ಕೃಷ್ಣಸ್ವಾಮಿ ಜೋಯಿಸ್‌ಗೆ ಯಕ್ಷ ಕಲಾಸಾಧಕ ಪ್ರಶಸ್ತಿ
Team Udayavani, Jan 19, 2018, 2:46 PM IST
ಬ್ರಹ್ಮಾವರದ ಮಟಪಾಡಿ, ಹಾರಾಡಿ, ಹಂದಾಡಿ, ಬಿರ್ತಿ, ಪೇತ್ರಿ, ಕುಂಜಾಲು, ನೀಲಾವರ ಮುಂತಾದ ಗ್ರಾಮಗಳು ಯಕ್ಷಪ್ರೇಮಿಗಳ ಚಿತ್ತ ಭಿತ್ತಿಯಲ್ಲಿ ಅಚ್ಚೊತ್ತಿರುವ ಹೆಸರುಗಳು. ಇಲ್ಲಿನ ಯಕ್ಷ ಕಲಾವಿದವರು ಈ ಗ್ರಾಮಗಳ ಹೆಸರನ್ನು ಉತ್ತುಂಗಕ್ಕೇರಿಸಿದ್ದಾರೆ. ಈ ಪೈಕಿ ಹಿಮ್ಮೇಳ, ಮುಮ್ಮೇಳ ಮತ್ತು ಪ್ರಸಾದನದಲ್ಲಿ ಪರಿಣತರಾಗಿರುವ ಬಿ. ಕೃಷ್ಣಸ್ವಾಮಿ ಜೋಯಿಸರು ಒಬ್ಬರು. ಶಂಕರನಾರಾಯಣ ಜೋಯಿಸ್ ಮತ್ತು ಸಾವಿತ್ರಮ್ಮ ದಂಪತಿ ಮಗನಾದ ಇವರು ಎಳವೆಯಲ್ಲಿಯೇ ಯಕ್ಷಗಾನದ ಬಗ್ಗೆ ಒಲವನ್ನು ಬೆಳೆಸಿಕೊಂಡವರು. ಪದವಿಯ ನಂತರ ಯಕ್ಷಗುರು ನೀಲಪ್ಪ ಬಂಗೇರರ ಬಳಿ ತಾಳಾಭ್ಯಾಸ ಮಾಡಿ, ನಾರ್ಣಪ್ಪ ಉಪ್ಪೂರರಲ್ಲಿ ಭಾಗವತಿಕೆ ಮತ್ತು ತಿಮ್ಮಪ್ಪ ನಾಯ್ಕರ ಬಳಿ ಮದ್ದಲೆ ವಾದನವನ್ನು ಅಭ್ಯಸಿಸಿದರು. ಸಹಪಾಠಿ ದಿ| ಕಾಳಿಂಗ ನಾವಡರ ಜತೆಗೆ ಹೂವಿನ ಕೋಲು, ತಾಳಮದ್ದಲೆ ಕಾರ್ಯಕ್ರಮಗಳಿಗೆ ಮದ್ದಲೆಗಾರರಾಗಿ ಖ್ಯಾತಿಗಳಿಸಿದರು. ಹೆಚ್. ಸುಬ್ಬಣ್ಣ ಭಟ್ ಅವರ ಅಜಪುರ ಕರ್ನಾಟಕ ಯಕ್ಷಗಾನ ಸಂಘಕ್ಕೆ ಸೇರಿ ಮುಖವರ್ಣಿಕೆ, ಕೇದಗೆ ಮುಂದಲೆ, ಮಂಡಾಸು ಕಟ್ಟುವಿಕೆಯೊಂದಿಗೆ ಸ್ತ್ರೀ ಪಾತ್ರಗಳನ್ನು ನಿರ್ವಹಿಸುತ್ತಾ ಖ್ಯಾತರಾದರು. ಸಾಲಿಗ್ರಾಮ ಮಕ್ಕಳ ಮೇಳಕ್ಕೆ ಸೇರಿ ತಿರುಗಾಟ ಆರಂಭಿಸಿದರು.ಬ್ರಹ್ಮಾವರದ ಸುತ್ತುಮುತ್ತಲಿನ ಹಲವಾರು ಯಕ್ಷಗಾನ ಸಂಘಗಳ ಸದಸ್ಯರಿಗೆ ಗುರುಗಳಾಗಿ ಜ್ಞಾನ ಧಾರೆ ಎರೆದರು. ಲಂಡನ್, ಮ್ಯಾಂಚೆಸ್ಟರ್, ಬಹರಿನ್‌ಗೆ ಯಕ್ಷ ತಂಡದೊಂದಿಗೆ ಪಯಣಿಸಿ ಅಲ್ಲಿ ಕಾರ್ಯಕ್ರಮ ನೀಡಿದ್ದಾರೆ. ಉಡುಪಿಯ ಯಕ್ಷ ಶಿಕ್ಷಣ ಟ್ರಸ್ಟ್ (ರಿ.) ವತಿಯಿಂದ ಶಾಲೆಗಳಲ್ಲಿ ನಡೆಸಲ್ಪಡುವ ಯಕ್ಷಗಾನ ತರಗತಿಗಳಿಗೆ ಗುರುಗಳಾಗಿ ಮತ್ತು ಶಿಬಿರಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗಿಯಾಗಿದ್ದಾರೆ. ಯುವ ಕಲಾವಿದರಿಗೆ ಮಾರ್ಗದರ್ಶಕರಾಗಿದ್ದಾರೆ. ಜೋಯಿಸರು ಚಿತ್ರಕಲಾವಿದರೂ ಹೌದು. ಭಾವಚಿತ್ರ ರಚನೆ, ನಾಟಕಗಳ ಹಿನ್ನೆಲೆ ಪರದೆ, ದೇವಾಲಯದ ಗೋಡೆಗಳಲ್ಲಿ ಚಿತ್ರ ರಚನೆ ಮತ್ತು ಪ್ರತಿ ವರುಷ ನೂರಾರು ಗಣೇಶ ವಿಗ್ರಹಗಳನ್ನು ರಚಿಸುತ್ತಾರೆ. ಕಳೆದ ನಲುವತ್ತು ವರುಷಗಳಿಂದ ಈ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಇವರನ್ನು ಜ.21ರಂದು ಕಲಾಪೀಠ ಕೋಟ (ರಿ.), ಇವರ ವತಿಯಿಂದ ನಡೆಯುವ ತಾಮ್ರಧ್ವಜ ಕಾಳಗ ಯಕ್ಷಗಾನ ಪ್ರಸಂಗದಂದು “”ಯಕ್ಷ ಕಲಾಸಾಧಕ” ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು.
ಕೆ. ದಿನಮಣಿ ಶಾಸ್ತ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ
Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ
Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ
Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.