ಅಬ್ಬರಿಸಿ ಬೊಬ್ಬಿರಿವ ಮಹಿಷಾಸುರ
Team Udayavani, Apr 20, 2018, 7:28 PM IST
ಶ್ರೀದೇವಿ ಮಹಾತ್ಮೆ ಪ್ರಸಂಗದಲ್ಲಿ ಬರುವ ಮಹಿಷಾಸುರ ಪಾತ್ರ ಯಕ್ಷಗಾನ ಪ್ರೇಕ್ಷಕರನ್ನು ರೋಮಾಂಚನಗೊಳಿಸುವಂಥದ್ದು. ಭೀಕರವಾದ , ಕೋಣವನ್ನೇ ಹೋಲುವ ಮುಖವರ್ಣಿಕೆ , ತಲೆಯ ಮೇಲೆರಡು ಉದ್ದ ಕೊಂಬು , ಕೈಯಲ್ಲಿ ದೊಂದಿ ಹಿಡಿದು ರಾಳದ ಪುಡಿ ಎರಚಿ ಭೀಕರ ಬೆಂಕಿಯ ಜ್ವಾಲೆಯೊಂದಿಗೆ ಸಭಾ ಮಧ್ಯದಿಂದಲೇ ರಂಗಸ್ಥಳ ಪ್ರವೇಶಿಸುವ ಅಬ್ಬರ ,ಬೈಹುಲ್ಲಿನ ರಾಶಿಗೆ ಬೆಂಕಿ ಕೊಟ್ಟು ಜ್ವಾಲೆ ನಿರ್ಮಿಸುತ್ತಾ ಮಹಿಷನ ಹಿಂದೆ ಸೂಟೆ ಹಿಡಿದ ಹತ್ತಿಪ್ಪತ್ತು ಯುವಕರ ಗುಂಪು – ಇವೆಲ್ಲಾ ವರ್ಣನಾತೀತ . ಮಹಿಷಾಸುರ ಮುಖ್ಯ ಆಕರ್ಷಣೆ ನೀಳವಾದ ಕೋಡುಗಳು, ಕೋಣದಂತೆಯೇ ಅನುಕರಿಸುವ ಧ್ವನಿ ಹಾಗೂ ವಿಶಿಷ್ಟವಾದ ನಾಟ್ಯ ಪ್ರಸ್ತುತಿ.
1930ರಲ್ಲಿ ಕಾಸರಗೋಡಿನ ಕೊರೆಕ್ಕಾಡಿನಲ್ಲಿ ನಡೆದ ಪ್ರಥಮ ಶ್ರೀದೇವಿ ಮಹಾತ್ಮೆಯಲ್ಲಿ ಮಹಿಷಾಸುರನ ಪಾತ್ರ ಮಾಡಿದವರು ಬಣ್ಣದ ಕುಂಞ ಎಂಬವರು.ಅವರು ಮುಖವು ಕೋಣದಂತೆ ಕಾಣಲು ವಿಶಿಷ್ಟ ಮುಖವರ್ಣಿಕೆ ಮಾಡಿದ್ದರಂತೆ.ಎರಡೂ ಕಿವಿಯ ಮೇಲೆ ದಪ್ಪವಾದ ರಟ್ಟಿನಿಂದ ಮಾಡಿದ ಉದ್ದವಾದ ಎರಡು ಕೊಂಬುಗಳನ್ನು ಮಾಡಿ ಅದನ್ನು ಕಪ್ಪುಬಟ್ಟೆಯಿಂದ ಮುಚ್ಚಿ ಕೊಂಬೇ ಹೌದು ಎನ್ನುವಂತೆ ರಚಿಸಿ, ಎರಡು ದೊಡ್ಡದಾದ ಕಿವಿಗಳನ್ನೂ ಧರಿಸಿದ್ದರಂತೆ. ಅನಂತರ ಕೋಲುಳಿ ಸುಬ್ಬ , ಕಾಸರಗೋಡು ಸುಬ್ಬಯ್ಯ ಶೆಟ್ಟಿ , ಬಣ್ಣದ ಅಯ್ಯಪ್ಪರಂಥವರೂ ಮಹಿಷಾಸುರ ಪಾತ್ರ ಮಾಡಿದ್ದರಂತೆ. ಆದರೆ 1960ರ ನಂತರ ಕಟೀಲು ಮೇಳದವರು ಈ ಪ್ರಸಂಗವನ್ನು ಪ್ರದರ್ಶಿಸಲಾರಂಭಿಸಿದರು.ಈ ಕಾಲಘಟ್ಟದಲ್ಲಿ ಮಹಿಷಾಸುರ ಪಾತ್ರವು ವಿಜೃಂಭಿಸಲಾರಂಭವಾದುದು ಬಣ್ಣದ ಕುಟ್ಯಪ್ಪುರವರಿಂದ.ಕುಟ್ಯಪ್ಪರು ಬಣ್ಣದ ಕುಂಞರವರ ಮೂಲ ಚಿತ್ರಣದ ಆಧಾರದಲ್ಲೇ ತಮ್ಮ ಕಲ್ಪನೆಯನ್ನು ಸೇರಿಸಿ ಬದಲಾವಣೆ ತಂದರು.
ಮುಖವರ್ಣಿಕೆ : ಮಹಿಷಾಸುರ ಪಾತ್ರದ ಮುಖವರ್ಣಿಕೆ ವಿಶಿಷ್ಟವಾಗಿದೆ.ಈ ಪಾತ್ರ ಮಾಡುವವರು ಸಾಮಾನ್ಯವಾಗಿ ಒಂದನೇ (ಪ್ರಧಾನ) ಬಣ್ಣದ ವೇಷಧಾರಿ. ಪರಂಪರೆಯ ಸ್ಥಾನಮಾನದ ಪ್ರಕಾರ ಒಂದನೇ ಬಣ್ಣದ ವೇಷಧಾರಿಯು ಮಾಡಬೇಕಾದುದು ಶುಂಭಾಸುರ ಪಾತ್ರ.ಆದರೆ ಮಹಿಷಾಸುರ ಆಕರ್ಷಣೆಯ ಪಾತ್ರವಾದ ಕಾರಣ ಒಂದನೇ ಬಣ್ಣದ ವೇಷಧಾರಿಗೆ ನೀಡಿರಬಹುದು. ಮುಖವರ್ಣಿಕೆಯು ಹಸಿಬಣ್ಣ ಸಾಲಿಗೆ ಸೇರುವ ವಿಶಿಷ್ಟ ಪಾತ್ರ . ಹಸಿಬಣ್ಣ ಎಂದರೆ ಮೂಲಬಣ್ಣದ (ಯಕ್ಷಗಾನ ಪರಿಭಾಷೆಯಲ್ಲಿ ಛಾಯಾಬಣ್ಣ ) ಲೇಪನವಿಲ್ಲದೇ ನೇರವಾಗಿ ಮುಖವರ್ಣಿಕೆ ಬಳಿಯುವ ಪಾತ್ರಗಳು.ಮಹಿಷಾಸುರನ ಮುಖವರ್ಣಿಕೆ ಮಾಡುವಾಗ ಪ್ರಥಮವಾಗಿ ಹಣೆಗೆ ಪಟ್ಟಿ ಕಟ್ಟಿ ಬಿಳಿ ನಾಮ ಹಾಕುತ್ತಾರೆ .ಅನಂತರ ಹಣೆಯಿಂದ ಆರಂಭಿಸಿ ಕೆಳಮುಖವಾಗಿ ಮೂಗಿನ ಬದಿಯಿಂದ ಬಿಳಿಬಣ್ಣದ ಗೆರೆಯನ್ನು ಮೀಸೆಗಿಂತ ಮೇಲಿನವರೆಗೆ ತಂದು ಕಿವಿಯ ತನಕ ಎರಡೂ ಬದಿಯಲ್ಲಿ ಬರೆಯುವುದು ಪ್ರಾರಂಭಿಕ ಹಂತ. ಇದು ಸಾಮಾನ್ಯವಾಗಿ ಸರ್ಪದ ಆಕಾರದಲ್ಲಿ ಇರುತ್ತದೆ.ಅನಂತರ ಈ ಬಿಳಿ ವರ್ಣದ ಎರಡೂ ಬದಿಗಳಲ್ಲಿ ಕಪ್ಪು ಬಣ್ಣದ ಲೈನಿಂಗ್ ಕೊಡಲಾಗುತ್ತದೆ. ಅನಂತರ ಹಣೆಗೆ ನಾಮ ಇಟ್ಟು ಎರಡೂ ಕಣ್ಣಿನ ಸುತ್ತಲೂ ಕಪ್ಪು ಬಣ್ಣ ಹಚ್ಚುತ್ತಾರೆ.ಈ ಕಪ್ಪು ಬಣ್ಣ ಹಾಗೂ ಪ್ರಾರಂಭದಲ್ಲಿ ಬಳಿದ ಬಿಳಿ ಬಣ್ಣದ ನಡುವೆ ಕಣ್ಣಿನ ಮೇಲ್ಮುಖದವರೆಗೆ ಛಾಯಾಬಣ್ಣ ಬಳಿಯುತ್ತಾರೆ.ಈಗ ಇದು ನೋಡುವಾಗ ಕೋಣದ ಕಣ್ಣುಗಳ ಹಾಗೇ ಚಿತ್ರಿತವಾಗುತ್ತದೆ .ಮುಖದ ಉಳಿದ ಭಾಗಗಳಲ್ಲಿ ಅಂದರೆ ಹಣೆ, ಮೂಗು, ಮೂಗಿನ ಬದಿಗಳಲ್ಲಿ,ತುಟಿಗೆ ಕಪ್ಪು ಬಣ್ಣ ಲೇಪಿಸುತ್ತಾರೆ. ಗದ್ದಭಾಗಕ್ಕೆ ಮೂಲಬಣ್ಣದ ಗೆರೆಗಳನ್ನು ಎಳೆಯುತ್ತಾರೆ .ಸಾಮಾನ್ಯವಾಗಿ ಮಹಿಷಾಸುರನ ಮುಖವರ್ಣಿಕೆಗೆ ಇತರ ರಾಕ್ಷಸ ಪಾತ್ರಗಳಂತೆ ಅಕ್ಕಿಹಿಟ್ಟಿನ ಚುಟ್ಟಿ ಇಡುವ ಕ್ರಮವಿಲ್ಲ.ಕೆಲವು ವೇಷಧಾರಿಗಳು ಬಿಳಿ ಬಣ್ಣದಲ್ಲೇ ಚುಟ್ಟಿ ಇಡುತ್ತಾರೆ. ಹಣೆಯ ನಾಮ ಯಾವ ರೀತಿ ಎಂಬುದು ಕಲಾವಿದರ ಕಲ್ಪನೆಗೆ ಬಿಟ್ಟ ವಿಚಾರ.
ವೇಷಭೂಷಣ : ಯಕ್ಷಗಾನದ ಮಹಿಷಾಸುರ ಪಾತ್ರದಲ್ಲಿ ಮುಖವು ಮಾತ್ರ ಕೋಣನ ರೂಪ. ಮುಖದಿಂದ ಕೆಳಗೆ ಮನುಷ್ಯ ರೂಪ. ಹಾಗಾಗಿ ವೇಷಭೂಷಣವು ಉಳಿದ ಬಣ್ಣದ ರಾಕ್ಷಸ ಪಾತ್ರಗಳಂತೆಯೇ.ಆದರೆ ವಸ್ತ್ರಭೂಷಣ ಕಪ್ಪು ವರ್ಣದ್ದೇ ಆಗಬೇಕು.ಅಂಗಿ, ಚಲ್ಲಣ, ಬಾಲ್ ಮುಂಡು,ಸೋಗೆವಲ್ಲಿ, ಎದೆಪದಕ, ವೀರಕಸೆ , ಭುಜಕೀರ್ತಿ ಎಲ್ಲವೂ ಕಪ್ಪು ಬಣ್ಣದವು.
ಕೊಂಬು, ಕಿವಿ ಹಾಗೂ ಕಿರೀಟ : ಈ ಪ್ರಸಾಧನ ಮಹಿಷಾಸುರ ಪಾತ್ರದ ಮುಖ್ಯ ಅಂಶ. ಚಿಟ್ಟೆಪಟ್ಟಿ ಕಟ್ಟಿದ ನಂತರ ಕಿವಿಯ ಬಳಿ ಉದ್ದವಾದ ಎರಡು ಕೊಂಬು , ಕೊಂಬಿನ ಹತ್ತಿರ ದೊಡ್ಡ ಕಿವಿ ಕಟ್ಟುತ್ತಾರೆ .ಕಿವಿಯ ಬಳಿ ಓಲೆ ಧರಿಸಿ,ತಲೆಗೆ ಕೇಸರಿಯನ್ನು (ಕೂದಲು) ಕಟ್ಟುತ್ತಾರೆ. ಹಣೆಯಿಂದ ಮೇಲ್ಮುಖವಾಗಿ ಎದೆ ಪದಕ ಕಟ್ಟುತ್ತಾರೆ. ಇದೇ ಮಹಿಷಾಸುರನ ಕಿರೀಟ.
ಕೊಂಬು ಕಟ್ಟುವ ಕ್ರಮ : ಹಿಂದಿನ ಕಾಲದಲ್ಲಿ ಮಹಿಷಾಸುರನ ಕೊಂಬು ಕಟ್ಟುವುದು ಎಂದರೆ ಪರಿಶ್ರಮದ ಕೆಲಸವಾಗಿತ್ತು. ದಪ್ಪವಾದ ರಟ್ಟು ಅಥವಾ ಶರ್ಟ್‌ನ ಕಾಲರ್‌ಗೆ ಬಳಸುತ್ತಿದ್ದ ಬಾಂಟೆಕ್ಸ್‌ನಂಥ ವಸ್ತು ಉಪಯೋಗಿಸಿ ಒಂದೂವರೆಯಿಂದ ಎರಡು ಅಡಿಗಳಷ್ಟು ಉದ್ದವಾದ ಕೊಂಬು ರಚಿಸುತ್ತಿದ್ದರು. ಈ ಕೊಂಬನ್ನು ಗಟ್ಟಿಯಾಗಿ ಕಟ್ಟಿ , ಚಿಟ್ಟೆಪಟ್ಟಿ ಕಟ್ಟಿದ ನೆತ್ತಿಯ ಮೇಲೆ ಏಳೆಂಟು ಸೀರೆಗಳ ಅಟ್ಟೆಯನ್ನು ಇಟ್ಟು ಅದನ್ನು ಜಟ್ಟಿಯಿಂದ ಕಟ್ಟಿ ಕಪ್ಪು ವಸ್ತ್ರದಿಂದ ಮುಚ್ಚುತ್ತಿದ್ದರು. ಶಿರೋಭಾಗವು ಕೋಣದ ಶಿರದಂತೆ ಎತ್ತರವಾಗಿ ಕಾಣಲು ಈ ವಿಧಾನ. ಈ ಕೊಂಬುಗಳು ಜಾರಿ ಬೀಳದಂತೆ ಚಿಟ್ಟೆಪಟ್ಟಿಯ ಬಳಿ ಕೊಂಬಿಗೆ ತಾಗಿ ಕೋಲಿನ ಸಣ್ಣ ತುಂಡು ಕಟ್ಟುತ್ತಿದ್ದರು. ದಪ್ಪವಾದ ರಟ್ಟಿನಿಂದ ಮಾಡಿದ ಎರಡು ದೊಡ್ಡ ಕಿವಿಗಳನ್ನು ಕಟ್ಟಿ ಕಿವಿಯೋಲೆ ಧರಿಸುತ್ತಿದ್ದರು. ಕೊಂಬಿನ ಬಳಿ ತಲಾ ಎರಡು ಕೇಸರಿ ಹಾಗೂ ಹಿಂದಲೆಯಲ್ಲಿ ಒಂದು ಕೇಸರಿಯಂತೆ ಐದು ಕೇಸರಿ ಕಟ್ಟಿ, ಎದೆಪದಕವನ್ನು ಹಣೆಯಿಂದ ಹಿಂದಕ್ಕೆ ಕಿರೀಟದ ಹಾಗೆ ಕಟ್ಟುತ್ತಿದ್ದರು.ದಪ್ಪವಾದ ಮೀಸೆಯನ್ನು ಕಟ್ಟಿ ಗದ್ದದ ಕೆಳಗೆ ಗಡ್ಡ ಕಟ್ಟುವುದು. ಇಲ್ಲಿಗೆ ವೇಷವು ಕೋಣದಂತೇ ಕಂಡು ಮಹಿಷಾಸುರ ವೇಷ ಪೂರ್ಣವಾಗುತ್ತದೆ. ಈ ಹಂತ ಮುಟ್ಟುವಾಗ ಮಹಿಷಾಸುರ ಪಾತ್ರಧಾರಿಯ ತಲೆಯ ಮೇಲೆ ಸುಮಾರು 8 ಕಿಲೋದಷ್ಟು ಭಾರ ಬೀಳುತ್ತಿತ್ತು .
ಆದರೆ ಇಂದಿನ ಮಹಿಷಾಸುರ ಪಾತ್ರಕ್ಕೆ ಇಷ್ಟೆಲ್ಲಾ ಪರಿಶ್ರಮ ಬೇಕಿಲ್ಲ.ಈಗ ಕೊಂಬು ಕಟ್ಟುವ ಕೆಲಸವಿಲ್ಲ .ಈಗ ಬಳಸುವುದು ರೆಡಿಮೇಡ್ ಟೊಪ್ಪಿಯನ್ನು. ಕೇಸರಿ, ಕೊಂಬು,ಕಿವಿ ಹಾಗೂ ಎದೆ ಪದಕವನ್ನು ಈ ಟೊಪ್ಪಿ ಹೊಂದಿರುತ್ತದೆ. ಇದನ್ನು ತಲೆಗೆ ಕಟ್ಟಿದರೆ ಆಯಿತು. ಈ ಕೆಲಸಕ್ಕೆ ಹೆಚ್ಚೆಂದರೆ ಏಳೆಂಟು ನಿಮಿಷಗಳ ಶ್ರಮ ಸಾಕು. ಈ ಟೊಪ್ಪಿ ಹೆಚ್ಚೆಂದರೆ ಒಂದೂವರೆ ಕಿಲೋ ಇದ್ದೀತು.ಈಗಿನ ಕೊಂಬುಗಳು ಫಾಮ್, ಫೈಬರ್, ಪೀಲಿ ಅಥವಾ ದಪ್ಪ ಕ್ಯಾನ್ವಾಸ್‌ಗಳಿಂದ ಮಾಡಿರುವುದು. ಹಾಗೆಂದು ಮಹಿಷಾಸುರ ಪಾತ್ರ ನಿರ್ವಹಿಸುವುದು ಸುಲಭದ ಕೆಲಸವಲ್ಲ. ಸಭೆಯಿಂದಲೇ ಬರಲೇ ಸುಮಾರು 10 ರಿಂದ 15 ನಿಮಿಷ ಬೇಕು .ರಂಗಸ್ಥಳವು ಇಪ್ಪತ್ತು ಮೀಟರ್‌ನಷ್ಟಿರುವಾಗ ಕೈಗಳೆರಡನ್ನೂ ನೆಲಕ್ಕೆ ಊರಿ ನಾಲ್ಕು ಕಾಲಿನಿಂದ ಬರಬೇಕು.ಅನಂತರ ರಂಗಸ್ಥಳ ಪ್ರವೇಶಿಸಿದ ಕೂಡಲೇ ನಾಲ್ಕು ಏರು ಪದ್ಯಗಳ ವೀರಾವೇಶ ತೋರ್ಪಡಿಸಬೇಕು.ಕೊಂಬುಗಳನ್ನು ಅಲುಗಾಡಿಸುತ್ತಾ ಮಹಿಷಾಸುರನದ್ದೇ ಆದ ವಿಶಿಷ್ಟ ನಾಟ್ಯ ಮಾಡಿ,ಸಂಭಾಷಣೆಯ ನಡುವೆ ಕೋಣದಂತೆ ಗುಟುರು ಹಾಕಬೇಕು.ಸುಮಾರು ಒಂದೂವರೆ ಘಂಟೆಗಳ ಕಾಲ ರಂಗಸ್ಥಳದಲ್ಲಿ ಕಳೆಯಬೇಕು.
ಹಿಂದಿನ ಮಹಿಷಾಸುರ ಪಾತ್ರ ನಿಧಾನ ಗತಿಯದ್ದಾಗಿತ್ತು.ಈಗಿನದ್ದು ಕ್ಷಿಪ್ರ ಗತಿಯದ್ದು.ಸಭೆಯಲ್ಲಿ ಅಟ್ಟಹಾಸ ತೋರಿದರೆ ಸಾಲದು.ಅದೇ ಕಸುವನ್ನು ರಂಗಸ್ಥಳದಲ್ಲಿಯೂ ತೋರಿಸಿದರೆ ಮಾತ್ರ ಪಾತ್ರಕ್ಕೆ ನ್ಯಾಯ ಒದಗಿಸಿದಂತಾಗುತ್ತದೆ.
ಸಿದ್ದಕಟ್ಟೆ ಸದಾಶಿವ ಶೆಟ್ಟಿಗಾರ
ಮಹಿಷಾಸುರ ಹೆಚ್ಚು ಸಮಯವನ್ನು ಸಭೆಯಲ್ಲೇ ತೊಡಗಿಸುವುದು ಸರಿಯಲ್ಲ. ಮಾಲಿನಿಯು ಸೀರೆ ಬದಲಾಯಿಸಿ ಬರುವಷ್ಟರಲ್ಲಿ ಮಹಿಷಾಸುರ ರಂಗಸ್ಥಳ ತಲುಪಿದರೆ ಉತ್ತಮ.ಮಹಿಷಾಸುರನಿಗೆ ರಂಗಸ್ಥಳದಲ್ಲೇ ಬೇಕಾದಷ್ಟು ಕಸುಬು ಮಾಡುವ ಅವಕಾಶವಿದೆ.ಮಹಿಷವಧೆ ಇಂತಿಷ್ಟೇ ಸಮಯಕ್ಕೆ ಮುಗಿಯಬೇಕು ಎಂಬ ಮಿತಿಯಿದೆ.
ಸತೀಶ್ ನೈನಾಡು
ನನ್ನ ಮಹಿಷಾಸುರ ಪಾತ್ರದ ನಿರ್ವಹಣೆಗೆ ಗುರುಗಳಾದ ಗಂಗಯ್ಯ ಶೆಟ್ಟರೇ ಆದರ್ಶ. ಸಭೆಯಲ್ಲಿ ತೋರುವಷ್ಟೇ ನಿರ್ವಹಣೆಯನ್ನು ರಂಗಸ್ಥಳದಲ್ಲೂ ನೀಡುತ್ತಿದ್ದೇನೆ.ಬೇಸಿಗೆ ಕಾಲದಲ್ಲೂ ಮಹಿಷಾಸುರ ನಿರ್ವಹಣೆ ಮಾಡುವಾಗ ನನಗೆ ಆಯಾಸ, ಸುಸ್ತು ಎಂದು ಇಷ್ಟರ ತನಕ ಅನಿಸಿದ್ದಿಲ್ಲ .
ಉಮೇಶ್ ಕುಪ್ಪೆಪದವು
ಮಹಿಷಾಸುರ ಸಭೆಯಿಂದ ಪ್ರವೇಶ ಮಾಡುವ ಸನ್ನಿವೇಶ ನನಗೆ ಇಷ್ಟವಾದುದು.ಈ ಸಂದರ್ಭದಲ್ಲಿ ನನಗೆ ಇಷ್ಟರ ತನಕ ಆಯಾಸ ಎಂದು ತೋರಿದ್ದೇ ಇಲ್ಲ . ಆದರೂ ದೊಂದಿಗೆ ರಾಳದ ಹುಡಿ ಎರಚಿದಾಗ ಉಂಟಾಗುವ ಜ್ವಾಲೆಯಿಂದಾಗಿ ಕೆಲಕ್ಷಣ ಉರಿಯ ಅನುಭವವಾಗುತ್ತದೆ. ಆದರೆ ರಂಗಸ್ಥಳ ಪ್ರವೇಶಿಸಿದಾಕ್ಷಣ ಎಲ್ಲವೂ ಸರಿಯಾಗುತ್ತದೆ.
ಪೂರ್ಣಿಮಾ ಯತೀಶ್ ರೈ
ಎಂ.ಶಾಂತರಾಮ ಕುಡ್ವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Election Results: ಮಹಾರಾಷ್ಟ್ರ, ಝಾರ್ಖಂಡ್ ನಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭ
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.