ದೇವಸ್ಥಾನದಲ್ಲಿ ಸುಶ್ರಾವ್ಯ ಸಂಗೀತ
Team Udayavani, Sep 15, 2017, 12:10 PM IST
ವಿಟ್ಲ ಶ್ರೀ ಭಗವತಿ ದೇವಸ್ಥಾನದಲ್ಲಿ ಸಿಂಹಮಾಸದ ಪೂಜೆಯ ಸಂದರ್ಭದಲ್ಲಿ ವಿ| ಗೀತಾ ಸಾರಡ್ಕ ಮತ್ತು ಬಳಗದವರು ನಡೆಸಿಕೊಟ್ಟ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಸುಶ್ರಾವ್ಯವಾಗಿ ಮೂಡಿ ಬಂತು. “ಸರಸೀರುಪಾಸನಾ ಪ್ರಿಯೆ’ ನಾಟಿ ರಾಗದ ಶ್ರೀದೇವಿ ಸ್ತುತಿಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು.
“ನಾಗ ಗಾಂಧಾರ’ ರಾಗದ “ಸರಸಿಜನಾಭ ಸೋದರಿ’ ಮತ್ತು “ಅಮೃತ ವರ್ಷಿಣಿ’ ರಾಗದ “ಆನಂದಾಮೃತಕರ್ಷಿಣಿ’ ಸೂಕ್ತ ಆಲಾಪನೆ ಸ್ವರ ಪ್ರಸ್ತಾರದಿಂದ ಮಹತ್ವಯುತವಾದ ಕೀರ್ತನೆ. ಕಿರಿದಾದ ಆಲಾಪನೆಯಿಂದ “ರಂಜಿನಿ’ ರಾಗದ “ಪದ್ಮರಾಗಮಣಿ ಭೂಷಣೆ’ ಕೃತಿ ಕರ್ಣ ಮನೋಹರವಾಗಿತ್ತು. “ಕಾನಡ’ ರಾಗದ “ಮಾಮವ ಸದಾಜನನಿ’ ಸೂಕ್ತ ಆಲಾಪನೆಯಿಂದ ಸ್ಫೂರ್ತಿದಾಯಕವಾಗಿತ್ತು. “ಮೋಹನ ಕಲ್ಯಾಣಿ’ ರಾಗದ “ಭುವನೇಶ್ವರಿಯ ನೆನೆ ಮಾನಸವೆ’, “ವರವ ಕೊಡು ಎನಗೆ ವಾಗ್ದೇವಿ’ ಕನಕದಾಸರ ರಚನೆಯ ಹಾಡು ಕೀರ್ತನಾಸಕ್ತರ ಮನ ಸೆಳೆಯಿತು.
“ಷಣ್ಮುಖ ಪ್ರಿಯ’ ರಾಗದ “ದಯಾಮಯಿ ಶಾರದಾ’ ದೇವರನಾಮ ವಿದ್ವತ್ ಪೂರ್ಣವಾಗಿ ಮೂಡಿ ಬಂತು. “ಮಧ್ಯಮಾವತಿ’ ರಾಗದ “ಭಾಗ್ಯಲಕ್ಷ್ಮೀ ಬಾರಮ್ಮ’ ಜನಪ್ರಿಯ ಕೃತಿಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು. ಪ್ರಾರಂಭದಲ್ಲಿ ಕಿರಿಯ ಸಂಗೀತ ವಿದ್ಯಾರ್ಥಿಗಳು ಸಂಗೀತ ಕಾರ್ಯಕ್ರಮ ನೀಡಿದರು. ಹಿರಿಯ ಸಂಗೀತ ವಿದ್ಯಾರ್ಥಿಗಳಾದ ಅನಘಾ ಮರಕ್ಕಿಣಿ ಮತ್ತು ಕ್ಷಮಾಶ್ರೀ ಕೋಡಂದೂರು ಉತ್ತಮ ಹಾಡುಗಾರಿಕೆ ಪ್ರದರ್ಶಿಸಿದರು. ಬಾಲರಾಜ್ ಬೆದ್ರಡಿ ವಯಲಿನ್‌ನಲ್ಲಿ ಮತ್ತು ಮುರಳಿಕೃಷ್ಣ ಕುಕ್ಕಿಲ ಮೃದಂಗದಲ್ಲಿ ಸಹಕರಿಸಿ, ಒಳ್ಳೆಯ ಹಿಮ್ಮೇಳದಿಂದ ಕಾರ್ಯಕ್ರಮ ರಂಜಿಸಿತು. ಸೇರಿದ್ದ ಭಕ್ತರೂ ಮಕ್ಕಳನ್ನು ಪ್ರೋತ್ಸಾಹಿಸಿದರು.
ಅನೂಷಾ ಹೊನ್ನೇಕೂಲು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.