ವಿಜಯದಶಮಿ ಸಂಗೀತೋತ್ಸವದಲ್ಲಿ ಮೆರೆದ ಪ್ರತಿಭೆಗಳು
Team Udayavani, Nov 1, 2019, 3:24 AM IST
ಪರ್ಕಳದ ಸರಿಗಮಭಾರತಿಯಲ್ಲಿ ಈ ಬಾರಿಯ ವಿಜಯದಶಮಿ ಸಂಗೀತೋತ್ಸವದ ಆರಂಭದಲ್ಲಿ ಪಿಳ್ಳಾರಿ ಗೀತೆಗಳು ಹಾಗೂ ಪುಟಾಣಿಗಳ ಛೋಟಾ ಕಛೇರಿಗಳು ನಡೆದವು. ಇದರಲ್ಲಿ ಭಾಗವಹಿಸಿದವರು ಗಾಥಾ, ಶ್ರೇಯಾ ಭಟ್, ವರ್ಧನ್ ಶಿವತ್ತಾಯ, ಚೈತನ್ಯ ಜಿ.ಯಂ, ಚಿನ್ಮಯ ಕೃಷ್ಣ .ಹಾಡುಗಾರಿಕೆ, ಚಿತ್ಕಲ, ವೈಭವ್ ಪೈ, ಭಾವನಾ ಭಟ್, ಪ್ರಮಥ್ ಭಾಗವತ್, ಪ್ರಸನ್ನ ಎಚ್, ಸುದರ್ಶನ್- (ವಯೊಲಿನ್), ಹಿರಣ್ಮಯ, ದಾಶರಥಿ, ಅವಿನಾಶ್ (ಮೃದಂಗ) ಸಹಕಾರವಿತ್ತರು. ಸಂಗೀತೋತ್ಸವದ ಪ್ರಥಮ ಕಾರ್ಯಕ್ರಮವನ್ನು ನೀಡಿದವರು, ಕು| ಆತ್ರೇಯಿ ಕೃಷ್ಣ, ಕಾರ್ಕಳ. ಇವರು ಮನೋಧರ್ಮಕ್ಕಾಗಿ ಆರಿಸಿಕೊಂಡದ್ದು ಕಾನಡದ ಮಾಮವಸದಾಜನನಿ ಹಾಗೂ ಭೈರವಿಯ ಏನಾಟಿನೋಮು ಫಲಮೋ. ಈ ಎರಡೂ ಕೃತಿಗಳಲ್ಲಿ ಆಲಾಪನೆ, ನೆರವಲ್, ಸ್ವರ ಪ್ರಸ್ತಾರಗಳಲ್ಲಿ ಉನ್ನತ ಮಟ್ಟದ ಪ್ರಬುದ್ಧತೆಯನ್ನು ತೋರಿದ ಕಲಾವಿದೆ, ಕೃತಿ ಪ್ರಸ್ತುತಿಗಳಲ್ಲಿಯೂ ಶ್ರದ್ಧೆಯನ್ನು ತೋರಿ ಉತ್ತಮ ಸಂಗತಿಗಳನ್ನು ಹಾಡಿ ಸೈ ಎನಿಸಿಕೊಂಡರು. ಇವರು ಹಾಡಿದ ಉಳಿದ ರಚನೆಗಳು ಶಹನ ವರ್ಣ, ಸರಸೀರುಹಾಸನ ಪ್ರಿಯೇ (ನಾಟ), ಸರಸ್ವತ್ಯಾ ಭಗವತ್ಯಾ ಸಂರಕ್ಷಿತೋಹಂ (ಛಾಯಾಗೌಳ), ವರವಕೊಡು ಎನಗೆ (ಸಿಂಹೇಂದ್ರ ಮಧ್ಯಮ), ತಿಲ್ಲಾನ (ಬೃಂದಾವನೀ). ಈ ಕಛೇರಿಗೆ ವಸಂತಿ ರಾಮ ಭಟ್ ವಯೊಲಿನ್ ಹಾಗೂ ಡಾ| ಬಾಲಚಂದ್ರ ಆಚಾರ್ ಮೃದಂಗದಲ್ಲಿ ಪಕ್ಕವಾದ್ಯವನ್ನು ನೀಡಿದರು. ಮುಂದೆ ಗುರುದತ್ ಅಗ್ರಹಾರ ಕೃಷ್ಣಮೂರ್ತಿ ಅವರು ಹಿಂದುಸ್ಥಾನಿ ಗಾಯನದ ಸವಿಯನ್ನು ಉಣಬಡಿಸಿದರು. ಇವರು ಆರಿಸಿಕೊಂಡ ರಾಗಗಳು ಗುರ್ಜರಿ ತೋಡಿ ಹಾಗೂ ಪಟ್‌ದೀಪ್. ಗುರ್ಜರಿ ತೋಡಿಯಲ್ಲಿ “ಮೋಪೆ ದಯಾ ಕರೋ’ ಈ ಸಾಲುಗಳನ್ನು ಬಗೆಬಗೆಯಾಗಿ ವಿನ್ಯಾಸಗೊಳಿಸಿದರು. ಸ,ರಿ,ಗ ಹೀಗೆ ಮೂಲ ಸ್ವರಗಳನ್ನು ಬೇರೆ ಬೇರೆ ರೀತಿಗಳಲ್ಲಿ ವಿಸ್ಮಯವಾಗುವಂತೆ ಹಾಡಿ ತೋರಿಸಿದರು. ಪ್ರತಿ ನಿಲುಗಡೆಯಲ್ಲಿ ಸ್ವರಗಳನ್ನು ಶೃತಿಗೆ ಸೇರಿಸುವಾಗ ಅಪೂರ್ವ ಆನಂದವಾಗುತ್ತಿತ್ತು. ಈ ಗಾಯನಕ್ಕೆ ಶಂಕರ್ ಶೆಣೈ ಅವರು ಹಾರ್ಮೋನಿಯಂ, ಹಾಗೂ ದಿನೇಶ್ ಶೆಣೈ ತಬಲಾದಲ್ಲಿ ಸಾಥ್ ನೀಡಿದರು. ಈ ಸಂಗೀತೋತ್ಸವದಲ್ಲಿ ಇದೊಂದು ಕಳಶಪ್ರದ ಕಾರ್ಯಕ್ರಮವೆನಿಸಿತು. ಮುಂದೆ ಪುಟ್ಟ ಮಹತಿ ಕಾರ್ಕಳ ವಯೊಲಿನ್ ಸೋಲೋ ವಾದನ ಕಾರ್ಯಕ್ರಮ ನೀಡಿದರು. ಸಾವೇರಿ ವರ್ಣ, ಮಧ್ಯಮಾವತಿಯನ್ನು ಪ್ರಧಾನ ರಾಗವಾಗಿಸಿಕೊಂಡು ವಿನಾಯಕುನಿವಲೆ ಕೃತಿಯಲ್ಲಿ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಿದರು. ಕೊನೆಯಲ್ಲಿ ಶುದ್ಧ ಸಾಳವಿಯ ತಿಲ್ಲಾನವನ್ನು ನುಡಿಸಲಾಯಿತು.
ಮುಂದಿನ ಭಾಗದಲ್ಲಿ ಕು| ಅದಿತಿ ಹಾಗೂ ಕು| ಅರುಂಧತಿ ಹೆಬ್ಟಾರ್ ಅವಳಿ ಸಹೋದರಿಯರ ದ್ವಂದ್ವ ಪಿಟೀಲು ವಾದನವಿತ್ತು. ಇವರು ನುಡಿಸಿದ ರಚನೆಗಳು, ನವರಾಗಮಾಲಿಕಾ ವರ್ಣ, ಷಣ್ಮುಖಪ್ರಿಯ ರಾಗಾಲಾಪನೆ ಸಿದ್ಧಿವಿನಾಯಕಂ ಕೃತಿಗೆ ಪಲ್ಲವಿಯಲ್ಲಿ ಸ್ವರಪ್ರಸ್ತಾರ, ತರಂಗಿಣಿ ರಾಗದ “ಮಾಯೇತ್ವಂ ಯಾಹೀ’, “ಜನನೀ ನಿನ್ನುವಿನಾ’ (ರೀತಿಗೌಳ), ಪೂರ್ವಿಕಲ್ಯಾಣಿ ಆಲಾಪನೆ, ಜ್ಞಾನಮೊಸಗರಾದಾ ಕೃತಿ “ಪರಮಾತು¾ಡು ಜೀವಾತು¾ಡು’ನಲ್ಲಿ ನೆರವಲ್ ಮತ್ತು ಕಲ್ಪನಾಸ್ವರಗಳು, ಬಾರೋ ಕೃಷ್ಣಯ್ಯ, ಬೇಹಾಗ್ ತಿಲ್ಲಾನ, ಹೀಗೆ ಒಂದು ಸಾಂಪ್ರದಾಯಿಕ ಕಛೇರಿಯಲ್ಲಿ ಬರುವ ಎಲ್ಲಾ ರೀತಿಯ ರಚನೆಗಳನ್ನು ಸೀಮಿತ ಅವಧಿಯಲ್ಲಿ ನುಡಿಸಿ ಭೇಷ್ ಎನಿಸಿಕೊಂಡರು.
ಮಣಿಪಾಲದ ಡಾ| ಬಾಲಕೃಷ್ಣ ಅಯ್ಯಂಗಾರ್ ಮುಂದೆ ತಮ್ಮ ಕೊಳಲುವಾದನವನ್ನು ಪ್ರಸ್ತುತ ಪಡಿಸಿದರು. ಕಮಲಾಮನೋಹರಿ ವರ್ಣ, ಮಂದಾರಿಯಲ್ಲಿ ಭಜರೇ ವಿN°àಶಂ, ಬೇಗಡೆಯ ಇಂತ ಪರಾಕೇಲನಮ್ಮ, ಕಲ್ಯಾಣಿಯಲ್ಲಿ ಸುಂದರಿ ನೀ ದಿವ್ಯ ರೂಪಮು ಹಾಗೂ ರಾಗಮಾಲಿಕೆಯಲ್ಲಿ ರಂಜನೀ ಮೃದು ಪಂಕಜ ಲೋಚನಿ ಮೊದಲಾದ ರಚನೆಗಳನ್ನು ನುಡಿಸಿದರು. ವಿಸ್ತಾರಕ್ಕಾಗಿ ಕಲ್ಯಾಣಿಯನ್ನು ಆರಿಸಿಕೊಂಡು ಒಂದು ಸೊಗಸಾದ ವೇಣುವಾದನ ಕಛೇರಿಯನ್ನು ನೀಡಿದರು. ಸುದರ್ಶನ್ ವಯೊಲಿನ್ ಪಕ್ಕವಾದ್ಯ ನೀಡಿದರು. ಮೇಲಿನ ಈ ಮೂರೂ ಕಛೇರಿಗಳಿಗೆ ದಾಶರಥಿ ಮೃದಂಗ ಪಕ್ಕವಾದ್ಯ ನುಡಿಸಿದರು. ತರುವಾಯ ಹಿರಿ-ಕಿರಿ ಕಲಾವಿದರಿಂದ ತ್ಯಾಗರಾಜರ ಪಂಚರತ್ನ ಕೃತಿಗಳ ಹಾಗೂ ಮುತ್ತುಸ್ವಾಮಿ ದೀಕ್ಷಿತರ ನವಾವರಣ ಕೃತಿಗಳ ಗೋಷ್ಠಿ ಗಾಯನ ನೆರವೇರಿತು.
ಈ ಸಂಗೀತೋತ್ಸವದ ಪ್ರಧಾನ ಕಛೇರಿಯಾಗಿ ಎನ್. ಆರ್. ಪ್ರಶಾಂತ್ ಅವರ ಹಾಡುಗಾರಿಕೆಯನ್ನು ಏರ್ಪಡಿಸಲಾಗಿತ್ತು. “ಮಾಲ್ ಮರುಗನ್’ ಹಿಂದೋಳ ವರ್ಣದಿಂದ ಕಛೇರಿಯನ್ನು ಪ್ರಾರಂಭಿಸಿದರು. ತರುವಾಯ “ಕರಿಕಳಭಮುಖಂ’ ಕೃತಿಯ ಪಲ್ಲವಿಯಲ್ಲಿ ಸಾವೇರಿಯ ವಜ್ಯì ಸ್ವರಗಳಲ್ಲಿ ಚಮತ್ಕಾರಯುತ ಸ್ವರ ಪ್ರಸ್ತಾರವನ್ನು ಮಾಡಿ ರಂಜಿಸಿದರು. ಕನ್ನಡ ರಾಗದ ಶ್ರೀ ಚಾಮುಂಡೇಶ್ವರಿ ದೇವಿ, ಜಗದಂಬಾ ಮದಂಬಾ (ಭಾನುಮತಿ), ಓಂ ನಮೋ ನಾರಾಯಣಾ (ಕರ್ಣ ರಂಜನಿ) ಸದ್ಗುರು ಸ್ವಾಮಿನೀ (ರೀತಿಗೌಳ), ಪರಂಜ್ಯೋತಿಶ್ಮತಿ ಪಾರ್ವತೀ (ಜ್ಯೋತಿ ಸ್ವರೂಪಿಣಿ), ಕೃತಿಗಳ ಬಳಿಕ ಆರಭಿಯ ಆಲಾಪನೆಯನ್ನು ತೆಗೆದುಕೊಂಡರು. ಇದು ರಾಗದ ತಿರುಳನ್ನು ಹಿಂಜಿ ಎಳೆದೆಳೆದು ಚಿತ್ರ ಬಿಡಿಸಿದಂತಿತ್ತು. “ಶ್ರೀ ಸರಸ್ವತೀ ನಮೋಸ್ತುತೇ’ ಕೃತಿಯ ಅತಿ ವಿಳಂಬ ರೂಪ ಇಲ್ಲಿ ಅನಾವರಣಗೊಂಡಿತು. ಪಲ್ಲವಿಗೆ ಸ್ವರಗಳನ್ನು ಪೋಣಿಸಿದ ನಂತರ ಬಹು ಪ್ರಚಲಿತ ಆರಭಿಮಾನಂ ರಾಗಮಾಲಿಕೆಯನ್ನು ಹಾಡಿದರು. ಕೀರವಾಣಿಯಲ್ಲಿ “ಬ್ರೋವು ಬ್ರೋವು ಮನಿನೇ’ ಪ್ರಧಾನ ರಾಗವಾಗಿ ಮೂಡಿ ಬಂದು ಕಲಾವಿದರ ವಿದ್ವತ್ತನ್ನು ಎತ್ತಿ ಹಿಡಿಯಿತು. “ಸದಾ ನೀಪಾದ’ ಸ್ವರಾಕ್ಷರಗಳಿಗೆ ಮಾಡಿದ ಸ್ವರಪ್ರಸ್ತಾರವು ಅರ್ಥಗರ್ಭಿತ ಅನಿಸಿತು. ಇಲ್ಲಿ ಮೂಡಿ ಬಂದ ತನಿ ಆವರ್ತನದಲ್ಲಿ ವಿಜೃಂಭಿಸಿದವರು ಮೃದಂಗ ಪಕ್ಕವಾದ್ಯ ನೀಡಿದ ಅರ್ಜುನ್ ಕುಮಾರ್. ಮಧ್ಯೆಮಧ್ಯೆ ಮೂಡಿ ಬಂದ ನೀದಂತುಣೈ ರಾಗಮಾಲಿಕೆ, ಸಾರಿದೆನೋ ನಿನ್ನ (ವಿಟಪಿ), ಸ್ಮರವಾರಂ(ಜೋಗ್), ಗೋವರ್ಧನ (ದರ್ಬಾರಿ ಕಾನಡ), ಹಂಸಾನಂದಿಯಲ್ಲಿ ಕನ್ನಡದ ಶ್ರೀಮುಷ್ಣಮ್ ರಾಜಾರಾವ್ ವಿರಚಿತ ತಿಲ್ಲಾನ ಹೀಗೆ ಕಛೇರಿ ಮುಕ್ತಾಯಗೋಡಿತು. ಮೃದಂಗ ಪಕ್ಕವಾದ್ಯಕ್ಕೆ ಕುಳಿತುಕೊಂಡಿದ್ದ ಅರ್ಜುನ್ ಕುಮಾರ್ ಹಾಗೂ ಪ್ರಶಾಂತ್ ಅವರ ನಡುವೆ ಉತ್ತಮ ಸಂವಹನ ಹಾಗೂ ಪರಸ್ಪರರನ್ನು ಅಭಿನಂದಿಸಿಕೊಳ್ಳುವುದು ಕಛೇರಿಯುದ್ದಕ್ಕೂ ನಡೆಯುತ್ತಲೇ ಇತ್ತು. ಉತ್ತಮ ಶಾರೀರ, ನಗುಮುಖದ ಲೀಲಾಜಾಲ ಪ್ರಸ್ತುತಿ, ಹಾಡುಗಾರ ಮತ್ತು$ ಸಭಿಕರ ಮಧ್ಯೆ ಒಂದು ಉತ್ತಮ ಬೈಂಡಿಂಗ್ ಹೀಗೆ ಅನೇಕ ಉತ್ತಮತೆಗಳು ಈ ಕಛೇರಿಯ ಯಶಸ್ಸಿಗೆ ಕಾರಣವಾದುವು. ವೇಣುಗೋಪಾಲ್ ಶ್ಯಾನುಭೋಗ್ ಅವರು ಕಛೇರಿಗೆ ಉತ್ತಮ ವಯೊಲಿನ್ ಸಹಕಾರ ನೀಡಿದರು. ಕೊನೆಯಲ್ಲಿ ವಿ| ರಂಜಿತಾ ಅವಿನಾಶ್ ಅವರ ಭರತನಾಟ್ಯ ಪ್ರದರ್ಶನ ರಂಜಿಸಿತು. ಉತ್ತಮ ಹಾವಭಾವಗಳಿಂದ ಪ್ರೇಕ್ಷಕರ ಮನಗೆದ್ದ ಪ್ರತಿಭಾವಂತೆ ಈಕೆ.
ವಿದ್ಯಾಲಕ್ಷ್ಮೀ ಕಡಿಯಾಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ
ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ
Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್ ಜೈಕಾರ !
Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ
Idu Entha Lokavayya: “ಕೋಸ್ಟಲ್” ನಿಂದ ಕರುನಾಡು!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.