ಸಾರ್ಥಕ ಪ್ರದರ್ಶನ ಶ್ರೀ ರಾಮದರ್ಶನ
ಯಕ್ಷ ಯಾನದ ರಜತ ವರ್ಷ
Team Udayavani, Mar 29, 2019, 6:00 AM IST
ಯಕ್ಷ ಯಾನದ ರಜತ ವರ್ಷದ ಮೈಲುಗಲ್ಲು ದಾಟಿದ ಹೆಗ್ಗುರುತಿನ ನೆನಪಿಗಾಗಿ ಕಟೀಲು ಮೇಳದ ಹಿಮ್ಮೇಳ ಕಲಾವಿದರಾದ ಸುದಾಸ್ ಕಾವೂರು ಮಾ. 9 ರಂದು ಕಾವೂರಿನಲ್ಲಿ ಶ್ರೀರಾಮದರ್ಶನ ಯಕ್ಷಗಾನ ಪ್ರದರ್ಶನವನ್ನು ನೆರವೇರಿಸಿದರು. ಯಕ್ಷಗಾನದ ಸ್ತ್ರೀ ಪಾತ್ರಧಾರಿ ಕೀರ್ತಿಶೇಷ ಕಲಾವಿದರಾಗಿರುವ ಕಾವೂರು ಕೇಶವ ಅವರ ಸಂಸ್ಮರಣೆ, ಪ್ರಸ್ತುತ ಮೇಳ ತಿರುಗಾಟದ ಮಧ್ಯೆ ಅಸ್ವಸ್ಥರಾಗಿ ನಿಧನರಾದ ಧರ್ಮಸ್ಥಳ ಮೇಳದ ಹಿರಿಯ ಮದ್ದಳೆಗಾರ, ಅಡೂರು ಗಣೇಶ್‌ರಾವ್ ಅವರಿಗೆ ಗೌರವ ನಿಧಿಯೊಂದಿಗೆ ಮರಣೋತ್ತರ ಪ್ರಶಸ್ತಿ. ಹಿಮ್ಮೇಳ ಕಲಾವಿದ ದಯಾನಂದ್ ಕೋಡಿಕಲ್ ಅವರಿಗೆ ಗೌರವ ಸಂಭಾವನೆಯೊಂದಿಗೆ ಸಮ್ಮಾನ. ಇವನ್ನು ಪ್ರದರ್ಶನದ ಮೊದಲ ಅಂಗವಾಗಿ ಗಣ್ಯರ ಸಮಕ್ಷದ ಸಭೆಯಲ್ಲಿ ನೆರವೇರಿಸಿದರು.
ಶ್ರೀರಾಮದರ್ಶನ ಯಕ್ಷಗಾನ ಒಂದು ಉತ್ತಮ ಪ್ರದರ್ಶನ. ಯುವ ಕಲಾವಿದರ ಸಮ್ಮಿಲನ, ರಜತ ವರ್ಷದ ಹುರುಪು-ಉಲ್ಲಾಸ ಅಭಿನಯದಲ್ಲಿ ಸಂಭ್ರಮಿಸಿತ್ತು.ಶ್ರೀ ರಾಮನ ಆದರ್ಶವನ್ನು ಹನೂಮಂತ ತನ್ನ ವಾಚಿಕಾಭಿನಯದಲ್ಲಿ ಸಾಕ್ಷಾತ್ಕರಿಸಿದ್ದ. ಮನೋಮಂಡಲದಲ್ಲಿರುವುದು ಮನಸ್ಸು, ಬುದ್ಧಿ, ಚಿತ್ತಗಳು. ಮನಸ್ಸು ಜ್ಞಾನದ ಮಹಾದ್ವಾರ, ಬುದ್ಧಿ ಸಂಚಿತ ಕರ್ಮದ ಅವಲೋಕಿಯಾದರೆ, ಚಿತ್ತ ಅನುಭವದ ಭಂಡಾರ. ನಿಷ್ಠೆಯ ಸಾಧನೆ, ನಿಸ್ವಾರ್ಥದ ಸೇವೆಗಳಿಂದ ಸಾತ್ವಿಕ ಗುಣ ಭೂಷಿತನಾಗಿ ದೇವರನ್ನು ಕಾಣುವುದೇ ಆತ್ಮ ಶಕ್ತಿಯ ಜಾಗೃತಿ. ರಾಮದಾಸನಾದ ಹನೂಮಂತನಲ್ಲಿ ಇಂತಹ ಸತ್ವ ಕಂಡಿತು. ಶ್ರೀರಾಮ ನಿರ್ಯಾಣದ ಕಾಲದಲ್ಲಿ ನೀಡಿದ ಅಭಯದಂತೆ ಸೇತುವಿನ ಬಳಿಯಲ್ಲಿ ರಾಮಧ್ಯಾನ ಮಾಡುತ್ತಾ ರಾಮದರ್ಶನಕ್ಕಾಗಿ ಆಂಜನೇಯ ಕಾದಿದ್ದ.
ಅಭಿನಯ ಚತುರನಾಗಿ ಕಂಡು ಬಂದ ನಾರದ ಹನೂಮಂತನಿಗೆ ತೀರ್ಥಕ್ಷೇತ್ರಗಳ ಸಂದರ್ಶನ ಮಾಡಿಸಿ ದ್ವಾರಕೆಯನ್ನು ತೋರಿಸಿದ. ಕೃಷ್ಣನ ಸಲಹೆಯಂತೆ ದರ್ಶನಕ್ಕಿಂತ ಮುಂಚೆ ಘರ್ಷಣೆಯಾಗಬೇಕು, ಘರ್ಷಣೆಯಲ್ಲಿ ಗರ್ವಿತರ ಗರ್ವ ಹನನವಾಗಬೇಕು. ಆ ನೈತಿಕ ಮೌಲ್ಯ ಪ್ರದರ್ಶನದಲ್ಲಿ ಪ್ರಸ್ತುತವಾಯಿತು. ಪರಶುರಾಮನಿಗಿಂತಲೂ, ಕೋದಂಡರಾಮನಿಗಿಂತಲೂ, ಹಲಧರರಾಮನಾಗಿ ತಾನೇ ಮೇಲು ಎಂದು ಭಾವಿಸಿದ ಬಲರಾಮನ ಜಂಭವೂ, ಬ್ರಹ್ಮಾಂಡಧರ ಹರಿಯನ್ನು ಹೊತ್ತು ತಿರುಗುವ ತಾನೇ ಶ್ರೇಷ್ಠಯೆಂದ ದಿಗಿಣ ವೀರ ಗರುಡನ ಆಟೋಪವೂ ಮಾರುತಿಯ ಮುಂದೆ ಏರದೆ ಜಾರಿ ಕರಗಿ ನೀರಾದುದು. ಕಲಾವಿದರ ಸ್ವೇದ ಜಲ ಹೊರ ಹೊಮ್ಮಿದರೂ, ಏದುಸಿರು ಕಂಡರೂ ಕಸುಬಿನ ಕಸುವು ಕಮರದೆ ವಿಜೃಂಭಿಸಿತ್ತು. ಶ್ರೀರಾಮ ದರ್ಶನ ಮಾಡಿದ ಕೃಷ್ಣನ ನಾಟ್ಯದ ಲಾಸ್ಯಮಯ ಅಭಿನಯವೂ ಗಮನಾರ್ಹವಾಗಿತ್ತು. ಹಾಸ್ಯ ಪಾತ್ರವು ನಗೆಯ ಅಲೆ ಎಬ್ಬಿಸಿತು. ಹಿಮ್ಮೇಳಕ್ಕೆ ತಕ್ಕ ಮುಮ್ಮೇಳವೂ, ಸಮರಸ ಸಮತೋಲನದ ಪ್ರದರ್ಶನವೂ ಕಳೆಗಟ್ಟಿತು. ಜನಮನ ರಂಜಿಸಿತು.
ಹರಿಪ್ರಸಾದ್‌ಕಾರಂತ್ (ಭಾಗವತಿಕೆ), ಗಣೇಶ್ ಭಟ್ ಬೆಳಾಲು (ಮದ್ದಳೆ), ಸುದಾಸ್ ಕಾವೂರು (ಚೆಂಡೆ). ಪಾತ್ರವರ್ಗದಲ್ಲಿ ಸಂದೀಪ್ ದೋಟ (ಶ್ರೀಕೃಷ್ಣ), ನರೇಶ್ ಕಾವೂರು (ನಾರದ), ಲಕ್ಷ್ಮಣ ಮರಕಡ (ಹನೂಮಂತ), ರಘುರಾಮ್ ಕಾವೂರು (ಚಾರಕ), ಡಾ| ಶ್ರುತಕೀರ್ತಿ ಜೈನ್ (ಬಲರಾಮ), ಮುಚ್ಚಾರು ಲೋಕೇಶ್ (ಗರುಡ) ಇವರಿಂದ ಶ್ರೀರಾಮದರ್ಶನ ಲೋಕಾಭಿರಾಮನ ಗುಣದರ್ಶನ ಮಾಡಿಸಿದ ಮಹತ್ವದ ಪ್ರಯೋಗವಾಗಿ ಪ್ರಸ್ತುತವಾಯಿತು.
ಡಾ| ದಿನಕರ ಎಸ್. ಪಚ್ಚನಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ
Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ
Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ
Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.