ಕಟೀಲು ಕ್ಷೇತ್ರ ಮಹಾತ್ಮೆಯ ಹಿನ್ನೆಲೆ
Team Udayavani, Jan 26, 2018, 3:19 PM IST
ಕಟೀಲು ಮೇಳದವರು ಪ್ರದರ್ಶಿಸುತ್ತಿರುವ ಶ್ರೀ ಕಟೀಲು ಕ್ಷೇತ್ರ ಮಹಾತ್ಮೆ ಪ್ರಸಂಗವನ್ನು ರಚಿಸಿದವರು ಡಾ|ಶಿಮಂತೂರು ನಾರಾಯಣ ಶೆಟ್ಟರು.(ನಂತರ ಅಗರಿ ಶ್ರೀನಿವಾಸ ಭಾಗವತರೂ ಬರೆದಿದ್ದಾರೆ ).ಡಾ| ಶೆಟ್ಟರು 1946ರಲ್ಲಿ ತಮ್ಮ 12ನೇ ವಯಸ್ಸಿನಲ್ಲೇ ಕಟೀಲಿನ ಅಂದಿನ ಅರ್ಚಕರಾದ ದಿ| ಲಕ್ಷ್ಮೀ ನಾರಾಯಣ ಅಸ್ರಣ್ಣರ ಪ್ರೇರಣೆಯಿಂದ ಈ ಪ್ರಸಂಗವನ್ನು ಬರೆದಿದ್ದರು.ಅಸ್ರಣ್ಣರು ಕಥೆ ಹೇಳುತ್ತಿದ್ದಂತೆ ಬಾಲಕನಾದ ನಾರಾಯಣ ಶೆಟ್ಟರು ಪದ್ಯ ರಚಿಸುತ್ತಿದ್ದರು.ಹೀಗೆ ಡಾ| ಶೆಟ್ಟರು 1946ರಲ್ಲೇ ಕಟೀಲು ಕ್ಷೇತ್ರ ಮಹಾತ್ಮೆ ಪ್ರಸಂಗವನ್ನು ರಚಿಸಿದ್ದರೂ ಈ ಪ್ರಸಂಗ ಪ್ರಥಮ ಪ್ರದರ್ಶನ ಕಂಡದ್ದು 1966 ರಲ್ಲಿ. ಡಾ| ಶೆಟ್ಟರೇ ಕಿನ್ನಿಗೋಳಿಯ ಗೋಳಿಜಾರ ಎಂಬಲ್ಲಿ ಸ್ಥಾಪಿಸಿದ ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಸಂಘದ ಸದಸ್ಯರಿಂದ ಈ ಪ್ರಸಂಗ ಮೊದಲು ಪ್ರದರ್ಶಿಸಲ್ಪಟ್ಟಿತು .
ಪ್ರಥಮ ಪ್ರದರ್ಶನದಂದು ನಡುಗೋಡು ಸಂಜೀವ ಶೆಟ್ಟರು ಭಾಗವತಿಕೆ ಮಾಡಿದ್ದರು. ಅರುಣಾಸುರನ ಪಾತ್ರವನ್ನು ನಾರಾಯಣ ಅಂಚನ್ ಹಾಗೂ ಆನಂದ ಶೆಟ್ಟರೂ , ಸುಧಾಕರ ಶೆಟ್ಟಿಗಾರರು ಶ್ರೀದೇವಿ , ದಾಮೋದರ ಶೆಟ್ಟಿಗಾರರು ಚಂಡ , ಜನಾರ್ದನ ಶೆಟ್ಟಿಗಾರರು ಪ್ರಚಂಡ ,ಲೋಕೇಶ್ ಶೆಟ್ಟಿಗಾರ್ ದೇವೇಂದ್ರ ,ಹಾಸ್ಯ ಪಾತ್ರದಲ್ಲಿ ಮುಖ್ಯಪ್ರಾಣ ಕಿನ್ನಿಗೋಳಿ ಮತ್ತು ಡಾ| ಶೆಟ್ಟರೇ ಸ್ವತಃ ಜಾಬಾಲಿ ಹಾಗೂ ಉಗ್ರ ಭಾಮರಿ ಪಾತ್ರ ನಿರ್ವಹಿಸಿದ್ದರು. ಉಳಿದ ಪಾತ್ರಗಳಲ್ಲಿ ಮುಂಡ್ಕೂರು ಜಯರಾಮ ಶೆಟ್ಟಿ , ನೀಲಯ ಶೆಟ್ಟಿಗಾರ್ ಮುಂತಾದವರಿದ್ದರು . ಆದರೆ ನಂದಿನಿ ಪಾತ್ರ ಯಾರು ನಿರ್ವಹಿಸಿದ್ದರೆಂಬ ಕುರಿತು ನನಗೆ ಸ್ಪಷ್ಟ ಮಾಹಿತಿಯಿಲ್ಲ.ಆದರೂ ಅಂದಿನ ಪ್ರದರ್ಶನದಲ್ಲಿ ಭಾಗವಹಿಸಿದ ಹಾಸ್ಯ ಕಲಾವಿದ ಮುಖ್ಯಪ್ರಾಣ ಕಿನ್ನಿಗೋಳಿಯವರು ನಂದಿನಿ ಪಾತ್ರ ಮಾಡಿದವರು ಜನಾರ್ದನ ಶೆಟ್ಟಿಗಾರರು ಎಂದು ನೆನಪಿಸಿ ಹೇಳಿದ್ದಾರೆ.ಚೌಕಿಪೂಜೆಯನ್ನು ಕಟೀಲಿನ ಅನುವಂಶಿಕ ಅರ್ಚಕರಾದ ದಿ| ಸದಾನಂದ ಅಸ್ರಣ್ಣರೇ ಮಾಡಿದ್ದರು.ಅಂದು ಶ್ರೀದೇವಿ ಪ್ರತ್ಯಕ್ಷವಾಗುವಾಗ , ಚಂಡಮುಂಡರ ವಧೆ , ವಜ್ರದುಂಭಿಯ ಪ್ರವೇಶ ,ಅರುಣಾಸುರ ವಧೆಯ ಸಮಯದಲ್ಲಿ ಏಳೆಂಟು ದುಂಬಿಗಳು ರಂಗಸ್ಥಳದ ಸುತ್ತ ಹಾರಾಡುತ್ತಿದ್ದುದನ್ನು ನೋಡಿದವರಿ¨ªಾರೆ. ಅಂದು ಚಂಡ ಪ್ರಚಂಡರಾಗಿ ದಾಮೋದರ ಶೆಟ್ಟಿಗಾರ್ ಹಾಗೂ ಜನಾರ್ದನ ಶೆಟ್ಟಿಗಾರ್‌ರವರು ದಾಖಲೆಯ 300 ದಿಗಿಣ ತೆಗೆದಿದ್ದರು. ಅದರ ನಂತರವೂ ಹಲವಾರು ಕಡೆಗಳಲ್ಲಿ ಈ ಸಂಘದವರು ಈ ಪ್ರಸಂಗ ಪ್ರದರ್ಶಿಸಿದ್ದಾರೆ.
ಆದರೆ ಕಟೀಲು ಮೇಳದವರು ಸುಮಾರು 1975ರ ನಂತರ ಕಟೀಲು ಕ್ಷೇತ್ರ ಮಹಾತ್ಮೆ ಪ್ರಸಂಗ ಆಡಲು ಪ್ರಾರಂಭಿಸಿದರು.ಕಟೀಲು ಮೇಳದವರಿಂದ ಪ್ರಥಮವಾಗಿ ಶಿಬರೂರಿನಲ್ಲಿ ಈ ಪ್ರಸಂಗ ಪ್ರದರ್ಶನವಾದದ್ದು ಎಂಬುದಾಗಿ ಅಂದಿನ ಕಟೀಲು ಮೇಳದ ಮುಖ್ಯ ಸ್ತ್ರೀ ಪಾತ್ರಧಾರಿಯಾಗಿದ್ದ ಕುಷ್ಟ ಗಾಣಿಗ ಹೇಳುತ್ತಾರೆ. ಕುಷ್ಟ ಗಾಣಿಗರು ಅಂದು ನಂದಿನಿ ಹಾಗೂ ಶ್ರೀದೇವಿ, ಪೆರುವಾಯಿ ನಾರಾಯಣ ಶೆಟ್ಟರು ಜಾಬಾಲಿ, ಕದ್ರಿ ವಿಷ್ಣುರವರು ಕೋಲು ಕಿರೀಟದಲ್ಲಿ ಪೂರ್ವಾರ್ಧದ ಅರುಣಾಸುರ, ಕೇದಗಡಿ ಗುಡ್ಡಪ್ಪ ಗೌಡರು ಉತ್ತರಾರ್ಧದ ಅರುಣಾಸುರ, ಬಣ್ಣದ ಕುಟ್ಯಪ್ಪುರವರು ವಜ್ರದುಂಬಿ, ಸಂಜೀವ ಬಳೆಗಾರರು ಯಶೋಮತಿ ಪಾತ್ರ ನಿರ್ವಹಿ , ಮುಂದೆಯೂ ಅದೇ ಪಾತ್ರಗಳಿಂದ ಪ್ರಸಿದ್ಧರಾಗಿದ್ದರು.
ನಂದಿನಿ ಪಾತ್ರವನ್ನು ಕಟೀಲು ಮೇಳದಲ್ಲಿ ಪ್ರಥಮವಾಗಿ ನಿರ್ವಹಿಸಿ , ಅದಕ್ಕೊಂದು ಸ್ಪಷ್ಟ ಚಿತ್ರಣ ಕೊಟ್ಟವರು ಕುಷ್ಟ ಗಾಣಿಗರು. ಗಾಣಿಗರ ನಂದಿನಿ ಹಾಗೂ ಶ್ರೀದೇವಿಯ ಪಾತ್ರ ಅವರಿಗೆ ಅಪಾರ ಪ್ರಸಿದ್ಧಿ ತಂದುಕೊಟ್ಟಿವೆ. ಕಡಂದೇಲು ಪುರುಷೋತ್ತಮ ಭಟ್ಟರ ನಂತರ ಕಟೀಲು ಮೇಳದಲ್ಲಿ ಶ್ರೀ ದೇವಿ ಮಹಾತ್ಮೆ ಪ್ರಸಂಗದಲ್ಲಿ ಅತ್ಯಂತ ಹೆಸರು ಗಳಿಸಿದ ದೇವಿ ಪಾತ್ರ ಕುಷ್ಟ ಗಾಣಿಗರದ್ದು.ಶ್ರೀ ದೇವಿ ಮಹಾತ್ಮೆ ಪ್ರಸಂಗದಲ್ಲಿ ಕುಷ್ಟ ಗಾಣಿಗರ ಶ್ರೀ ದೇವಿಯು ಪ್ರತ್ಯಕ್ಷವಾಗುವ ಸನ್ನಿವೇಶ ಬಂದಾಗ ಇಡೀ ಪ್ರೇಕ್ಷಕ ಸಮೂಹ ಎದ್ದು ನಿಂತು ನಮಸ್ಕರಿಸುತ್ತಿದ್ದುದನ್ನು ಕಂಡಿದ್ದೇನೆ. ನಂದಿನಿ ಪಾತ್ರದಲ್ಲಿ ವಿಶೇಷವಾಗಿ ಇರುವುದು ತಲೆಯ ಮೇಲಿನ ಎರಡು ಕೊಂಬು. ಕುಷ್ಟ ಗಾಣಿಗರು ಕೃತಕ ಕೊಂಬನ್ನು ಧರಿಸುತ್ತಿರಲಿಲ್ಲ. ಉದ್ದವಾದ ಕೇಶ ರಾಶಿ ಹೊಂದಿದ್ದ ಅವರು ತಲೆಯ ಮೇಲಿನ ಸ್ವಲ್ಪ ಕೂದಲನ್ನು ಬಿಟ್ಟು ಎರಡು ಜಡೆ ಕಟ್ಟಿ ಅದನ್ನು ಭುಜದ ಮುಂಭಾಗಕ್ಕೆ ತರುತ್ತಿದ್ದರು.ತಲೆಯ ಹಿಂಭಾಗದಲ್ಲಿ ಕೇಸರಿ ಕಟ್ಟುತ್ತಿದ್ದರು.ಜಡೆ ಕಟ್ಟಿದ ಬಳಿಕ ತಲೆಯ ಮೇಲೆ ಉಳಿದ ಕೂದಲನ್ನು ತಲೆಯ ಎರಡೂ ಭಾಗದಲ್ಲಿ ಕೊಂಬಿನ ಆಕೃತಿಗೆ ತಂದು ಚಿಟ್ಟೆ ಪಟ್ಟಿಯನ್ನು ಕಟ್ಟಿ ಅದನ್ನು ಕೊಂಬಿನ ಹಾಗೇ ದಪ್ಪವಾಗಿ ಕಾಣಿಸುವಂತೆ ಮಾಡಿ ಬೆಳ್ಳಿಯ ವರ್ಣದ ಬೇಗಡೆ ಸುತ್ತುತ್ತಿದ್ದರು.ಇದು ನೈಜವಾದ ಕೊಂಬಿನ ಹಾಗೇ ಕಾಣುತ್ತಿತ್ತು. ಸೀರೆಯನ್ನೇ ಕಟ್ಟಿ ಕಸೆ ಹಾಕುತ್ತಿದ್ದರು.ಮುಖಕ್ಕೆ ಸಾಮಾನ್ಯ ಸ್ತ್ರೀ ವೇಷದ ಮುಖವರ್ಣಿಕೆಯೊಂದಿಗೆ ಹಣೆಯಲ್ಲಿ ಕಪ್ಪು ಅಥವಾ ಕೆಂಪು ಬೊಟ್ಟು ಇಟ್ಟು ಅದು ಎದ್ದು ಕಾಣಲು ಬೊಟ್ಟಿನ ಸುತ್ತ ಬಿಳಿಯ ರೇಖೆ ಎಳೆಯುತ್ತಿದ್ದರು.ಹಿಂಭಾಗದಲ್ಲಿ ಜಡೆಗೆ ಕಟ್ಟುವ ಆಭರಣವನ್ನು ಬಾಲದ ಹಾಗೇ ಕಟ್ಟುತ್ತಿದ್ದರು. ಪರದೆ ಎತ್ತಿದಾಗ ರಥದಲ್ಲಿ ಕೈಗಳನ್ನು ಊರಿ ನಾಲ್ಕು ಕಾಲಿನ ನಂದಿನಿಯಂತೆ ಕಾಣಿಸಿಕೊಂಡು ಪ್ರೇಕ್ಷಕರನ್ನು ಆಕರ್ಷಿಸುತ್ತಿದ್ದರು. ಇವೆಲ್ಲವೂ ಕುಷ್ಟ ಗಾಣಿಗರ ಸ್ವಂತ ಕಲ್ಪನೆಯಿಂದಲೇ ಮೂಡಿಬಂದಿತ್ತು. ಕುಷ್ಟ ಗಾಣಿಗರು 1991ರಲ್ಲಿ ಯಕ್ಷರಂಗದಿಂದ ನಿವೃತ್ತರಾದರು. ನಂತರದ ದಿನಗಳಲ್ಲಿ ನಂದಿನಿಗೆ ಕೃತಕ ಕೊಂಬು ಕಟ್ಟುವ ರೂಢಿ ಬೆಳೆಯಿತು .
ಎಂ.ಶಾಂತರಾಮ ಕುಡ್ವಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು
Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್ ಕುಮಾರ್
Hunsur: ಅಪ್ರಾಪ್ತ ಬಾಲಕಿ ಗರ್ಭಿಣಿ ಪ್ರಕರಣ; ಯುವಕನ ಬಂಧನ
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.