ಪ್ರಚಲಿತ ರಾಜಕೀಯ ವ್ಯವಸ್ಥೆಗೆ ಹಿಡಿದ ಕೈಗನ್ನಡಿ ಮಹಮೂದ್ ಗಾವಾನ್
Team Udayavani, Aug 2, 2019, 5:00 AM IST
ರಚನೆ: ಡಾ| ಚಂದ್ರಶೇಖರ ಕಂಬಾರ ನಿರ್ದೇಶನ: ಸಿ.ಟಿ. ಬ್ರಹ್ಮಾಚಾರ್
ಬೀದರ್‌ನಲ್ಲಿ ಬಹಮನಿ ಸುಲ್ತಾನರ ಆಡಳಿತದಲ್ಲಿ ಇದ್ದ ಪ್ರಾಂತೀಯತೆ, ಮತೀಯತೆಗಳ ಬರ್ಬರತೆಯಲ್ಲಿ ಇಡೀ ಸಮುದಾಯದ ಸಾಮಾಜಿಕ ಅಸಹನೀಯವಾದ ಹಿಂಸೆಯ ದಳ್ಳುರಿಯಲ್ಲಿದ್ದಾಗ ಇರಾನ್‌ನಿಂದ ಬಂದ ಮಹಮೂದ್ ಗಾವಾನ್ ಸುಲ್ತಾನರಿಗೆ ನಿಷ್ಟನಾಗಿ ನಡೆದುಕೊಂಡು ದಿವಾನ್ ಪಟ್ಟಕ್ಕೆ ಏರುತ್ತಾನೆ. ಎಲ್ಲ ಕಡೆ ಇರವಂತೆ ಬಹಮನಿ ದೊರೆಗಳ ಆಪ್ತನಾದ ಗಾವಾನ್‌ನ ಮೇಲೆ ಇಲ್ಲಸಲ್ಲದ ಆಪಾದನೆಯನ್ನು ಮಾಡಿ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಉಳಿದವರು ಆತನನ್ನು ಮರಣದಂಡನೆಗೆ ಗುರಿಮಾಡುತ್ತಾರೆ. ಗಾವಾನ್ ಹೇಳುವಂತೆ ಇಂದಿನ ಮಾನವನ ದೈವ ಕ್ರೂರವಾದ ರಾಜಕಾರಣದಿಂದಲೇ ನಿರ್ಧಾರವಾಗಬೇಕಾಗಿದೆ. ಅದಕ್ಕೆ ರಾಜಕಾರಣ ಮತ್ತು ವಿವೇಕಗಳ ಸಮನ್ವಯದ ಅಗತ್ಯವನ್ನು ಹೇಳಿದೆ. ವಿಭಜಕ ಶಕ್ತಿಗಳನ್ನು ನಿಯಂತ್ರಿಸಿ ಈ ದೇಶದ ಅಂತಃಶಕ್ತಿಯನ್ನು ಅದರ ಜಾತಿ, ಮತ, ಪಂಥ, ರಾಜಕಾರಣಗಳ ತುಂಡುಗಳನ್ನು ಒಂದಾಗಿಸಲು ನೋಡಿದೆ. ರಾಜಕಾರಣ ಮತ್ತು ವಿವೇಕಗಳ ಸಮನ್ವಯ ಆಗ ಆಗುತ್ತದೆ. ಅಲ್ಲಿಯವರೆಗೆ ಕಾಯಬೇಕು…
ಗಾವಾನ್‌ನಿಗೆ ಬಾೖಜಾ ಬಂದೇನವಾಜರು “ಸಾವಿರ ವಿಭಿನ್ನ ನಂಬಿಕೆಗಳು, ವಿಚಾರಗಳ ಮಧ್ಯೆ ಇದ್ದರೂ ಪರಸ್ಪರ ಗೌರವದಿಂದ ಪ್ರೀತಿಯಿಂದ ಬದುಕುವ ಹಿಂದೂಸ್ಥಾನವನ್ನು ನೋಡಲು’ ಹೇಳಿದಾಗ ಅದನ್ನು ನಂಬಿ ಸಂಸಾರವನ್ನು ಬಿಟ್ಟು ಇಲ್ಲಿಗೆ ಬಂದಾಗ ಕಂಡಿದ್ದು ದಖನೀಯರು, ವಿದೇಶಿಯರು ಅಂತ ಎರಡು ಪಂಗಡಗಳು, ಬೆನ್ನಿಗೆ ಕಸಬರಿಗೆ ಕಟ್ಟಿಕೊಂಡ, ಕೈಯಲ್ಲಿ ಗಡಿಗೆ ಹಿಡಿದ ಮಹಾರ್ ಜಾತಿಯ ಜನರು, ಬರಗಾಲದಲ್ಲಿ ತಟ್ಟೆ ಹಿಡಿದು ಹಸಿವೆಯಿಂದ ಕುಳಿತಿದ್ದರೂ ಮೇಜುವಾನಿ ಮಾಡುವ ಸುಲ್ತಾನರು… ಆದರೂ “ಆಷಾಢ ಮಾಸ ಗುರುಪೂರ್ಣಿಮ ದಿವಸ ಹಣದೊಂದಿಗೆ ಮಹಾರನನ್ನು ಖಂಡಿತ ಕಳುಹಿಸುತ್ತೇನೆ’ ಎಂಬ ಅಚಲ ನಂಬಿಕೆಯ ಪಂತರಂಥವರು…
ಇತಿಹಾಸದ ಕಥಾವಸ್ತುವಿನ ನಾಟಕವಾದರೂ ಇಂದಿನ ರಾಜಕೀಯ ವ್ಯವಸ್ಥೆಗೆ ಹಿಡಿದ ಕನ್ನಡಿ. ವ್ಯಕ್ತಿಗಳು ಬೇರೇ, ವಸೂಲಿಯ ಕ್ರಮಗಳು ಬೇರೇ. ಸ್ಥಿತಿ ಒಂದೇ… ಹೀಗಾಗಿ ನಾಟಕದ ಅನೇಕ ಸಂಭಾಷಣೆಗಳಲ್ಲಿ ಪ್ರಸ್ತುತ ಭಾರತದ ಬದುಕಿನ ನೋಟವಾಗಿ ಹೊರಹೊಮ್ಮುತ್ತದೆ. ಸಾಗರದ “ರಂಗ-ಸ್ವರೂಪ’ ಇತ್ತೀಚೆಗೆ “ಮಹಮೂದ್ ಗಾವಾನ್’ ನಾಟಕ (ರಚನೆ: ಡಾ| ಚಂದ್ರಶೇಖರ ಕಂಬಾರ ನಿರ್ದೇಶನ: ಸಿ.ಟಿ. ಬ್ರಹ್ಮಾಚಾರ್)ವನ್ನು ಪ್ರದರ್ಶಿಸಿತು.
ದೂರದ ಊರಿನ ಹುಡುಗ ಹುಡುಗಿಯರು ಬೀದರಿನ ಮದರಸಾ ನೋಡುವುದಕ್ಕೆ ಬಂದವರು ಗೈಡ್‌ನಂತಿದ್ದ ಮುದುಕ ಹೇಳುವ ಕಥೆ ಮೂಲಕ ನಾಟಕ ಬಿಚ್ಚಿಕೊಳ್ಳುತ್ತದೆ. ಮೇಳದಂತೆ, ಸೂತ್ರಧಾರರಂತೆ ಕೆಲಸ ಮಾಡುವ ಇವಿಷ್ಟು ಜನವೂ ಆರಂಭದಲ್ಲಿ ಸರಿ. ಆದರೆ ಮಧ್ಯೆ ಮಧ್ಯೆ ಅವರ ಪ್ರವೇಶ ರಸಭಂಗವಾಗುತ್ತದೆ. ಇಡೀ ನಾಟಕದ ಹೀರೋ ಬ್ಯಾಂಕ್ ಪ್ರಸನ್ನಕುಮಾರ್ ಎನ್.ಎಂ. (ಮಹಮೂದ್ ಗಾವಾನ್) ತಮ್ಮ ಧ್ವನಿಯಿಂದ, ಘನತೆಯಿಂದ ನಾಟಕವನ್ನು ಚಂದಗಾಣಿಸಿದರು. ಕಾರ್ತಿಕ್ ಕೆ. (ಹುಮಾಯೂನ್) ಚುರುಕು ಅಭಿನಯದಿಂದ ಗಮನಸೆಳೆಯುತ್ತಾರೆ. ಅದರಲ್ಲೂ ಕುಡುಕನಾಗಿ ಅಭಿನಯಿಸುವುದು ಒಂದು ಸವಾಲು. ವಾಲದಿದ್ದರೆ ಕುಡಿದಂತೆ ಕಾಣಿಸುವುದಿಲ್ಲ; ವಾಲಿದರೆ ಓವರ್ ಆ್ಯಕ್ಟ್ ಎನಿಸುತ್ತದೆ. ತಮ್ಮ ಗಾಂಭೀರ್ಯದಿಂದ ಕಥೆ ಹೇಳಿದವರು ಕೆ.ಎಂ. ಬಡಿಗೇರ್ (ಮುದುಕ). ಇಡೀ ನಾಟಕಕ್ಕೆ ತಿರುವು ಕೊಡುವವಳೇ ನೀಲಿ – ಈ ಪಾತ್ರದ ಅನಘಾ ಆರ್. ಸಾಗರ ತಾನು ಬೆಳೆಯಬಲ್ಲ ಕಲಾವಿದೆ ಎಂದು ಸಾಬೀತು ಮಾಡಿದ್ದಾರೆ. ಅಂಬಿಕಾ ಈ. ಭೀಮನಕೋಣೆ (ನರ್ಗಿಸ್ ಬೇಗಂ) ಪಾತ್ರಕ್ಕೆ ನ್ಯಾಯ ದೊರಕಿಸಿದ್ದಾರೆ. ಚಂದ್ರಶೇಖರ ಎಂ.ಎಸ್. (ಪಂತ, ಅಮೀರ್) ತುಂಬಾ ಲವಲವಿಕೆಯಿಂದ ನಟಿಸಿದ್ದಾರೆ. ಕಿಶೋರ್ ಪ್ರಭು ಗೋಳಗೋಡು (ರಾಜ, ತರಫ್ದಾರ) ಘನತೆಯಿಂದ ನಟಿಸಿ ನಾಟಕದ ಯಶಸ್ಸಿಗೆ ಕಾರಣರಾಗಿದ್ದಾರೆ. ಹಾಗೇ ನೋಡಿದರೆ ನಾಟಕದ ಎಲ್ಲಾ ಪಾತ್ರಧಾರಿಗಳು ಚೆನ್ನಾಗಿಯೇ ನಟಿಸಿದ್ದಾರೆ.
ಆದರೂ ನಾಟಕ ತುಂಬಾ ಯಶಸ್ಸಿನ ಪ್ರದರ್ಶನ ಎಂದು ಹೇಳಲು ಬರುವುದಿಲ್ಲ. ಇಡೀ ನಾಟಕಕ್ಕೆ ಒಟ್ಟಂದ ಇಲ್ಲ. ಕಾರಣ ದೃಶ್ಯದ ಸಂಯೋಜನೆಯಲ್ಲಿ, ಬೆಳಕಿನ ವಿನ್ಯಾಸದಲ್ಲಿ ನಾಟಕ ಎದ್ದು ಬರಬೇಕು. ಬೆಳಕು ನಾಟಕಕ್ಕೆ ಹಿತವಾಗಿ ಬರುವುದರ ಬದಲು ಒಂದು ವಿಘ್ನವಾಗಿ ಬಂದಿತು. ಬೆಳಕಿರುವುದು ಪಾತ್ರಧಾರಿಗಳನ್ನು ಕಾಣಿಸಲಿಕ್ಕೆ; ಬೆಳಕಿನ ವಿನ್ಯಾಸ ಮಾಡುವುದು ಇನ್ನೂ ಚೆನ್ನಾಗಿ ಕಲಾತ್ಮಕವಾಗಿ ತೋರಿಸಲಿಕ್ಕೆ . ಬೆಳಕು ಸಂಪೂರ್ಣ ವಿಫಲವಾಗಿತ್ತು. ವೇಷಭೂಷಣ, ರಂಗಸಜ್ಜಿಕೆ, ರಂಗ ಪರಿಕರಗಳು ಒಪ್ಪುವಂತಿತ್ತು.
ರಂಗಕೃತಿಯನ್ನು ಸಿದ್ಧಪಡಿಸಿಕೊಳ್ಳುವಾಗ ಇಡೀ ನಾಟಕವನ್ನೇ ತರಬೇಕೆಂದಿಲ್ಲ. ರಂಗ ಪ್ರಯೋಗಕ್ಕೆ ಬೇಕಾದ/ನಾಟಕಕಾರನ ಆಶಯಕ್ಕೆ ಭಿನ್ನವಾಗದಂತೆ ರಂಗಕೃತಿ ಹುಟ್ಟಿಕೊಳ್ಳುತ್ತದೆ. ನಾಟಕ ಒಂದು ಕೃತಿಯಾಗಿ ಓದುಗನನ್ನು ಕಾಡಿದರೆ ರಂಗಕೃತಿ ಪ್ರೇಕ್ಷಕನನ್ನು ನಂಬಿಸಬೇಕು ಮತ್ತು ಅದು ಅವನಿಗೊಂದು ಹೊಸ ಅನುಭವವನ್ನು ನೀಡಬೇಕು.
ಡಾ| ಜಯಪ್ರಕಾಶ ಮಾವಿನಕುಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ
ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ
Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್ ಜೈಕಾರ !
Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ
Idu Entha Lokavayya: “ಕೋಸ್ಟಲ್” ನಿಂದ ಕರುನಾಡು!
MUST WATCH
ಹೊಸ ಸೇರ್ಪಡೆ
22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?
Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್
Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ
H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.