ರಜತಪಥದಲ್ಲಿ ಗೆಜ್ಜೆಯ ನಿನಾದ
Team Udayavani, Sep 23, 2017, 10:50 AM IST
ಭರತನಾಟ್ಯವಿರಲಿ, ಯಕ್ಷನಾಟ್ಯವಿರಲಿ; ಅದು ವಿಜೃಂಭಿಸಲು ಗೆಜ್ಜೆಯ ನಾದ ಬೇಕೇ ಬೇಕು. ಗೆಜ್ಜೆಯ ನಾದದ ಕೋಮಲತೆಯನ್ನು ಆಸ್ವಾದಿಸುವ ಪ್ರೇಕ್ಷಕರು ತಲ್ಲೀನರಾಗುತ್ತಾರೆ. ಶ್ರುತಿಗೆ ತಕ್ಕಂತೆ ನಾದ ಹೊರಹೊಮ್ಮುವ ಗೆಜ್ಜೆಗಳ ತಯಾರಿಗೆ ಯಂತ್ರವನ್ನು ನೆಚ್ಚಿಕೊಳ್ಳುವುದಕ್ಕಿಂತ ಕೈಯಿಂದ ರೂಪಿಸುವುದು ಮೇಲು ಎಂಬುದು ಅನುಭವಿಗಳ ಅಂಬೋಣ.
ಆದರೆ ಇಂದು ಕೈಯಲ್ಲಿ ತಯಾರಿಸಿದ ಗೆಜ್ಜೆ ಸಿಗುವುದು ಬಲು ಅಪರೂಪ. ಯಾಂತ್ರಿಕ ಜೀವನದಲ್ಲಿ ಇಂದು ಎಲ್ಲವೂ ಯಂತ್ರಗಳನ್ನೇ ಅವಲಂಬಿಸಿದೆ. ಅಂತೆಯೇ ಇಂದು ಯಂತ್ರದಿಂದ ತಯಾರಿಸಿದ ಗೆಜ್ಜೆಯೇ ಎಲ್ಲೆಡೆ ಬಳಸಲ್ಪಡುತ್ತದೆ. ಕೈಗಳಿಂದ ತಯಾರಿಸಿದ ಗೆಜ್ಜೆ ವಿರಳ ಮಾತ್ರವಲ್ಲದೆ ದುಬಾರಿ ಕೂಡ..
ಉಡುಪಿಯ ಲೋಹಶಿಲ್ಪಿ ರಾಜೇಶ್ ಡಿ. ಆಚಾರ್ಯ ಅವರು ಕೈಗಳಿಂದ ಗೆಜ್ಜೆ ತಯಾರಿಸುವುದನ್ನು ತನ್ನ ತಂದೆ ರಾಘವಾಚಾರ್ಯರಿಂದ ಕರಗತ ಮಾಡಿಕೊಂಡಿ ದ್ದಾರೆ. ಉಡುಪಿಯ ಹಿರಿಯ ಮದ್ದಳೆವಾದಕ ಹಿರಿಯಡ್ಕ ಗೋಪಾಲರಾಯರು ಹಾಗೂ ಡಾ| ಶಿವರಾಮ ಕಾರಂತರ ನಿರ್ದೇಶನದಂತೆ, ಅವರ ಒತ್ತಾಯದ ಮೇರೆಗೆ ಗೆಜ್ಜೆ ತಯಾರಿಕೆಗೆ ತೊಡಗಿದ ರಾಘವಾಚಾರ್ಯರು ಛಲದಿಂದ ಈ ಕಾರ್ಯವನ್ನು ಮುನ್ನಡೆಸಿಕೊಂಡು ಬಂದಿದ್ದರು. ಇತ್ತೀಚೆಗೆ ಉಡುಪಿ ಕೊಡವೂರಿನ ನೃತ್ಯ ನಿಕೇತನ ಸಂಸ್ಥೆಯು ತನ್ನ ರಜತ ಮಹೋತ್ಸವದ ಪ್ರಯುಕ್ತ ರಜತಪಥದ ಸರಣಿ ಕಾರ್ಯಕ್ರಮದ ಒಂದು ಅಂಗವಾಗಿ ನೂಪುರ ತಯಾರಿ, ವಿನ್ಯಾಸದ ಪ್ರಾತ್ಯಕ್ಷಿಕೆಯನ್ನು ಉಡುಪಿ ದೊಡ್ಡಣಗುಡ್ಡೆಯ `ಸಖೀಗೀತ’ದಲ್ಲಿ ಏರ್ಪಡಿಸಿದ್ದರು.
`ಗೆಜ್ಜೆ ತಯಾರಿ ಕೆಲಸ ತುಂಬ ನಾಜೂಕಿನದು. ಎರಕ ಹೊಯ್ಯುವಾಗ ಸ್ವಲ್ಪ ವ್ಯತ್ಯಾಸವಾದರೂ ಗೆಜ್ಜೆ ಬಿರುಕು ಬಿಟ್ಟು ಸ್ವರ ಹೊರಡುವುದಿಲ್ಲ. ಸ್ವಲ್ಪವೇ ಎಚ್ಚರ ತಪ್ಪಿದರೂ ಮಾಡಿದ ಕೆಲಸವೆಲ್ಲ ವ್ಯರ್ಥವಾಗುತ್ತದೆ’ ಎನ್ನುತ್ತಾರೆ ರಾಜೇಶ್ ಆಚಾರ್ಯರು.
ಗೆಜ್ಜೆಯನ್ನು ಶುದ್ಧ ಬೆಳ್ಳಿ, ಕಂಚಿನಿಂದ ತಯಾರಿಸಲಾಗುತ್ತದೆ. ಸುಮಾರು ಒಂದು ಕಿಲೊ ಕಂಚಿಗೆ 100 ಗ್ರಾಂ ಬೆಳ್ಳಿಯ ಮಿಶ್ರಣ. ಮೊದಲಿಗೆ ಆವೆಮಣ್ಣು, ಮರಳು, ಸೆಗಣಿ ಮಿಶ್ರ ಮಾಡಿ, ಅನಂತರ ಗೋಣಿ ಚೀಲದ ನಾರಿನಲ್ಲಿ ರಚಿಸಲ್ಪಟ್ಟ ಗಟ್ಟಿ ವಸ್ತುವಿನಲ್ಲಿ ಅದನ್ನು ಗುದ್ದುತ್ತಾರೆ. ತೆಳ್ಳಗಾದ ಮೇಲೆ ವೃತ್ತಾಕಾರಕ್ಕೆ ತಂದು ಗೋಲಿಯ ತರಹ ಸಿದ್ಧಮಾಡಲಾಗುತ್ತದೆ. ಅನಂತರ ಮರಳು, ಸೆಗಣಿ ಮಿಶ್ರಿತ ಆವೆಮಣ್ಣನ್ನು ಲೇಪನ ಮಾಡಿ ಒಣಗಿಸಲಾಗುತ್ತದೆ.
ಜೇನುಮೇಣದ ಲೇಪನದ ಮೂಲಕ ಗೆಜ್ಜೆಗೆ ಬೇಕಾದ ಆಕಾರ ತಂದು ಒಂದೊಂದಾಗಿ ಮಣ್ಣಿನ ತಗಡಿನಲ್ಲಿಟ್ಟು ಮಣ್ಣಿನಿಂದಲೇ ಮುಚ್ಚಲಾಗುತ್ತದೆ. ಬೆಂಕಿಯ ಕೆನ್ನಾಲಗೆಯನ್ನು ಸೃಷ್ಟಿಸಿ ಜೇನುಮೇಣವನ್ನು ಒಳಗಿನಿಂದಲೇ ಕರಗುವಂತೆ ಮಾಡಲಾಗುತ್ತದೆ. ಅದೇ ಸಂದರ್ಭದಲ್ಲಿ ಬೆಳ್ಳಿ ಕಂಚನ್ನು ಬೆಂಕಿಯಲ್ಲಿ ಕರಗಿಸಿ ಎರಕ ಹೊಯ್ಯಲಾಗುತ್ತದೆ. ಎರಕ ಹೊಯ್ದ ಕಂಚಿನ ರಸವನ್ನು ಕೆಲವು ಗಂಟೆಗಳ ಕಾಲ ಹಾಗೆಯೇ ಬಿಟ್ಟು ಮಣ್ಣನ್ನು ತೆಗೆದಾಗ ರೂಪಕ ತಯಾರಾಗುತ್ತದೆ. ಅನಂತರ ಕೆಲವು ಕುಸುರಿ ಕೆಲಸಗಳು ನಡೆದು ಪೂರ್ಣ ಪ್ರಮಾಣದ ಗೆಜ್ಜೆ ರೂಪುಗೊಳ್ಳುತ್ತದೆ. ಪಾರಂಪರಿಕ ಜ್ಞಾನದಿಂದ ಮಾತ್ರ ಇದು ಸಾಧ್ಯ.
ಪ್ರಾತ್ಯಕ್ಷಿಕೆಯಲ್ಲಿ ಡಾ| ಶಿವರಾಮ ಕಾರಂತ ಥೀಂ ಪಾರ್ಕಿನ ಮಾಲಿನಿ ಮಲ್ಯ, ಹಿರಿಯಡ್ಕ ಸಂಸ್ಕೃತಿ ಸಿರಿ ಟ್ರಸ್ಟ್‌ನ ಪ್ರೊ| ಮುರಳೀಧರ ಉಪಾಧ್ಯ, ನೃತ್ಯ ನಿಕೇತನ ಕೊಡವೂರು ಸಂಸ್ಥೆಯ ಗುರು ಸುಧೀರ್ ರಾವ್ ಮತ್ತು ಮಾನಸೀ ಸುಧೀರ್ ಉಪಸ್ಥಿತರಿದ್ದರು.
ಕಳೆದ ವರ್ಷ ಎಪ್ರಿಲ್ ತಿಂಗಳಲ್ಲಿ ಆರಂಭಗೊಂಡ `ರಜತಪಥ ಸರಣಿ’ಯಲ್ಲಿ ಭರತನಾಟ್ಯ, ಕೂಚುಪುಡಿ, ಒಡಿಸ್ಸಿ, ಕಥಕ್, ಬ್ಯಾಲೆ, ಸಂಗೀತ, ನೃತ್ಯನಾಟಕ, ಪ್ರಾತ್ಯಕ್ಷಿಕೆ, ದಶ ದಿನಗಳ ನಾಟ್ಯಶಾಸ್ತ್ರ ಪ್ರವಚನ, ನೃತ್ಯವಾತ್ಸಲ್ಯ, ಚಿತ್ರಾ ನೃತ್ಯ ನಾಟಕ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಈ ವರ್ಷದ ಕೊನೆಗೆ ಸರಣಿ ಮುಕ್ತಾಯಗೊಳ್ಳಲಿದೆ.
ಎನ್. ರಾಮ ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ
ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ
Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್ ಜೈಕಾರ !
Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ
Idu Entha Lokavayya: “ಕೋಸ್ಟಲ್” ನಿಂದ ಕರುನಾಡು!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.