ಸತ್ಯದ ಸಾಕ್ಷಾತ್ಕಾರ ನೀಡಿದ ಸತ್ಯಾಂತರಂಗ
Team Udayavani, Dec 13, 2019, 4:39 AM IST
ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ , ಹನುಮಗಿರಿಯವರ ಈ ವರ್ಷದ ತಿರುಗಾಟದಲ್ಲಿ ಪ್ರದರ್ಶನಗೊಳ್ಳುತ್ತಿರುವ ನೂತನ ಪೌರಾಣಿಕ ಪ್ರಸಂಗ ಸತ್ಯಾಂತರಂಗ ಗಮನ ಸೆಳೆಯುತ್ತಿದೆ . ಘಟಾನುಘಟಿ ಕಲಾವಿದರ ಪ್ರತಿಭಾ ಸಾಮರ್ಥ್ಯ ಹಾಗೂ ಗಟ್ಟಿಯಾದ ಕಥಾ ಹಂದರ ಪ್ರಸಂಗದ ಯಶಸ್ಸಿಗೆ ಕಾರಣ ಎನ್ನಬಹುದು .
ಸುಬಲ ಎಂಬ ದುಷ್ಟನು ಕಾಶೀರಾಜ್ಯಕ್ಕೆ ದಂಡೆತ್ತಿ ಬಂದು ಅಲ್ಲಿಯ ಅರಸ ಇಂದ್ರದ್ಯುಮ್ನನನ್ನು ಸೋಲಿಸಿ ಸೆರೆಯಲ್ಲಿಡುತ್ತಾನೆ . ಆತನ ಮಗಳಾದ ಚಂದ್ರಮತಿಯನ್ನು ಅಟ್ಟಿಸಿಕೊಂಡು ಹೋದಾಗ , ಬೇಟೆಗೆ ಬಂದ ಹರಿಶ್ಚಂದ್ರನ ಪರಿಚಯವಾಗಿ, ಹರಿಶ್ಚಂದ್ರನು ಮದುವೆಯ ಪ್ರಸ್ತಾಪ ಇಡುತ್ತಾನೆ. ಚಂದ್ರಮತಿಯು ತಂದೆಯನ್ನು ಸೆರೆಯಿಂದ ಬಿಡಿಸಿ , ತಂದೆ ಒಪ್ಪಿದರೆ ವಿವಾಹವಾಗುತ್ತೇನೆ ಎನ್ನುತ್ತಾಳೆ . ಸುಬಲನನ್ನು ಕೊಂದು ಹರಿಶ್ಚಂದ್ರನು ಚಂದ್ರಮತಿಯನ್ನು ವರಿಸುತ್ತಾನೆ . ದಿಗ್ವಿಜಯಕ್ಕೆ ಹೋದ ಹರಿಶ್ಚಂದ್ರನು
ಸಪ್ತ ದ್ವೀಪ ಸಹಿತ ಸಮಸ್ತ ಭೂಮಂಡಲಕ್ಕೆ ಚಕ್ರವರ್ತಿಯಾಗುತ್ತಾನೆ. ಪುತ್ರ ಸಂತಾನಕ್ಕಾಗಿ ಯಜ್ಞ ಮಾಡಿದ ಹರಿಶ್ಚಂದ್ರನು ತನಗೆ ಪುತ್ರ ಸಂತಾನವಾದರೆ ಹುಟ್ಟುವ ಮಗನನ್ನೇ ವರುಣನಿಗೆ ಬಲಿ ಕೊಡುತ್ತೇನೆ ಎಂದು ಹರಕೆ ಹೇಳಿ ಪುತ್ರ ಸಂತಾನ ಪಡೆಯುತ್ತಾನೆ .ಏಕ ಮಾತ್ರ ಪುತ್ರನನ್ನು ಬಲಿ ಕೊಡಲು ಮನಸ್ಸಿಲ್ಲದ ಹರಿಶ್ಚಂದ್ರನು , ವರುಣನು ನೆನಪಿಸಿದಾಗಲೂ ಏನೇನೋ ನೆಪ ಹೇಳಿ ಮುಂದೂಡಿದಾಗ ವರುಣ ದೇವನ ಕೋಪದಿಂದ ಭೀಕರ ಜಲೋದರ ರೋಗದಿಂದ ಬಳಲುತ್ತಾನೆ .
ವಸಿಷ್ಠರ ಸೂಚನೆಯಂತೆ ಪುತ್ರನಾದ ರೋಹಿತಾಶ್ವನನ್ನು ವರುಣನಿಗೆ ಬಲಿ ಕೊಡಲು ನಿರ್ಧರಿಸಿದಾಗ ಈ ವಿಷಯ ಅರಿತ ಬಾಲಕ ರೋಹಿತಾಶ್ವನು ತಪ್ಪಿಸಿಕೊಳ್ಳುತ್ತಾನೆ . ದಾರಿಯಲ್ಲಿ ಶುನಶ್ಯೆಪ ಎಂಬ ಬ್ರಾಹ್ಮಣ ಹುಡುಗನ ಪರಿಚಯವಾಗಿ ಆತನ ತಂದೆಯನ್ನು ಭೇಟಿಯಾಗುತ್ತಾನೆ . ಧನದಾಹಿಯಾದ ಶುನಶ್ಯೆಪನ ತಂದೆಯು ತನಗೆ ಬೇಕಾದಷ್ಟು ಧನ ಕೊಟ್ಟರೆ ರೋಹಿತಾಶ್ವನ ಬದಲು ತನ್ನ ಮಗನಾದ ಶುನಶ್ಯೆಪನನ್ನೇ ಬಲಿ ಕೊಡಲು ಒಪ್ಪುತ್ತಾನೆ . ಶುನಶ್ಯೆಪನನ್ನು ಯೂಪಸ್ಥಂಭಕ್ಕೆ ಕಟ್ಟಿ ಬಲಿ ಕೊಡುವಷ್ಟರಲ್ಲಿ ವಿಶ್ವಾಮಿತ್ರರು ಪ್ರವೇಶಿಸಿ, ಬಲಿ ಕಾರ್ಯವನ್ನು ತಡೆದು ಶುನಶ್ಯೆಪನಿಗೆ ವರುಣ ಮಂತ್ರವನ್ನು ಬೋಧಿಸುತ್ತಾರೆ . ಸಂಪ್ರೀತನಾದ ವರುಣನು , ಹರಿಶ್ಚಂದ್ರನ ಹರಕೆ ತೀರಿತು , ಶುನಶ್ಯೆಪನ ಬಲಿ ಬೇಡ ಎನ್ನುತ್ತಾನೆ . ಸ್ವರ್ಗ ಲೋಕದಲ್ಲಿ ದೇವೇಂದ್ರನ ಪ್ರಶ್ನೆಗೆ ಹರಿಶ್ಚಂದ್ರನೇ ಸರ್ವಶ್ರೇಷ್ಠ ಅರಸ ಎಂಬ ವಸಿಷ್ಠರ ಮಾತಿಗೆ ಕೆರಳಿದ ವಿಶ್ವಾಮಿತ್ರನು ಹರಿಶ್ಚಂದ್ರನ ಸತ್ಯಪರೀಕ್ಷೆ ಮಾಡಲು ಹೊರಟು ಅದರಲ್ಲಿ ಹರಿಶ್ಚಂದ್ರನು ಸತ್ಯಕ್ಕಾಗಿ ದೇಶ ಬಿಟ್ಟು , ಹೆಂಡತಿ, ಮಗ ಹಾಗೂ ಸ್ವತಃ ತನ್ನನ್ನೇ ಮಾರಿ ಸತ್ಯದ ಹಾದಿಯಲ್ಲೇ ನಡೆದು ಕೊನೆಗೆ ವಿಜೇತನಾಗಿ ಸತ್ಯ ಹರಿಶ್ಚಂದ್ರ ಎನಿಸಿಕೊಳ್ಳುತ್ತಾನೆ .
ಇವಿಷ್ಟು ಘಟನಾವಳಿಗಳಿಂದ ಸತ್ಯಾಂತರಂಗ ಪ್ರೇಕ್ಷಕರ ಮನ ಸೆಳೆಯುತ್ತದೆ .ಕಾಶೀರಾಜನಾಗಿ ಜಯಾನಂದ ಸಂಪಾಜೆಯವರ ಪೀಠಿಕೆಯು ಪ್ರಸಂಗ ಚೆನ್ನಾಗಿ ಸಾಗಬಹುದು ಎಂಬ ಮುನ್ಸೂಚನೆ ನೀಡಿತು . ಸುಬಲನಾಗಿ ಹಾಗೂ ವಸಿಷ್ಠನಾಗಿ ಶಿವರಾಮ ಜೋಗಿಯವರದ್ದು ಉತ್ತಮ ನಿರ್ವಹಣೆ . ಪೂರ್ವಾರ್ಧದ ಹರಿಶ್ಚಂದ್ರ ಹಾಗೂ ಚಂದ್ರಮತಿಯಾಗಿ ದಿವಾಕರ ರೈ ಸಂಪಾಜೆ – ಸಂತೋಷ್ ಹಿಲಿಯಾಣ ಮಿಂಚಿದರು . ಮಧ್ಯ ಭಾಗದ ಹರಿಶ್ಚಂದ್ರನಾಗಿ ಪೆರ್ಲ ಜಗನ್ನಾಥ ಶೆಟ್ಟರು ಚೆನ್ನಾಗಿ ನಿರ್ವಹಿಸಿದರು. ಹರಿಶ್ಚಂದ್ರನ ಸಖನಾಗಿ ಬಂಟ್ವಾಳ ಜಯರಾಮ ಆಚಾರ್ಯರು ಪರಂಪರೆಯ ಹಾಸ್ಯದ ಮೂಲಕ ರಂಜಿಸಿದರು . ರೋಹಿತಾಶ್ವನಾಗಿ ಅಕ್ಷಯ ಭಟ್ , ಶುನಶ್ಯೆಪನಾಗಿ ಶಿವರಾಜರು ಭಾವನಾತ್ಮಕವಾಗಿ ಅಭಿನಯಿಸಿದರು . ಧನಪಿಶಾಚಿ ಬ್ರಾಹ್ಮಣನಾಗಿ ಪ್ರಜ್ವಲರು ಹಾಸ್ಯದ ಹೊನಲನ್ನೇ ಹರಿಸಿದರು . ವಿಶ್ವಾಮಿತ್ರನಾಗಿ ಜಯಪ್ರಕಾಶ್ ಶೆಟ್ಟರ ನಿರ್ವಹಣೆ ಅತ್ಯುತ್ತಮವಾಗಿತ್ತು . ವರುಣ ಹಾಗೂ ಈಶ್ವರನಾಗಿ ಪ್ರಸಾದ್ ಸವಣೂರು ಮಿಂಚಿದರು .
ಪುಲೋಮಾಸುರನಾಗಿ ಸದಾಶಿವ ಶೆಟ್ಟಿಗಾರರು ಪರಂಪರೆಯ ಬಣ್ಣದ ವೇಷದಲ್ಲಿ , ಆತನ ತಮ್ಮ
ವಿಲೋಮನಾಗಿ ಸದಾಶಿವ ಕುಲಾಲರದ್ದು ಉತ್ತಮ ನಿರ್ವಹಣೆ . ವಿಶ್ವಾಮಿತ್ರನ ಸೃಷ್ಟಿ ಅನಾಮಿಕೆಯಾಗಿ
ರಕ್ಷಿತ್ ಪಡ್ರೆಯವರ ನಿರ್ವಹಣೆ ಶ್ರೇಷ್ಠ ಮಟ್ಟದಲ್ಲಿತ್ತು . ಹರಿಶ್ಚಂದ್ರನಲ್ಲಿ ನಾಟ್ಯ ಮಾಡುವ ಸನ್ನಿವೇಶದಲ್ಲಿ ಉತ್ತಮ ನಾಟ್ಯ ಪ್ರದರ್ಶಿಸಿದರು . ಕೊನೆಯ ಭಾಗದ ಹರಿಶ್ಚಂದ್ರನಾಗಿ ವಾಸುದೇವ ರಂಗಾ ಭಟ್ಟರ ಪ್ರಸ್ತುತಿ ಮೆಚ್ಚುಗೆಯಾಯಿತು. ಸತ್ಯಕ್ಕೇ ಬದ್ಧನಾಗಿ ಸರ್ವವನ್ನೂ ಕಳೆದುಕೊಂಡರೂ , ತಾನು ತೃಪ್ತಿ ಎಂಬುದನ್ನು ನಿರೂಪಿಸಿದರು. ಉತ್ತರಾರ್ಧದ ಚಂದ್ರಮತಿಯಾಗಿ ಹಿರಿಯ ಕಲಾವಿದ ಎಂ.ಕೆ.ರಮೇಶಾಚಾರ್ಯರು ಚೆನ್ನಾಗಿ ನಿರ್ವಹಿಸಿದರು . ರೋಹಿತಾಶ್ವನಾಗಿ ಅಕ್ಷಯ ಭಟ್ ರವರ ಪಾತ್ರವೂ ಇದಕ್ಕೆ ಪೂರಕವಾಯಿತು . ನಕ್ಷತ್ರಿಕನಾಗಿ ಸೀತಾರಾಮ ಕುಮಾರ್ ರವರು ನಕ್ಷತ್ರಿಕನ ಪೀಡೆ ಎಂದರೆ ಏನು ಎಂಬುದನ್ನು ಮನದಟ್ಟು ಮಾಡುವಲ್ಲಿ ಸಫಲರಾದರು . ಹರಿಶ್ಚಂದ್ರನು ಋಣಮುಕ್ತನಾಗುವ ಸಂದರ್ಭದಲ್ಲಿ ಸೀತಾರಾಮರು ಭಾವನಾತ್ಮಕವಾದ ಸಂಭಾಷಣೆಯ ಮೂಲಕ ಮನ ಗೆದ್ದರು . ವೀರಬಾಹುವಾಗಿ ಶಬರೀಶ ಮಾನ್ಯರು ಸಭೆಯಿಂದಲೇ ಪ್ರವೇಶ ಕೊಟ್ಟು ಮಿಂಚಿದರು. ದೇವೇಂದ್ರನಾಗಿ ಜಯಕೀರ್ತಿಗೆ ಅವಕಾಶ ಕಡಿಮೆಯಾದರೂ ಚೊಕ್ಕವಾಗಿ ನಿರ್ವಹಿಸಿದರು . ಭಾಗವತರಾಗಿ ರವಿಚಂದ್ರ ಕನ್ನಡಿಕಟ್ಟೆಯವರು ಸುಶ್ರಾವ್ಯವಾಗಿ ಹಾಡಿದ್ದಾರೆ . ಕೆಲವು ಕರುಣಾರಸಗಳ ಪದ್ಯಗಳಂತೂ, ಪ್ರೇಕ್ಷಕರನ್ನು ಪ್ರಸಂಗದಲ್ಲೇ ಕೊಂಡೊಯ್ಯಲು ಸಹಕಾರಿ ಆಯಿತು.
ಎರಡನೇ ಭಾಗವತರಾಗಿ ಹೊಸ ಸೇರ್ಪಡೆಯಾದ ಚಿನ್ಮಯ ಕಲ್ಲಡ್ಕರ ಪ್ರಸ್ತುತಿ ಉತ್ತಮವಾಗಿತ್ತು . ಚೆಂಡೆ – ಮದ್ದಲೆ ವಾದನದಲ್ಲಿ ಪದ್ಯಾಣ ಶಂಕರನಾರಾಯಣ ಭಟ್ , ಪದ್ಯಾಣ ಜಯರಾಮ ಭಟ್ , ದೇಲಂತಮಜಲು ಸುಬ್ರಹ್ಮಣ್ಯ ಭಟ್ , ಚೈತನ್ಯಕೃಷ್ಣ ಪದ್ಯಾಣ ಹಾಗೂ ಶ್ರೀಧರ ವಿಟ್ಲ ,ಚಕ್ರತಾಳದಲ್ಲಿ ವಸಂತ ವಾಮದಪದವುರವರು ಹಿಮ್ಮೇಳ ವೈಭವಕ್ಕೆ ಕಾರಣರಾದರು .
ಎಂ.ಶಾಂತರಾಮ ಕುಡ್ವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ
ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ
Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್ ಜೈಕಾರ !
Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ
Idu Entha Lokavayya: “ಕೋಸ್ಟಲ್” ನಿಂದ ಕರುನಾಡು!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.