ರಘು ಶೆಟ್ಟರಿಗೆ ಮಂಡೆಚ್ಚ ಪ್ರಶಸ್ತಿ
Team Udayavani, Dec 14, 2018, 6:00 AM IST
ದಿ| ದಾಮೋದರ ಮಂಡೆಚ್ಚರು ಯಕ್ಷಗಾನದ ದಂತಕಥೆ. ಅನೇಕ ದಶಕಗಳ ಕಾಲ ಕರ್ನಾಟಕ ಮೇಳದಲ್ಲಿ ಭಾಗವತರಾಗಿ, ಭಾಗವತಿಕೆಯಲ್ಲಿ ಸಂಗೀತ ಶೈಲಿಯ ಹರಿಕಾರರಾಗಿ, ಯಕ್ಷಗಾನವೆಂಬ ಆಗಸದಲ್ಲಿ ಧ್ರುವ ನಕ್ಷತ್ರವಾಗಿ ಕೀರ್ತಿಶಾಲಿಗಳಾದವರು. ಇಂತಹ ಮಹೋನ್ನತ ಸಾಧಕನ ನೆನಪು ಜನಮಾನಸದಲ್ಲಿ ಸದಾ ಹಸಿರಾಗಿರಬೇಕೆಂಬ ಉದ್ದೇಶದಿಂದ ದಿ| ಕುಬಣೂರು ಶ್ರೀಧರರಾಯರು ಉಜಿರೆಯಲ್ಲಿ “ಮಂಡೆಚ್ಚ ಪ್ರಶಸ್ತಿ’ಯನ್ನು ಸ್ಥಾಪಿಸಿ ಮಂಡೆಚ್ಚರ ಒಡನಾಡಿಗಳಾಗಿದ್ದ ಕಲಾವಿದರಿಗೆ ಈ ಪ್ರಶಸ್ತಿಯನ್ನು ನೀಡಿಕೊಂಡು ಬರುತ್ತಿದ್ದರು. ಮಿಜಾರು ಅಣ್ಣಪ್ಪ, ಕೋಳ್ಯೂರು ರಾಮಚಂದ್ರ ರಾವ್, ಮಂಕುಡೆ ಸಂಜೀವ ಶೆಟ್ಟಿ, ಅರುವ ಕೊರಗಪ್ಪ ಶೆಟ್ಟಿ, ಜೆಪ್ಪು ದಯಾನಂದ ಶೆಟ್ಟಿ ಮೊದಲಾದವರಿಗೆ ಈ ಪ್ರಶಸ್ತಿ ಸಂದಿದೆ. ಇದೀಗ ಕುಬಣೂರು ದಿವಂಗತರಾದ ಮೇಲೆ ಅವರ ಒಡನಾಡಿಗಳು ಈ ಕಾರ್ಯಕ್ರಮವನ್ನು ಮುಂದುವರಿಸಿಕೊಂಡು ಹೋಗುತ್ತಿದ್ದು, 2018ನೇ ಸಾಲಿನ ಮಂಡೆಚ್ಚ ಪ್ರಶಸ್ತಿಯನ್ನು ಅರವತ್ತೆಂಟರ ಕಲಾಯೋಗಿ, ಮಂಡೆಚ್ಚರೊಂದಿಗೆ ಸುಮಾರು ಮೂರು ದಶಕಗಳ ಒಡನಾಡಿ ಬಾಯಾರು ರಘು ಶೆಟ್ಟರಿಗೆ ಪ್ರದಾನಿಸಲಾಗುತ್ತಿದೆ.
ರಘು ಶೆಟ್ಟರು ಕಾಸರಗೋಡು ಜಿಲ್ಲೆಯವರು.ಅವರ ತಂದೆ ದಿ| ಪೈವಳಿಕೆ ಐತಪ್ಪ ಶೆಟ್ಟರು ಖ್ಯಾತ ಸ್ತ್ರೀವೇಷಧಾರಿಗಳಾಗಿದ್ದರು. ಕರ್ನಾಟಕ ಮೇಳದ ಸೀನು-ಸೀನರಿಗಳನ್ನೊಳಗೊಂಡ ಯಕ್ಷಗಾನಗಳನ್ನು ನೋಡುತ್ತಿದ್ದುದರಿಂದ ಎಳವೆಯಲ್ಲೇ ಯಕ್ಷಗಾನದತ್ತ ಆಕರ್ಷಿತರಾದರು. ತಂದೆಯವರಲ್ಲಿ ಆಸೆಯನ್ನು ನಿವೇದಿಸಿಕೊಂಡಾಗ, ಅವರೇ ನಾಟ್ಯವನ್ನು ಕಲಿಸಿ, ದಿ| ಕಲ್ಲಾಡಿ ವಿಠಲ ಶೆಟ್ಟಿಯವರಲ್ಲಿ ಮಾತಾಡಿ 1964ರಲ್ಲಿ ಕರ್ನಾಟಕ ಮೇಳಕ್ಕೆ ಸೇರಿಸಿದರು. ಅನಂತರದ್ದು ಈಗ ಚರಿತ್ರೆ. ಕರ್ನಾಟಕ ಮೇಳ ನಿಲ್ಲುವವರೆಗೂ ಆ ಮೇಳದಲ್ಲಿ 34 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದರು. ಬೋಳಾರ್, ರಾಮದಾಸ ಸಾಮಗ, ಕೋಳ್ಯೂರು, ಅಳಕೆ, ಮಿಜಾರು ಮೊದಲಾದ ಅತಿರಥರ ಗರಡಿಯಲ್ಲಿ ಪಳಗಿದರು.
ಮೇಳದಲ್ಲಿ ಯಾರೇ ರಜೆ ಮಾಡಿದರೂ ಆ ಪಾತ್ರವನ್ನು ನಿರ್ವಹಿಸುತ್ತಿದ್ದವರು ರಘು ಶೆಟ್ಟರು. ಮಂಡೆಚ್ಚರ ಮೊದಲ ಆಯ್ಕೆ ರಘು ಶೆಟ್ಟರಾಗಿದ್ದರು. ನಾಯಕ, ಪ್ರತಿ ನಾಯಕ, ಸ್ತ್ರೀ, ಹಾಸ್ಯ ಎಲ್ಲ ಪಾತ್ರಗಳಲ್ಲೂ ಸೈ ಅನಿಸಿಕೊಂಡಿದ್ದರು. ಕರ್ನಾಟಕ ಮೇಳ ನಿಂತ ಮೇಲೆ ಸುಂಕದಕಟ್ಟೆ ಮೇಳದಲ್ಲಿ 14 ವರ್ಷ ವ್ಯವಸಾಯ ಮಾಡಿ, 6 ವರ್ಷಗಳಿಂದ ಕಟೀಲು ಮೇಳದಲ್ಲಿ ಕಲಾವಿದನಾಗಿ ದುಡಿಯುವುದರೊಂದಿಗೆ 1ನೇ ಮೇಳದ ವ್ಯವಸ್ಥಾಪಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಡಿ. 15ರಂದು ಕಟೀಲಿನ ಯಕ್ಷಗಾನ ಕೇಂದ್ರದ ಸಹಯೊಗದಲ್ಲಿ ಕಟೀಲಿನಲ್ಲಿ ನಡೆಯಲಿದೆ.
ಡಾ| ಶ್ರುತಕೀರ್ತಿ ರಾಜ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.