ಪುಟ್ಟ ಕಲಾವಿದರು ಹಚ್ಚಿದ ಹಣತೆಗಳು
Team Udayavani, Mar 3, 2017, 3:50 AM IST
ಕತ್ತಲೆಯೆಂಬ ಅಳುಕಿಗೆ ಎದುರಾಗಿ ಚಿಕ್ಕದೊಂದು ಹಣತೆಯು ಬೆಳಕಿನ ಪಾತ್ರಧಾರಿಯಾಗಬಹುದು. ಒಂದಷ್ಟು ಹಣತೆಗಳು ಒಟ್ಟು ಸೇರಿ ಲೋಕವನ್ನೇ ಬೆಳಗಬಹುದು. ಮಂಗಳೂರಿನ ದಯಾ ಸ್ಕೂಲ್ ಆಫ್ ಆರ್ಟ್ಸ್ನ ಶಿಕ್ಷಕ ದಯಾನಂದ್ ಅವರು ತಾನು ತರಬೇತಿ ನೀಡುವ ಮಕ್ಕಳಿಂದಲೇ ವರ್ಣಬೆಳಕು ಹರಡಿಸುವ ಸಲುವಾಗಿ ಹಣತೆಗಳು ಎಂಬ ಚಿತ್ರ ಕಲಾಪ್ರದರ್ಶನವನ್ನು ಮಂಗಳೂರಿನ ಪ್ರಸಾದ್ ಆರ್ಟ್ ಗ್ಯಾಲರಿಯಲ್ಲಿ ನಡೆಸಿದ್ದರು.
ಬಾಲ ಕಲಾವಿದರ ಕಲಾಕೃತಿಗಳು ಈ ಪ್ರದರ್ಶನದಲ್ಲಿದ್ದವು. ಪ್ರತಿಯೊಂದು ಕಲಾಕೃತಿಯಲ್ಲಿಯೂ ಮಕ್ಕಳ ವಯಸ್ಸಿಗೆ ಮೀರಿದ ಪ್ರತಿಭೆ ಸಿಂಚನವಾಗಿದ್ದು ಹಣತೆಗಳ ವರ್ಣಕಾಂತಿ ವ್ಯಾಪ್ತಿ ಮೀರಿ ವಿಸ್ತಾರಗೊಂಡಿತ್ತು. ಜಲವರ್ಣ, ಚಾರ್ಕೋಲ್, ಅಕ್ರಿಲಿಕ್, ಕ್ರೆಯಾನ್ ಮುಂತಾದವುಗಳಿಂದ ರಚಿಸಿದ ವಿವಿಧ ವಸ್ತು ವಿಚಾರಗಳ ಕಲಾಕೃತಿಗಳಿದ್ದರೂ ದಯಾನಂದ್ ಅವರ ವಿಶಿಷ್ಟ ಶೈಲಿಯಾಗಿರುವ ಚಾರ್ಕೋಲ್ ಮಾದರಿಯಲ್ಲಿ ಮಕ್ಕಳ ವಿಶೇಷ ಪರಿಣತಿಯು ವಿಕಸನಗೊಂಡಂತಿತ್ತು. ಯಾವ ಮಕ್ಕಳಿಗೂ ಈ ಪ್ರದರ್ಶನಕ್ಕೋಸ್ಕರ ಇಂತಹುದೇ ನಿರ್ದಿಷ್ಟ ಕಲಾಕೃತಿ ರಚಿಸಬೇಕೆಂದು ಒತ್ತಡ ಹೇರದೆ ವಿದ್ಯಾರ್ಥಿಗಳ ಸ್ವಇಚ್ಛೆಗೆ ಬಿಟ್ಟ ಕಾರಣ ಹೆಚ್ಚಿನ ಕಲಾಕೃತಿಗಳು ಮಕ್ಕಳು ದಿನಂಪ್ರತಿ ವೀಕ್ಷಿಸುವ ವಸ್ತು ವಿಷಯಗಳನ್ನು ಆಧರಿಸಿದ್ದವು. ಜತೆಗೆ ವರ್ಣರಚನೆಯ ಸಂದರ್ಭದಲ್ಲಿ ಕಲಿಯುವಿಕೆಗೆ ಬಳಸಿಕೊಂಡ ಚಿತ್ತಾರಗಳನ್ನು ಅಭಿವ್ಯಕ್ತಗೊಳಿಸಿದ್ದು ವಿಶೇಷವಾಗಿತ್ತು. ಅನುಷಾ, ನಿಹಿರ, ಸಮನ್ವಿತಾ, ಅನಘಾ, ನಿರೀಕ್ಷಾ, ವೀಣ, ಕರಣ್, ತಾರುಣ್ಯ, ಡಿಯಾನ್, ಜಾಯ್ಲಿನ್, ಶ್ರುತಿ, ನೇಹಾ, ಚೈತ್ರಾ, ಅನ್ವಿತಾ, ಶ್ರೀಪತಿ, ಸುಪ್ರಭಾ ಇವರು ಕಲಾಕೃತಿಗಳ ಮೂಲಕ ತಮ್ಮ ವರ್ಣಪ್ರತಿಭೆಯನ್ನು ಅರಳಿಸಿದ ಬಾಲಕಲಾವಿದರು.
ಕಲಾ ಪ್ರದರ್ಶನದಲ್ಲಿ ಭಾಗವಹಿಸಿದ್ದ ಬಾಲಕಲಾವಿದರು ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಟ್ಟದವರು. ಮಕ್ಕಳ ವರ್ಣಪ್ರತಿಭೆಗಳನ್ನು ಅರಸಿ, ಬೋಧಿಸಿ, ಶೋಧಿಸುವಂಥದ್ದು ಕಲಾಕ್ಷೇತ್ರದ ಮುಂದಿನ ಬೆಳವಣಿಗೆಗೆ ದಿಕ್ಕಾಗುತ್ತದೆ.
ದಿನೇಶ್ ಹೊಳ್ಳ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.