ಸುಜ್ಞಾನದ ಸಂದೇಶ ಸಾರುವ ಸಹನಾ ಸಂದೇಶ
Team Udayavani, Aug 16, 2019, 5:00 AM IST
ಹಿರಿಯ ವಿದ್ವಾಂಸ, ಸಂಶೋಧಕ ಡಾ| ಅಮೃತ ಸೋಮೇಶ್ವರ ಅವರು ಪುರಾಣ ಕಥನಗಳಿಗೆ ಆಧುನಿಕ ವಿನ್ಯಾಸವಿತ್ತು ಪ್ರಸಂಗಗಳನ್ನು ರಚಿಸಿದ ಯಕ್ಷಗಾನದ ಅಭಿಜಾತ ಕವಿ. ಸಮಕಾಲೀನ ಸಮಸ್ಯೆಗಳನ್ನು ಕಲಾತ್ಮಕವಾಗಿ ಯಕ್ಷಗಾನದ ಚೌಕಟ್ಟಿನೊಳಗೆ ಪ್ರಸಂಗವನ್ನಾಗಿಸುವ ಇವರ ರಚನಾ ಕೌಶಲ ಅಸಾಧಾರಣವಾದುದು. ಅನೇಕ ವಸ್ತುವೈವಿಧ್ಯಗಳುಳ್ಳ ಪ್ರಸಂಗ ರಚನೆಯನ್ನು ಮಾಡಿದ ಅಮೃತರ ಒಂದು ವಿನೂತನ ಕಥಾವಸ್ತುವಿನ ವಿಶಿಷ್ಟ ಪ್ರಸಂಗ “ಸಹನಾ ಸಂದೇಶ’. ಕ್ಷೇಮ ಪುರದರಸ ಸುಗುಣ ಭೂಪ. ಇವನ ಮಂತ್ರಿಯ ಹೆಸರು ಸಮನ್ವಯ. ರಾಣಿ ಕ್ಷಮಾ. ಸಹನಾ ಮತ್ತು ಶಾಂತಿ ಎಂಬ ಇಬ್ಬರು ಹೆಣ್ಮಕ್ಕಳ ತಂದೆಯೀತ.
ದುರಿತಪುರದೊಡೆಯ ದ್ವೇಷಾಸುರ. ಈತನಿಗೆ ವಿಧ್ವಂಸಾಸುರ, ಭೇದಾಸುರ, ಸ್ವಾರ್ಥಾಸುರರೆಂಬವರು ಅನುಯಾಯಿಗಳು. ಇವರು ಐಂದ್ರಜಾಲಿಕರಂತೆ ಮಾರುವೇಷದಿಂದ ಬಂದು ವಸಂತೋತ್ಸವದ ಸಂಭ್ರಮದಲ್ಲಿದ್ದ ರಾಜಕುಮಾರಿ ಶಾಂತಿಯನ್ನು ಮೋಸದಿಂದ ಅಪಹರಿಸುತ್ತಾರೆ. ಇದನ್ನು ತಿಳಿದ ಅರಸ ತನ್ನ ಮಗಳನ್ನು ರಕ್ಷಿಸಲು ಸೇನಾಸಮೇತ ದುರಿತಪುರಕ್ಕೆ ದಾಳಿ ಮಾಡುತ್ತಾನೆ. ಯುದ್ಧದಲ್ಲಿ ಸೋತ ರಾಜ ರಾಕ್ಷಸರ ಸೆರೆಗೆ ಸಿಗುತ್ತಾನೆ. ಮುಂದೆ ರಾಕ್ಷಸರ ಅಟ್ಟುಳಿ ಅತಿಯಾಗುತ್ತದೆ.
ರಾಜಕುಮಾರಿ ಸಹನಾದೇವಿ ತನ್ನ ಸಖೀಯರಾದ ರಚನಾದೇವಿ, ಸಮತಾದೇವಿ, ಮಮತಾದೇವಿಯರ ಸಹಿತ ರಾಕ್ಷಸರ ರಾಜ್ಯಕ್ಕೆ ಮುತ್ತಿಗೆ ಹಾಕುತ್ತಾಳೆ. ರಚನಾದೇವಿ ವಿಧ್ವಂಸಾಸುರನನ್ನು, ಸಮತಾದೇವಿ ಭೇದಾಸುರನನ್ನು, ಮಮತಾದೇವಿ ಸ್ವಾರ್ಥಾಸುರನನ್ನು, ಸಹನಾದೇವಿ ದ್ವೇಷಾಸುರನನ್ನು ಯುದ್ಧದಲ್ಲಿ ಸೋಲಿಸುತ್ತಾರೆ.
ಅದೇ ಸಂದರ್ಭ ಆಕಾಂಕ್ಷಾಪುರದೊಡೆಯ ಅತಿರೇಕಭೂಪ ತನ್ನ ಮಂತ್ರಿ ರಭಸಮತಿಯೊಡನೆ ಸಮಾಲೋಚಿಸಿ ಕ್ಷೇಮಪುರಕ್ಕೆ ದಾಳಿಯಿಡುತ್ತಾನೆ. ಸಹನಾದೇವಿ ತನ್ನ ಸಖೀಯರೊಡನೆ ಆತನನ್ನು ತಡೆದು ಯುದ್ಧಮಾಡಿ ಅತಿರೇಕನನ್ನು ಸೋಲಿಸುತ್ತಾಳೆ. ಅತಿರೇಕ ಶರಣಾಗಿ ಪಶ್ಚಾತ್ತಾಪಪಡುತ್ತಾನೆ. ಆ ವೇಳೆಗೆ ರಾಕ್ಷಸರೂ ಬಂದು ಕ್ಷಮೆ ಯಾಚಿಸುತ್ತಾರೆ.
ಸಹನಾ ಅವರೆಲ್ಲರನ್ನೂ ಕ್ಷಮಿಸುತ್ತಾಳೆ. ಸೋತ ಪಾತ್ರಗಳು ತಲೆತಗ್ಗಿಸಿ ನಿಲ್ಲುತ್ತವೆ. ಬಂಧ ವಿಮೋಚನೆಗೊಂಡ ಸುಗುಣಭೂಪ ಶಾಂತಿದೇವಿಯ ಜೊತೆ ಸುಗುಣಾದಿಗಳನ್ನು ಕೂಡಿಕೊಂಡು
ದ್ವೇಷವಡಗಲಿ ಸ್ವಾರ್ಥ ಮತ್ಸರ | ಕ್ಷೇಶ ತೊಲಗಲಿ ಸರ್ವದಾ
ತೋಷ ವರ್ಧಿಸಿ ಸರಸ ಸಹನೆಯ | ಲೇಸಿನಾ ಪಥ ತೆರೆಯಲಿ
ವಿದ್ಯೆ ಸರ್ವರಿಗೊದಗಿ ಸುಗುಣದ | ಸಿದ್ಧಿಯಾಗಲಿ ಜನತೆಗೆ
ಹೃದ್ಯ ಸಂಸ್ಕೃತಿ ಪ್ರೇಮ ಸ್ವಾಸ್ಥ್ಯವು | ವರ್ಧಿಸಲಿ ದಿನದಿನದಲಿ
ಎನ್ನುವ ಹಾಡಿಗೆ ವಿಜಯನೃತ್ಯ ಮಾಡುತ್ತಾರೆ.
ಸಾಮರಸ್ಯಕೆ ವರಸಮನ್ವಯ | ಕ್ಷೇಮ ಕಾರಕ ಸೂತ್ರಕೆ
ಪ್ರೇಮ ಕಾಂತಿಗೆ ವಿಶ್ವಶಾಂತಿಗೆ | ರಾಮಣೀಯಕ ಮಂಗಲಂಎಂಬ ಹಾಡಿ ನೊಂದಿಗೆ ಮಂಗಲ ವಾಗುವ ಆಟ ಒಂದು ಶಾಂತಿ ಮಂತ್ರದೊಂದಿಗೆ ಮುಕ್ತಾಯವಾಗುತ್ತದೆ.
ನಮ್ಮ ಅಜ್ಞಾನದಿಂದ ಉಂಟಾದ ಸಾಮಾಜಿಕ ಅಪಸವ್ಯಗಳನ್ನು ಸಾಮರಸ್ಯ, ಪ್ರೀತಿ, ಸಹನೆಗಳಿಂದ ನಾವೇ ಸರಿಪಡಿಸಬಹುದೆಂಬ ಆಶಯ ಪ್ರಸಂಗದಲ್ಲಿದೆ. ಈ ಪ್ರಸಂಗದಲ್ಲಿ ದೇವರುಗಳ ಜಗಳವಿಲ್ಲ. ಜಾತಿ-ಮತಗಳ ಸಂಘರ್ಷವಿಲ್ಲ. ಜೀವನಮೌಲ್ಯಗಳೇ ಈ ಕಥನದ ನಾಯಕ-ನಾಯಕಿಯರು.
ಅಜ್ಞಾನ ಮತ್ತು ಸುಜ್ಞಾನಗಳನ್ನು ಮುಖಾಮುಖೀಯಾಗಿಸುವ ಈ ಪ್ರಸಂಗದಲ್ಲಿ ಮಾನವತಾವಾದವೇ ಪ್ರಧಾನವಾಗುತ್ತದೆ. ಅಜ್ಞಾನದಿಂದ ತಪ್ಪು ಮಾಡಿದ ಪಾತ್ರಗಳು ಜ್ಞಾನೋದಯವಾಗಿ ಸುಜ್ಞಾನದಿಂದ ಸಮಾಜಕಟ್ಟುವ ಪಾತ್ರಗಳ ಮುಂದೆ ಪಶ್ಚಾತ್ತಾಪದಿಂದ ತಲೆತಗ್ಗಿಸುತ್ತವೆ. ರಕ್ತಪಾತಕ್ಕೆ ಈ ಪ್ರಸಂಗದಲ್ಲಿ ಅವಕಾಶವೇ ಇಲ್ಲ. ಧಾರ್ಮಿಕ ಪರಂಪರೆಯಿಂದ ಸಾಗಿಬಂದ ಯಕ್ಷಗಾನ ಪ್ರಸಂಗದಲ್ಲಿ ದೇವದೇವಿಯರ ವೈಭವೀಕರಣ ಸಾಮಾನ್ಯ ಅಂಶ.
ಆದರೆ ಈ ಪ್ರಸಂಗ ಜೀವನಮೌಲ್ಯಗಳ ವಿಜಯದಿಂದಲೇ ಸಮಾಜಕ್ಕೆ ಕ್ಷೇಮ ಎಂಬ ಅಂಶವನ್ನು ಎತ್ತಿ ಹಿಡಿದಿದೆ. ಕಲಾವ್ಯಾಕರಣಕ್ಕೆ ಚ್ಯುತಿಯಾಗದಂತೆ ಯಕ್ಷಗಾನದ ಚೌಕಟ್ಟಿನೊಳಗೆ ರಸಾತ್ಮಕವಾಗಿ ರಚನೆಯಾದ “ಸಹನಾ ವಿಜಯ’ ಒಂದು ಅತ್ಯುತ್ತಮ ಯಕ್ಷಗಾನ ಕೃತಿ. ಗಾತ್ರದಲ್ಲಿ ಕಿರಿದಾದರೂ ಮೌಲ್ಯದಲ್ಲಿ ಹಿರಿದಾದ ಈ ಪ್ರಸಂಗ ಮಕ್ಕಳ ಮೇಳದ ಆಟಕ್ಕೆ ಮಾತ್ರವಲ್ಲ ದೊಡ್ಡವರ ಮೇಳದ ಪ್ರದರ್ಶನಕ್ಕೂ ಯೋಗ್ಯವಾಗಿದೆ.
ಇತ್ತೀಚೆಗೆ ಸ್ವಲ್ಪ ಅತಿಯಾಯಿತೇನೋ ಎನ್ನುವಂತೆ ಯಕ್ಷಗಾನದ ಪ್ರದರ್ಶನಗಳಾಗುತ್ತಿವೆ. ಆದರೆ ಅದರೊಳಗಿನ ದರ್ಶನ ಮಾತ್ರ ಪ್ರಾಯಃ ಎಲ್ಲೂ ಬೆಳಕಿಗೆ ಬಂದಂತಿಲ್ಲ. ಯಕ್ಷಗಾನ ಪ್ರಸಂಗಗಳಿಂದ ಇಡೀ ಜಗತ್ತನ್ನು ತಿದ್ದುವ ಕೆಲಸ ಯಕ್ಷಗಾನ ಕಲಾವಿದರದ್ದು ಅಲ್ಲವಾದರೂ ಸಾಮಾಜಿಕ ತಲ್ಲಣಗಳಿಗೆ ಸಾಂಸ್ಕೃತಿಕ ಪ್ರತಿಕ್ರಿಯೆ ಏನು ಎಂಬ ಉತ್ತರವನ್ನಾದರೂ ಅವರು ನೀಡಬೇಕಾಗುತ್ತದೆ. ಇಲ್ಲದಿದ್ದರೆ ಬಯಲಾಟಗಳು ಕೇವಲ ಕಾಲಹರಣದ ಪ್ರಹಸನವಾಗುತ್ತದೆ.
ಯಕ್ಷಗಾನ ಪ್ರಸಂಗಗಳು ಸಮಾಜಕ್ಕೆ ಏನಾದರೊಂದು ಸಂದೇಶವಿತ್ತಾಗಲೇ ಅರ್ಥಪೂರ್ಣವಾಗುತ್ತದೆ. ಈ ನಿಟ್ಟಿನಲ್ಲಿ “ಸಹನಾ ವಿಜಯ’ದ ಸ್ಥಾನ ದೊಡ್ಡದು.
ತಾರಾನಾಥ ವರ್ಕಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi; ಗೀತಾರ್ಥ ಚಿಂತನೆ 96 : ವ್ಯಾಮೋಹ ಜಾಲ vs ಜಾಗೃತಾತ್ಮ
Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ
Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್ ರೈ
MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ
Mangaluru: ಎಲ್ಲ ವರ್ಗದ ಜನರ ಸಹಕಾರದಿಂದ ಸಾಮಾಜಿಕ ಸಾಧನೆ: ಕನ್ಯಾನ ಸದಾಶಿವ ಶೆಟ್ಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.