ಮೌನದಾಚೆಯ ಮಾತುಗಳಲ್ಲಿ ತಲ್ಲೂರು
Team Udayavani, Apr 27, 2018, 6:00 AM IST
ಶಬ್ದರಹಿತ ಸ್ತಬ್ದ ವಿಗ್ರಹವೊಂದನ್ನು ಮೌನದಾಚೆಯ ಮಾತುಗಳ ಧೋರಣೆಗಳಿಂದ, ಅವ್ಯಕ್ತ ನಿಲುವುಗಳಿಂದ ಸಂಭಾಷಣೆಗೆ ಸೂತ್ರ ಕಟ್ಟಿತೆಂದರೆ ಅದು ವಿಗ್ರಹದ ಸಾಮರ್ಥ್ಯವೆನ್ನುವುದಕ್ಕಿಂದೂ ಕೃತಿಕರ್ತನ ಸಾರ್ಥಕ್ಯವೆನ್ನಬಹುದು. ಮೌನ ಸಂವೇದನೆಗಳ ಧಾತುಗಳೊಂದಿಗೆ ಅಪಾರ ಅರ್ಥವಂತಿಕೆಯನ್ನು ಗ್ರಹಿಸಿತೆಂದರೆ ಆಗ ಕಲಾಕೃತಿಯ ಗಾತ್ರ, ಗೋತ್ರ ಮುಖ್ಯವಾಗಿರುವುದಿಲ್ಲ ಗ್ರಹಿಕೆಯ ಸೂತ್ರ, ಸಂವಹನಾ ಪಾತ್ರವೇ ಎಲ್ಲಕ್ಕಿಂತ ಮಿಗಿಲಾಗಿರುತ್ತದೆ. ಯಾವ ಗಿರಿಯ ಅಮೂರ್ತ ಶಿಲೆಯು ಯಾವ ಗುಡಿಯ ವಿಗ್ರಹವಾಗುವುದೋ?, ಯಾವ ಮರದ ಕೊಂಬೆ ಯಾವ ಗೊಂಬೆಯಾಗುವುದೋ? ಪ್ರಶ್ನೆಗಳ ಆಚೆ ಉತ್ತರಗಳು ತತ್ತರವಾಗದೇ ಎತ್ತರದಲ್ಲಿರುತ್ತವೆ. ವಿಕಾರ ಶಿಲೆಯೂ, ಮರವೂ ಆಕಾರವಾಗುವುದಾದರೆ ಆಕಾರವಾಗುವವರೆಗೆ ಎಲ್ಲಿ ಅಡಗಿತ್ತು ಅದರ ಸಂಪನ್ನರೂಪಗಳು? ಕಲಾವಿದ ಕುಂದಾಪುರದ ಎಲ್.ಎನ್.ತಲ್ಲೂರ್‌ರವರು ಮರವಿರಲಿ, ಶಿಲೆಯಿರಲಿ ಅದು ಭೂತಕಾಲದಲ್ಲಿ ರಥವಾಗಿ ಚಾರಿತ್ರಿಕ ಪಥವಾಗಿದ್ದುದನ್ನು ಆಧುನಿಕ ಕಲಾ ಲೇಪನದೊಂದಿಗೆ ಅನುಸಂಧಾನಕ್ಕೊಳಪಡಿಸಿ ಮೂಲದಂತೆ ಕಾಣಿಸುವ ಅಂತ್ಯವಿಲ್ಲದ ವರ್ತುಲದ ಸಾಮರ್ಥ್ಯದೊಂದಿಗೆ ಅನಾವರಣಗೊಳಿಸುತ್ತಾರೆ. ಪುರಾತನ ವಸ್ತುಗಳನ್ನು ಅದರ ಮೂಲರೂಪದಲ್ಲೇ ಅದರ ಒಳಹೂರಣಗಳನ್ನು ಹೊಸತನದ ದೃಶ್ಯರೂಪಗಳಲ್ಲಿ ಅಭಿವ್ಯಕ್ತಪಡಿಸಿ ಸಾಂಪ್ರದಾಯಕ ಶಿಲ್ಪಗಳು ಗತಕಾಲದ ಹಿತ ವೈಭವಗಳ ಸಮರ್ಥ ಸಾಕ್ಷಿಗಳೆಂಬುದನ್ನು ಸಾದರಪಡಿಸುತ್ತಾರೆ. ಪ್ರಸ್ತುತ ದಕ್ಷಿಣ ಕೊರಿಯಾದಲ್ಲಿ ನೆಲೆಸಿದ್ದಾರೆ.ಪ್ರತಿಷ್ಠಾಪನಾ ಕಲೆಯ ಪ್ರಮುಖ ಪ್ರಾಕ್ಟೀಶನರ್‌ಗಳಲ್ಲಿ ಒಬ್ಬರೆಂದು ಗುರುತಿಸಲ್ಪಡುವ ತಲ್ಲೂರುರವರ ಬಗ್ಗೆ ಅವರ ಸೋದರ ರಾಜಾರಾಮ್ ತಲ್ಲೂರ್‌ರವರು ಇತ್ತೀಚೆಗೆ ಪ್ರಕಟಿಸಿದ ತಲ್ಲೂರು ಎಲ್. ಎನ್. ಕೃತಿಯಲ್ಲಿ ಭಾರತೀಯ ಶಿಲ್ಪ ಅಥವಾ ಸಾಂಪ್ರದಾಯಿಕ ಕಲಾ ಪರಿಕರಗಳು ಇಂದು ಜಾಗತಿಕ ಮಟ್ಟದಲ್ಲಿ ಯಾವ ರೀತಿ ಶೋಭಿಸುತ್ತಿದೆ ಎಂಬುದರ ಬಗ್ಗೆ ಒಳನೋಟವಿದೆ, ಜೊತೆಗೆ ಅವುಗಳು ಒಂದು ಆಯಾಮದ ಬದಲಾದ ಪರಿಪಾಠವಿದೆ. ತಲ್ಲೂರ್‌ರವರು ತನ್ನ ಕೃತಿಯಂಗಳದಲ್ಲಿ ಒಂದು ವಸ್ತು ಅಥವಾ ವಿಚಾರವನ್ನು ತೆಗೆದುಕೊಂಡರೆ ಆ ವಸ್ತು ವಿಷಯಗಳ ತಿರುಳುಗಳನ್ನು ಸಾಂಕೇತಿಕ ರೂಪದಲ್ಲಿ ಸಿಂಚನಗೊಳಿಸುತ್ತಾರೆ. ರಥ, ಮಂಟಪ ಅಥವಾ ಮರದ ಕೆತ್ತನೆಗಳಿಂದ ಕೃತಿರೂಪ ಕೊಟ್ಟಾಗ ವರ್ತಮಾನಕ್ಕೂ, ಭವಿಷ್ಯಕ್ಕೂ ಒಂದು ಸಂಕಲೆಯನ್ನು ನಿರ್ಮಿಸಿ ಸಂಬಂಧಗಳ ಸಂಚಲನವನ್ನು ಮೂಲರೂಪವಾಗಿ ಪ್ರತಿಪಾದಿಸುತ್ತಾರೆ.
ಮನುಷ್ಯನ ಚಂಚಲ ಚಿತ್ತ, ನಿರ್ವಿಕಾರ ಯೋಜನೆಗಳ ಬಗ್ಗೆ ಕಲಾಕೃತಿಯಲ್ಲಿ ವಿಶಿಷ್ಠ ಛಾಪು ಮೂಡಿಸಿ ಅಗೋಚರವಾದ ಮನಸಿನ ರೂಪವನ್ನು ಸಂಕೀರ್ಣಗೊಳಿಸುತ್ತಾರೆ. ಮಾನವ ಮಾಡಿದ ತಪ್ಪನ್ನು ಮರೆಮಾಚಬಹುದು ಆದರೆ ಆತನ ತಪ್ಪಿನಿಂದಾಗಿರುವ ಕಾಣದೇ ಉಳಿದ ದಾಖಲೆಯನ್ನು ತಿದ್ದಲು ಸಾಧ್ಯವಾಗದೇ ಶಾಶ್ವತವಾಗಿ ರೋದಿಸುತ್ತಿರಬಹುದು. ಇರೇಸರ್ ಪ್ರೋ ಎಂಬ ಇವರ ಕಲಾಕೃತಿಯಲ್ಲಿ ಮಾಹಿತಿಗಳನ್ನು ಅಳಿಸಲಾಗದೇ ಉಳಿದುಬಿಡುವಂತಹ ರೂಪಕವನ್ನು ವ್ಯಕ್ತಪಡಿಸಿದ್ದಾರೆ. ಕ್ವಿಂಟಸೆನ್ಸಿಯಲ್ ಎಂಬ ಕಲಾಕೃತಿಯಲ್ಲಿ ಆನೆಯೊಂದರ ದೇಹಾಕೃತಿಯ ಚೂರುಗಳನ್ನು ಹರಡಿಬಿಟ್ಟು ಅದನ್ನು ವೀಕ್ಷಕರು ಜೋಡಿಸಿ ಆನೆಯ ರೂಪಕೊಡುವ ತುದಿಗಾಲಿನ ಛಾಲೆಂಜನ್ನು ಕೊಟ್ಟಿರುತ್ತಾರೆ. ಉಕಾಯ್ ಎಂಬ ಕಲಾಕೃತಿಯು ಮಾನವನ ಸ್ವಾರ್ಥ ಚಿತ್ತಕ್ಕೆ ಮುಗª ಪ್ರಾಣಿ, ಪಕ್ಷಿಗಳನ್ನು ಬಳಸಿಕೊಂಡು ತಾನೇ ಸಮರ್ಥ ಉಳಿದ ಜೀವಿಗಳೆಲ್ಲ ವ್ಯರ್ಥ ಎಂಬ ಅರ್ಥ ನೀಡಿರುತ್ತಾರೆ. ನೀರು ಕಾಗೆಯನ್ನು ಮೀನು ಹಿಡಿಯಲು ಬಳಸುವಾಗ ಅದರ ಕತ್ತಿನ ತಳಭಾಗದಲ್ಲಿ ಕಬ್ಬಿಣದ ಉಂಗುರ ತೊಡಿಸಿ ಅದು ದೊಡ್ಡ ಮೀನುಗಳನ್ನು ನುಂಗಲಾಗದೇ ಬೆಸ್ತನಿಗೆ ಕೊಡಬೇಕಾದ ಅಸಹಾಯಕ ಪರಿಸ್ಥಿತಿಯನ್ನು ತೋರಿಸಿದ್ದಾರೆ. ಮನುಷ್ಯನ ಹುಟ್ಟು-ಸಿಟ್ಟು, ಸಂತಸ-ಸಂಕಟ, ದುಗುಡ-ಒತ್ತಡಗಳನ್ನು ಸಾಂಕೇತಿಕ ರೂಪದಲ್ಲಿ ಸಾಂದರ್ಭಿಕವಾಗಿ ತನ್ನ ಕಲಾಕೃತಿಗಳ ನಿಲುವಿಗಳಿಗೆ ಒಪ್ಪ ಓರಣವಾಗಿ ಬಳಸಿಕೊಂಡು ವೀಕ್ಷಕರ ಮನಸಿಗೆ ನಾಟಿಸಿ ಕೃತಿಯ ಮೆರುಗು ಹೆಚ್ಚಿಸಿ ತೃಪ್ತಿಯ ತೋರಣ ಕಟ್ಟುವುದೇ ತಲ್ಲೂರರ ವೈಶಿಷ್ಟ್ಯ.
ತಲ್ಲೂರು ಅವರ ಕಲಾತಾತ್ವಿಕತೆಗೆ ಅವರು ಬಳಸುವ ವಸ್ತುಗಳ ಬಳಕೆಯ ವೇಳೆ ಎದುರಾಗುವ ಸವಾಲುಗಳನ್ನು ಅನುಸಂಧಾನ ಮಾಡುತ್ತಲೇ, ಸಹಯೋಗದ ವಿಧಾನ ಬಳಸಿಕೊಂಡು ಕಲಾಕೃತಿಗಳನ್ನು ಕಟ್ಟುವ ಅವರ ವಿಧಾನವನ್ನೂ ತೆರೆದಿರಿಸುತ್ತದೆ ಎಂದು ಡಾ. ಹೋಲಿಷಾಫರ್ ಹೇಳುತ್ತಾರೆ. ತಲ್ಲೂರು ಅವರ ಕಲಾಕೃತಿಗಳು ಮೂಲತಃ ಸಾಂಪ್ರದಾಯಿಕ ಮಾಡೆಲಿಂಗ್, ಕೆತ್ತನೆ, ಎರಕದಂತಹ ರೂಪದಲ್ಲಿದೆಯಾದರೂ, ಜೋಡಣೆಯಲ್ಲಿ ತನ್ನ ಅಗತ್ಯಕ್ಕೆ ತಕ್ಕಂತೆ ಒಗ್ಗಿಸಿಕೊಳ್ಳುವಲ್ಲಿ ಮೂಲಭೂತವಾಗಿ ವಿಭಿನ್ನ ಅನಿಸುತ್ತವೆ. ಈ ಬಹುಮುಖೀ ಸವಲತ್ತಿನ ಕಾರಣದಿಂದಾಗಿಯೇ ಪುರಾತನ ಮತ್ತು ಸಮಕಾಲೀನ ಇಕ್ಕಟ್ಟುಗಳೆರಡನ್ನೂ ಏಕಕಾಲದಲ್ಲಿ ಕೆದಕಿ ನೋಡಲು ಈ ಕಲಾವಿದನಿಗೆ ಸಾಧ್ಯವಾಗುತ್ತದೆ ಎಂದು ಪೀಟರ್‌ನಾಗಿ ತಲ್ಲೂರರ ಬಗ್ಗೆ ವಿಶ್ಲೇಷಿಸುತ್ತಾರೆ. ತಲ್ಲೂರುರವರ ಶಿಲ್ಪಗಳನ್ನು ಸತ್ವಭರಿತ ಅನುಭವಕ್ಕೆ ಒಳಪಡಿಸಿದಾಗ ಅದು ಪದರು ಪದರಾಗಿ ಬಿಚ್ಚಿಕೊಳ್ಳುತ್ತಾ ಆಳಕ್ಕೆ ತಲುಪಿದಂತೆಲ್ಲ ಆ ಶಿಲ್ಪ ಹಲವು ಸಾಧ್ಯತೆಗಳತ್ತ ಬೊಟ್ಟು ಮಾಡುತ್ತದೆ. ಜಡ ವಸ್ತುವಾಗಿದ್ದಲ್ಲಿಂದ ಚುರುಕಿನ ಹಲವು ಸಂಭಾವ್ಯತೆಗಳ ಜೀವಂತಿಕೆಯೊಂದಿಗೆ ತೆರೆದುಕೊಳ್ಳುತ್ತದೆ ಮತ್ತು ಹರಿತವಾದ ಸಂದೇಶಗಳನ್ನು ನೀಡುತ್ತದೆ ಎಂದು ಘಾಯ್ ಹರ್ಷ್ ವಿಮರ್ಶಿಸುತ್ತಾರೆ.
ತಲ್ಲೂರುರವರ ಕಲಾಕೃತಿಗಳಲ್ಲಿ ವೀಕ್ಷಕ ಮತ್ತು ಕೃತಿ ಬೇರೆ ಬೇರೆ ಆಗಿರುವುದಿಲ್ಲ. ವೀಕ್ಷಕ ಕೂಡಾ ಕೃತಿಯ ಭಾಗವೇ ಆಗಿ ಆ ಕೃತಿಯನ್ನು ಅನುಭವಿಸುವಿಕೆಯ ಪದರುಗಳೂ ವೀಕ್ಷಕರ ಒಳಗೊಳ್ಳುವಿಕೆಯನ್ನಾಧರಿಸಿ ಬೇರೆ ಬೇರೆ ಆಳದಲ್ಲಿರುತ್ತವೆ. ಎಂದು ಬಾಲ್ಯದಿಂದಲೂ ಇವರ ಜೊತೆಗಿದ್ದು ಇವರ ಕಲಾ ಆಯಾಮಗಳಲ್ಲಿ ಬಲ್ಲವರಾಗಿರುವ ರಾಜಾರಮ್ ತಲ್ಲೂರುವರು ವಿಮರ್ಶಿಸುತ್ತಾರೆ.
ದಿನೇಶ್ ಹೊಳ್ಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ
ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ
Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್ ಜೈಕಾರ !
Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ
Idu Entha Lokavayya: “ಕೋಸ್ಟಲ್” ನಿಂದ ಕರುನಾಡು!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.