ದ್ವಂದ್ವದಲ್ಲಿ ಮೆರೆದ ಶೂರ್ಪನಖಿ ಕೂಡಾಟದಲ್ಲಿ ರಂಜಿಸಿದ ಸುದರ್ಶನ
Team Udayavani, Oct 5, 2018, 6:00 AM IST
ಶಿಸ್ತು, ಸಮಯಪ್ರಜ್ಞೆ ಮೆರೆದ ಕಾರ್ಯಕ್ರಮ. ಪ್ರೇಕ್ಷಕರು ಯಕ್ಷಗಾನವನ್ನು ಆಸ್ವಾದಿಸಿದ ರೀತಿ ಖುಷಿಕೊಟ್ಟಿತು. ಮೆಚ್ಚುಗೆಯನ್ನು ಕೇವಲ ಚೊಕ್ಕದಾದ ಕರತಾಡನದ ಮೂಲಕ ರಸಭಂಗವಾಗದಂತೆ ಪ್ರಕಟಪಡಿಸಿದ್ದು ಉಲ್ಲೇಖನೀಯ. ಜತೆಗೆ ಸಂಘಟಕರ ಸಮಯಪ್ರಜ್ಞೆ ಮಾದರಿಯಾಗುವಂಥದ್ದೇ.
ಶಿರ್ವದ ಶ್ರೀ ಮಹಾಲಸಾ ನಾರಾಯಣೀ ದೇವಸ್ಥಾನದಲ್ಲಿ ಪ್ರಬುದ್ಧ ಕಲಾವಿದರಿಂದ ಪ್ರದರ್ಶನಗೊಂಡ ಎರಡು ಯಕ್ಷಗಾನ ಪ್ರಸಂಗಗಳು ಹೃನ್ಮನಗಳಿಗೆ ಮುದ ನೀಡಿದವು. ಪ್ರಮುಖವಾಗಿ ಗಮನ ಸೆಳೆದದ್ದು ಶಿಸ್ತು ಮತ್ತು ಸಮಯಪ್ರಜ್ಞೆ. ಕಾರ್ಯಕ್ರಮದಲ್ಲಿ ನೆರೆದಿದ್ದ ಸರಿಸುಮಾರು 2,000ದಷ್ಟು ಪ್ರೇಕ್ಷಕರು ತೋರಿಸಿದ ಶಿಸ್ತು ಮತ್ತು ಯಕ್ಷಗಾನವನ್ನು ಆಸ್ವಾದಿಸಿದ ರೀತಿ ಖುಷಿಕೊಟ್ಟಿತು. ಮೆಚ್ಚುಗೆಯನ್ನು ಕೇವಲ ಚೊಕ್ಕದಾದ ಕರತಾಡನದ ಮೂಲಕ ರಸಭಂಗವಾಗದಂತೆ ಪ್ರಕಟಪಡಿಸಿದ್ದು ಉಲ್ಲೇಖನೀಯ. ಜತೆಗೆ ಸಂಘಟಕರ ಸಮಯಪ್ರಜ್ಞೆ ಇತರರಿಗೆ ಮಾದರಿಯಾಗುವಂಥದ್ದೇ. ಕಾರ್ಯಕ್ರಮ ಆರಂಭ ಮತ್ತು ಸಮಾಪ್ತಿ ನಿಗದಿತ ಸಮಯದಲ್ಲೇ ಆಗಿರುವುದು ಇಲ್ಲಿನ ಹೆಚ್ಚುಗಾರಿಕೆ. ಅನಂತ ಮೂಡಿತ್ತಾಯರ ಅರ್ಥವತ್ತಾದ ಹಾಗೂ ಜವಾಬ್ದಾರಿಯುತ ನಿರೂಪಣೆ ಇದಕ್ಕೆ ಪೂರಕವಾಗಿತ್ತು.
ಮಧ್ಯಾಹ್ನ 1.30ಕ್ಕೆ ಮಾಯಾ ಶೂರ್ಪನಖೀ ತೆಂಕು ಯಕ್ಷಗಾನ ಆರಂಭವಾಯಿತು. ಸುಂದರ ಹಾಡುಗಳಿರುವ ಈ ಪ್ರಸಂಗದಲ್ಲಿ ಗಿರೀಶ್ ರೈ ಕಕ್ಕೆಪದವು ಮತ್ತು ಕಾವ್ಯಶ್ರೀ ಆಜೇರು ಅವರ ದ್ವಂದ್ವ ಗಾಯನ ಮುದ ನೀಡಿತು. ಇಲ್ಲಿ ಹಾಡುಗಳಿಗೆ ಹೆಚ್ಚು ಸಮಯ ಸಿಕ್ಕಿದ್ದು ಖುಷಿ ಕೊಟ್ಟಿತು. ಪ್ರತಿಯೊಂದು ಪಾತ್ರಗಳು ಕೂಡ ಉತ್ತಮ ಪ್ರದರ್ಶನಗಳನ್ನೇ ನೀಡಿದವಾದರೂ ಮಾಯಾ ಶೂರ್ಪನಖೀಯಾಗಿ ರಕ್ಷಿತ್ ಶೆಟ್ಟಿ ಅವರ ನಾಟ್ಯ, ಅಲಂಕಾರ, ವಯ್ನಾರ, ಮಾತುಗಳೆಲ್ಲವೂ ಹೆಚ್ಚು ತಟ್ಟಿದವು. ಲಕ್ಷ್ಮಣನಾಗಿದ್ದ ಗಣೇಶ್ ಶೆಟ್ಟಿ ಸಾಣೂರು, ಸೀತೆಯಾಗಿ ಸಂದೀಪ ಶೆಟ್ಟಿ ಕಾವೂರು ಹಾಗೂ ಕೊನೆಕ್ಷಣದಲ್ಲಿ ಆಗಿದ್ದ ಬದಲಾವಣೆಯಂತೆ ಘೋರ ಶೂರ್ಪನಖಿ ಪಾತ್ರ ಮಾಡಿದ್ದ ನಿತಿನ್ ಕುಂಪಲ ಉತ್ತಮ ಅಭಿನಯ ತೋರಿದ್ದಾರೆ. ಸ್ವರತೂಕವೊಂದನ್ನು ಹೊರತುಪಡಿಸಿ ರಾಮನ ಪಾತ್ರ ಮಾಡಿದ್ದ ಪ್ರದೀಪ ವಿ. ಸಾಮಗ ಅವರೂ ಮೆಚ್ಚುಗೆಗೆ ಅರ್ಹರು.
ಈ ಪ್ರಸಂಗದ ಬಳಿಕ ಜರಗಿದ ಸಭಾ ಕಾರ್ಯಕ್ರಮವೂ ಸಮಯಪ್ರಜ್ಞೆಯನ್ನು ಮೆರೆಯಿತು. ನಾಲ್ಕೆçದು ಮಂದಿ ಮಾತನಾಡಿದ್ದರೂ, ಸಮ್ಮಾನವಿದ್ದರೂ 30 ನಿಮಿಷಗಳ ಅವಧಿಯ ಸಭೆಯನ್ನು 28 ನಿಮಿಷಗಳಲ್ಲೇ ಮುಗಿಸಲಾಗಿತ್ತು. ಯಾವ ರೀತಿ ಸಭಾ ಕಾರ್ಯಕ್ರಮವೊಂದನ್ನು ಅಚ್ಚುಕಟ್ಟಾಗಿ ಸಮಯಮಿತಿಯೊಳಗೆ ಮುಗಿಸಬಹುದು ಎಂಬುದಕ್ಕೆ ಇದು ಮಾದರಿಯಾಯಿತು.
ಆ ಬಳಿಕ ಬಹುನಿರೀಕ್ಷಿತ ತೆಂಕು ಬಡಗು ಕೂಡಾಟ ಸುದರ್ಶನ ವಿಜಯವು ಪಟ್ಲ ಸತೀಶ್ ಶೆಟ್ಟಿ ಮತ್ತು ಸುರೇಶ್ ಶೆಟ್ಟಿ ಶಂಕರನಾರಾಯಣ ಅವರ ದ್ವಂದ್ವ ಹಾಡುಗಾರಿಕೆಯಲ್ಲಿ ಪ್ರಸ್ತುತಿಗೊಂಡಿತು. ಇವರ ಹಾಡುಗಾರಿಕೆಯ ಲೋಕದಲ್ಲಿ ಪ್ರೇಕ್ಷಕರು ವಿಹರಿಸಿ ಯಕ್ಷಲೋಕದ ರಸವನ್ನು ಮನಸೋ ಇಚ್ಛೆ ಹೀರಿಕೊಂಡರು. ಸುದರ್ಶನನಾಗಿ ಮಿಂಚಿದ ಗೋಪಾಲಾಚಾರ್ಯ ತೀರ್ಥಹಳ್ಳಿ ಅವರ ಚುರುಕಿನ ನಡೆ, ಪ್ರಬುದ್ಧ ತೂಕದ ಮಾತುಗಾರಿಕೆ ಪಾತ್ರದ ಗಾಂಭೀರ್ಯ ಮತ್ತು ಶೋಭೆಯನ್ನು ಹೆಚ್ಚಿಸಿತು. ಜತೆಗೆ ಅವರು ಆಗಾಗ ಅಭಿನಯದ ನಡುವೆ ಹಾಡನ್ನು ಎತ್ತುಗಡೆ ಮಾಡಿರುವುದು ಹೆಚ್ಚುಗಾರಿಕೆಯಾಗಿತ್ತು ಹಾಗೂ ಹೊಸ ಖುಷಿಯನ್ನು ಕೊಟ್ಟಿತ್ತು. ಲಕ್ಷ್ಮೀ ಪಾತ್ರದಲ್ಲಿ ಶಶಿಕಾಂತ ಶೆಟ್ಟಿ ಕಾರ್ಕಳ ಅವರು ಒಂದು ಪರಿಪೂರ್ಣ ಸ್ತ್ರೀಪಾತ್ರಕ್ಕೆ ಏನೆಲ್ಲ ಅಗತ್ಯವೋ ಅವೆಲ್ಲವುಗಳನ್ನು ಸೇರಿಸಿ ಅಭಿನಯಿಸಿ ತೋರಿಸಿದರು. ಅವರ ಮಾತು, ಗಾಂಭೀರ್ಯ, ರೂಪ, ಅಭಿನಯ ಎಲ್ಲವೂ ವೇದಿಕೆಗೆ ಹಾಗೂ ಪಾತ್ರಕ್ಕೆ ಹೊಸ ಘನತೆ ತಂದು ಕೊಟ್ಟಿತು. ವಿಷ್ಣುವಾಗಿ ಹಿರಿಯ ಪ್ರಬುದ್ಧ ಕಲಾವಿದ ಜಯಪ್ರಕಾಶ್ ಶೆಟ್ಟಿ ಅವರು ಅರ್ಥವತ್ತಾದ ಗಾಂಭೀರ್ಯದ ಮಾತಿನಲ್ಲೇ ಭೇಷ್ ಎನಿಸಿಕೊಂಡರು. ಪ್ರಸೂದನನಾಗಿ ರಾಧಾಕೃಷ್ಣ ನಾವಡ ಅವರ ಅಭಿನಯ ಇಡೀ ರಂಗವನ್ನು ತುಂಬಿತ್ತು ಮತ್ತು ಅವರು ತೋರಿದ್ದ ಅಚ್ಚುಕಟ್ಟುತನ ಆ ಪಾತ್ರವನ್ನು ವೇದಿಕೆಯಲ್ಲೇ ಉಳಿಸಿಕೊಳ್ಳಲು ಮನಸ್ಸು ಬಯಸುವಂತೆ ಮಾಡಿತ್ತು. ದೇವೇಂದ್ರನ ಪಾತ್ರ ಸಮಾಧಾನಕರವಾಗಿತ್ತು. ಇಡೀ ಕಾರ್ಯಕ್ರಮದ ಯಶಸ್ಸಿನಲ್ಲಿ ಧ್ವನಿ ಮತ್ತು ಬೆಳಕಿನ ಕೊಡುಗೆ ಉಲ್ಲೇಖನೀಯ. ಈ ದೇವಸ್ಥಾನದಲ್ಲಿ ನಾಲ್ಕನೇ ವರ್ಷ ಇಂಥದ್ದೊಂದು ಅದ್ಭುತ ಕಾರ್ಯಕ್ರಮ ನೀಡಿರುವ ಕೊಲ್ಲಬೆಟ್ಟು ರವೀಂದ್ರ ಶೆಟ್ಟಿ ಅವರ ಯಕ್ಷಗಾನ ಪ್ರೇಮ ಮತ್ತು ಅಭಿಮಾನ, ಕಲಾ ಪೋಷಣೆಯ ಹೃದಯವನ್ನು ಕೊಂಡಾಡುವುದು ಅಗತ್ಯ.
ಪುತ್ತಿಗೆ ಪದ್ಮನಾಭ ರೈ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ
Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ
Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ
Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.