ಲೋಲಮ್ಮ ಪಚ್ಚನಾಡಿ ಶತಮಾನ ಸಂಭ್ರಮ
Team Udayavani, Nov 9, 2018, 6:00 AM IST
ಮಂಗಳೂರಿನ ಪದವಿನಂಗಡಿ ಹಾಗೂ ಪಚ್ಚನಾಡಿಯ ಪರಿಸರದಲ್ಲಿ ಕಟೀಲು ಮೇಳದ ಯಕ್ಷಗಾನವನ್ನು ವರ್ಷಂಪ್ರತಿ ನಡೆಸುತ್ತಾ ಬಂದು, ಪರೋಪಕಾರದ ಬದುಕಿನೊಂದಿಗೆ ಬಾಳಿದ ಲೋಲಮ್ಮ ಪಚ್ಚನಾಡಿಯವರು 1918ರಲ್ಲಿ ಹುಟ್ಟಿದವರು. ಪ್ರಸ್ತುತ ವರ್ಷ ಅವರ ಹುಟ್ಟಿದ ಶತಮಾನ ವರ್ಷವಾದುದರಿಂದ ಕೀರ್ತೀಶೇಷ ಲೋಲಮ್ಮ ಪಚ್ಚನಾಡಿ ಪ್ರತಿಷ್ಠಾನವು ವರ್ಷಪೂರ್ತೀ ಶತಮಾನ ಸಂಭ್ರಮದ ಕಾರ್ಯಕ್ರಮ ಆಯೋಜಿಸಿದ್ದು, ಉದ್ಘಾಟನೆ ನವೆಂಬರ್ 11 ರಂದು ಮಂಗಳೂರು ಪುರಭವನದಲ್ಲಿ ನಡೆಯಲಿದೆ.
25-02-2008ರಲ್ಲಿ ನಿಧನರಾದ ಲೋಲಮ್ಮ ಪಚ್ಚನಾಡಿಯವರು ಊರೂರು ಆಟದ ಲೋಲಮಕ್ಕರೆಂದೇ ಪ್ರಸಿದ್ಧರಾಗಿ ಜೀವಿತಾವಧಿಯಲ್ಲಿ 39 ವರ್ಷಗಳ ಯಕ್ಷಗಾನ ಸೇವೆಯನ್ನು ನಡೆಸಿದರು. ಕಷ್ಟದ ಸಂದರ್ಭದಲ್ಲಿ ಕಟೀಲು ಮೇಳದ ಬಯಲಾಟ ಸೇವೆಯನ್ನು ನಡೆಸುವುದಾಗಿ ಹರಕೆ ಹೇಳಿದರು. ಹರಕೆ ಹೇಳಿದ ಫಲವೋ ಎಂಬಂತೆ ಕಷ್ಟ ಪರಿಹಾರವಾಯಿತು. ಆದರೆ ಹರಕೆ ಕೊಡುವ ಹೊಣೆ ಮಾತ್ರ ಇವರ ಹೆಗಲಿಗೆ ಬಿತ್ತು. ಧೈರ್ಯಗುಂದದೆ ಊರವರ ಸಹಕಾರದಿಂದ ಹರಕೆ ತೀರಿಸಿದ್ದರು. ಇದರ ಪರಿಣಾಮದಿಂದ ಮುಂದೆ ವರ್ಷಂಪ್ರತಿ ಯಕ್ಷಗಾನ ನಡೆಸುತ್ತಾ ಬಂದರು.
ಪ್ರಸ್ತುತ ಶತಮಾನ ಸಂಭ್ರಮದ ಪ್ರಯುಕ್ತ ಸಮ್ಮಾನ, ಮಹಿಳಾ ಕಲಾ ತರಬೇತಿ ಕಾರ್ಯಕ್ರಮ, ಶಾಲೆ, ಆಶ್ರಮಗಳಿಗೆ ಧನಸಹಾಯ ನೀಡುವುದರೊಂದಿಗೆ ಧಾರ್ಮಿಕ-ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಿರುವರು. ನ.11ರಂದು ಸಂಪಾಜೆ ಶೀನಪ್ಪ ರೈ ಯಕ್ಷಗಾನ ಸೇವೆ, ಸುರೇಶ್ ರಾವ್ ಪಚ್ಚನಾಡಿ ಶೈಕ್ಷಣಿಕ ಸೇವೆ ಪರಿಗಣಿಸಿ ಸಮ್ಮಾನ ನೆರವೇರಲಿದೆ. ಜೊತೆಗೆ ಜಿಲ್ಲೆಯ ಪ್ರಸಿದ್ಧ ಕಲಾವಿದರಿಂದ ಶ್ರೀದೇವಿ ಮಹಿಷ ಮರ್ದಿನಿ ಯಕ್ಷಗಾನ ಬಯಲಾಟ ನೆರವೇರಲಿದೆ.
ಸಂಪಾಜೆ ಶೀನಪ್ಪ ರೈ ಇವರು 6 ದಶಕಗಳಿಗೂ ಮಿಕ್ಕಿ ಕಲಾ ಸೇವೆ ಮಾಡಿರುವ ಹಿರಿಯ ಯಕ್ಷಗಾನ ಕಲಾವಿದರು. ನಾಯಕ ಪ್ರತಿನಾಯಕ ಪಾತ್ರಗಳನ್ನು ನಿರ್ವಹಿಸಿದ ಪರಂಪರೆಯ ನಿಸ್ಸೀಮ ರಾಜವೇಷಧಾರಿ. ಕಟೀಲು ಮೇಳದಲ್ಲಿ ಸುದೀರ್ಘ ತಿರುಗಾಟ. ವೇಣೂರು, ಇರುವೈಲು, ಸೌಕೂರು ಚೌಡೇಶ್ವರಿ, ಎಡನೀರು, ಹೊಸನಗರ, ಹನುಮಗಿರಿ ಮೇಳಗಳಲ್ಲಿ ಕಲಾ ಸೇವೆ ಮಾಡಿದ ಹಿನ್ನಲೆಯನ್ನು ಹೊಂದಿದ್ದಾರೆ.
ಕೆ. ಚಂದ್ರಶೇಖರ ಶೆಟ್ಟಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.