ರಂಜನಿ ಸಂಸ್ಮರಣೆಯ ಕೆಲವು ಕಛೇರಿಗಳು
Team Udayavani, Nov 2, 2018, 6:00 AM IST
ರಂಜನಿ ಸಂಸ್ಮರಣೆಯ ಅಂಗವಾಗಿ “ರಂಜನಿ ಮೆಮೋರಿಯಲ್ ಟ್ರಸ್ಟ್’ನವರು ಆಯೋಜಿಸಿದ್ದ ಕಾರ್ಯಕ್ರಮಗಳಲ್ಲಿ ಗಮನ ಸೆಳೆದ ವೀಣಾವಾದನವನ್ನು ನಡೆಸಿಕೊಟ್ಟವರು ಬೆಂಗಳೂರಿನ ಕು| ವೈ.ಜಿ. ಶ್ರೀಲತಾ. ಈ ಕಛೇರಿ ಸೆ.5ರಂದು “ಲತಾಂಗಿ’ಯಲ್ಲಿ ನಡೆಯಿತು.
ಪಿಸಿರಿಲ್ಲದ ನುಡಿತ, ವೀಣೆಯ ಒಂದು ಮೀಟಿನ ಕಂಪನ – ವ್ಯಾಪ್ತಿಯೊಳಗೆ ರಾಗದ ಜೀವಸಂಚಾರವನ್ನು ತೆರೆದಿಡುವ ಜಾಣ್ಮೆ; ಬಿರ್ಕಾಗಳು ಅಥವಾ ವಲಿ, ಕುರುಳ ಮುಂತಾದ ಗಮಕಗಳನ್ನು ಸೂಕ್ತವಾದ ಜಾಗದಲ್ಲಿ ಅಚ್ಚುಕಟ್ಟಾಗಿ ವಿನಿಯೋಗಿಸುವ ಪ್ರಜ್ಞೆ; ಆಧುನಿಕ ಕಸರತ್ತುಗಳಿಲ್ಲದ ನೇರ ನುಡಿಸಾಣಿಕೆ. ಸ್ವತಃ ಗಾಯಕಿಯೂ ಆಗಿರುವ ಕಲಾವಿದೆ ಕೃತಿಗಳ ಸಾಹಿತ್ಯಾರ್ಥಕ್ಕೆ ಆದ್ಯತೆ ನೀಡಿದ ಪರಿ ಶ್ಲಾಘನೀಯ.ಮೊದಲಿಗೆ ಕಲ್ಯಾಣಿ ಅಟ ತಾಳ ವರ್ಣ, ಮುಂದೆ ಸ್ವರ ವಿನಿಕೆಗಳ ಸಹಿತ ಕಮಲಾಮನೋಹರಿ (ಶಂಕರಂ ಅಭಿರಾಮ), ವಿಳಂಬ ಕಾಲದಲ್ಲಿ ಸೊಗಸಾಗಿ ಮೂಡಿ ಬಂದ ರೀತಿ ಗೌಳ (ಜನನೀ ನಿನ್ನುವಿನಾ), ಅಪೂರ್ವ ರಾಗ ವಿಟಿಪಿ (ಸರಿ ಸಮಾನ) ಅಂತೆಯೇ ತ್ವರಿತ ಗತಿಯಲ್ಲಿ ಸಾಗಿದ ನಳಿನಕಾಂತಿ (ಪಾಲಯಸದಾ) ಕೃತಿಗಳು ತಮ್ಮ ನೆಲೆಯಲ್ಲಿ ಸೌಖ್ಯವಾಗಿ ಮೂಡಿಬಂದವು. ಪ್ರಧಾನ ರಾಗ ಭೈರವಿ, (ಬಾಲಗೋಪಾಲ), ಸವಿಸ್ತಾರವಾದ ರಾಗಪೋಷಣೆ, ಪ್ರಬುದ್ಧವಾದ ಚಿಟ್ಟೆ ತಾನಂ, ನೆರವಲ್ ಮತ್ತು ಕ್ಲಿಷ್ಟ ಗಣಿತದ ಮುಕ್ತಾಯಗಳಿಂದ ಅಲಂಕೃತವಾಗಿದ್ದು ಇಡೀ ಪ್ರಸ್ತುತಿಗೆ ನ್ಯಾಯ ಒದಗಿಸಿತು. ಸಹವಾದನ ಮತ್ತು ತನಿಯಲ್ಲಿ ಮಿಂಚಿದ ಸುನಾದ ಕೃಷ್ಣ ಅಭಿನಂದನಾರ್ಹರು.ರಂಜನಿ ರಾಗಗಳ ಮಾಲಿಕೆ, ಆಹಿರ್ ಭೈರವ್‌ನಲ್ಲಿ ದೇವರ ನಾಮ ಮತ್ತು ಮಧುವಂತಿಯ ತಿಲ್ಲಾನಾದೊಂದಿಗೆ ಈ ಕಛೇರಿ ಕೊನೆಗೊಂಡಿತು.
ಸೆ.6ರಂದು ಒಂದು ಸುಶ್ರಾವ್ಯವಾದ ಹಿಂದುಸ್ತಾನಿ ಸಂಗೀತವನ್ನು ನೀಡಿದವರು ಶ್ರೀಮತಿ ದೇವಿ. ಸೂರ ಮಲ್ಹಾರ್ ಮತ್ತು ಜೋಗ್ ಪ್ರಧಾನ ರಾಗಗಳಾಗಿದ್ದವು. ಈ “ಬಂದಿಷ್’ಗಳನ್ನು ಅನುಕ್ರಮವಾಗಿ ಮೂರು ಕಾಲಗಳಲ್ಲಿ ವಿಸ್ತರಿಸುತ್ತಾ ಸ್ಪಷ್ಟವಾದ “ಅ’ ಕಾರಗಳು ನುಡಿಯುವ “ತಾನ್’ಗಳು ಮತ್ತು ಬೋಲ್ “ತಾನ್’ಗಳನ್ನು ಅಂದವಾಗಿ ನಿರ್ವಹಿಸಿದ ಪರಿ ರಸಿಕರಿಗೆ ಮುದ ನೀಡಿತು. ಮಧ್ಯ ಲಯದಲ್ಲಿ “ಕೇದಾರ’ ರಾಗದ ಹಿತವಾದ ಪ್ರಸ್ತುತಿಯ ನಂತರ, ಉತ್ತರಾದಿ ಛಾಯೆಯಲ್ಲಿ ಮಾರು ಚಹಾಗ್‌ನಲ್ಲಿ ಹಾಡಲಾದ ವಚನ (ನುಡಿದರೆ ಮರಾಠಿ ಅಭಂಗ್, ಕಬೀರರ ತತ್ವಗೀತೆ ಹೀರನಾ) ಮತ್ತು ಭೈರವಿಯಲ್ಲಿ ಒಂದು ಭಜನ್ ಹಾಡಿ ಕಛೇರಿಯನ್ನು ಸಂಪನ್ನಗೊಳಿಸಿದರು. ಭೀಮಾ ಶಂಕರ ತಬಲಾದಲ್ಲಿ ಸತೀಶ್ ಭಟ್ ಹಾರ್ಮೋನಿಯಂನಲ್ಲೂ ಸಾಥ್ ನೀಡಿದ್ದಾರೆ.
ಸೆ.7ರಂದು ನೂತನ ರವೀಂದ್ರ ಮಂಟಪದಲ್ಲಿ ರಂಜನಿ ಮತ್ತು ಗಾಯತ್ರಿಯವರ ಸಂಗೀತ ಕಛೇರಿ ನಡೆಯಿತು. ದಕ್ಷಿಣಾದಿ ಸಂಗೀತದಲ್ಲಿ ಕಂಡು ಬರುವ ರಾಗ, ಲಯಗಳ ಇತಿಮಿತಿಗಳೊಂದಿಗೆ ಉತ್ತರಾದಿಯವರ ಒಯ್ನಾರ, ಲಾಲಿತ್ಯಗಳನ್ನೂ ಸಮನಾಗಿ ಮೈಗೂಡಿಸಿಕೊಂಡಿರುವ ಕಲಾವಿದೆಯರು. ರುದ್ರ ಪ್ರಿಯ (ಗಣನಾಯಕ) ಬೇಗಡೆ (ಕಡೈಕಣ್) ಮಧ್ಯಮಕಾಲದ ಕೃತಿಗಳ ನಂತರ ಹಿತವಾದ ಆಲಾಪನೆಯೊಂದಿಗೆ ನೀಡಲಾದ ತೋಡಿ (ಏನು ಧನ್ಯಳ್ಳೋ) ರಾಗದ ಪ್ರಸ್ತುತಿಯಲ್ಲಿ ಮಿಂಚಿದ ಸ್ವರ ಕಲ್ಪನೆಗಳು, ಅಗಣಿತವೆನಿಸಬಹುದಾದ ವಿನ್ಯಾಸಗಳು, ಕುರೈಪ್ಪುಗಳು ರಸಿಕರನ್ನು ಸೆರೆಹಿಡಿದವು. ವಿಳಂಬ ಕಾಲದಲ್ಲಿ ಗಮಕಯುಕ್ತವಾಗಿ ಹಾಡಲಾದ ಯದುಕುಲ ಕಾಂಭೋಜಿ (ಎಚ್ಚರಿಗಗಾ), ಮತ್ತು ಅನಂತರ ನಿರೂಪಿಸಲಾದ ಪ್ರಧಾನ ರಾಗ ಪೂರ್ವಿ ಕಲ್ಯಾಣಿ (ಪರಮ ಪಾವನ) ಕೆಲಕಾಲ ಮನದಲ್ಲುಳಿಯುವಂತೆ ಸರ್ವಾಂಗ ಸುಂದರವಾಗಿ ವಿಜೃಂಭಿಸಿತು.
ಮಾಳವಿಯ (ಮರಿವೇರೆ ನಾ ಕೆವರು) ತ್ವರಿತಗತಿಯ ಕೃತಿಯ ನಂತರ ರಾಗಂ, ತಾನಂ, ಪಲ್ಲವಿಗಾಗಿ ಕರ್ಣರಂಜನಿಯನ್ನು ಎತ್ತಿಕೊಂಡರು. ಪರ್ಯಾಯವಾಗಿ ಹಾಡಲಾದ ರಾಗವಿಸ್ತಾರ ಮತ್ತು “ತಾನಂ’ಗಳಲ್ಲಿ ಪುನರುಕ್ತವಾಗದ ಸಂಚಾರಗಳ ಮಹಾಪೂರವನ್ನು ಹರಿಸಿದ ಗಾಯಕಿಯರು ಖಂಡ ತ್ರಿಪುಟ ತಾಳದಲ್ಲಿ “ಕರ್ಣ ರಂಜಿತ ಗಾನಾಮೃತ ಪಾನ/ಮೇ… ಮೋಕ್ಷ ಮಾರ್ಗ ಸೋಪಾನ/ಮೇ’ ಎಂಬ ಪಲ್ಲವಿಯನ್ನು ಲಕ್ಷಣಯುತವಾಗಿ ಹಾಡಿ ರಾಗ ಮಾಲಿಕೆಯಲ್ಲಿ ಸ್ವರವಿನಿಕೆಗಳನ್ನೂ ನೀಡಿ ಮೂಕವಿಸ್ಮಿತರನ್ನಾಗಿಸಿದರು. ಯಮುನಾ ಕಲ್ಯಾಣಿ (ಹರಿಸ್ಮರಣೆ) ದೇವರನಾಮ ಮತ್ತು ಮಾರು ಬೆಹಾಗ್ ಅಭಂಗ್ ಕಛೇರಿಯ ಕೊನೆಯ ಪ್ರಸ್ತುತಿಗಳಾಗಿದ್ದವು.ಅಪ್ರತಿಮವೆನಿಸಿದ ಈ ಗಾಯನಕ್ಕೆ ಪೂರಕವಾಗಿ ವಯಲಿನ್ ನುಡಿಸಿದ ಚಾರುಮತಿ ರಘುರಾಮನ್ ಅಂತೆಯೇ ಮೃದಂಗದಲ್ಲಿ ಹದವರಿತ ಮೃದುವಾದನಕ್ಕೆ ಹೆಸರವಾಸಿಯಾಗಿರುವ ಮನೋಜ ಶಿವ ಇಬ್ಬರೂ ಕಛೇರಿಯ ಯಶೋಭಾಗಿಗಳಾಗಿದ್ದಾರೆ.
ಸೆ.8ರಂದು ಕಛೇರಿಯನ್ನು ನೀಡಿದವರು ಕು| ಅರ್ಚನಾ ಮತ್ತು ಕು| ಸಮನ್ವಿ. ಸಮನ್ವಿ ತನ್ನ ತಾರ ಸಂಚಾರ ಮತ್ತು ಬಿಡಿಬಿಡಿಯಾಗಿ ನುಡಿಯುವ ಆಕರ್ಷಕ ಬಿರ್ಕಾಗಳಿಂದ ಮಂತ್ರ ಮುಗªರನ್ನಾಗಿಸಿದರು.ಹಮೀರ್ ಕಲ್ಯಾಣಿ ವರ್ಣ, ಅರಭಿ (ಸಕಲ ಗಣಾಧಿಪ) ಕೃತಿಯ ನಂತರ ವಿಸ್ತರಿಸಲಾದ ಮಾಮವ ಮೀನಾಕ್ಷಿ (ವರಾಳಿ) ಮತ್ತು ಭಾವಯುಕ್ತವಾದ ರಾಗ, ಸ್ವರ ವಿನಿಕೆಗಳಿಂದ ಕೂಡಿದ್ದ ಮುಖಾರಿ (ಎಂತನಿನೇ) ಎರಡೂ ಉತ್ತಮವಾಗಿದ್ದವು.ಪ್ರಧಾನ ರಾಗ ಕಾಂಭೋಜಿ (ಎವರಿಮಾಟ) ಈ ಕಛೇರಿಯಲ್ಲಿ ಮುಕುಟಪ್ರಾಯವಾಗಿ ಶೋಭಿಸಿತು. ಪರ್ಯಾಯವಾಗಿ ರಾಗ ವಿಸ್ತಾರ, ಒಳ್ಳೆಗಟ್ಟಿತನದ ಕೃತಿ ನಿರೂಪಣೆ, ನೆರವಲ್, ಕಲ್ಪನಾಸ್ವರಗಳನ್ನು ನೀಡಿದ ಗಾಯಕಿಯರು ಅಂತೆಯೇ ತಮ್ಮ ಚುರುಕಾದ ಬಿಲ್ಲುಗಾರಿಕೆಯಿಂದ ಮೋಡಿ ಮಾಡಿದ ಚಾರುಲತಾ ರಾಮಾ ನುಜಂ ರಾಗವನ್ನು ಸಂಪೂರ್ಣವಾಗಿ ಪೋಷಿಸಿದ್ದಾರೆ. ಮೃದಂಗದಲ್ಲಿ ನಿಕ್ಷಿತ್ ಪುತ್ತೂರು, ಘಟದಲ್ಲಿ ಸುಕನ್ಯಾ ರಾಮಗೋಪಾಲ್ ವಿವಿಧ ನಡೆಗಳ, ಗತಿಗಳ ಹತ್ತಾರು ಮುಜಲುಗಳನ್ನು ಪ್ರದರ್ಶಿಸಿ ಲಯಪ್ರಿಯರಿಗೆ ಸಂತಸವನ್ನು ನೀಡಿದ್ದಾರೆ.
ಕಛೇರಿಯ ಉತ್ತರಾರ್ಧದಲ್ಲಿ ಭಾವಪೂರ್ಣವಾಗಿ ಮೂಡಿಬಂದ ಗ್ರಾಮ್ಯ ಸೊಗಡನ್ನು ನೆನಪಿಸುವ ಪಹಾಡಿ (ಆಕ್ಕ ಕೇಳವ್ವ) ವಚನ ಚಾರುಕೇಶಿ ರಾಗಾಧಾರಿತ ಲಘು ಪ್ರಸ್ತುತಿ ಮತ್ತು ಕಲ್ಯಾಣಿಯ ಗ್ರಹಭೇದ ತಿಲ್ಲಾನದೊಂದಿಗೆ ಕಛೇರಿ ಸಂಪನ್ನಗೊಂಡಿತು.
ಸೆ.11ರಂದು ಉಡುಪಿಯ “ರಾಗಧನ’ ಸಂಸ್ಥೆ ರಂಜನಿಯ ಸಂಸ್ಮರಣಾರ್ಥವಾಗಿ ನೂತನ ರವೀಂದ್ರ ಮಂಟಪದಲ್ಲಿ ಸಂಗೀತ ಕಛೇರಿಯನ್ನು ಆಯೋಜಿಸಿತ್ತು. ಚೆನ್ನೈನ ಕು| ಅರ್ಚನಾ ಮತ್ತು ಕು| ಆರತಿ ಸೋದರಿಯರು ಇದನ್ನು ನಡೆಸಿಕೊಟ್ಟರು. ಇವರಿಗೆ ಚೆನ್ನೈನ ಅರ್ಜುನ್ ದಿನಕರ್ ಪಿಟೀಲಿನಲ್ಲಿ ಬಿ.ಎಸ್. ಪ್ರಶಾಂತ್ ಮೃದಂಗದಲ್ಲಿ ಮತ್ತು ಅನಿಲ್ ಪರಾಶರ್ ಖಂಜೀರದಲ್ಲಿ ಸಹಕರಿಸಿದ್ದಾರೆ.
ನಾಟರಾಗದ (ಜಯ ಜಾನಕೀ) ಪುರಂದರದಾಸರ ರಚನೆಯೊಂದಿಗೆ ಉತ್ಸಾಹಪೂರ್ಣ ಪ್ರಾರಂಭ. ಮುಂದೆ ರಾಗ, ಸ್ವರ ವಿಸ್ತಾರಗಳಿಂದ ಕೂಡಿದ್ದು ಹರಿಕಾಂಭೋಜ (ಉಂಡೇದಿರಾಮುಡು) ಸೌಖ್ಯವಾದ ಆಲಾಪನೆಯನ್ನನುಸರಿಸಿದ ರೀತಿ ಗೌಳ (ಜನನೀ) ವಿಳಂಬ ಕಾಲದಲ್ಲಿ ದ್ವಿಜಾವಂತಿ (ಚೇತಶ್ರೀ) ಮತ್ತು ತ್ವರಿತಗತಿಯಲ್ಲಿ ಕೇದಾರಗೌಳ (ಪರಾಕೇಲ) ಕೃತಿಗಳು ಮೂಡಿಬಂದವು.
ಪ್ರಧಾನರಾಗ ತೋಡಿಯಲ್ಲಿ (ಕೊಲುವ ಮರೆಗದ) ಸಾಂಪ್ರದಾಯಿಕ ಶೈಲಿಯಲ್ಲಿ ಬೆಳೆಸಲಾದ ರಾಗಾಲಾಪನೆ ಮತ್ತು ಸ್ವರ ಪ್ರಸ್ತಾರಗಳು ಉತ್ತಮವಾಗಿದ್ದು (ಈ ಎಲ್ಲಾ ರಾಗವಿಸ್ತಾರಗಳಲ್ಲೂ ಷಡ್ಜ , ಪಂಚಮಗಳಲ್ಲಿ ಯಾ ನ್ಯಾಸ ಸ್ವರಗಳು ಆಗಾಗ ಸುದೀರ್ಘವಾದ ನಿಲುಗಡೆ ಅಥವಾ ವಿಶ್ರಾಂತಿಯ ಅಗತ್ಯವಿತ್ತು ಎನಿಸಿತು. ಪೂರ್ವಿ ಕಲ್ಯಾಣಿಯನ್ನು ರಾಗಂ, ತಾನಂ ಪಲ್ಲವಿಗಾಗಿ ಆಯ್ದುಕೊಂಡ ಗಾಯಕಿಯರು ಅತ್ಯಂತ ಕ್ಷಿಪ್ರಗತಿಯಲ್ಲಿ – ರಾಗ, ತಾನಂ, ಪಲ್ಲವಿ, ರಾಗಮಾಲಿಕಾ ಸ್ವರ ಕಲ್ಪನೆಗಳು ಎಲ್ಲವನ್ನೂ 15 ನಿಮಿಷಗಳ ಒಳಗೆ ಪೂರೈಸಿದರು. ಬೆಹಾಗ್ ದೇವರನಾಮ (ಕಂಡು ಧನ್ಯನಾದೆ) ಕಛೇರಿಯ ಕೊನೆಯ ಪ್ರಸ್ತುತಿಯಾಗಿತ್ತು.
ಸರೋಜಾ ಆರ್. ಆಚಾರ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ
ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ
Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್ ಜೈಕಾರ !
Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ
Idu Entha Lokavayya: “ಕೋಸ್ಟಲ್” ನಿಂದ ಕರುನಾಡು!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Havyaka Sammelana; ಅಡಿಕೆ ಬೆಳೆಗಾರರ ಹಿತ ಕಾಯಲು ಕೇಂದ್ರ ಬದ್ಧ: ಶೋಭಾ ಕರಂದ್ಲಾಜೆ
Havyaka ಭಾಷೆಗೆ ಅಕಾಡೆಮಿ ಅಥವಾ ಅಧ್ಯಯನ ಪೀಠ ಅಗತ್ಯ: ರವಿಶಂಕರ್ ಭಟ್
Ramnagar; 30ಕ್ಕೂ ಅಧಿಕ ಊರುಗಳಲ್ಲಿ ಆತಂಕ ಹುಟ್ಟಿಸಿದ್ದ ಕಾಡಾನೆ ಸೆರೆ
Yakshagana;ಅಧ್ಯಯನ, ಪಾತ್ರ ಜ್ಞಾನದಿಂದಷ್ಟೇ ಕಲಾವಿದ ರಂಗಸ್ಥಳದಲ್ಲಿ ಮೆರೆಯಲು ಸಾಧ್ಯ
Drugs; ಮಾರಾಟ, ಸೇವನೆ : ಮಂಗಳೂರು 1,090, ಉಡುಪಿ 116 ಪ್ರಕರಣ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.