ಕಣ್ಮನ ತಣಿಸಿದ ನಳ ದಮಯಂತಿ
Team Udayavani, Jan 25, 2019, 12:30 AM IST
ಸುಮಧುರ ದಾಂಪತ್ಯ ಪ್ರೇಮ, ಸತ್ಯ ಧರ್ಮಗಳಿಗೇ ಅಂತಿಮ ಗೆಲುವು, ವಿಕೃತ ಒಡಲ ಕಿಚ್ಚು, ನಿಸ್ವಾರ್ಥ ಸೇವೆ ಇತ್ಯಾದಿ ವೈವಿಧ್ಯಮಯ ಭಾವಗಳನ್ನು ಸಾಂದರ್ಭಿಕವಾಗಿ ಕಲಾತ್ಮಕವಾಗಿ ಪ್ರದರ್ಶಿಸಿರುವುದು ಸ್ತುತ್ಯರ್ಹ ಅಂಶ.
ಪೂರ್ಣಪ್ರಜ್ಞ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ರಾಜಾಂಗಣದಲ್ಲಿ ಡಿ.24ರಂದು ಪ್ರದರ್ಶಿಸಿದ ನಳ ದಮಯಂತಿ ನೃತ್ಯರೂಪಕ ಜನಮನ್ನಣೆ ಗಳಿಸಿತು. ಪ್ರೊ| ಉದ್ಯಾವರ ಮಾಧವ ಆಚಾರ್ಯರ ಸುಂದರ ಪರಿಕಲ್ಪನೆ, ಸಮರ್ಥ ನಿರ್ದೇಶನವಿತ್ತು. ತೆಲುಗು ಮೂಲದ ಜಾನಪದ ಕವಿ ರಾಘವಯ್ಯ ರಚಿಸಿ, ಕವಿ ಕೆಂಪಯ್ಯ ಕನ್ನಡಿಸಿದ ನಳಚರಿತ್ರೆ ಯಕ್ಷಗಾನ ಆಧಾರಿತವಾದದ್ದು, ಈ ನೃತ್ಯರೂಪಕ ನಳದಮಯಂತಿ. ನಿಷಧ ಪುರಾಧಿಪತಿ ನಳ ಮಹಾರಾಜ ಹಾಗೂ ವಿದರ್ಭ ರಾಜ್ಯದ ಭೀಮರಾಯನ ಸುಪುತ್ರಿ ಸುರಸುಂದರಿ ದಮಯಂತಿ ಇವರಿಬ್ಬರನ್ನೂ ಹಂಸಪಕ್ಷಿಗಳು ವಿವಿಧ ವೃತ್ತಾಂತ ವರ್ಣನೆ, ಶುಭ ಸಂದೇಶಗಳ ಮೂಲಕ ಪ್ರೇಮಿಗಳನ್ನಾಗಿಸಿ ವಿವಾಹ ಬಂಧನದಲ್ಲಿ ಒಂದುಗೂಡಿಸುತ್ತವೆ. ಶನಿ ಪ್ರಭಾವದಿಂದ ಪುಷ್ಕರನೊಂದಿಗೆ ಜೂಜಾಡಿ ರಾಜ್ಯಕೋಶಾದಿಗಳನ್ನು ಕಳೆದುಕೊಂಡು ನಿರ್ಗತಿಕನಾದ ನಳನು ಪತ್ನಿಯೊಂದಿಗೆ ಅರಣ್ಯವಾಸಿಯಾದದ್ದು, ನಿದ್ರಿಸುತ್ತಿದ್ದ ದಮಯಂತಿಯನ್ನು ತೊರೆದದ್ದು, ಕರ್ಕೋಟಕ ಸರ್ಪವು ಕಚ್ಚಿ ಅವನು ಕುರೂಪಿ ಬಾಹುಕನಾದದ್ದು, ಋತುಪರ್ಣ ರಾಜನಲ್ಲಿ ಆಶ್ರಯ ಪಡೆದದ್ದು, ಅತ್ತ ದಮಯಂತಿ ಪತಿಗಾಗಿ ಪರಿತಪಿಸುತ್ತ ತವರುಮನೆ ಸೇರಿಕೊಂಡದ್ದು, ಅಲ್ಲಿ ಮರಳಿ ಸ್ವಯಂವರದ ವ್ಯವಸ್ಥೆ, ನಳದಮಯಂತಿಯರ ಪುನರ್ ಮಿಲನದವರೆಗಿನ ಸುರಮ್ಯ ಕಥಾನಕವು ನೃತ್ಯ ರೂಪಕದಲ್ಲೂ ಅಷ್ಟೇ ಸುರಮ್ಯ ಮತ್ತು ಚಿತ್ರವತ್ತಾಗಿ ಪಡಿಮೂಡಿದೆ ಹತ್ತೂಂಬತ್ತು ವಿದ್ಯಾರ್ಥಿನಿಯರ ತಂಡದಿಂದ.
ನೃತ್ಯರೂಪಕದಲ್ಲಿ ಹಂಸಪಕ್ಷಿ ಬಳಗವನ್ನು ಆದ್ಯಂತವೂ ಸಂದೇಶವಾಹಕಗಳಾಗಿ ರೂಪಿಸಲಾಗಿದೆ. ಪಕ್ಷಿಗಳೊಂದಿಗೆ ನರ್ತಕಿಯರೂ ವಿವಿಧ ಭಾವಾಭಿವ್ಯಕ್ತಿಗಳ ಮೂಲಕ ಸುರಮ್ಯ ಪ್ರಕೃತಿ ಹಾಗೂ ಮಾನವರ ಚಿತ್ತ ಚಾಂಚಲ್ಯವನ್ನು ಸಮರ್ಥವಾಗಿ ಅಭಿವ್ಯಕ್ತಿಸಿದ್ದಾರೆ.
ಸುಮಧುರ ದಾಂಪತ್ಯ ಪ್ರೇಮ, ಸತ್ಯ ಧರ್ಮಗಳಿಗೇ ಅಂತಿಮ ಗೆಲುವು (ನಳದಮಯಂತಿಯರು), ವಿಕೃತ ಒಡಲ ಕಿಚ್ಚು (ಶನಿ, ಕರ್ಕೋಟಕ, ಪುಷ್ಕರ), ನಿಸ್ವಾರ್ಥ ಸೇವೆ (ಬಾಹುಕ) – ಇತ್ಯಾದಿ ವೈವಿಧ್ಯಮಯ ಭಾವಗಳನ್ನು ಸಾಂದರ್ಭಿಕವಾಗಿ ಕಲಾತ್ಮಕವಾಗಿ ಪ್ರದರ್ಶಿಸಿರುವುದು ಸ್ತುತ್ಯರ್ಹ ಅಂಶ. ಸಮೂಹ ನರ್ತಕಿಯರಾಗಿ ಪವಿತ್ರ ಕಾಮತ್, ಮನೋಜ್ಞಾ ಕೆ.ಎಂ., ಕೀರ್ತನಾ ಯು ಭಟ್, ಪ್ರತೀûಾ, ಮೇಘನಾ, ಪೃಥ್ವಿ ಹಾಗೂ ಹಂಸ ಪಕ್ಷಿಗಳಾಗಿ ಸುಪ್ರೀತಾ ಎಚ್. ಎಸ್, ಸ್ವಾತಿ ಎಸ್. ಶೆಟ್ಟಿ, ಬಿ. ಭಾವನಾ, ವರ್ಷಾ, ಸಮೃದ್ಧಿ, ಸುಪ್ರೀತಾ ಮತ್ತು ಅನುಶ್ರೀ ಇವರೆಲ್ಲರ ಮನೋಜ್ಞ ಅಭಿನಯ ಪ್ರಶಂಸಾರ್ಹ. ಯಥೋಚಿತ ವೇಷಭೂಷಣಗಳಿಂದ ಪಾತ್ರ ಪೋಷಣೆಯೂ ಸುಲಲಿತವಾಗಿತ್ತು.
ನಳಮಹಾರಾಜ – ಸಂಸ್ಕೃತಿ ಸುನಿಲ್, ದಮಯಂತಿ- ಯಶಸ್ವಿ, ಶನಿ – ಸ್ವಾತಿ ಉಪಾಧ್ಯ, ಪುಷ್ಕರ ಹಾಗೂ ಋತುಪರ್ಣ – ಸಂಜನಾ ಜೆ. ಸುವರ್ಣ, ಬಾಹುಕ – ಸಮೀಕ್ಷಾ ಪಿ.ಯು, ಕರ್ಕೋಟಕ – ಶಮಿತಾ ಆರ್ ಇವರೆಲ್ಲರ ಸಾಂದರ್ಭಿಕ ಭಾವಾಭಿವ್ಯಕ್ತ ಲಾಸ್ಯ ನಡೆಯು ಗಟ್ಟಿ ಭರವಸೆಯ ಸಂದೇಶ ನೀಡಿದೆ.
ನೃತ್ಯರೂಪಕಕ್ಕೆ ಹಳೆ ವಿದ್ಯಾರ್ಥಿಗಳ ಹಿಮ್ಮೇಳದ ಸಹಕಾರವಿತ್ತು. ವಿ| ಭ್ರಮರಿ ಶಿವಪ್ರಕಾಶ್ ಅವರು ಉತ್ತಮ ನೃತ್ಯ ಸಂಯೋಜನೆ ಮಾಡಿ ಸಮರ್ಥ ತರಬೇತಿ ನೀಡಿದ್ದರು. ಹಾಡುಗಾರಿಕೆಯಲ್ಲಿ ವಿ| ವಿನುತಾ ಆಚಾರ್ಯ, ತಬ್ಲಾದಲ್ಲಿ ಎನ್.ಮಾಧವ ಆಚಾರ್ಯ, ಪಿಟೀಲಿನಲ್ಲಿ ವಿ| ಶರ್ಮಿಳಾ ಕೃಷ್ಣಮೂರ್ತಿ, ಚೆಂಡೆಯಲ್ಲಿ ಅಜಿತ್ ಕುಮಾರ್ ಅಂಬಲಪಾಡಿ ಸಹಕರಿಸಿದರು. ಪ್ರಸಾದನದಲ್ಲಿ ಭಾಷಾ ಆರ್ಟ್ಸ್ ಉಡುಪಿ ಹಾಗೂ ಸತೀಶ್ ಉಪಾಧ್ಯ ನೆರವು ನೀಡಿದ್ದರು. ಮೂಲ ಸಂಗೀತ ಸಂಯೋಜನೆಯು ವಿದ್ವಾನ್ ಉಡುಪಿ ವಾಸುದೇವ ಭಟ್ ಅವರದ್ದು. ತರಬೇತಿ ಕಾಲದಲ್ಲಿ ಕನ್ನಡ ಪ್ರಾಧ್ಯಾಪಕ ಪ್ರೊ| ರಮಾನಂದರಾವ್ ಅವರ ನೇತೃತ್ವವಿತ್ತು.
ಸುಶೀಲಾ ಆರ್. ರಾವ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.