ಸತ್ಯ ಹರಿಶ್ಚಂದ್ರ – ಶೂರ್ಪನಖಾ ವಿವಾಹ ಮಕರಾಕ್ಷಕಾಳಗ
Team Udayavani, Sep 21, 2018, 6:00 AM IST
ಬ್ರಾಮರೀ ಯಕ್ಷಮಿತ್ರರು ( ರಿ. ) ಮಂಗಳೂರು ಇದರ ತೃತೀಯ ವಾರ್ಷಿಕೋತ್ಸವದ ಅಂಗವಾಗಿ ಇತ್ತೀಚಿಗೆ ಮಂಗಳೂರಿನ ಪುರಭವನದಲ್ಲಿ ಜರಗಿದ ಯಕ್ಷಗಾನ ಆಖ್ಯಾನಗಳು ಹಲವು ವರ್ಷಗಳ ತನಕ ನೆನಪಲ್ಲುಳಿಯುವ ಉತ್ತಮ ಪ್ರಸ್ತುತಿಯ ಪ್ರದರ್ಶನ . ಸುಪ್ರಸಿದ್ಧ ಕಲಾವಿದರ ಸಂಯೋಜನೆಯೂ ಇದಕ್ಕೆ ಪೂರಕವಾಯಿತು .
ಪ್ರಥಮ ಪ್ರಸಂಗ ಸತ್ಯ ಹರಿಶ್ಚಂದ್ರ ಚೆಂಡೆಯ ಝೇಂಕಾರಕ್ಕೆ ಅವಕಾಶವಿಲ್ಲದ , ಕರುಣರಸಕ್ಕೇ ಪ್ರಾಧಾನ್ಯ ಹೊಂದಿರುವ ಪ್ರಸಂಗ . ಹರಿಶ್ಚಂದ್ರನಾಗಿ ಜಯಪ್ರಕಾಶ್ ಶೆಟ್ಟಿ ಪೆರ್ಮುದೆಯವರು ಭಾವ, ರಸ, ಅಭಿನಯ ಹಾಗೂ ಸಂಭಾಷಣೆಯ ಸಮಪಾಕದಲ್ಲಿ ಪೌರಾಣಿಕ ಲೋಕವನ್ನೇ ಸೃಷ್ಟಿಸಿದರು. ಹೆಂಡತಿ ಮಕ್ಕಳನ್ನು ಮಾರಾಟ ಮಾಡುವ ಹರಿಶ್ಚಂದ್ರನ ಸತ್ಯಬದ್ಧತೆ , ತನ್ನನ್ನೇ ಮಾರಾಟ ಮಾಡುವ ವಚನಬದ್ಧತೆ ಹಾಗೂ ತನ್ನ ಸ್ವಂತ ಮಗನ ಹೆಣವನ್ನೂ ಸುಡಲಾಗದ ಕರ್ತವ್ಯಬದ್ಧತೆಯನ್ನು ಸಮುಚಿತವಾಗಿ ಪ್ರಸ್ತುತಗೊಳಿಸಿದರು . ಚಂದ್ರಮತಿಯಾಗಿ ಶಶಿಕಾಂತ ಶೆಟ್ಟರದು ಭಾವಪೂರ್ಣ ಅಭಿನಯ . ಹೆಂಡತಿ ಎಂಬ ಮಮಕಾರಕ್ಕೊಳಗಾಗಿ ಸತ್ಯದ ದಾರಿ ಬಿಡಬೇಡಿ ಎಂದು ಪತಿಗೇ ಧರ್ಮಸೂಕ್ಷ್ಮ ನೆನಪಿಸಿ ಪತಿಗೆ ಸಹಕಾರಿಯಾಗಿರುವುದೇ ಸತೀಧರ್ಮ ಎಂಬುದನ್ನು ಸಮರ್ಥಿಸಿಕೊಂಡರು . ರೋಹಿತಾಶ್ವನಾಗಿ ಮುಚ್ಚಾರು ಲೋಕೇಶರದ್ದು ಮನ ಮಿಡಿಯುವ ಪಾತ್ರ ನಿರ್ವಹಣೆ . ನಕ್ಷತ್ರಿಕನ ಪಾತ್ರದಲ್ಲಿ ಸೀತಾರಾಮ ಕುಮಾರ್ ಕಟೀಲುರವರು ಪಾತ್ರದ ಚಿತ್ರಣ ಚೆನ್ನಾಗಿ ಅಥೆìçಸಿಕೊಂಡಿರುವುದು ಕಂಡು ಬಂತು . ಹಾಸ್ಯದ ಸಿಂಚನವಿದ್ದರೂ ಪೀಡಿಸುವ ನಕ್ಷತ್ರಿಕನಿಗೇ ಒತ್ತುಕೊಟ್ಟು ಪಾತ್ರೋಚಿತವಾದ ಕ್ರೌರ್ಯವನ್ನು ಬಿಂಬಿಸಿದರು. ವಿಶ್ವಾಮಿತ್ರನಾಗಿ ಅನುಭವೀ ಕಲಾವಿದರಾದ ರಾಧಾಕೃಷ್ಣ ನಾವುಡ , ಹರಿಶ್ಚಂದ್ರನ ಸಖನಾಗಿ ದಿನೇಶ ಕೋಡಪದವು ಶುದ್ಧ ಯಕ್ಷಗಾನೀಯ ಹಾಸ್ಯದ ಮೂಲಕ ರಂಜಿಸಿದರು . ವಿಶ್ವಾಮಿತ್ರನ ಸೃಷ್ಟಿಯ ಮಾತಂಗ ಕನ್ಯೆಯರಾಗಿ ಅಕ್ಷಯ ಮಾರ್ನಾಡು ಹಾಗೂ ರಕ್ಷಿತ್ ಪಡ್ರೆಯವರ ನಾಟ್ಯ , ಅಭಿನಯ , ಮಾತುಗಾರಿಕೆಯಲ್ಲಿ ಪಾತ್ರೋಚಿತವಾದ ಸ್ಪರ್ಧೆ ಕಂಡು ಬಂತು . ವೇಷಭೂಷಣದಲ್ಲಿ ಸಹಜತೆ ಇದ್ದರೂ , ವಿಶ್ವಾಮಿತ್ರನ ಕೃತಕ ಸೃಷ್ಟಿಯ ಮಾತಂಗ ಕನ್ಯೆಯರಾದ ಕಾರಣ , ಮುಖವರ್ಣಿಕೆಯು ಹೊಗೆಕಪ್ಪು ವರ್ಣವಾಗಿದ್ದರೆ ಚೆನ್ನಾಗಿತ್ತು .
ಕೌಕಭಟ್ಟನಾಗಿ ಅರುಣ ಜಾರ್ಕಳ ,ಪತ್ನಿಯಾಗಿ ಅಂಬಾಪ್ರಸಾದ್ ಪಾತಾಳ , ವೀರಬಾಹುವಾಗಿ ಉಬರಡ್ಕ ಉಮೇಶ ಶೆಟ್ಟರ ನಿರ್ವಹಣೆಯು ಪ್ರಸಂಗದ ಒಟ್ಟಂದದ ಪ್ರಸ್ತುತಿಗೆ ಪೂರಕವಾಯಿತು . ಕೊನೆಯಲ್ಲಿ ಈಶ್ವರನಾಗಿ ವಾದಿರಾಜ ಕಲ್ಲೂರಾಯರು ಹರಿಶ್ಚಂದ್ರನ ಸತ್ಯದ ಬದ್ಧತೆಯನ್ನು ವಿವರಿಸಿ ,ಪ್ರಸಂಗವನ್ನು ಉಪಸಂಹಾರಗೊಳಿಸಿದರು . ಪ್ರಪುಲ್ಲಚಂದ್ರ ನೆಲ್ಯಾಡಿ ಮತ್ತು ಪಟ್ಲ ಸತೀಶ ಶೆಟ್ಟರ ಸುಶ್ರಾವ್ಯವಾದ ಭಾಗವತಿಕೆ ಮನ ಸೆಳೆಯಿತು ಚೆಂಡೆ- ಮದ್ದಲೆ ವಾದನದಲ್ಲಿ ಗುರುಪ್ರಸಾದ್ ಬೊಳಿಂಜಡ್ಕ , ಚೈತನ್ಯಕೃಷ್ಣ ಪದ್ಯಾಣ ಗಮನ ಸೆಳೆದರು .
ಎರಡನೇ ಪ್ರಸಂಗ ಶೂರ್ಪನಖಾ ವಿವಾಹ ಅಪರೂಪದ ಪ್ರಸಂಗ . ಪ್ರೇಕ್ಷಕರ ಅತಿ ನಿರೀಕ್ಷೆಯ ವಿದ್ಯುಜಿಹ್ವನ ಪಾತ್ರದಲ್ಲಿ ಯುವ ಕಲಾವಿದ ಪ್ರಜ್ವಲ್ ಕುಮಾರ್ ಗುರುವಾಯನಕೆರೆ ಅಬ್ಬರದ ಪ್ರವೇಶ ಕೊಟ್ಟು ಹಾಸ್ಯಮಿಶ್ರಿತ ಸಂಭಾಷಣೆಯ ಮೂಲಕ ರಂಜಿಸಿದರು . ಪ್ರಹಸ್ತನಾಗಿ ಉಜ್ರೆ ನಾರಾಯಣ ತಿಳಿ ಹಾಸ್ಯವನ್ನು ಬಳಸಿ , ಪಾತ್ರದ ಘನತೆಯನ್ನು ಉಳಿಸಿ ಪ್ರಬುದ್ಧತೆ ಮೆರೆದರು . ರಾವಣನಾಗಿ ಹರಿನಾರಾಯಣ ಭಟ್ , ಎಡನೀರು ಪರಂಪರೆಯ ಶೈಲಿಯಲ್ಲೇ ಪಾತ್ರ ನಿರ್ವಹಿಸಿದರು . ಶೂರ್ಪನಖೀಯಾಗಿ ಬಣ್ಣದ ವೇಷಧಾರಿ ಸಿದ್ದಕಟ್ಟೆ ಸದಾಶಿವ ಶೆಟ್ಟಿಗಾರರು ಸಾಂಪ್ರದಾಯಿಕ ಹೆಣ್ಣುಬಣ್ಣದ ಚಿತ್ರಣ ನೀಡಿದರು . ಭಾಗವತಿಕೆಯಲ್ಲಿ ರಾಮಕೃಷ್ಣ ಮಯ್ಯ , ಚೆಂಡೆ – ಮದ್ದಲೆ ವಾದನದಲ್ಲಿ ನೆಕ್ಕರೆಮೂಲೆ ಹಾಗೂ ಅಡೂರು ಗಣೇಶರ ನಿರ್ವಹಣೆ ಪ್ರಸಂಗದ ಯಶಸ್ಸಿಗೆ ಕಾರಣವಾಯಿತು. ಕೊನೆಯ ಪ್ರಸಂಗ ಮಕರಾಕ್ಷ ಕಾಳಗ ಮೂರನೇ ಕಾಲಗತಿಗನುಸಾರವಾಗಿ ವೇಗವಾಗಿ ಸಾಗಿತು . ಪೂರ್ವಾರ್ಧದ ಮಕರಾಕ್ಷನಾಗಿ ಸುಬ್ರಾಯ ಹೊಳ್ಳರು ಉತ್ತಮವಾಗಿ ನಿರ್ವಹಿಸಿದರು .
ಉತ್ತರಾರ್ಧದ ಮಕರಾಕ್ಷನಾಗಿ ಸಂತೋಷ್ ಮಾನ್ಯರ ಅಬ್ಬರದ ಪ್ರವೇಶದೊಂದಿಗೆ ವೀರರಸದ ಉತ್ಕರ್ಷೆಯಾಯಿತು . ಶ್ರೀರಾಮನಾಗಿ ದಿನೇಶ್ ಶೆಟ್ಟಿ ಕಾವಳಕಟ್ಟೆ ಉತ್ತಮ ಅಭಿನಯ , ಮಾತುಗಾರಿಕೆಯ ಮೂಲಕ ಪಾತ್ರದ ಘನತೆಯನ್ನು ಮೆರೆದರು . ರಾಜೇಶ್ ಆಚಾರ್ಯ , ರಾಹುಲ್ ಕುಡ್ಲ , ವೆಂಕಟೇಶ ಕಲ್ಲುಗುಂಡಿ , ಕಿಶೋರ್ ಕೊಮ್ಮೆ , ರಾಜೇಶ್ ನಿಟ್ಟೆಯವರ ನಿರ್ವಹಣೆ ಪ್ರಸಂಗಕ್ಕೆ ಪೂರಕವಾಯಿತು .ಕುಂಭ – ನಿಕುಂಭರಾಗಿ ದಿವಾಕರ ರೈ ಹಾಗೂ ಶಶಿಧರ ಕುಲಾಲರು ಪೈಪೋಟಿಯ ನಾಟ್ಯ , ಧಿಗಿಣದ ಮೂಲಕ ವೀರರಸದ ಪ್ರಸ್ತುತಿ ನೀಡಿದರು . ಪ್ರಸಂಗದ ಪ್ರಾರಂಭದಲ್ಲೇ ಬಲಿಪ ಪ್ರಸಾದ ಭಟ್ ಹಾಗೂ ಪುಂಡಿಕಾಯಿ ಗೋಪಾಲಕೃಷ್ಣ ಭಟ್ಟರು ಏರು ಕಂಠದಲ್ಲಿ ಬಲಿಪ ಶೈಲಿಯಲ್ಲಿ ದ್ವಂದ್ವ ಭಾಗವತಿಕೆಯ ಮೂಲಕ ಮನ ಗೆದ್ದರು . ಮದ್ದಲೆಯಲ್ಲಿ ನೆಕ್ಕರೆಮೂಲೆ ಹಾಗೂ ಚೆಂಡೆವಾದನದಲ್ಲಿ ಅಡೂರು ಗಣೇಶ್ ಹಾಗೂ ಅಡೂರು ಲಕ್ಷ್ಮೀನಾರಾಯಣ ರಾವ್ ದ್ವಂದ್ವ ವಾದನದಿಂದ ಚಪ್ಪಾಳೆ ಗಿಟ್ಟಿಸಿದರು . ಚಕ್ರತಾಳದಲ್ಲಿ ರಾಜೇಂದ್ರಕೃಷ್ಣಸಹಕರಿಸಿದರು .
ಎಂ.ಶಾಂತರಾಮ ಕುಡ್ವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
US Polls: ಕಮಲಾ ಗೆಲುವಿಗಾಗಿ ಪೂರ್ವಿಕರ ಗ್ರಾಮದಲ್ಲಿ ಅರ್ಚನೆ, ಅಭಿಷೇಕ!
Bharat Brand: ಭಾರತ್ ಬ್ರ್ಯಾಂಡ್-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34
US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.