ಹಳೆ ಕತೆ – ಹೊಸ ನಿರೂಪಣೆ ಹಳಿಯ ಮೇಲಿನ ಸದ್ದು
Team Udayavani, Mar 2, 2018, 8:15 AM IST
ಕಾರ್ಕಳದ ಭುವನೇಂದ್ರ ಕಾಲೇಜಿನ ವಿದ್ಯಾರ್ಥಿಗಳ “ಭುವನರಂಗ’ದ ನಾಟಕ “ಹಳಿಯ ಮೇಲಿನ ಸದ್ದು’ (ರಚನೆ : ಚಿ. ಶ್ರೀನಿವಾಸ ರಾಜು – ನಿರ್ದೇಶನ : ಸುಕುಮಾರ್ ಮೋಹನ್ ನಿರ್ಮಾಣ : ಡಾ| ಮಂಜುನಾಥ ಕೋಟ್ಯಾನ್). ಮೊದಲಿಗೆ ಹೇಳುವ ಮಾತೆಂದರೆ ಇದು ಅತ್ಯಂತ ಲವಲವಿಕೆಯ ನಾಟಕ.
ನಾಟಕದ ವಸ್ತು ತುಂಬಾ ಹೊಸತಲ್ಲ. ಅದೇ ವರದಕ್ಷಿಣೆಯ ಬಗ್ಗೆ ಅನುಸಂಧಾನ ಮಾಡುವ ನಾಟಕ. ನವೋದಯ ಕಾಲದಲ್ಲಂತೂ ಎಲ್ಲ ಸಾಹಿತ್ಯ ಪ್ರಕಾರಗಳಲ್ಲಿ ಇದುವೇ ಅತ್ಯಂತ ಕೇಂದ್ರವಾಗಿತ್ತು. ಇಲ್ಲಿಯೂ ಅಷ್ಟೆ, ತನ್ನ ಸೋದರಿಕೆ ಸಂಬಂಧ ಆದರೂ ವರದಕ್ಷಿಣೆ ಪೆಡಂಭೂತವಾಗಿ ಕಾಡುತ್ತದೆ. ತೀರಾ ಕೆಳ ವರ್ಗದ ರೈಲ್ವೆಗೇಟು ತೆಗೆಯುವ – ಹಾಕುವ ಗಂಗಣ್ಣ (ಶರತ್) ಮತ್ತು ಆತನ ಹೆಂಡತಿ ರಾಮಕ್ಕ (ಪ್ರಜ್ಞಾ), ಅವರ ಒಬ್ಬಳೇ ಮಗಳಾದ ಅಮ್ಮು (ದೀಕ್ಷಾ) ಈ ಸಂಸಾರದೊಂದಿಗೆ ಸನ್ನಿವೇಶದ ಪ್ರಯೋಜನ ತೆಗೆದುಕೊಳ್ಳುವ ಅಂಥೊನಪ್ಪ (ನಿತೇಶ್), ಗಂಗಣ್ಣನ ನಿಜವಾದ ಗೆಳೆಯ ಸುಂದರಣ್ಣ (ಯೋಗೇಶ್).
ವಸ್ತು ಹಳತಾದರೂ ಅದಕ್ಕೊಂದು ದಿವ್ಯಸ್ಪರ್ಶ ಇದೆ. ಒಂದು ನಾಟಕ ಹೇಗೆ ಒಂದು ಕಲಾಕೃತಿಯಾಗಿ ನಿಲ್ಲಲು ನಿರ್ದೇಶಕನ ಪ್ರತಿಭಾ ಶಕ್ತಿ ಕಾರಣವಾಗುತ್ತದೆ ಎನ್ನುವುದಕ್ಕೆ ಈ ನಾಟಕ ಒಂದು ವಿದರ್ಶನ. ಅತ್ಯಂತ ಸರಳ ರಂಗಸಜ್ಜಿಕೆಯಲ್ಲಿ, ದುಬಾರಿ ಬೆಳಕು ಇಲ್ಲದೆ, ಸರಳ ಹಿನ್ನಲೆ ಗಾಯನ (ನಾಗಶ್ರೀ, ಆಶಿತ್)ದಲ್ಲಿ ಒಂದು ನಾಟಕ ಹೇಗೆ ಮನೋಜ್ಞವಾಗಿ, ಹೃದಯ ಸ್ಪರ್ಶಿಯಾಗಿ ನಿಲ್ಲಬಲ್ಲುದು ಎಂಬುದಕ್ಕೆ ಈ ನಾಟಕ ಸಾಕ್ಷಿಯಾಗಿದೆ.
ನಾಟಕದ ನಾಯಕಿ ನಟಿ ಪ್ರಜ್ಞಾ (ರಾಮಕ್ಕ) ಇಡೀ ನಾಟಕವನ್ನು ತನ್ನ ಮಾತುಗಾರಿಕೆಯಿಂದ, ಸಹಜ ಅಭಿನಯದಿಂದ, ನಿರ್ದಿಷ್ಟ ಚಲನೆಯಿಂದ ಒಬ್ಬ ತಾಯಿಯ ಮನದಾಳದ ಆತಂಕವನ್ನು ಪ್ರೇಕ್ಷಕರಿಗೆ ಮುಟ್ಟಿಸುತ್ತಾಳೆ. ಅದೇ ರೀತಿಯಲ್ಲಿ ಶರತ್ (ಗಂಗಣ್ಣ) ಸಹ ಪ್ರಬುದ್ಧವಾಗಿ ಅಭಿನಯಿಸಿದರೆ, ಯೋಗೀಶ್ (ಸುಂದರಣ್ಣ) ಮತ್ತು ನಿತೇಶ್ (ಅಂಥೋನಪ್ಪ) ಅವರುಗಳು ನಾಟಕ ಎಲ್ಲಿಯೂ ಹದ ತಪ್ಪದಂತೆ ತಮ್ಮ ಅಭಿನಯ ಸಾಮರ್ಥ್ಯವನ್ನು ದೃಢಗೊಳಿಸಿದರು. ಉಳಿದ ಸಹ ನಟರು, ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ, ಪಿಕ್‌ನಿಕ್‌ಗೆ ಬಂದ ಸಂದರ್ಭದಲ್ಲಿ (ಆಕಾಶ್, ರೇಣುಕಾ, ಸೌಮ್ಯ, ಕಂತು, ಶ್ರೇಯಾ) ಪೂರಕವಾಗಿ ನಟಸಿ ನಾಟಕದ ಯಶಸ್ಸಿಗೆ ಕಾರಣರಾಗಿದ್ದಾರೆ. ದೀಕ್ಷಾ (ಅಮ್ಮು) ನೈಜವಾಗಿ ನಟಿಸಿ ನಾಟಕವನ್ನೂ ಎತ್ತರಕ್ಕೆ ಏರಿಸಿದ್ದಾಳೆ.ರೈಲಿನ ಶಬ್ದ ಇನ್ನಷ್ಟು ಸು#ಟವಾಗಿ ಬರಬೇಕಿತ್ತು. ಹಿನ್ನಲೆ ಗಾಯನವೂ ಕೆಲವು ಕಡೆ (ಮುಂಬಯಿ ಕಥೆ ಗಂಗಣ್ಣ ಹೇಳುವಾಗ) ಮಾತಿಗೆ ಅಡ್ಡ ಬಂತು. ಗಾಯನ ಯಾವತ್ತೂ ಪೂರಕವಾಗಿರಬೇಕಷ್ಟೆ.
ಕಾಲೇಜಿನ ಹುಡುಗರು ಮೊಬೈಲ್‌ಗಳಲ್ಲಿ ಮುಳುಗಿ ಹೋಗುತ್ತಿದ್ದಾರೆಂಬ ಆಪಾದನೆಗೆ ತದ್ವಿರುದ್ಧವಾಗಿ ಈ ಕಾಲೇಜಿನ ಹುಡುಗರು ಎಷ್ಟು ತನ್ಮಯರಾಗಿ ಇಡೀ ನಾಟಕವನ್ನು ನಮಗೆ ಕಟ್ಟಿಕೊಟ್ಟರು. ಎಲ್ಲರೂ ಅದರಲ್ಲಿ ತರಬೇತಿ ಪಡೆದವರಂತೆ ನಟಿಸಿದ್ದು ನನಗೆ ಆಶ್ಚರ್ಯವನ್ನೂ ಸಂತಸವನ್ನು ತಂದಿದೆ. ಈ ಕಾರಣಕ್ಕಾಗಿ ನಿರ್ಮಾಪಕ ಡಾ| ಮಂಜುನಾಥ ಕೊಟ್ಯಾನ್, ನಿರ್ದೇಶಕ ಸುಕುಮಾರ್ ಮೋಹನ್, ಕನ್ನಡ ಸಂಸ್ಕೃತಿ ಇಲಾಖೆ ಮತ್ತು ರಂಗಾಯಣವನ್ನು ಎಷ್ಟು ನೆನೆದರೂ ಕಡಿಮೆಯೇ.
ಡಾ| ಜಯಪ್ರಕಾಶ ಮಾವಿನಕುಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ
ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ
Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್ ಜೈಕಾರ !
Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ
Idu Entha Lokavayya: “ಕೋಸ್ಟಲ್” ನಿಂದ ಕರುನಾಡು!