ರಂಜಿಸಿದ ನವರಸಗಳ ರಾಜಾ ರುದ್ರಕೋಪ
ಮಹಾಗಣಪತಿ ಪ್ರವಾಸಿ ಯಕ್ಷಗಾನ ಮಂಡಳಿ ಪ್ರಸ್ತುತಿ
Team Udayavani, Oct 25, 2019, 4:05 AM IST
ಸ್ಪುರದ್ರೂಪಿ ರಾಜಾ ರುದ್ರಕೋಪ ಹಾಗೂ ಗಂಧರ್ವ ಕನ್ಯೆ ಚಿತ್ರಾಕ್ಷಿಯ ನಡುವಿನ ಪರಸ್ಪರ ಆಕರ್ಷಣೆ-ಪ್ರೇಮಾಂಕುರ, ಪ್ರಣಯ ಸಲ್ಲಾಪಗಳು, ಭಾಗವತ ರಾಘವೇಂದ್ರ ಮಯ್ಯರ ಮಧುರ ಕಂಠದಲ್ಲಿ ಮೂಡಿ ಬಂದ ನವಿಲು ಕುಣಿಯುತಿದೆ… ಹಾಡು ಪ್ರಸಂಗವನ್ನು ಚರಮೋತ್ಕರ್ಷಕ್ಕೆ ತಲುಪಿಸಿತು.
ಶಾರದೋತ್ಸವದ ಅಂಗವಾಗಿ ಬೈಂದೂರಿನ ಶಾರದಾ ವೇದಿಕೆಯಲ್ಲಿ ಮಹಾಗಣಪತಿ ಪ್ರವಾಸಿ ಯಕ್ಷಗಾನ ಮಂಡಳಿ ಹಾಲಾಡಿ ಇವರು ಪ್ರಸ್ತುತ ಪಡಿಸಿದ ರಾಜಾ ರುದ್ರಕೋಪ ಯಕ್ಷಗಾನ ಕಲಾಭಿಮಾನಿಗಳ ಮನಗೆದ್ದಿತು. ತನ್ನ ತಂದೆಯ ವಧೆಗೆ ಕಾರಣರಾದವರ ಕುರಿತು ತಿಳಿದುಕೊಳ್ಳಲು ಕಾತರನಾಗಿದ್ದ ರಕ್ತಜಂಘಾಸುರನಿಗೆ ಲೋಕ ಸಂಚಾರದಲ್ಲಿದ್ದ ನಾರದ ಮುನಿಗಳಿಂದ ಮಾದ್ರ ದೇಶದ ಭದ್ರಸೇನ ಮತ್ತು ಅವನ ಮಕ್ಕಳಾದ ಜಯಸೇನ-ಚಂದ್ರಸೇನರೇ ಕಾರಣ ಎನ್ನುವುದು ತಿಳಿದಾಗ ಆತ ಮಾದ್ರ ದೇಶದ ಮೇಲೆ ಆಕ್ರಮಣ ಮಾಡಿ ಜಯಸೇನ-ಚಂದ್ರಸೇನರನ್ನು ವಧಿಸುತ್ತಾನೆ. ರಕ್ತಜಂಘನಿಂದ ತಪ್ಪಿಸಿಕೊಂಡ ಜಯಸೇನನ ಪತ್ನಿ ಸತ್ಯಶೀಲೆ ಕಾಶಿ ಕ್ಷೇತ್ರದಲ್ಲಿ ಗಂಗಾಮಾತೆಯಿಂದ ಅಭಯ ಪಡೆದು ಸಾಕ್ಷಾತ್ ವೇದವ್ಯಾಸರಿಂದ ವಿಶಿಷ್ಟ ಶಕ್ತಿಯುಳ್ಳ ಪಿಂಡವನ್ನು ಪಡೆಯುತ್ತಾಳೆ. ಒಂಬತ್ತು ತಿಂಗಳು ಒಂಭತ್ತು ದಿನ ಪಿಂಡವನ್ನು ಕಾಪಾಡಿಕೊಂಡರೆ ಜನಿಸುವ ಪುತ್ರ ರಕ್ತಜಂಘನಿಗೆ ಮೃತ್ಯುರೂಪಿಯಾಗುವನೆನ್ನುವ ವರ ಪಡೆಯುತ್ತಾಳೆ. ದೈತ್ಯ ರಕ್ತಜಂಘನ ಪಾತ್ರದಲ್ಲಿ ಕೋಡಿ ವಿಶ್ವನಾಥ ಗಾಣಿಗರ ಹಾವ-ಭಾವ, ಅಬ್ಬರದ ದನಿ ಮುದ ನೀಡಿತು.
ಸತ್ಯಶೀಲೆಯ ಬಳಿ ಇರುವ ಪಿಂಡದಿಂದ ತನ್ನ ಪ್ರಾಣಕ್ಕೆ ಕೇಡು ಎನ್ನುವುದನ್ನು ನಾರದರಿಂದ ತಿಳಿದ ರಕ್ತಜಂಘ ಪಿಂಡವನ್ನು ವಶಪಡಿಸಿಕೊಳ್ಳಲು ತನ್ನ ಸಹೋದರಿ ರಕ್ತಕೇಶಿಯೊಂದಿಗೆ ತೆರಳುತ್ತಾನೆ. ಭಯಭೀತಳಾದ ಸತ್ಯಶೀಲೆ ಪಿಂಡವನ್ನು ರಕ್ತಜಂಘನಿಗೆ ನೀಡದೇ ಎಸೆಯುತ್ತಾಳೆ. ಪಿಂಡದಿಂದ ಜನಿಸಿದ ರಾಜಾ ರುದ್ರಕೋಪ ರಕ್ತಜಂಘನೊಂದಿಗೆ ಯುದ್ದ ಮಾಡಿ ಆತನನ್ನು ವಧಿಸುತ್ತಾನೆ. ರಕ್ತಜಂಘನ ಸಹೋದರಿ ರಕ್ತಕೇಶಿಯನ್ನು ತಾನು ಕರೆದಾಗ ಬರಬೇಕೆನ್ನುವ ಶರತ್ತಿನೊಂದಿಗೆ ಬಿಟ್ಟುಬಿಡುತ್ತಾನೆ. ಸು#ರದ್ರೂಪಿ ರಾಜಾ ರುದ್ರಕೋಪ ಹಾಗೂ ಗಂಧರ್ವ ಕನ್ಯೆ ಚಿತ್ರಾಕ್ಷಿಯ (ಮಾಧವ ನಾಗೂರು) ನಡುವಿನ ಪರಸ್ಪರ ಆಕರ್ಷಣೆ-ಪ್ರೇಮಾಂಕುರ, ಪ್ರಣಯ ಸಲ್ಲಾಪಗಳು, ಭಾಗವತ ರಾಘವೇಂದ್ರ ಮಯ್ಯರ ಮಧುರ ಕಂಠದಲ್ಲಿ ಮೂಡಿ ಬಂದ ನವಿಲು ಕುಣಿಯುತಿದೆ… ಹಾಡು ಪ್ರಸಂಗವನ್ನು ಚರಮೋತ್ಕರ್ಷಕ್ಕೆ ತಲುಪಿಸಿತು. ರಾಜಾ ರುದ್ರಕೋಪನಾಗಿ ಹೆನ್ನಾಬೈಲು ವಿಶ್ವನಾಥ ಪೂಜಾರಿಯವರ ಭಾವ-ಭಂಗಿ-ಕುಣಿತ ಗಮನ ಸೆಳೆಯಿತು.
ಪ್ರಣಯೋನ್ಮಾದದ ವಿರಹ ವೇದನೆಯಿಂದ ಚಡಪಡಿಸುತ್ತಿದ್ದ ರಾಜಾ ರುದ್ರಕೋಪ ತನ್ನ ಮನವನಾವರಿಸಿದ ಅಪರಿಚಿತ ಕನ್ಯೆಯ ಪೂರ್ವಾಪರಗಳನ್ನು ತಿಳಿದು ಆಕೆಯನ್ನು ಮೂರು ದಿನಗಳೊಳಗೆ ಕರೆತರುವಂತೆ ರಕ್ತಕೇಶಿಗೆ ಆಜ್ಞಾಪಿಸುತ್ತಾನೆ. ಗಂಧರ್ವ ಕನ್ಯೆ ಚಿತ್ರಾಕ್ಷಿಯನ್ನು ಕರೆತರಲು ತೆರಳುವ ರಕ್ತಕೇಶಿ ಅಜ್ಜಿಯ (ಕ್ಯಾದಿಗೆ ಮಹಾಬಲೇಶ್ವರ ಭಟ…) ರೂಪದಲ್ಲಿ ತೆರಳುತ್ತಾಳೆ. ತಮ್ಮ ಭಾವಾಭಿನಯಗಳಿಂದ ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಿಸಿದ ಅಜ್ಜಿ ಹಾಸ್ಯ ರಸದ ಹೊನಲನ್ನೇ ಹರಿಸಿದಳು. ಅಜ್ಜಿ, ಚಿತ್ರಾಕ್ಷಿ ಹಾಗೂ ಸಖೀಯರ ಸಂವಾದಗಳು ಅಲ್ಲಲ್ಲಿ ದ್ವಂದ್ವಾರ್ಥದ ಮಾತುಗಳಿಗೆ ಹೊರಳಿದರೂ ಅತಿರೇಕವೆನಿಸಲಿಲ್ಲ. ಚಿತ್ರಾಕ್ಷಿಯ ರೂಪ ಲಾವಣ್ಯ ಭರಿತ ನಡೆನುಡಿ ರಂಜಿಸಿತು.
ಪೂರ್ವಾರ್ಧದಲ್ಲಿ ಭಾಗವತಿಕೆ ನಡೆಸಿಕೊಟ್ಟ ಅನುಭವಿ ಸದಾಶಿವ ಅಮೀನ್ ಹಾಗೂ ನಂತರದಲ್ಲಿ ಬಂದ ರಾಘವೇಂದ್ರ ಮಯ್ಯರ ಸಮಬಲ-ಸಮತೂಕದ ಭಾಗವತಿಕೆ ಯಕ್ಷರಸಿಕರ ಮನತಣಿಸಿತು. ಪ್ರದೀಪ ನಾಯ್ಕರ ಮದ್ದಳೆ ಹಾಗೂ ರಮೇಶ ಭಂಡಾರಿಯವರ ಚಂಡೆ ಪ್ರಸಂಗಕ್ಕೆ ಕಳೆ ಕಟ್ಟಿತು. ಕಮಲಶಿಲೆ, ಸೌಕೂರು, ಮಂದಾರ್ತಿ, ಸಾಲಿಗ್ರಾಮ ಮೊದಲಾದ ಮೇಳಗಳ ಅನುಭವಿ ಕಲಾವಿದರ ಕೂಡುವಿಕೆಯ ಪ್ರವಾಸಿ ತಂಡ ಉತ್ತಮ ಸಾಮರಸ್ಯದೊಂದಿಗೆ ಪ್ರದರ್ಶಿಸಿದ ಪ್ರಸಂಗ ಆಯೋಜಕರ ಮತ್ತು ಯಕ್ಷಪ್ರೇಮಿಗಳ ಭರಪೂರ ಪ್ರಶಂಸೆಗೆ ಪಾತ್ರವಾಯಿತು.
ಬೈಂದೂರು ಚಂದ್ರಶೇಖರ ನಾವಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.