿಬಿರಾರ್ಥಿಗಳಿಗೆ ನೃತ್ಯಬಂಧದ ಕಲಿಕೆಯ ಜೊತೆ ಅದಕ್ಕೆ ಸಂಬಂಧಿಸಿದ ಹಾಗೂ ನೃತ್ಯಕ್ಷೇತ್ರಕ್ಕೆ ಸಂವಾದಿಯಾಗಿರುವ ಭಾರತೀಯ ಪುರಾಣಗಳು, ಭಾರತೀಯ ನದಿಗಳು, ಕ್ಷೇತ್ರಗಳು, ನಡೆನುಡಿಗಳು, ಭಾರತೀಯ ಸಂಗೀತ, ವೇದ-ಮಂತ್ರಗಳು ಹೀಗೆ ಹಲವಾರು ವಿಚಾರಗಳನ್ನು ಅನುಭವದ ಪಾಕದಲ್ಲಿ ಬೆರೆಸಿ ರೋಚಕವಾಗಿ, ಸರಳವಾಗಿ-ಒಟ್ಟಾರೆಯಾಗಿ ಭಾರತೀಯ ಸಂಸ್ಕೃತಿಯು ನೃತ್ಯಕ್ಕೆ ಹೇಗೆ ಅತ್ಯವಶ್ಯ ಎಂಬ ಶಾಸ್ತ್ರ ಸಂಬಂಧಿ ಸಂಗತಿಗಳನ್ನು ವರ್ಣಿಸುತ್ತಾ ಜ್ಞಾನವನ್ನು ಹುರಿಗೊಳಿಸಲಾಯಿತು.
ಕಂದಸ್ವಾಮಿಯವರು ತೋಡಯಮಂಗಲಂ ಎಂಬ ನೃತ್ಯಬಂಧವನ್ನು (ರಾಗಮಾಲಿಕೆ, ತಾಳಮಾಲಿಕೆ) ಕಲಿಸಿದ್ದು, ಇದರ ನೃತ್ತ ಹಾಗೂ ಸಾಹಿತ್ಯ ಅಭಿನಯದ ಹಲವಾರು ಹೊಸ ವಿಚಾರಗಳನ್ನು ನೃತ್ಯಸಂಯೋಜನೆಯ ಹೊಸ ಆಯಾಮಗಳನ್ನೂ ವಿದ್ಯಾರ್ಥಿಗಳಿಗೆ ತೆರೆದಿಟ್ಟರು. ಸುಮಾರು 40 ವಿದ್ಯಾರ್ಥಿಗಳಿದ್ದ ಈ ಶಿಬಿರವು ಪ್ರಾರ್ಥನಾ ಶ್ಲೋಕ ಪಠಣದಿಂದ ಪ್ರಾರಂಭಗೊಂಡು ಮುಂದಿನ ನೃತ್ಯಬಂಧ ಕಲಿಯಲು ಅನುಕೂಲ ಮತ್ತು ಅವಶ್ಯವಾದ ಅಡವುಗಳ ನರ್ತನವನ್ನು ಸುಮಾರು 20 ನಿಮಿಷಗಳ ಕಾಲ ನಡೆಸಿ ಮುಂದಿನ ಕಲಿಕೆಗೆ ಸಜ್ಜಾಗುವಂತೆ ಮಾಡುತ್ತಿದ್ದರು. ಧ್ವನಿತಟ್ಟೆಯ ಸರಳ ಹಿಮ್ಮೇಳಕ್ಕೆ 3 ದಿನಗಳೂ ಪ್ರಧಾನವಾದ ಕೆಲವು ಅಡವುಗಳು (ತಟ್ಟಡವು, ನಾಟ್ಟಡವು, ತೀರ್ಮಾನದ ಅಡವು, ತಾತೈತೈತಾ) ಹೀಗೆ ಬೇರೆ ಬೇರೆ ವಿನ್ಯಾಸಗಳಲ್ಲಿ 3 ಕಾಲಗಳಲ್ಲಿ ಅನುಲೋಮ ವಿಲೋಮಗಳಾಗಿ ಅಭ್ಯಾಸವಾಗುತ್ತಿತ್ತು. ಕಂದಸ್ವಾಮಿಯವರು, ಆ ಅಡವುಗಳ ಹಸ್ತಕ್ಷೇತ್ರ, ಹೆಜ್ಜೆಗಾರಿಕೆ, ವಿನಿಯೋಗಗಳ ಬಗ್ಗೆ ತಿಳಿಸುತ್ತಾ, ತಪ್ಪುಗಳನ್ನು ಸರಿಪಡಿಸುತ್ತಾ, ತಾವೂ ಶಿಸ್ತಿನಿಂದ ನರ್ತಿಸುತ್ತಿದ್ದುದು ಆಪ್ಯಾಯಮಾನವಾಗಿತ್ತು. ಇದಾದನಂತರ ತೋಡಯಂ ನೃತ್ಯದ ಕಲಿಕೆ. ಇದರ ಸಾಹಿತ್ಯವನ್ನು ಕಂದಸ್ವಾಮಿಯವರೇ ಭಾರತೀಯ ಪುರಾಣ ಹಾಗೂ ವೇದಗಳಿಂದ ಸಂಪಾದಿಸಿದ ಶ್ಲೋಕಗಳಾಗಿದ್ದು ಇದನ್ನು ಸಂಸ್ಕೃತಿ ಎಂದು ಹೆಸರಿಸಿದ್ದರು. 4ಜಿ ಗಳಿಂದ ಆರಂಭಿಸಲ್ಪಡುವ ಈ ಶ್ಲೋಕಗಳು. ಗುರು, ಗಂಗೆ, ಗೀತೆ (ಭಗವದ್ಗೀತೆ) ಹಾಗೂ ಗಾಯತ್ರೀ ಮಂತ್ರ ಸಂಬಂಧಿಯಾಗಿದ್ದವು. ವೈವಿಧ್ಯಮಯ ನಡೆಗಳಲ್ಲಿ ಜತಿಗಳು ಸೊಲ್ಕಟ್ಟುಗಳಿದ್ದು ನೃತ್ತದ ಪಕ್ವತೆಯನ್ನು ಪ್ರಕಟಿಸಿದವು. ಸಾಹಿತ್ಯಾಭಿನಯದಲ್ಲಿ ಸಂಚಾರಿಗಳಾಗಿ ಗೀತೋಪದೇಶ, ಗಂಗೆಯ ಜನನ, ಹರಿವು, ಗಾಯತ್ರಿಯ ಹುಟ್ಟು ಹೀಗೆ ದಕ್ಷ ಹಾಗೂ ಪುಟ್ಟದಾಗಿ ಸಂಯೋಜಿಸಲ್ಪಟ್ಟಿದ್ದವು. ಕಂದಸ್ವಾಮಿಯವರು ಗಂಗೆಯ ಪಾವಿತ್ರ್ಯ, ಜನನ, ಕುರುಕ್ಷೇತ್ರದಲ್ಲಿ ಅರ್ಜುನನ ಭಯ, ಕೃಷ್ಣನ ಅನುಗ್ರಹ, ಗಾಯತ್ರಿ ಮಂತ್ರದ ಶ್ರೇಷ್ಠತೆ ಹೀಗೆ ಹಲವಾರು ವಿಚಾರಗಳನ್ನು ಕಥಾರೂಪದಲ್ಲಿ ವಿವರಿಸಿ, ಅಭಿನಯಕ್ಕೆ ಸಹಕಾರಿಯಾದರು.
ಕೊನೆಯ ದಿನ ಸಂಜೆ ಪುತ್ತೂರಿನ ಬಂಟರ ಭವನದಲ್ಲಿ ಶಂಕರ ಕಂದಸ್ವಾಮಿಯವರ ಏಕವ್ಯಕ್ತಿ ಭರತನಾಟ್ಯ ಪ್ರದರ್ಶನ ಜರಗಿತು. ಯೋಗ್ಯ ಧ್ವನಿತಟ್ಟೆ, ಹಿಮ್ಮೇಳನದ ಸಹಯೋಗದಿಂದ ಪ್ರಬುದ್ಧ ಶಾಸ್ತ್ರೀಯ ನೃತ್ಯಪ್ರದರ್ಶನವಾಗಿ ಪ್ರಸ್ತುತಿಗೊಂಡಿತು. ಪ್ರಾರಂಭದ ಗಣೇಶ ಅಲರಿಪು ತ್ರಿಶ್ರ ಅಲರಿಪನ್ನು ಸಮೀಕರಿಸುವ ಕ್ರಮದಲ್ಲೇ ಇದ್ದು, ಹಸ್ತ, ಗತಿಗಳು, ಭಂಗಿಗಳು, ಅಡವುಗಳು ಗಣೇಶನ ರೂಪ, ವ್ಯಕ್ತಿತ್ವದ ಗಂಭೀರತೆಯನ್ನು ಸಹಜವಾಗಿ ಪ್ರತಿಫಲಿಸಿತು. ದಂಡಾಯುಧಪಾಣಿ ಪಿಳ್ಳೆಯವರ ತೋಡಿರಾಗ ಆದಿತಾಳದ ಪದವರ್ಣವು, ಶಿವ-ಶಿವೆಯವರ ಅನ್ಯೋನ್ಯ ಸಂಬಂಧ, ಸರಸ-ವಿರಸಗಳನ್ನು ವಿರಹೋತ್ಕಂಠಿತಾನಾಯಿಕಾಭಾವಸು#ರಣದ ಮೂಲಕ ಉತ್ತಮವಾಗಿ ನರ್ತಿಸಲ್ಪಟ್ಟಿತು. ಬಿಗುವಾದ ಲಯಕಾರೀ ಜತಿಗಳು, ಅರುಧಿ, ಸ್ವರಗಳ ಅಡವು ಜೋಡಣೆ ವಿನ್ಯಾಸಗಳಿಂದ ನೃತ್ತ ರಂಜಿಸಿದರೆ ಅರ್ಥಗರ್ಭಿತ ಸಂಚಾರೀ ಅಭಿನಯಗಳು ವರ್ಣದ ನೃತ್ತ, ನೃತ್ಯಗಳ ಹದವಾದ ಪಾಕವನ್ನು ಉಣಬಡಿಸಿತು. ಷಣ್ಮುಖನ ಬಗ್ಗೆ ತೀವ್ರವಾದ ಪ್ರೇಮ, ವಾತ್ಸಲ್ಯವನ್ನು ಹೊಂದಿ ಅವನೇ ತನ್ನ ಸ್ವಾಮಿಯೆಂದು ಭಾವಿಸುವ ಪುಟ್ಟಬಾಲೆಯ ಚಿತ್ರಣದ ಅಭಿನಯ ಪದಂ ನೃತ್ಯಬಂಧದಲ್ಲಿ ಚೆನ್ನಾಗಿ ಮೂಡಿಬಂತು. ಗೌಳರಾಗದ ಕಾಳಿಸ್ತುತಿಯು, ಪಾರ್ವತಿಯು ಸೌಮ್ಯರೂಪದಿಂದ ದುಷ್ಟರ ವಧೆಗಾಗಿ ರೌದ್ರ ರೂಪವನ್ನು ಧರಿಸಿ, ಭಯಂಕರವಾಗಿ ನರ್ತಿಸಿ ದುಷ್ಟರಿಗೆ ಶಿಕ್ಷೆ ಉಂಟುಮಾಡುವ ನೃತ್ಯವು ರುದ್ರ ಕಾಳಿಯ ರೂಪದ ವರ್ಣನೆ, ಶಿವನ ಮೇಲೆ ನಿಂತು ನಾಟ್ಯವಾಡಿ ರೌದ್ರನರ್ತನ, ದುಷ್ಟರ ರಕ್ತವನ್ನು ಹೀರುವ ಚಾಚಿದ ನಾಲಿಗೆಯಿಂದ ರಕ್ತಪಾನ ಮುಂತಾದ ದೃಶ್ಯಗಳು ಕಣ್ಣಿಗೆ, ಮನಕ್ಕೆ ಭೀಕರತೆಯ ಭಾವವನ್ನುಂಟುಮಾಡುವಲ್ಲಿ ಯಶಸ್ವಿಯಾಯಿತು. ಮಂಗಳವು ಬೇಹಾಗ್ ರಾಗದ ತಿಲ್ಲಾನವನ್ನು ಹೋಲುವ ನೃತ್ಯದೊಂದಿಗೆ, ಕಂದಸ್ವಾಮಿಯವರ ಪರಿಕಲ್ಪನೆಯ 4 ಶಬ್ದಗಳ ಸಾಹಿತ್ಯ-ರಾಧಾ, ಧಾರಾ, ಆರಾಧ್ಯ, ಆಧಾರ ಇವುಗಳ ಚಾಮತ್ಕಾರಿಕಾ ಜೋಡಣೆ, ಭಾವ ಮಿಳಿತ, ನೃತ್ತ, ನೃತ್ಯಗಳಿಂದ ನವೀನ ಅನುಭವವನ್ನುಂಟುಮಾಡಿತು. ಇಲ್ಲಿ ಕೃಷ್ಣರಾಧೆಯರ ದಿವ್ಯ ಸಂಬಂಧದ ಅನುಭೂತಿ-ಪ್ರೇಮ, ಧಾರೆ, ಅವನೇ ಆಧಾರ, ಅವನೇ ಆರಾಧನೆಯ ಮೂರ್ತಿ ಎಂಬ ಕಲ್ಪನೆ ವರ್ಣಿಸಲ್ಪಟ್ಟಿತ್ತು. ಈ ಪ್ರದರ್ಶನದಲ್ಲಿ ಎದ್ದು ಕಾಣುವುದು ನೃತ್ಯದ ಬಗ್ಗೆ ಇರುವ ತಾದಾತ್ಮಭಾವ. ನೃತ್ಯದಲ್ಲಿ ಅಂಗಶುದ್ಧಿ, ಹೊಸಪರಿಕಲ್ಪನೆಗಳು, ವಿಶಿಷ್ಟ ಭಂಗಿಗಳು, ಗತಿಗಳು, ರಂಗಾಕ್ರಮಣದ ಚೆಲುವು, ಅಡವು ವಿನ್ಯಾಸಗಳ ವೈಖರಿ, ಲಯದ ಗಟ್ಟಿತನ ಎದ್ದು ತೋರುತ್ತಿತ್ತು. ಕೆಲವೊಮ್ಮೆ ಸ್ತ್ರೀ ಸಹಜ ಭಂಗಿಗಳು, ಜಿಗಿಯುವ ಅಡವುಗಳು ಕಾಣಿಸಿಕೊಂಡದ್ದೂ ಇದೆ.
ವಿ. ಪ್ರತಿಭಾ ಎಂ.ಎಲ್. ಸಾಮಗ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.