ಮಳೆಗಾಲದಲ್ಲಿ ಸುರಿದ ಸಂಗೀತ ವರ್ಷಧಾರೆ
Team Udayavani, Aug 24, 2018, 5:26 PM IST
ಸುರ್ ಸಂಗೀತ್ ಪ್ರತಿಷ್ಠಾನ ಜುಲೈ 22ರಂದು ಉಡುಪಿ ಪುರಭವನದಲ್ಲಿ ಆಯೋಜಿಸಿದ ” ಕರ್ನಾಟಕ ಕಲಾಶ್ರೀ ಪಂಡಿತ್ ಜಿ. ಮಾಧವ ಭಟ್ ಸ್ಮತಿ ಸಂಗೀತ ಸಮಾರೋಹ’ ಸಂಗೀತೋತ್ಸವದಲ್ಲಿ ದೇಶದ ಖ್ಯಾತ ಕಲಾವಿದರು ಸಂಗೀತ ಕಛೇರಿಗಳನ್ನು ನಡೆಸಿಕೊಟ್ಟರು. ಮೊದಲು ಉಡುಪಿಯವರೇ ಆದ ಸತ್ಯಚರಣ್ ಶೆಣೈ ಗಾಯನ ನೀಡಿದರು. ಮಿಯಾಕಿ ತೋಡಿ ರಾಗದಲ್ಲಿ ಮಧ್ಯ ಲಿತ್ರಿ ತಾಲದ ಬಂಧಿಶ್ “ಅಬ್ ಮೋರಿ ನಯ್ಯ ಪಾರ್ ಕರೋ’ ಮತ್ತು ಧ್ರುತ್ ತ್ರಿತಾಲದ “ಲಂಗರ್ ಕಾಂಕರಿಯ ಜೀ ನಾಮಾರೋ’ ಬಂಧಿಶ್‌ಗಳನ್ನು ಭಾವಪೂರ್ಣವಾಗಿ ಪ್ರಸ್ತುತ ಪಡಿಸಿದರು. ಇವರಿಗೆ ತಬಲದಲ್ಲಿ ಟಿ. ರಂಗ ಪೈ ಹಾಗೂ ಹಾರ್ಮೋನಿಯಂನಲ್ಲಿ ಸಿದ್ಧಾರ್ಥ ಮಲ್ಯ ಸಹಕಾರ ನೀಡಿದರು.
ಎರಡನೆಯದಾಗಿ ಕೋಲ್ಕತ್ತದ ಸಂದೀಪ್ ಘೋಷ್ ತಬಲಾ ಸೋಲೋ ನೀಡಿದರು. ಒಂದು ಗಂಟೆ ಕಾಲ ವಿಲಂಬಿತ್, ಮಧ್ಯಲಯ, ಧ್ರುತ್ ತ್ರಿತಾಲ್ ಮತ್ತು ಲಗ್ಗಿಗಳಲ್ಲಿ ತಮ್ಮ ಸಾಧನೆಯ ಆಳ, ವಿಸ್ತಾರವನ್ನು ಪರಿಚಯಿಸಿದರು. ಫರೂಕಾಬಾದ್ ಮಾತ್ರವಲ್ಲದೆ ಇತರ ಅನೇಕ ಘರಾಣಿಗಳ ಸಂಕೀರ್ಣ ವಿನ್ಯಾಸದ ಮಟ್ಟುಗಳನ್ನು ನುಡಿಸಿ ರಂಜಿಸಿದರು. ಮಾಧುರ್ಯ, ಮಿಂಚಿನ ಬೆರಳುಗಾರಿಕೆ, ವೈಶಿಷ್ಟéಪೂರ್ಣ ಲಯಚಿತ್ರಗಳಿಂದ ಮೋಡಿ ಮಾಡಿದರು. ಮಿಲಿಂದ್ ಕುಲಕರ್ಣಿ ಹಾರ್ಮೋನಿಯಂನಲ್ಲಿ ಲೆಹರಾ ಸಾಥ್ ನೀಡಿದರು. ಕಚೇರಿಯ ನಡುವೆ ಹಲವಾರು ಕಡೆ ಸಿಕ್ಕ ಕಿರು ಅವಕಾಶದಲ್ಲಿ ಕೈಚಳಕ ತೋರಿದ ಮಿಲಿಂದ್ ತಿಹಾಯಿಗಳನ್ನು , ಲಯ ಕಾರಿಗಳನ್ನು ನುಡಿಸಿ ಮಿಂಚಿದರು.
ಬೆಳಗ್ಗಿನ ಅವಧಿಯ ಅಂತ್ಯದಲ್ಲಿ ಧಾರವಾಡದ ಪಂ| ಕೈವಲ್ಯ ಕುಮಾರ್ ಗಾಯನ ಕಛೇರಿ ನೀಡಿದರು. ಕೈವಲ್ಯ ಕುಮಾರ್ ಪ್ರಸ್ತುತ ಕಿರಾನಾ ಘರಾಣಿಯ ಅಗ್ರಮಾನ್ಯ ಕಲಾವಿದರಲ್ಲಿ ಓರ್ವರಾಗಿ ಗುರುತಿಸಿಕೊಂಡವರು. ಮಳೆಗಾಲದ ರಾಗ ಮಿಯಾ ಮಲ್ಹಾರ್‌ನ ವಿಲಂಬಿತ ಬಂಧಿಶ್ “ಸಹೇಲರಿಯ ಸಾಂಚ್ ಭಯಿ|’ ಮಧ್ಯ ಲಯ ತ್ರೀತಾಳದ “ಏ ಬಾದಲ್ ಆಯೆ| ಉಮ್ಮಂಡ್ ಗುಮ್ಮಂಡ್’, ಧ್ರುತ್ ಏಕತಾಲದ “ಮಮ್ಮದಷಾ ರಂಗೀಲಾರೆ’ಗಳನ್ನು ಹೃದ್ಯವಾಗಿ ಪ್ರಸ್ತುತ ಪಡಿಸಿದರು. ಏರುಶೃತಿಯ ಸುಮಧುರ ಕಂಠ ಮೂರೂ ಸಪ್ತಕಗಳಲ್ಲಿನ ಸುಲಲಿತ ಸಂಚಾರ, ಕಿರಾನಾ ಘರಾಣೆಯ ವಿಶಿಷ್ಟ ಆಲಾಪನೆಗಳೂ ಮಳೆಗಾಲದ ಸುಂದರ ಚಿತ್ರಣ ನೀಡಿ ನಡು ನಡುವೆ ಪ್ರಚಂಡವಾಗಿ ಭೋರ್ಗರೆವ ತಾನ್‌ಗಳ ಮಳೆ ಸುರಿಸಿ ಬೆರಗು ಹುಟ್ಟಿಸಿದರು. ಅನಂತರ ಪಹಾಡಿ ರಾಗದಲ್ಲಿ ಪಾಕಿಸ್ಥಾನದ ಒಂದು ವಿಶಿಷ್ಟ ದಾದರ “ಮಾರ್ ಡಾಲ ನಜರಿಯಾ ಮಿಲಾಕೆ ‘ ಮತ್ತು ಪಾರಂಪರಿಕ ಬಂಧಿಶ್ “ಸಾವರೇ ಅಯ್ಯಯ್ಯೋ’ಗಳನ್ನು ಪ್ರಸ್ತುತ ಪಡಿಸಿ ರಂಜಿಸಿದರು. ಶಾಂ ಕಲ್ಯಾಣ್ ರಾಗದ “ಶೂರಾಮಿ ವಂದಿತೆ’ ಅಭಂಗ್ ಮೂಲಕ ಕಛೇರಿಯನ್ನು ಮುಕ್ತಾಯಗೊಳಿಸಿದರು. ತಬಲಾದಲ್ಲಿ ಪಂ. ಓಂಕಾರ್‌ನಾಥ್ ಗುಲ್ವಾಡಿ ಹಾಗೂ ಹಾರ್ಮೋನಿಯಂನಲ್ಲಿ ಮಿಲಿಂದ್ ಕುಲಕರ್ಣಿ ಸಾಥ್ ನೀಡಿದರು.
ಮಧ್ಯಾಹ್ನದ ಪ್ರಥಮ ಕಛೇರಿ ನೀಡಿದವರು ಗೋವಾದ ಯುವ ಗಾಯಕ ವಿಕ್ರಾಂತ್ ನಾಯಕ್. ಶಾಂತ ಭಕ್ತಿ ರಸ ಪ್ರಧಾನವಾದ ರಾಗ ಭೀಮ್ ಪಲಾಸ್‌ನಲ್ಲಿ ವಿಲಂಬಿತ ಬಂಧಿಶ್ “ಪಲಕನ ಲಾಗಿ’ ಹಾಗೂ ಧ್ರುತ್ ತ್ರಿತಾಳದ “ಬಿರಜಮೆ| ಧೂಮ ಮಚಾವೋ’ಗಳನ್ನು ತಾನ್ ಹಾಗೂ ಆಲಾಪಗಳಿಂದ ಪ್ರಸ್ತುತ ಪಡಿಸಿದರು. ಬಳಿಕ ಶ್ರೀರಾಗದಲ್ಲಿ “ಚಲೋರಿ ಮಾಯಿ ರಾಮಸಿಯಾ ಧರ್‌ಸನ್ ಕೋ’ ಅನ್ನು ಮಧ್ಯಲಯ ಹಾಗೂ ದ್ರುತ್ ತ್ರಿತಾಳದಲ್ಲಿ ನಿರೂಪಿಸಿದರು.
ಇಡೀ ದಿನದ ಕಛೇರಿಯ ಪ್ರಮುಖ ಆಕರ್ಷಣೆ ಪಾಣಿಪತ್ ಘರಾಣೆಯ ಯುವ ಕಲಾವಿದ ಉಸ್ತಾದ್ ಶಹನವಾಜ್ ಅಹಮದ್ ಖಾನ್ ಅವರ ಶಾಸ್ತ್ರೀಯ ಗಿಟಾರ್ ವಾದನ. ಸುಮಾರು ಒಂದು ಗಂಟೆ ಕಾಲ ಭಾಗೇಶ್ರೀ ರಾಗದ ಆಲಾಪ, ಜೋಡ್, ಝಾಲಾ ಮತ್ತು ವಿಲಂಬಿತ ತ್ರಿತಾಳ, ಮಧ್ಯಲಯ ಏಕತಾಲ ಮತ್ತು ಧ್ರುತ್ ತ್ರಿತಾಳದ ಗತ್‌ಗಳ ಮೂಲಕ ಮಂತ್ರಮುಗ್ಧಗೊಳಿಸಿದರು. ಸಂದೀಪ್ ಘೋಷ್ ತಬಲಾದಲ್ಲಿ ಸಾಥ್ ನೀಡಿದರು.ಭಾಗೆಶ್ರೀ ರಾಗದ ನಂತರ ನುಡಿಸಿದ ಕಮಾಚ್ ರಾಗದ ಧುನ್‌ನಲ್ಲಿ ಶಾನವಾಜ್ ಅನೇಕ ರಾಗಗಳ ಸುಂದರ ಪಲುಕುಗಳನ್ನು ತಂದು ರಂಜಿಸಿದರು.
ಕೊನೆಯದಾಗಿ ಕಛೇರಿ ನೀಡಿದವರು ಮುಂಬಯಿಯ ಖ್ಯಾತ ಗಾಯಕಿ, ಡಾ| ವರದಾ ಗೋಡ್‌ಬೋಲೆ. ಮೊದಲಿಗೆ ವಿಲಂಬಿತ್ ಬಂಧಿಶ್ “ತುಮಪರ್ ಮೈ ಕುರ್‌ಬಾನ್’, ದ್ರುತ್ ತ್ರಿತಾಲ್‌ನ “ಮೈ ವಾರಿ ವಾರಿ ಜಾವೂ’ಗಳ ಮೂಲಕ ಯಮನ್ ರಾಗವನ್ನು ಪ್ರಸ್ತುತ ಪಡಿಸಿದರು. ಅನಂತರ ಅಪ್ರಚಲಿತ ಮಳೆಗಾಲದ ರಾಗ ಜಯಂತ್ ಮಲ್ಹಾರ್‌ನಲ್ಲಿ ವಿಲಂಬಿತ್ ಬಂಧಿಶ್ “ಋತ್ ಬರಖಾಯಿ’ ಧ್ರುತ್ ತ್ರಿತಾಳ್‌ನಲ್ಲಿ ಋತು ಆಯಿ ಸಾವನ್‌ಕಿ’, ಧ್ರುತ್ ಏಕತಾಲದ “ಆ ಭರಸೀಲಾ ಪ್ಯಾರ್‌ಗಳನ್ನು ಪ್ರಸ್ತುತಪಡಿಸಿದರು. ಅವರು ನೀಡುತ್ತಿದ್ದ ಅನಿರೀಕ್ಷಿತ ತಿರುವುಗಳು, ಜಿಗಿತಗಳು ಆಶ್ಚರ್ಯ ಚಕಿತರನ್ನಾಗಿಸಿದವು. ಕೊನೆಯದಾಗಿ ಇನ್ನೊಂದು ಅಪ್ರಚಲಿತ ರಾಗ ಕೌಂಸಿ ಕಾನಡದಲ್ಲಿ ಮಧ್ಯಲಯ ತ್ರಿತಾಳದಲ್ಲಿ “ನಯನಾ ಭರೇ ಖಜರಾ’ ಬಂಧಿಶ್‌ನ್ನು ಪ್ರಸ್ತುತಪಡಿಸಿ ಮುಕ್ತಾಯಗೊಳಿಸಿದರು. ತಬಲಾದಲ್ಲಿ ಪಂ| ಓಂಕಾರ್‌ನಾಥ್ ಗುಲ್ವಾಡಿ ಹಾರ್ಮೋನಿಯಂನಲ್ಲಿ ಮಿಲಿಂದ್ ಕುಲಕರ್ಣಿ ಸಹಕರಿಸಿದರು.
“ನಾದಪ್ರಿಯ’
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.