ಕಲಾಭಿಜ್ಞತೆಯ ಸೋಪಾನದಲ್ಲಿ ಕರಾವಳಿಯ ಗೀತ-ನರ್ತನ
Team Udayavani, Aug 25, 2017, 6:05 AM IST
ಇತ್ತೀಚೆಗಷ್ಟೇ ನಮ್ಮನ್ನಗಲಿದ ನೃತ್ಯವಿದ್ವಾಂಸ, ಗುರು ಮುರಳೀಧರ ರಾವ್ ತಮ್ಮ ಕೃತಿ ನೃತ್ಯಲೋಕದ ಉಪೋದ್ಘಾತದಲ್ಲಿ ಹೀಗೆಂದು ಬರೆದುಕೊಂಡಿದ್ದಾರೆ – “”ಮಂಗಳೂರಿನಲ್ಲಿ ನಾನು ಕಲಿಯುವ ಹೊತ್ತಿಗೆ ಭರತನಾಟ್ಯದ ಗಂಧಗಾಳಿಯೇ ಇರಲಿಲ್ಲ. ನೃತ್ಯಶಿಕ್ಷಕರೆನ್ನುವ ಒಬ್ಬಿಬ್ಬರಲ್ಲೂ ಕೂಡ ವೃತ್ತಿಪರತೆ ಇರಲಿಲ್ಲ. ಅದಕ್ಕೂ ಮೊದಲೇ ನೃತ್ಯಶಿಕ್ಷಕರೆನ್ನುವವರು ಗ್ರಾಮಾಫೋನು ರೆಕಾರ್ಡ್ ಹಾಕಿಕೊಂಡು ಸಿನೆಮಾದಲ್ಲಿ ಕಂಡಿದ್ದ ನೃತ್ಯಗಳನ್ನೇ ಮಕ್ಕಳಿಗೆ ಹೇಳಿಕೊಡುತ್ತಿದ್ದರು.” ಒಂದರ್ಥದಲ್ಲಿ ರಾಜನ್ ಅಯ್ಯರ್ ಮತ್ತು ರಾಜರತ್ನಂ ಪಿಳ್ಳೆ„ ಅವರ ಪಾದಾರ್ಪಣೆಯೇ ಕರಾವಳಿಯ ಭರತನಾಟ್ಯ ಇತಿಹಾಸಕ್ಕೆ ಮರುಪೂರಣ.
ಹೌದು. ಕರಾವಳಿಗೆ ಯಕ್ಷಗಾನ ಆಪ್ತವಾದಷ್ಟು ಅನ್ಯಾನ್ಯ ಅಭಿಜಾತೀಯ ಸಂಗೀತವೋ ಅಥವಾ ನೃತ್ಯವೋ ಹತ್ತಿರವಾದದ್ದಿಲ್ಲ. ಅದು ಯಕ್ಷಗಾನದ ಅನನ್ಯತೆಯೂ ಹೌದು. ಕರಾವಳಿಯಲ್ಲಿ ತಿಪ್ಪರಲಾಗ ಹಾಕಿದರೂ ಯಕ್ಷಗಾನವನ್ನು ಪಕ್ಕಕ್ಕೆ ಸರಿಸಿಯೋ, ಮೀರಿಯೋ ಮುಂದೆ ಹೋಗಲಿಕ್ಕಾಗದು ಎಂಬ ನುಡಿ ಅಕ್ಷರಶಃ ದಿಟ. ಆದ್ದರಿಂದಲೋ ಏನೋ ಉಳಿದ ಕಲೆಗಳು ಯಕ್ಷಗಾನದ ಅನಂತರದ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುವಂತಾಗಿದೆ. ಕರ್ನಾಟಕ ಸಂಗೀತ ಮತ್ತು ಭರತನಾಟ್ಯ ಬಹುವಾಗಿ ಪ್ರಚುರವಾದ ಈ ಕಾಲಕ್ಕೂ ಯಕ್ಷಗಾನ ಈ ನಾಡಿನ ವಿರಾಡ್ರೂಪ. ಅಷ್ಟರಮಟ್ಟಿಗೆ ಯಕ್ಷಗಾನ ಸಂಪೂರ್ಣ ಕ್ರೀಡನೀಯಕ ಕಲೆ.
ಹಾಗೆಂದ ಮಾತ್ರಕ್ಕೆ ಕರಾವಳಿಗರ ಸಂಗೀತ ಮತ್ತು ನರ್ತನಗಳೆಡೆಗಿನ ಅಭಿರುಚಿ ಕೆಳಮಟ್ಟದ್ದೆಂದಲ್ಲ ಅರ್ಥ. ರಾಜರ ಆಳ್ವಿಕೆಯ ಇತಿಹಾಸದಲ್ಲಿ ಗೀತ ನರ್ತನಗಳಲ್ಲಿ ಪ್ರಗಲ½ ಪಾಂಡಿತ್ಯವನ್ನು ಸಾಧಿಸಿದ ಕಲಾವಿದರ ಬಗೆಗೆ ಸುಳುಹುಗಳು ಸಿಗುತ್ತವೆ. ಬಸೂÅರು- ಬಾಕೂìರುಗಳಲ್ಲಿದ್ದ ದೇವದಾಸಿ ನೃತ್ಯಪರಂಪರೆೆ ಇಡಿಯ ಕರ್ನಾಟಕದ ಸಾಂಸ್ಕೃತಿಕ ಇತಿಹಾಸಕ್ಕೇ ಗೊತ್ತು. ಯಕ್ಷಗಾನದ ಅನೇಕ ಹಳಬ ಧೀಮಂತ ಕಲಾವಿದರು ಗೆಜ್ಜೆಗಳನ್ನು ಕೇಳಿ ತೆಗೆದುಕೊಂಡು ಬರುತ್ತಿದ್ದದೇ ಈ ದೇವದಾಸಿಯರಿಂದ. ಕೆರೆಮನೆ ಮೇಳದ ಶಿವಾನಂದ ಹೆಗಡೆಯವರೂ ತಮ್ಮ ಅಜ್ಜನ ಗೆಜ್ಜೆಗಳನ್ನು ಕೈಯಲ್ಲಿ ಹಿಡಿದೇ ಈ ಮಾತನ್ನು ಪ್ರಮಾಣೀಕರಿಸುತ್ತಾರೆ. ಧರ್ಮಸ್ಥಳದಂತಹ ಅನೇಕ ದೇವಾಲಯಗಳಲ್ಲಿ ನಾಟ್ಯ ಮೇಳ ಅಂದರೆ ಯಕ್ಷಗಾನದ ಮೇಳದೊಂದಿಗೆ ನಟುವ ಮೇಳ (ದೇವಾಲಯದೊಳಗಡೇ ನರ್ತನಸೇವೆಗೈಯುತ್ತಿದ್ದ ನೃತ್ಯಗಾತಿಯರ ಮೇಳ) ಗಳ ಉಲ್ಲೇಖ ದೊರೆಯುತ್ತವೆ. ಆದರೆ ಕಾಲದ ಮರೆಯಲ್ಲಿ ನೇಪಥ್ಯಕ್ಕೆ ಸರಿದೋ ಶೋಧನೆಯ ಜಾಡಿಗೆ ಸಿಗದೆ ಲುಪ್ತವಾಗಿ ಉಳಿದೋ ಭವ್ಯ ಇತಿಹಾಸವು ಅಜ್ಞವಾಗುತ್ತಿದೆ, ನಮ್ಮವೇ ನಮಗೆ ಅಪರಿಚಿತವೆನಿಸುತ್ತಿದೆ.
ಕರ್ನಾಟಕ ಅಥವಾ ಹಿಂದೂಸ್ಥಾನೀ ಸಂಗೀತ ಪ್ರಪಂಚವೂ ಇದಕ್ಕೆ ಹೊರತಲ್ಲ. ಭೀಮಸೇನ ಜೋಷಿಯವರಂತಹ ಅತಿರಥರು ಬಂದಾಗ ಮೊದಲ ಸಾಲಿನಲ್ಲಿ ಕುಳಿತುಕೊಳ್ಳಲು ರಾಮಣ್ಣ ಎಂಬವರನ್ನು ಆಹ್ವಾನಿಸುತ್ತಿದ್ದರಂತೆ. ರಾಮಣ್ಣ ಬರದಿದ್ದರೆ ಹಾಡಿದ್ದು ಹಾಡಿದಂತಲ್ಲ. ಅಷ್ಟರಮಟ್ಟಿಗೆ ಕಛೇರಿ ಅಪೂರ್ಣ ಎನಿಸುವ ಮಟ್ಟಿಗೆ ರಾಮಣ್ಣ ಅನಿವಾರ್ಯ. ರಾಮಣ್ಣರಿಗೆ ತೃಪ್ತಿಯಾದರೆ ಕಛೇರಿಯೇ ಗೆದ್ದಂತೆ. ಸಂಗೀತದ ಆಳ ಅಗಲಗಳನ್ನು ಅರಿತಿದ್ದ ನಿಜವಾದ ಸಹೃದಯೀ ವಿಮರ್ಶಕನಿಗೆ ಎಂತೆಂಥ ಕೀರ್ತಿವೆತ್ತ ಕಲಾವಿದರಾದರೂ ತಲೆಬಾಗಲೇಬೇಕಲ್ಲವೇ? ಒಮ್ಮೆ ಕಛೇರಿಯೊಂದರಲ್ಲಿ ಮಾರುಬಿಹಾಗ್ ರಾಗವನ್ನು ಹಾಡಿ ಜೋಷಿಯವರು ಕಣ್ಣಲ್ಲೇ ಹೇಗಾಯಿತೆಂದು ಕೇಳಿದರೆ ತಲೆಯಾಡಿಸಿ ಇಲ್ಲವೆಂದು ಸೂಚಿಸಿದರಂತೆ! ಕಛೇರಿಯ ಅನಂತರ ಮನೆಗೆ ಕರೆತಂದ ರಾಮಣ್ಣ ಗ್ರಂಥಗಳ ಕವಾಟು ತೆರೆದು “ನೀವು ಹಾಡಿದ್ದು ಮಾರುಬಿಹಾಗ್ ನಂತೆಯೇ ಚಲಿಸುವ ಮತ್ತೂಂದು ರಾಗ ಮಾರು’ ಎಂದು ರಾಗಸ್ವರೂಪವನ್ನೇ ಜೋಷಿಯವರಿಗೆ ತಿಳಿಸಿಕೊಟ್ಟರೆಂದು ಮಂಗಳೂರಿನ ಹಿರಿಯ ಸಿತಾರ್ ವಾದಕ ಅನಂತಸತ್ಯ ಸಂಜೀವ ನೆನಪಿಸಿಕೊಳ್ಳುತ್ತಾರೆ.
ಕಲೆ ಉಳಿಯುವುದು ಬೆಳೆಯುವುದು ಕಾರಯತ್ರೀ ಮತ್ತು ಭಾವಯತ್ರೀ ಪ್ರತಿಭೆಗಳೆರಡೂ ಹದವಾಗಿ ಜತೆಯಾಗಿದ್ದಾಗ. ಅಷ್ಟರಮಟ್ಟಿಗೆ ಕರಾವಳಿ ಉತ್ತಮ ಭಾವಯತ್ರೀ ಪ್ರತಿಭೆಗಳನ್ನೇ ನೀಡಿದೆ ಎಂಬ ಹೆಮ್ಮೆ ನಮಗೆ. ಇಷ್ಟೆಲ್ಲ ಸಹೃದಯೀ ವಿದ್ವಾಂಸರು ಇದ್ದರೂ ಅಭಿಜಾತೀಯ ಸಂಗೀತ ಮತ್ತು ನೃತ್ಯಗಳಲ್ಲಿ ಕರಾವಳಿ ಮನೆಮಾತಾಗಿ ಹೊರಗಿನ ವಿಶಾಲಪ್ರಪಂಚಕ್ಕೆ ತೆರೆದುಕೊಂಡದ್ದೆಂದಿಲ್ಲ. ಹಾಗಾಗಿ ಕರಾವಳಿಗರು ಕೇಳುವುದಕ್ಕೆ ಮಾತ್ರ ಸಮರ್ಥರು ಎಂಬ ನಿಲುವು. ಸುಮಾರು 60-70ರ ದಶಕದಿಂದ ಜಿಎನ್‌ಬಿ, ಎಂ. ಎಸ್. ಸುಬ್ಬುಲಕ್ಷ್ಮೀ, ಎಂ. ಎಲ್. ವಸಂತಕುಮಾರಿ ಯಂತಹವರ ಸಂಗೀತವೇ ಇಲ್ಲಿನ ಸಹೃದಯ ಕೇಳುಗರ ಬಹುದೊಡ್ಡ ಸಮಾಧಾನ. ಇನ್ನೊಂದಿಷ್ಟು ಮಂದಿಗೆ ಉತ್ಕೃಷ್ಟ ತರಗತಿಯ ಕಾರ್ಯಾಗಾರಗಳು ಆಯೋಜನೆಯಾಗಿ ಇಲ್ಲಿನವರೂ ಕಛೇರಿ ನೀಡುವಂತಾಗಬೇಕು ಎನ್ನುವ ಆಸೆಯನ್ನು ಮೊಳಕೆಯೊಡೆಸಿತ್ತು.
ಇದನ್ನು ಬೇರೊಂದು ಬಗೆಯಲ್ಲಿ ಅವಲೋಕಿಸುವುದಾದರೆ ತಮಿಳುನಾಡಿನಿಂದ ಬಂದರೇನೇ ಕಲೆ, ಕಲೆಯ ತವರೂರೆಂದರೆ ತಮಿಳುನಾಡು. ಅಲ್ಲಿಗೆ ಹೋಗಿ ಕಲಿತುಕೊಂಡರೆ, ಅಲ್ಲಿಂದ ಸ್ವೀಕೃತವೆನಿಸಿಕೊಂಡರೇನೇ ಪರಿಪೂರ್ಣ ಎಂಬ ಮಟ್ಟಿಗಿನ ಧೋರಣೆ. ಇನ್ನೊಂದಿಷ್ಟು ಕಲಾವಿದರಂತೂ ಪ್ರಚಲಿತದಲ್ಲಿರುವ ತಮಿಳುದೇಶೀಯ ಕಲಾವಿದರ ಶೈಲಿಯನ್ನು ಅನುಕರಿಸುವುದರಲ್ಲಿಯೇ ಪರಮಾರ್ಥ ಕಂಡಿದ್ದೂ ಇದೆ. ಅದೇನೇ ಇರಲಿ, ಒಳ್ಳೆಯದು ಎಂಬುದಿದ್ದರೆ ಅದಕ್ಕೆ ಕಾಲ-ದೇಶದ ಹಂಗು ಏತಕ್ಕೆ? ಪ್ರಭಾವ-ಪ್ರೇರಣೆ ಯಾವ ದಿಕ್ಕಿನಿಂದ ಬಂದರೂ ಸರಿಯೇ ಸಂಸ್ಕೃತಿ-ಸಂಸ್ಕಾರದ ದೃಷ್ಟಿ ವಿಶಾಲವಾಗುತ್ತಾ ಪ್ರತಿಭೆಯು ಸ್ವಂತಿಕೆಯ ದೀವಟಿಗೆಯಲ್ಲಿ ಪ್ರಕಾಶಿಸುವುದಿದ್ದರೆ ಅದು ಎಂದೆಂದಿಗೂ ಸ್ವಾಗತಾರ್ಹ.
ಈ ನಡುವಿನಲ್ಲಿ ಕರ್ನಾಟಕ ಸಂಗೀತಕ್ಕೆ ಸಂಬಂಧಿಸಿ ಕಳೆದ ಸುಮಾರು 20 ವರ್ಷಗಳನ್ನು ಅತ್ಯಂತ ಮಹತ್ವದ ಕಾಲವನ್ನಾಗಿ ಪರಿಗಣಿಸಬಹುದೆನಿಸುತ್ತದೆ. 90ರ ದಶಕದಲ್ಲಿ ಉಭಯ ಜಿಲ್ಲೆಗಳಲ್ಲಿ ಕೆಲವು ಸಂಘಟನಾ ಸಂಸ್ಥೆಗಳು ಹುಟ್ಟಿಕೊಂಡು ಅತ್ಯಂತ ಚಟುವಟಿಕೆಯಿಂದ ಕಾರ್ಯ ನಿರ್ವಹಿಸಲು ಪ್ರಾರಂಭಿಸಿದ್ದವು. ಸಂಗೀತ ಪರೀಕ್ಷೆಗಳಲ್ಲಿ ಹಲವು ಕೋಗಿಲೆಗಳ ಕೂಜನ ಮೊದಲಾಯಿತು. ವಿದ್ವತ್, ಎಂ.ಮ್ಯೂಸಿಕ್ ಪದವಿ ಪರೀಕ್ಷೆಗಳನ್ನು ಆಸಕ್ತಿಯಿಂದ ಧ್ಯಾನಿಸುವ ಪ್ರವೃತ್ತಿ ಹೆಚ್ಚಿತು. ಉಡುಪಿ ಪರ್ಯಾಯಗಳಲ್ಲಿ ಅಷ್ಟಮಠಗಳ ಆಯೋಜಕತ್ವದ ಧನ್ಯತೆಯಲ್ಲಿ ಕರಾವಳಿಯ ಪ್ರತಿಭೆಗಳಷ್ಟೇ ಅಲ್ಲದೆ ಸಮಗ್ರ ಕರ್ನಾಟಕದ ಕಲಾವಿಸ್ತೀರ್ಣದ ವ್ಯಾಸವನ್ನು ಪರಿಚಯಿಸುವಂತಾಯಿತು.
ಅಂದಿಗೆ ಕೀರ್ತಿಶಾಲಿ ಪ್ರತಿಭಾನ್ವಿತ ಕಲಾವಿದರ ಕಛೇರಿಗಳನ್ನು ಒಳಗಿಳಿಸಿಕೊಂಡ ಮೊಳಕೆ ಇಂದು ಬೆಳೆದು ಮರವಾಗುವ ಲಕ್ಷಣ. ಕೇಳ್ಮೆಯಿಂದಲೂ ಪ್ರೇಕ್ಷಣತ್ವದಿಂದಲೂ ಕಲೆಯ ಸೆಲೆ ಬಲವಾಗುತ್ತದೆ ಎಂಬುದು ಇದಕ್ಕೇ ಅಲ್ಲವೇ? ಹಾಗಾಗಿ ಪ್ರೇಕ್ಷಕತ್ವದಿಂದ ಕಲಾವಿದನಾಗುವತ್ತ ಮುಂಬಡ್ತಿ ಸಿಕ್ಕಿದೆ ಕರಾವಳಿಗರಿಗೆ. ಅದರಲ್ಲೂ 2000ನೇ ಇಸವಿ ಕರಾವಳಿಯ ಕರ್ನಾಟಕ ಸಂಗೀತದಲ್ಲಿ ಸುವರ್ಣಾಕ್ಷರಗಳಿಂದ ದಾಖಲಿಸಬೇಕಾದ ವರ್ಷ. ರಾಗಧನ, ಸಂಗೀತಪರಿಷತ್, ಶಾಸ್ತ್ರೀಯ ಸಂಗೀತ ಸಭಾ ಸಂಸ್ಥೆಗಳಿಗೆ ಕಾರ್ಯಕ್ರಮ ನೀಡಲು ಬರುತ್ತಿದ್ದ ಹೊರನಾಡಿನ ಕಲಾವಿದರನ್ನು ಕಂಡು-ಕೇಳಿ ತಾವೂ ಅವರಂತೆಯೇ ಆಗಬೇಕೆಂಬ ಹಂಬಲ ಹೊತ್ತ ಹುಟ್ಟಿಕೊಂಡ ದಿನಗಳಾಗಿದ್ದವು. ಸಂಗೀತಕ್ಕೇ ಸಂಬಂಧಿಸಿ ಶಿಸ್ತಿನ ಓದು ಮತ್ತು ಗ್ರಹಿಕೆಗೆ ಮಾಸಿಕಗಳು ಪ್ರಕಟವಾಗತೊಡಗಿದವು. ಚಿಣ್ಣರು, ಪ್ರೌಢರು, ಯುವಕರು, ವೃದ್ಧರು ಎಂಬ ಬೇಧವಿಲ್ಲದೆ ಪ್ರೇಕ್ಷಕ ಕಲಾವಿದನಾಗುವತ್ತ ಹೆಜ್ಜೆ ಇರಿಸಿದ್ದ. ಇದೇ ಸಂದರ್ಭ ಚೆಂಗ್ಲಪೇಟ್ ರಂಗನಾಥನ್ ಉಡುಪಿಯಲ್ಲಿ ಒಂದು ವಾರ ಕಾಲ ಕಲಾವಿದರಿಗಾಗಿಯೇ ಕಾರ್ಯಾಗಾರ ನಡೆಸಿದರು. ಅಲ್ಲಿಂದ ಮುಂದಿನ ನಡೆಗಳೆಲ್ಲ ಕರಾವಳಿಯ ಕರ್ನಾಟಕ ಸಂಗೀತ ಪ್ರಪಂಚದ ಮಟ್ಟಿಗೆ ಕ್ರಾಂತಿಯೇ ಸರಿ.
ಇಂದು ಪೂರ್ಣ ಪ್ರಮಾಣದ ಸಂಗೀತ ಕಛೇರಿ ನೀಡಬಲ್ಲ ಹಲವಷ್ಟು ಯುವ ಕಲಾವಿದರು ನಮ್ಮ ಜಿಲ್ಲೆಗಳಲ್ಲಿ ಸಿದ್ಧವಾಗುತ್ತಿದ್ದಾರೆ. ಹೊರನಾಡುಗಳಲ್ಲೂ ಕಲಾವಿದರು ಮಿಂಚುತ್ತಿದ್ದಾರೆ. ಸಂಗೀತಾಭ್ಯಾಸಕ್ಕಾಗಿ ಚೆನ್ನೈಗೆ ಪ್ರಯಾಣ, ಅಲ್ಲಿನ ಸಂಗೀತ ಪ್ರಪಂಚದಲ್ಲಿ ಗುರುತಿಸಿಕೊಳ್ಳುವುದು ಇಂದು ಸರ್ವೇಸಾಮಾನ್ಯವಾಗಿದೆ. ಇನ್ನು ಮೃದಂಗ, ಪಿಟೀಲು, ಘಟ ಇತ್ಯಾದಿ ವಾದ್ಯವಿಭಾಗದಲ್ಲಿಯೂ ಕಲಾವಿದರು ಒಂದಷ್ಟು ಮಂದಿ ತಯಾರಾಗಿಬಿಟ್ಟಲ್ಲಿಗೆ ಕರಾವಳಿ ಸಂಗೀತಸಂಸ್ಕೃತಿಯ ಪ್ರಭಾವಳಿ ಶೋಭಾಯಮಾನ.
ಇವೆಲ್ಲ ಬೆಳವಣಿಗೆಗಳನ್ನು ಪ್ರೋತ್ಸಾಹಪೂರ್ವಕವಾಗಿ ಕಾಪಿಡುವ ನಿಟ್ಟಿನಲ್ಲಿ ಇದೇ ಮೊದಲಬಾರಿಗೆ ಭಾರತೀಯ ವಿದ್ಯಾಭವನ ಮತ್ತು ಮಣಿ ಕೃಷ್ಣಸ್ವಾಮಿ ಅಕಾಡೆಮಿ ನೇತೃತ್ವದಲ್ಲಿ ಯುವ ಸಂಗೀತೋತ್ಸವ ಆಗಸ್ಟ್ 26-27ರಂದು ಪುರಭವನದಲ್ಲಿ ಆಯೋಜನೆ ಯಾಗುತ್ತಿದೆ. ಇದನ್ನು ಪರಿಣಾಮಕಾರಿಯಾಗಿ, ದಾಖಲಾರ್ಹವಾಗಿ ಭವಿಷ್ಯ ದಲ್ಲೂ ಅವಿರತವಾಗಿ ಕೊಂಡೊಯ್ಯುವ ಧ್ಯೇಯವೂ ಜತೆಗೂಡಿದೆ. ಆಯ್ದ ಕಲಾವಿದ ರನ್ನು ಚೆನ್ನೈನಲ್ಲಿ ನಡೆಯಲಿರುವ ಯುವ ಸಂಗೀತೋತ್ಸವದಲ್ಲಿಯೂ ಭಾಗವಹಿಸುವಂತೆ ಮಾಡಲಾಗುತ್ತಿದೆ. ಅಂತೆಯೇ ನವೆಂಬರ್ 3-4-5ರಂದು ರಾಗಸುಧಾರಸ-2017 ಸಂಗೀತೋತ್ಸವವೂ ಸಂಪನ್ನಗೊಳ್ಳಲಿದೆ. ಇದೇ ಸಂದರ್ಭದಲ್ಲಿ ನಾಡು-ಹೊರನಾಡುಗಳ ಪ್ರಸಿದ್ಧರ ಸಂಗೀತ ಕಛೇರಿಗಳಲ್ಲಿ ಭರವಸೆಯನ್ನು ಮೂಡಿಸಿರುವ ಯುವಮಾರ್ದಂಗಿಕ, ಕಲಾವಂತ ನಿಕ್ಷಿತ್ ಪುತ್ತೂರು ಇವರಿಗೆ ಯುವಕಲಾಮಣಿ-2017ನೇ ಪ್ರಶಸ್ತಿಯನ್ನು ನೀಡುವ ಸಂಕಲ್ಪ ಒಮ್ಮತದಿಂದ ಮೂಡಿದೆ. ಈ ಎಲ್ಲ ಉಪಕ್ರಮಗಳು ಉತ್ಸವರೂಪದಲ್ಲಿ ಸಂಗೀತ ಪ್ರಪಂಚದಲ್ಲಿ ಮಹಣ್ತೀಪೂರ್ಣ ಇತಿಹಾಸವನ್ನು ಬರೆಯಲಿ.
ಡಾ| ಮನೋರಮಾ ಬಿ.ಎನ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ
ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ
Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್ ಜೈಕಾರ !
Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ
Idu Entha Lokavayya: “ಕೋಸ್ಟಲ್” ನಿಂದ ಕರುನಾಡು!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.