ಮೀನಲೋಚನೆಯ ಭಾವನವನೀತ
Team Udayavani, Mar 24, 2017, 3:50 AM IST
ಓರ್ವ ಪ್ರಬುದ್ಧ ಕಲಾವಿದೆ ಕಲೆಯನ್ನು ಸಂಪೂರ್ಣ ವಾಗಿ ವಶೀಕರಿಸಿಕೊಂಡು ಪ್ರದರ್ಶನದಲ್ಲಿ ತಾನು ನಿಮಗ್ನತೆಯನ್ನು ಹೊಂದುವುದರೊಂದಿಗೆ ರಸಿಕರೂ ಭಾವಪರವಶರಾಗುವಂತೆ ಮಾಡಲು ಹೇಗೆ ಸಾಧ್ಯ ಎಂಬುದನ್ನು ಅಂತಾರಾಷ್ಟ್ರೀಯ ಖ್ಯಾತಿಯ ಭರತನಾಟ್ಯ ನೃತ್ಯಾಂಗನೆ, ಚೆನ್ನೈಯ ಮೀನಾಕ್ಷಿ ಶ್ರೀನಿವಾಸ್ ಅವರು ಇತ್ತೀಚೆಗೆ ಪುತ್ತೂರಿನಲ್ಲಿ ತಮ್ಮ ಶುದ್ಧ ಶಾಸ್ತ್ರೀಯ ಭರತನಾಟ್ಯ ಪ್ರದರ್ಶನದಿಂದ ಮನಗಾಣಿಸಿಕೊಟ್ಟರು.
ಅಂದಿನ ಕಾರ್ಯಕ್ರಮದಲ್ಲಿ ಮೊದಲಿಗೆ ವಿ| ಮೀನಾಕ್ಷಿ ಯವರು ಪ್ರಾರ್ಥನಾರೂಪವಾಗಿ ಮಾತಾಪರಾ ಶಕ್ತಿ ಎಂಬ ರಾಗಮಾಲಿಕೆ ಹಾಗೂ ತಾಳ ಮಾಲಿಕೆಯ ದೇವಿಸ್ತುತಿಯನ್ನು ಚೊಕ್ಕದಾದ ಭಂಗಿಗಳು, ನಿಖರ ಹಸ್ತಮುದ್ರೆಗಳು ಹಾಗೂ ಪ್ರತೀ ಚರಣದ ಬಳಿಕ ಪೋಣಿಸಿದ ಚಿಟ್ಟೆಸ್ವರಗಳಿಗೆ ಕೃತಿಯ ಸಾಹಿತ್ಯಕ್ಕೆ ತಕ್ಕುದಾದ ಅಡವುಗಳ ಸಂಯೋಜನೆಯೊಂದಿಗೆ ಲಯದ ಹಿಡಿತ, ರಂಗಾಕ್ರಮಣಗಳಿಂದ ಉತ್ತಮವಾಗಿ ನರ್ತಿಸಿದರು. ಸುಶ್ರಾವ್ಯವಾದ ಹಿನ್ನೆಲೆ ಗಾಯನ, ವಯಲಿನ್ ವಾದನ, ಲಯಬಿಗಿತದ ಸೌಮ್ಯ ನಟ್ಟುವಾಂಗದೊಂದಿಗೆ ಈ ನೃತ್ಯಕ್ಕೆ ಮೃದಂಗ ವಾದನದಲ್ಲಿ ವೇದಕೃಷ್ಣನ್ ಅವರು ಒಂದು ದೇವಳದ ಪವಿತ್ರ ಸನ್ನಿವೇಶದ ನಿರ್ಮಾಣ ಮಾಡಿದರು.
ಮುಂದೆ ದಂಡಾಯುಧ ಪಾಣಿ ಪಿಳ್ಳೆ„ ಅವರ ಖರಹರಪ್ರಿಯ ರಾಗದ ಪದವರ್ಣ ಅತ್ಯಂತ ಪ್ರೌಢವಾಗಿ ಸಾತ್ವಿಕ ಅಭಿನಯಗಳ ಜತೆ ನೃತ್ತದ ಮೆರುಗಿನಿಂದ ಪ್ರಸ್ತುತಿಗೊಂಡಿತು. ಒಂದು ಪದವರ್ಣದಲ್ಲಿ ಇರಲೇ ಬೇಕಾದ ತ್ರಿಕಾಲದ ಜತಿ, ತ್ವರಿತ ಗತಿಯ ನಾಲ್ಕು ಜತಿಗಳು, ಚಿಟ್ಟೆಸ್ವರ, ಚರಣ ಸ್ವರಗಳು, ಅರುಧಿಗಳು, ಪುಟ್ಟ ಸಂಚಾರಿ ಅಭಿನಯಗಳು ಇವೆಲ್ಲವುಗಳ ಜತೆ ಸಮ್ಮಿಲನಗೊಂಡ ವರ್ಣದ ಸ್ಥಾಯೀಭಾವವಾದ ವಿರಹೋತ್ಕಂಠಿತ ನಾಯಕಿಯ ತುಮುಲದ ವರ್ಣನೆ ಲಯದ ನಿಯಂತ್ರಣ, ಭಾವಸು#ರಣೆಗಳೊಂದಿಗೆ ನೃತ್ತ -ನೃತ್ಯಗಳ ಸಮತೋಲನದ ಹೂರಣವನ್ನು ನೀಡಿ ತೃಪ್ತಿಪಡಿಸಿತು. ಇಲ್ಲಿ ನೃತ್ಯಾಂಗನೆ ಪ್ರದರ್ಶಿ ಸಿದ ಜತಿಗಳ ಅಂಗಶುದ್ಧಿ, ವೈವಿಧ್ಯ, ಅರುಧಿಯ ಝಲಕು, ಚಿಟ್ಟೆ, ಚರಣ ಸ್ವರಗಳ ಅಡವು ಸಂಯೋಜನೆಗಳೊಂದಿಗೆ ರಂಗವನ್ನು ಆಕ್ರಮಿಸುವ ವೈಖರಿ ಸಮರ್ಥವಾಗಿದ್ದವು. ಇವೆಲ್ಲಕ್ಕೂ ಮಿಗಿಲಾಗಿ ನಾಯಕಿಯ ವಿರಹ ವೇದನೆಯ ವೈವಿಧ್ಯಮಯ ಪ್ರಕಟನೆ, ಸಖೀಯನ್ನು ಚಿತ್ರಿಸುವ ಪರಿ, ನಾಯಕನ ಮೇಲಿನ ಅತಿಯಾದ ಒಲವು, ಸ್ಮರನ ಶರ ಬಾಧೆಯ ತೀವ್ರತೆ… ಹೀಗೆ ಹಲವಾರು ಭಾವನೆಗಳ ಮಹಾಪೂರವನ್ನು ಮೀನಾಕ್ಷಿ ಯವರು ಕಣ್ಣುಗಳ ಹಾಗೂ ಮುಖದ ಪ್ರಖರ ಅಭಿನಯ ದೊಂದಿಗೆ ಮೇಳೈಸಿ ಒಂದು ಅದ್ಭುತ ಅನುಭವ ನೀಡಿದರು. ಇಲ್ಲಿ ದೀರ್ಘವಾದ ಸಂಚಾರಿ ಅಭಿನಯಗಳಿಲ್ಲದೆ, ವಾಕ್ಯಾರ್ಥ ಅಭಿನಯದ ಗಟ್ಟಿ ತನವೇ ಪ್ರಧಾನವಾಗಿತ್ತು. ಹಿಮ್ಮೇಳದ ಎಲ್ಲ ಕಲಾವಿದರ ಸಮರ್ಥ ಪೋಷಣೆ ಈ ವರ್ಣದ ಯಶಸ್ಸಿಗೆ ಕಾರಣವಾಯಿತು.
ಸೀತೆಯ ಅಗ್ನಿಪ್ರವೇಶ ಎಂಬ ಏಕವ್ಯಕ್ತಿ ರೂಪಕ ದಂತಿರುವ ನೃತ್ಯದಲ್ಲಿ, ಈ ಅಗ್ನಿ ಪರೀಕ್ಷೆಗೆ ಮೂಲ ಕಾರಣವಾದ ರಾಮನ ಅಚಲ ನಿರ್ಧಾರ, ಕಪಿ ಗಡಣದ ಅಚ್ಚರಿ, ವಿಭೀಷಣನ ಸಾಂತ್ವನ, ಸೀತಾ ಮಾತೆಯ ಮಾನಸಿಕ ತೊಳಲಾಟಗಳ ಪರಿಚಯವನ್ನು ಮೀನಾಕ್ಷಿ ಯವರು ತಮ್ಮ ಕಂಗಳ ಭಾವಸು#ರಿತ ಹಾಗೂ ನೃತ್ಯ ವೈವಿಧ್ಯದ ಚೆಲುವಿನಿಂದ ಮಂಡಿಸಿದರು. ಮೂಲ ವಾಲ್ಮೀಕಿ ರಾಮಾಯಣ ಶ್ಲೋಕಗಳೊಡನೆ, ತಮಿಳಿಗೆ ಅನುವಾದಿಸಿದ ಶ್ಲೋಕಗಳನ್ನೂ ಆಧರಿಸಿದ ಈ ನೃತ್ಯ ಹಲವು ಮಾರ್ದವ ರಾಗಗಳನ್ನು ಒಳಗೊಂಡ ರಾಗಮಾಲಿಕೆಯಿಂದಲೂ ಸಂವಾದಿ ಚಿಟ್ಟೆ ಸ್ವರ ಗಳಿಂದಲೂ ಅಲಂಕರಿಸಲ್ಪಟ್ಟಿತ್ತು. ಇದು ಸಂಗೀತ ಸಂಯೋಜನೆಗೈದ ವಿ| ಹರಿಪ್ರಸಾದ್ ಹಾಗೂ ವಿ| ವೇದ ಕೃಷ್ಣನ್ ಅವರ ಪ್ರೌಢಿಮೆಗೆ ಸಾಕ್ಷಿಯಾಯಿತು. ಪಟ್ಣಂ ಸುಬ್ರಹ್ಮಣ್ಯ ಅಯ್ಯರ್ ಅವರ ಕಮಾಚ್ ರಾಗದ ಜಾವಳಿ ನಾಯಕ ವೆಂಕಟೇಶ್ವರನ ಬಗ್ಗೆ ನಾಯಕಿಗೆ ಇರುವ ಬಾಲಿಶ ಭಾವನೆಗಳನ್ನು ಸಖೀಯರು ಛೇಡಿಸುವ ಸಾಹಿತ್ಯ ಹೊಂದಿದ್ದು ಚೆನ್ನಾಗಿ ಮೂಡಿಬಂತು. ನೃತ್ಯ ಪ್ರದರ್ಶನದ ಕೊನೆ ತಿಲ್ಲಾನವಾಗಿರದೆ “ಅನುಭವ’ ಎಂಬ ಭಕ್ತಿ ಸಾಹಿತ್ಯದ ಭಾಗವಾಗಿದ್ದು, ಆಯ್ದ ಮೂವರು ಕವಿಗಳು ತಮ್ಮ ಆರಾಧ್ಯ ದೈವಗಳ ನರ್ತನವನ್ನು ವರ್ಣಿಸುವ ಸಾಹಿತ್ಯವನ್ನೊಳಗೊಂಡಿತ್ತು. ಚಿಟ್ಟೆ ಸ್ವರ, ಶೊಲ್ಕಟ್ಟುಗಳು, ಅರುಧಿಗಳನ್ನು ಹೊಂದಿದ್ದ ತ್ವರಿತಗತಿಯ ಈ ನೃತ್ಯಬಂಧ ತಿಲ್ಲಾನಕ್ಕೆ ಸಮಾಂತರವಾಗಿತ್ತು. ಕವಿ ಅಣ್ಣಮಾಚಾರ್ಯರ ಅಭೀಷ್ಟ ದೇವತೆ ಅಲಮೇಲು ವಂಗರವರ ನರ್ತನ ಶೈಲಿ, ಕವಿ ಪತಂಜಲಿಯ ಇಷ್ಟದೈವ ನಟರಾಜನ ನರ್ತನ ವೈಖರಿ, ಕವಿ ವಿದ್ಯಾಪತಿಯ ಒಲವಿನ ರಾಧಾಕೃಷ್ಣರ ಲಾಲಿತ್ಯಪೂರ್ಣ ನರ್ತನಗಳ ಸಮಪಾಕವಾಗಿದ್ದ ಇದು ರಂಜನೀಯವಾಗಿತ್ತು. ಶಂಕರಾಭರಣ, ಅಮೃತವರ್ಷಿಣಿ ಹಾಗೂ ವೃಂದಾವನ ಸಾರಂಗ ರಾಗಗಳಲ್ಲಿ ಸಂಯೋಜನೆಗೊಂಡಿದ್ದ ಈ ನೃತ್ಯದಲ್ಲಿ ಶಿವನ ನರ್ತನ ಭಾಗವು ವಿ| ಜಯಶ್ರೀ ರಾಮನಾಥ್ ಅವರ ಗದ್ಯದ ನುಡಿತ ಹಾಗೂ ನಟ್ಟುವಾಂಗದಿಂದ ವಿಶೇಷ ಪರಿಣಾಮ ಬೀರಿತು. ವೇದಕೃಷ್ಣನ್ ಅವರ ಮೃದಂಗದ ವಿಶೇಷ ಧ್ವನಿ ಪರಿಣಾಮ ಈ ಭಾಗಕ್ಕೆ ಪೂರಕವಾಯಿತು. ರಾಧಾಕೃಷ್ಣರ ನೃತ್ಯ ರಾಸಲೀಲೆಯ ಲಾಸ್ಯಪೂರ್ಣ ನರ್ತನಕ್ಕೆ ವೇದಕೃಷ್ಣನ್ ಅವರು ತಬ್ಲಾ ಸಾಥ್ ಒದಗಿಸಿದ್ದು ಚೆನ್ನಾಯ್ತು. ಮೀನಾಕ್ಷಿಯವರು ಬಳಸಿದ ನಿಖರ ದೇವತಾ ಭಂಗಿಗಳು, ಸ್ಥಾನಕಗಳು, ಉತ್‌ಪ್ಲವನಗಳು ಹಾಗೂ ಭ್ರಮರಿಗಳು ಚೇತೋಹಾರಿಯಾಗಿದ್ದವು. ಸಿಂಧು ಭೈರವಿಯ ಮಂಗಳದೊಂದಿಗೆ ಪ್ರದರ್ಶನ ಸಮಾಪನಗೊಂಡಿತು.
ಮೀನಾಕ್ಷಿಯವರ ನೃತ್ಯದಲ್ಲಿ ಗಮನಿಸಬೇಕಾದ್ದು ಅವರ ಮುಖಾಭಿನಯ ಪ್ರಖರತೆ ಹಾಗೂ ನೃತ್ತದಲ್ಲಿ ಅವರು ಮೇಳೈಸಿಕೊಳ್ಳುವ ವಿಶೇಷ ಭಾವ ತೀವ್ರತೆಗಳು. ಅವರ ನೃತ್ತದ ಅಡವುಗಳು, ಸ್ಥಾನಕ, ಭಂಗಿ ಗಳು ಯಾಂತ್ರೀಕೃತ ರೇಖೆ ಆಗಿರದೆ ಅದರೊಂದಿಗೆ ಲಾಸ್ಯದ ಲೇಪ ಹೊರಸೂಸು ತ್ತಿತ್ತು. ಇವರ ಸಾತ್ವಿಕ ಅಭಿನಯವು ದೈವದತ್ತವಾಗಿ ಅವರಿಗೆ ಒದಗಿಬಂದ ನೇತ್ರಗಳು ಹಾಗೂ ಅವರು ಅದನ್ನು ದುಡಿಸಿಕೊಳ್ಳುವ ಶೈಲಿಯಿಂದಾಗಿ ಮೋಡಿ ಮಾಡುತ್ತದೆ. ನೃತ್ತದ ವಿಭಾಗದಲ್ಲಿ ಪರಿಪೂರ್ಣವಾದ, ರೇಖಾ ಗಣಿತದ ರೀತಿಯ ಭಂಗಿಗಳು, ಅಡವುಗಳ ವಿನ್ಯಾಸ ಗಳು ಕೆಲವೊಮ್ಮೆ ಶುದ್ಧವಾಗಿ ಕಾಣಿಸದಿದ್ದರೂ ಅವರ ಅರೆಮಂಡಿ, ಹಸ್ತಕ್ಷೇತ್ರ, ಪಾದಗಳ ಚಲನೆ, ರಂಗಾಕ್ರಮಣಗಳು ಉತ್ತಮವಾಗಿಯೇ ಇದ್ದವು. ಹೆಚ್ಚಿನ ಸಾಹಿತ್ಯ ತಮಿಳಿನಲ್ಲಿ ಇತ್ತಾದರೂ ಅಭಿನಯ ಭಾವಾರ್ಥವನ್ನು ಸ್ಪಷ್ಟವಾಗಿ ತಿಳಿಯಪಡಿಸುತ್ತಿದ್ದುದು ಅವರ ಅನನ್ಯ ಪ್ರತಿಭೆಗೆ ಸಾಕ್ಷಿ. ಈ ಕಾರ್ಯಕ್ರಮದ ಸಾಫಲ್ಯಕ್ಕೆ ಹಿಮ್ಮೇಳದವರ ಶಿಸ್ತು, ಬದ್ಧತೆ, ನೃತ್ಯಾಂಗನೆಯ ಮೇಲಿನ ಆದರ, ತಾದಾತ್ಮéಗಳೇ ಕಾರಣ. ಹರಿಪ್ರಸಾದ್ ಅವರ ಸು#ಟವಾದ ಗಾಯನ, ಈಶ್ವರಕೃಷ್ಣನ್ ಅವರ ಮಾಧುರ್ಯಭರಿತ ವಯಲಿನ್, ವೇದಕೃಷ್ಣನ್ ಅವರ ಸಮ ತೂಕದ ಮೃದಂಗ ಮತ್ತು ಎಲ್ಲರನ್ನೂ ಸಮರ್ಥವಾಗಿ ಮುನ್ನಡೆಸುವ ಜಯಶ್ರೀ ಅವರ ನಟ್ಟುವಾಂಗ ಇವೆಲ್ಲವೂ ಪರಿಪೂರ್ಣ ಪ್ರಮಾಣದಲ್ಲಿದ್ದು ಈ ಪ್ರದರ್ಶನ ಗರಿಷ್ಠ ಯಶಸ್ಸನ್ನು ಕೊಟ್ಟಿತು.
ಪುತ್ತೂರಿನ ಪುರಭವನದ ವೇದಿಕೆಯಲ್ಲಿ ಆಯೋಜನೆಗೊಂಡ ಈ ಪ್ರದರ್ಶನದ ನಾಂದಿ ಯಾಗಿ, ಬಹುದಾರಿ ರಾಗದ ವಿಸ್ತೃತ ವಿನ್ಯಾಸ ಭರಿತ ಆಲಾಪನೆಯೊಂದಿಗೆ “ಸ್ವರ ಮಾನಸ’ ಕೃತಿಯನ್ನು ಮೂಲತಃ ಪುತ್ತೂರಿನವರಾದ, ಈಗ ಚೆನ್ನೈ “ಕಲಾಕ್ಷೇತ್ರ’ದಲ್ಲಿ ಸಂಗೀತ ಗುರುವಾಗಿರುವ ವಿ| ಹರಿಪ್ರಸಾದ್ ಕಣಿಯನ್ ಉತ್ತಮವಾಗಿ ನಿರ್ವಹಿಸಿದರು. ಅವರಿಗೆ ಅಷ್ಟೇ ಸಮರ್ಥವಾಗಿ ವಯಲಿನ್ ವಾದಕ ವಿ| ಈಶ್ವರ್ ಹಾಗೂ ಮೃದಂಗ ವಾದಕ ವಿ| ವೇದಕೃಷ್ಣನ್ ಸಾಥ್ ನೀಡಿದರು. ಪುತ್ತೂರಿನ ನೃತ್ಯ ದಂಪತಿ ವಿ| ದೀಪಕ್ ಕುಮಾರ್ ಹಾಗೂ ವಿ| ಪ್ರೀತಿಕಲಾ ತಮ್ಮ ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ 20ನೇ ವರ್ಷದ ಸಂಭ್ರಮಾಚರಣೆಯ ಪಥದಲ್ಲಿ ವಿ| ಮೀನಾಕ್ಷಿಯವರ ಈ ಅಪೂರ್ವ ನೃತ್ಯ ಪ್ರದರ್ಶನವನ್ನು ಸಂಘಟಿಸಿದ್ದರು.
ಪ್ರತಿಭಾ ಎಂ.ಎಲ್. ಸಾಮಗ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.