ನಾದ ಹರಿಸಿದ ಅರಿವಿನ ಹಾಡು ಅಸರಾ
Team Udayavani, Aug 9, 2019, 5:00 AM IST
ನಾದ ಮಣಿನಾಲ್ಕೂರು ಅವರ ಜ್ಞಾನ ಯಜ್ಞದಂಗವಾಗಿ ನಡೆದ ಬದುಕಿನ ಪಾಠ
ನಮ್ಮ ಎಲುಬಿನ ಹಂದರದೊಳೊಂದು ಮಂದಿರವಿದೆ…ಅಲ್ಲಿ ಯಾರಿಲ್ಲ ಹೇಳಿ, ರಾಮನಿದ್ದಾನೆ, ಸೀತೆ ಇದ್ದಾಳೆ, ಏಸು ಇದ್ದಾನೆ, ಅಲ್ಲಾಹ್ ಇದ್ದಾನೆ…ಕೊರಗಜ್ಜ, ಕೋಟಿ ಚೆನ್ನಯ್ಯ…ಹೀಗೆ ನಮ್ಮ ಬದುಕಿನ ನಿತ್ಯದ ಆಗುಹೋಗುಗಳ ಪ್ರತಿಯೊಂದು ಮಂದಿರವೂ, ಇದೆ…ನಾವು ನಮ್ಮನ್ನು ಹೊರಗೆಲ್ಲೋ ಹುಡುಕುತ್ತೇವೆ…ಆದರೆ ನಮ್ಮೊಳಗಿನ ನಮ್ಮನ್ನೇ ನೋಡಿಕೊಳ್ಳುವುದಿಲ್ಲ…!
ಕರ್ನಾಟಕದಾದ್ಯಂತ ತಮ್ಮ ಕತ್ತಲ ಹಾಡು, ಅರಿವಿನ ಹಾಡುಗಳ ಮೂಲಕ ಸಂಚರಿಸುತ್ತಾ, ಇಂದಿನ ಸಮಾಜದ ದುರವಸ್ಥೆಯ ಕಾರಣಗಳನ್ನು ತಮ್ಮದೇ ಶೈಲಿಯಲ್ಲಿ ನಮ್ಮೊಳಗನ್ನು ವಿಶ್ಲೇಷಿಸುವಂತೆ ಮಾಡುತ್ತಿರುವ ನಾದ ಮಣಿನಾಲ್ಕೂರು ಅವರಿಂದ ಬೈಂದೂರಿನ ಅರೆಹೊಳೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಅರಿವಿನ ಹಾಡು ಕಾರ್ಯಕ್ರಮ ನಡೆಯಿತು. ಅರೆಹೊಳೆ ಪ್ರತಿಷ್ಠಾನ ತನ್ನ ಬೆಳಕು ಸರಣಿ ಕಾರ್ಯಕ್ರಮದ ಮುಂದುವರಿಕೆಯ ಜ್ಞಾನ ಯಜ್ಞ ಸರಣಿಯ ಭಾಗವಾಗಿ ಹಮ್ಮಿಕೊಂಡಿದ್ದ ಈ ಕಾರ್ಯಕ್ರಮ ಸುಮಾರು 125 ಮಕ್ಕಳು ಹಾಗೂ ಪೋಷಕರ ನಡುವೆ ಹೊಸದೊಂದು ಸಂಚಲನಕ್ಕೆ ಕಾರಣವಾಯಿತು.
ಮಾತು ಮತ್ತು ಹಾಡುಗಳನ್ನು ಸಾಂದರ್ಭಿಕವಾಗಿ ಸಂಕಲಿಸಿಕೊಂಡು ಬದುಕಿನ ಎದುರಿಗೇ ಇದ್ದೂ ಕಣ್ಣಿಗೆ ಕಾಣದ ಅದೆಷ್ಟೋ ಸಂಗತಿಗಳನ್ನು ನಾದ ವಿಶ್ಲೇಷಿಸುತ್ತಾರೆ. ವೇದಿಕೆಯ ಎದುರಿಗೆ ಎಂಟು ಮಕ್ಕಳನ್ನು ಕರೆಯುತ್ತಾರೆ, ಒಂದು ನಿಮಿಷದಲ್ಲಿ ತಾವು ಎಷ್ಟು ಸಲ ಜಂಪ್ ಮಾಡಬಹುದು ಎಂದು ಕೇಳುತ್ತಾರೆ. ಪ್ರತೀ ಮಕ್ಕಳೂ 10,15,25 ಎನ್ನುತ್ತಾರೆ. ಅವರ ಪೋಷಕರಿಗೂ ಇದೇ ಪ್ರಶ್ನೆ ಕೇಳಿದಾಗ ಹೆಚ್ಚೆಂದರೆ 35 ಎನ್ನುತ್ತಾರೆ. ಸರಿ, ಸಮಯ ಎಣಿಸುತ್ತಾ ಮಕ್ಕಳು ತಾವು ಮಾಡಿದ ಜಂಪ್ ಲೆಕ್ಕ ಹಾಕಿದಾಗ ಅದು ನೂರನ್ನೂ ದಾಟಿರುತ್ತದೆ. ಈ ಮೂಲಕ ನಾವು ನಮ್ಮೊಳಗಿನ ಅಥವಾ ನಮ್ಮ ಮಕ್ಕಳೊಳಗಿನ ಸಾಮರ್ಥ್ಯವನ್ನೇ ಅರಿಯದೇ, ಅವರನ್ನು ಇಂದು ನಮಗಿಷ್ಟದ ಬದುಕು ಕಟ್ಟಿಕೊಳ್ಳುವ ಯಂತ್ರಗಳನ್ನಾಗಿಸಿಕೊಳ್ಳುತ್ತಿದ್ದೇವೆ ಎಂಬ ದುರಂತದ ಅನಾವರಣ ಮಾಡುತ್ತಾ, ಅದಾಗದಿರಲಿ ಎಂಬ ಸಂದೇಶ ನೀಡುತ್ತಾರೆ.
ಕಲಿಸುವ ಗುರುವೇ ಕಲಿಸು ಎಂಬ ಅಬ್ರಹಾಂ ಲಿಂಕನ್ ಅವರು ಮಗನನ್ನು ಶಾಲೆಗೆ ಸೇರಿಸುವಾಗ ಅಲ್ಲಿನ ಶಿಕ್ಷಕರಿಗೆ ಬರೆದ ಪತ್ರದ ಸಾರವನ್ನು ಕನ್ನಡದ ಹಾಡಿನ ಮೂಲಕ ಬಿಚ್ಚಿಟ್ಟಾಗ ಸಭಾಂಗಣದಲ್ಲಿ ತನ್ಮಯತೆಯ ನಿಶ್ಶಬ್ಧ ವಾತಾವರಣ. ನಮ್ಮ ಮಕ್ಕಳನ್ನು ಹೀಗೇ ಬದುಕುವಂತೆ ಮಾಡುವುದಕ್ಕಿಂತ ಅವರನ್ನು ಅವರ ಬದುಕು ಬದುಕುವಂತೆ ಮಾಡಿ, ಅವರಿಗೂ ನಮ್ಮ ವಾತಾವರಣದ ಸೆಖೆ, ಚಳಿ, ಗಾಳಿ, ಮಳೆ, ಬಿಸಿಲಿನ ಪರಿಚಯ ಮಾಡಿಸಿ, ನಮ್ಮ ಹೆಣ್ಣುಮಕ್ಕಳನ್ನು ಮಾತ್ರ ತಿದ್ದುವ ಭ್ರಮೆಯಿಂದ ಹೊರಬಂದು ಗಂಡುಮಕ್ಕಳಿಗೆ ಜೀವಿಸಲು ಹೇಳಿಕೊಡಿ…ಹೀಗೆ ಸಾಗಿತ್ತು ಅರಿವಿನ ಹಾಡು. ಕೊನೆ¿ಲ್ಲಿ ನೆರೆದಿದ್ದ ಮಕ್ಕಳಿಗೆ ಅವರೆಸೆದ ಒಂದು ಪ್ರಶ್ನೆ ಕೊಕೊ ಕೋಲಾದಂತ ಪಾನೀಯಗಳನ್ನು ಕುಡಿಯುವವರೆಷ್ಟು ಎಂದಾಗ ಸುಮಾರು 90ಶೇಕಡಾ ಮಕ್ಕಳು ಕೈ ಎತ್ತುತ್ತಾರೆ. ಅದರ ದುಷ್ಪರಿಣಾಮವನ್ನು ಎಳೆಎಳೆಯಾಗಿ ಬಿಚ್ಚಿಟ್ಟು ಕೊನೆಯಲ್ಲಿ ಅದಕ್ಕೇ ಸಂಬಂಧಿಸಿದ ಹಾಡೊಂದನ್ನು ಮಕ್ಕಳ ಬಳಿಯೇ ಹೇಳಿಸಿ, ಕೊನೆಯಲ್ಲಿ ಈಗ ಎಷ್ಟು ಜನ ಅದನ್ನು ಕುಡಿಯ ಬಯಸುತ್ತೀರಿ ಎಂದಾಗ…ಇಡೀ ಸಭಾಂಗಣದಲ್ಲಿ ಒಂದೂ ಕೈ ಮೇಲೇಳದ್ದು, ಮಕ್ಕಳನ್ನು ತಿದ್ದಲು ಒಳ್ಳೊಳ್ಳೆಯ ಮಾತುಗಳೇ ಸಾಕು, ದಂಡ ಆಯುಧಗಳಲ್ಲ ಎಂಬುದು ವೇದ್ಯವಾಯಿತು.
ಇದು ಹೆಸರೇ ಹೇಳುವಂತೆ ಅರಿವಿನ ಹಾಡು. ಬಹುಶಃ ನಮ್ಮ ಪ್ರತೀ ಮಕ್ಕಳಿಗೂ ಇದರ ಅವಶ್ಯಕತೆ ಇಂದು ಎಂದಿಗಿಂತ ಹೆಚ್ಚಿದೆ. ನಾದ ಅಲ್ಲಿ ಹರಿಸಿದ ಅರಿವಿನ ಹಾಡುಗಳ ನಿರಂತರ ಹರಿವು ನಮ್ಮ ಮಕ್ಕಳಲ್ಲಿ ಮುಂದುವರಿಯುವಂತೆ ಮಾಡುವ ಕಾಯಕ, ತಮ್ಮೊಳಗೂ ಅದನ್ನು ಅನುಸರಿಸುವ ಜವಾಬ್ದಾರಿ ಹೆತ್ತವರದ್ದು.
ನಾದ ಮಣಿನಾಲ್ಕೂರು ಅವರ ಜೀವನ ಸಂದೇಶ ಮತ್ತು ಬದುಕಲು ಕಲಿಸುವ ಮಾತು-ಹಾಡುಗಳಿಗೆ ಡೋಲಕ್ ಮೂಲಕ ಸಾಥ್ ನೀಡಿದವರು ಸುದರ್ಶನ್.
ಅರೆಹೊಳೆ ಸದಾಶಿವ ರಾವ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.