ಮಧ್ಯದ ತಲೆಮಾರಿನ ಅಸ್ತಿತ್ವದ ಹುಡುಕಾಟ ಸೇತುಬಂಧ
Team Udayavani, Mar 1, 2019, 12:30 AM IST
ಇಂತಹದೊಂದ್ದು ಸಾಧ್ಯ, ನಾವೆಲ್ಲಾ ಹೀಗೂ ಮಾಡಬಹುದು ಎಂಬ ಯೋಚನೆಗಳಿಗೆ ತನ್ನ ಗರಿಯನ್ನ ಕೊಟ್ಟಿದ್ದು ಇತ್ತೀಚಿಗೆ ಕುಂದಾಪುರದಲ್ಲಿ ಪ್ರದರ್ಶಿಸ್ಪಟ್ಟ ನೀನಾಸಂ ಅವರ ಸೇತುಬಂಧ ನಾಟಕ. ಕುಂದಸಂಪದ ಅರ್ಪಿಸಿದ ನೀನಾಸಂ ಅವರ ತಿರುಗಾಟದ ನಾಟಕ ಇದು. ನೀನಾಸಂ ಅವರಷ್ಟೇ ಮಾಡಲು ಸಾಧ್ಯ ಅನ್ನುವಂತೆ ಕಟ್ಟಿಕೊಟ್ಟ ನಾಟಕದ ವಸ್ತು ತೀರ ಸರಳ. ಮರಳಿ ಮಣ್ಣಿಗೆ ಜ್ಞಾಪಿಸುವ ನಾಟಕ, ಸ್ವಂತ ಊರು ಬದಲಾಗುವಾಗಿನ ಹಪಾಹಪಿ, ಊರು ಬಿಟ್ಟು ಹೋದರೆ ತನ್ನ ತಾನು ಕಳೆದುಕೊಳ್ಳಬಹುದೇನೋ ಎಂಬ ಆತಂಕದೊಂದಿಗೇ ಆ ಊರಿನ ಸಾಧ್ಯತೆಗಳ ಬಗ್ಗೆ ಕನಸು ಇವೆಲ್ಲಾ ಬಂದು ಹೋಗುತ್ತಾ ಇರುತ್ತದೆ. ಅಕ್ಷರ ಕೆ.ವಿ ಬರೆದ ನಾಟಕದ ವಸ್ತು ಸರಳವಾದರೂ ಪ್ರಸ್ತುತ. ಭಾರತ ದರ್ಶನ ಮುಗಿಸಿ ಬರುವ ಮನೆಯ ಯಜಮಾನ ಬದಲಾಗುತ್ತಾ ಸಾಗಿದ ತನ್ನ ಊರನ್ನೇ ಗುರುತಿಸಲು ಪಡುವ ಶ್ರಮ, ಅಲ್ಲಿ ಇದೇ ನದಿ ತಟದಲ್ಲಿ ಕುಳಿತು ನೋಡಬಹುದಾದ ಭಾರತ ದರ್ಶನಕ್ಕೆ ಮಾವ ಊರೂರು ತಿರುಗಬೇಕಿತ್ತಾ ಎಂಬ ಮಾತು ಬಹಳ ಗಾಢವಾದ್ದದನ್ನ ಹೇಳುತ್ತದೆ. “ದೈವದಲ್ಲಿ ಊರಿನ ನದಿಗೆ ಸೇತುವೆಯನ್ನ ಬೇಡಿದ ಜನ ಸಾಮಾನ್ಯ ಸೇತುವೆಯ ಜೊತೆಗೆ ಬರುವ ಬದಲಾವಣೆಗಳನ್ನ ನಿರಾಕರಿಸುವುದು ಹೇಗೆ ಸಾಧ್ಯ?’ ಅನ್ನುವರ್ಥದ ಮಾತಲ್ಲಿ ಆರ್ಥಿಕ, ಸಾಮಾಜಿಕ ಬದಲಾವಣೆಗಳ ಒಟ್ಟೂ ಚಿತ್ರಣ ನಮಗೆ ನೀಡುತ್ತದೆ. “ಹಾಡಬೇಕು, ಎಲ್ಲಾ ಬದಲಾವಣೆಯ ಜೊತೆಗೆ ಹಾಡಬೇಕು, ನಾಟಕ ಮಾಡಬೇಕು ಇಲ್ಲೇ ಇದ್ದು ಅವೆಲ್ಲಾ ಮಾಡುತ್ತಾ ಆಗುತ್ತಿರುವ ಬದಲಾವಣೆಯನ್ನ ಬದಲಿಸಬೇಕು’ ಅನ್ನುವರ್ಥದಲ್ಲಿ ಸಂಸ್ಕೃತಿ, ಅದರ ಜೊತೆ ಮಣ್ಣಿನ ಅಸ್ತಿತ್ವ ಇರುವುದು ಕಲೆಯಲ್ಲಿ ಅನ್ನುತ್ತಾ ಸಾಗುತ್ತದೆ ನಾಟಕ. ಮನೆಯ ಯಜಮಾನ ಮನೆ ಬಿಟ್ಟು ಹೋದ ತನ್ನ ಮಕ್ಕಳೆದುರೇ ಊರಿನ ಪಂಚಾಯತಿ ನಡೆಸುತ್ತಾನೆ. ಹಾಗೆ ನಡೆಸುತ್ತಾ ಅವರು ಹೇಳುವ ಮಾತುಗಳಿಗೆ ಬೆಲೆ ಇಲ್ಲ, ಊರಿನ ಕಷ್ಟಗಳಿಗೆ ಬೆನ್ನು ಹಾಕಿ ಹೋದವರಿಗೆ ಊರಿನ ನ್ಯಾಯಾಧೀಶರು ಆಗುವ ಅಧಿಕಾರವಿಲ್ಲ ಅನ್ನುವಾಗ ಅಲ್ಲೆಲ್ಲೋ ಎಲ್ಲಾ ಮನೆಯ ಕಥೆ ಹೇಳಿದಂತೆ ಭಾಸವಾಗುತ್ತದೆ. ಒಂದು ಊರಿನ ನಿರ್ಧಾರಗಳು ಅಲ್ಲಿ ಬೆಂದು ಬಾಳಿದ ಜನರಿಗಷ್ಟೇ ಸಹ್ಯ ಅವರಿಂದ ಮಾತ್ರ ಸಾಧ್ಯ ಎನ್ನುತ್ತಾ ಮುಂದಿನ ಪೀಳಿಗೆ ತನ್ನ ಮೂಲ ಹುಡುಕುತ್ತಾ ಊರಿಗೆ ಹಿಂತಿರುಗುವಲ್ಲಿ ಭರವಸೆಯ ಬೆಳಕು ಕಾಣುತ್ತದೆ. ಇಡೀ ಕಥೆ ಎಲ್ಲರದ್ದೂ ಆಗಬಹುದು ಅನ್ನುತ್ತಾ ಎಲ್ಲಾ ಮನೆಯ ಕಥೆ ನಮ್ಮೆದುರು ಬಿಚ್ಚಿಡುತ್ತಾರೆ.
ಕಥೆ, ನಾಟಕ, ತುಮುಲ ಎಲ್ಲವನ್ನೂ ಚಿತ್ರಿಸುತ್ತಾ ಮಧ್ಯದಲ್ಲಿ ಬಹಳಷ್ಟು ಹೇಳುತ್ತಾ ಎಲ್ಲೋ ಕಳೆದು ಹೋಗುತ್ತದೆ ನಾಟಕ. ಇಷ್ಟೇ ಹೇಳಬಹುದಿತ್ತು ಇನ್ನಷ್ಟು ಎಳೆದಾಟ ಬೇಡವಿತ್ತೇನೋ ಅಂತ ಒಂದೆಡೆ ಅನ್ನಿಸುವುದೂ ಹೌದು. ಎರಡು ಗಂಟೆ ಐವತ್ತು ನಿಮಿಷ ಇಷ್ಟು ಹೇಳಲು ಬೇಕಿತ್ತಾ ಕೊನೆಯ ಸಂದೇಶವೇನು ಅನ್ನುವ ಗೊಂದಲ ಕೂಡ ಕೆಲವೊಮ್ಮೆ ಉಂಟುಮಾಡಿದ್ದು ಇದೆ. ಆದರೆ ನೀನಾಸಂ ಹೆಸರಿಗೆ ತಕ್ಕಂತೆ ಉತ್ತಮ ಪಾತ್ರ ನಿರ್ವಹಣೆ, ಮಾತುಗಳ ದಾಟಿ, ಬೆಳಕು ರಂಗ ನಿರ್ವಹಣೆ ಇವೆಲ್ಲದರ ನಡುವೆ ಕಾಡಿದ ಅನುಮಾನಗಳು ಗೌಣವಾಗುತ್ತದೆ. ಹೌದು ಹೊಸತೇನು ರಂಗ ಪ್ರಯೋಗಗಳಿಲ್ಲ ಅನ್ನಿಸಿದ್ದರೂ ಪ್ರೇಕ್ಷಕರನ್ನ ಹಿಡಿದಿಟ್ಟುಕೊಂಡಿದ್ದು ಸತ್ಯ. ಅಷ್ಟೂ ಹೊತ್ತು ತುಂಬಿದ ರಂಗ ಮಂದಿರ ಇದಕ್ಕೆ ಸಾಕ್ಷಿ.
ಕುಂದಾಪುರದ ಬೋರ್ಡ್ ಹೈಸ್ಕೂಲ್ ರಂಗಮಂದಿರದಲ್ಲಿ ಫೆ.3ರಂದು ನಡೆದ ಈ ನಾಟಕದ ನಿರ್ದೇಶಕ ಅಕ್ಷರ ಕೆ.ವಿ., ಮಂಜು ಕೊಡಗು ಅವರ ಪ್ರಯತ್ನ ಎಲ್ಲರ ಮನಸ್ಸಿಗೆ ನಾಟಿದ್ದಂತೂ ನಿಜ. ಅಲ್ಲಲ್ಲಿ ಕಾಡಿದ ಅನುಮಾನಗಳನ್ನ ಕಲಾವಿದರ ಉತ್ತಮ ಅಭಿನಯ ಮುಚ್ಚಿಹಾಕಿಬಿಡುತ್ತದೆ. ಅಷ್ಟೂ ಪರಿಣಾಮಕಾರಿಯಾಗಿ ಎಲ್ಲೂ ಹೆಚ್ಚು ಕಡಿಮೆ ಆಗದಂತೆ ನಿರ್ವಹಣೆ ಮಾಡಿದ ಕಲಾವಿದರನ್ನು ಅಭಿನಂದಿಸಲೇಬೇಕು. ಒಂದು ಹೊತ್ತಿನ ಅತ್ತ ಹಳೆ ತಲೆಮಾರೂ ಅಲ್ಲದೆ ಇತ್ತ ಹೊಸ ತಲೆಮಾರೂ ಆಗದೆ ಮಧ್ಯದ ತಲೆಮಾರನ್ನು ತುಂಬಾ ಕಾಡುವ ನಾಟಕ ಸೇತುಬಂಧ. ಎಲ್ಲಕ್ಕೂ ಮುಖ್ಯವಾದದ್ದು ಕೃಷ್ಣ ಮತ್ತು ಯಜಮಾನನ ಮಗಳ ಸಂಬಂಧಕ್ಕೆ ಯಾವುದೇ ಬಣ್ಣ ಕಟ್ಟದೆ ಅಲ್ಲಿ ಆತ್ಮೀಯತೆ ಮಾತ್ರ ಸೃಷ್ಟಿಸಿ ಬಂಧಗಳಿದ್ದರೆ ಮಾತ್ರ ಸಂಬಂಧ ಎಂಬ ಹಳೆಯ ಮಾತನ್ನ ಕಿತ್ತೂಗೆಲು ಮಾಡಿದ ಪ್ರಯತ್ನ ಶ್ಲಾಘನೀಯ.
ಡಾ|ರಶ್ಮಿ ಕುಂದಾಪುರ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.