ಶ್ರೀಮಂತ ಪ್ರದರ್ಶನ ಸತ್ಯನಾಪುರದ ಸಿರಿ ಏಕವ್ಯಕ್ತಿ ರೂಪಕ
Team Udayavani, Jun 7, 2019, 5:50 AM IST
ಸಿರಿಯಂಥ ಅಪರೂಪದ ಪಾತ್ರವನ್ನು ಅಕ್ಷರಶಃ ತನ್ನೊಳಗೆ ಆವಾಹಿಸಿಕೊಂಡು ಒಂದೂವರೆ ಗಂಟೆಗಳ ಕಾಲ ಪ್ರಬುದ್ದ ಅಭಿನಯದ ಸಿರಿಯನ್ನು ತಂದು ನಿಲ್ಲಿಸಿದವರು ಪೂರ್ಣಿಮಾ ಸುರೇಶ್. ಬಂಟಕಲ್ಲಿನಲ್ಲಿ ಅಮೋಘ (ರಿ.) ಹಿರಿಯಡ್ಕ ಕಲಾವಿದರು ನಡೆಸಿಕೊಟ್ಟ ಸಿರಿ ಏಕವ್ಯಕ್ತಿ ಪ್ರದರ್ಶನದಲ್ಲಿ ಕಂಡದ್ದು ಬರಿಯ ಸಿರಿಯನ್ನಲ್ಲ,ಬದಲಿಗೆ ಒಂದು ಅರ್ಥಪೂರ್ಣವಾದ ರಂಗಕಾವ್ಯ. ಸಿರಿಯ ಮದುವೆಯ ಮೊದಲಿನ ಲವಲವಿಕೆ,ಮದುವೆಯ ಹೊಸತನದ ಬಯಕೆ,ಗಂಡನಿಂದ ತಿರಸ್ಕೃತಳಾದಾಗಿನ ಸಿಟ್ಟು ಅಸಹಾಯಕತೆ ಮತ್ತು ನಂತರದ ಬಂಡಾಯ ದಿಟ್ಟತನ…ಹೀಗೆ ನಾನಾ ಅವಸ್ಥೆಗಳಲ್ಲಿ ಪೂರ್ಣಿಮಾ ನೀಡಿದ ಅಭಿನಯ ಸಹಜವಾಗಿ ಮೂಡಿಬಂತು.ಸಿರಿಯ ಪಾತ್ರ ಮಾತ್ರವಲ್ಲದೇ ಅಜ್ಜ,ಗಂಡ,ಅತ್ತೆ,ಶಂಕರಾಳ್ವನ ಪಾತ್ರಗಳಲ್ಲಿಯೂ, ಒಂದು ಪಾತ್ರದಿಂದ ಇನ್ನೊಂದು ಪಾತ್ರಕ್ಕೆ ಬದಲಾಗುವಲ್ಲಿಯೂ ನಟನೆ ಪ್ರಬುದ್ಧವಾಗಿತ್ತು. ಸಂಭಾಷಣೆ, ಆ ಏರಿಳಿತ, ಹಾವಭಾವ ಮತ್ತು ಇದಕ್ಕೆ ಪೂರಕವಾದ ಹಿನ್ನಲೆ ಸಂಗೀತದಿಂದಾಗಿ ಸಿರಿ ಶ್ರೀಮಂತವಾಗಿ ಮೂಡಿಬಂತು.
ಸಿರಿ ತನ್ನ ಮದುವೆಯ ಮಾತುಕತೆ ಬರುವಾಗ ಬೊಗಸೆ ಕಂಗಳ,ಬಯಕೆಯ ಹೆಣ್ಣಾಗಿ ಲವಲವಿಕೆಯಿಂದ ಕಾಣಿಸಿಕೊಳ್ಳುವ ಪೂರ್ಣಿಮಾ ಚುರುಕಿನ ನಡೆಯಿಂದ ಆವರಿಸಿಕೊಳ್ಳುತ್ತಾರೆ.ಒಮ್ಮೆ ಅಜ್ಜನಾಗಿ, ಒಮ್ಮೆ ಕಾಂತಣನಾಗಿ, ಮತ್ತೂಮ್ಮೆ ಸಿರಿಯಾಗಿ ಪರಕಾಯ ಪ್ರವೇಶ ಮಾಡಿ ಆಯಾಯ ಪಾತ್ರಗಳಿಗೆ ಬೇಕಾದ ನಡೆ,ನುಡಿ,ಗತ್ತು,ಲಾವಣ್ಯವನ್ನು ನಟಿಸುತ್ತಾ ಪ್ರೇಕ್ಷಕರ ಎದೆಯಲ್ಲಿ ಸಿರಿಯನ್ನು ಗೊತ್ತಿಲ್ಲದೆ ಹಾಗೆ ಇಳಿಸುತ್ತಾರೆ.
ಹಸೆಮಣೆಯ ಮೇಲೆ ತುಂಬಿದ ಬಸುರಿ ಸಿರಿ.ತನಗೆ ಹಾಕಿದ ಒಡವೆ,ಮಾಡಿದ ಸಿಂಗಾರಗಳ ಬಗ್ಗೆ ಹೇಳುತ್ತಾ ಹೆಣ್ತನದ ಬಯಕೆಯ ಹೆಣ್ಣಾಗುತ್ತಾರೆ ಪೂರ್ಣಿಮಾ.ಆಗಲೇ ಗಂಡ ಬಂದು ಸೀಮಂತದ ಸೀರೆಯನ್ನು ಸಿರಿಯ ಕೈಗಿಡುತ್ತಾರೆ.ಸೀರೆಯನ್ನು ನೋಡಿದ ಕೂಡಲೇ ಸಿರಿ ಕೆರಳಿದ ಸರ್ಪವಾಗುತ್ತಾಳೆ.ಈ ಸೀರೆ ಮೈಲಿಗೆಯಾಗಿದೆ.ಸೂಳೆ ಉಟ್ಟ ಸೀರೆ ನಾನು ತಗೊಳ್ಳೊದಿಲ್ಲ ಎಂದು ಅದನ್ನು ತುಂಬಿದ ಸಭೆಯಲ್ಲಿ ತಿರಸ್ಕರಿಸುತ್ತಾಳೆ.ಈ ದೃಶ್ಯಗಳಲ್ಲಿ ಪೂರ್ಣಿಮಾರ ಅಭಿನಯ ಪ್ರತಿಭೆಯ ಸಂಪೂರ್ಣ ಅನಾವರಣವಾಗಿದೆ.
ಶಂಕರಾಳ್ವನ ಕುತಂತ್ರದಿಂದಾಗಿ ನ್ಯಾಯಕಟ್ಟೆಯಲ್ಲಿ ಸಿರಿಗೆ ನ್ಯಾಯ ಸಿಗುವುದಿಲ್ಲ.ಆಗ ವ್ಯವಸ್ಥೆಯ ವಿರುದ್ಧ ಸಿಡಿದೆದ್ದು “ಈ ನ್ಯಾಯ ಕೂಟ ಹಾಳಾಗಲಿ, ಸತ್ಯನಾಪುರ ಅರಮನೆ ಉರಿದು ಹೋಗಲಿ ಎಂದು ಶಾಪ ಕೊಡುವ ಸನ್ನಿವೇಶಗಳಲ್ಲಿ ಬರುವ ಸಂಭಾಷಣೆ,ಸೇಡಿನ ಕಿಚ್ಚಿನಲ್ಲಿ ಬೇಯುವ ಅಭಿನಯದಲ್ಲಿ ಪೂರ್ಣಿಮಾ ಮಿಂಚುತ್ತಾರೆ.
ಮುಂದೆ ಆಕೆಗೆ ಕಾಡಿನಲ್ಲಿ ಬಿಳಿದೇಸಿಂಗ ಮತ್ತು ಕರಿದೇಸಿಂಗ ಎಂಬ ಅಣ್ಣತಮ್ಮಂದಿರು ಸಿಕ್ಕಿ ಸಿರಿಯನ್ನು ತನ್ನ ಅರಮನೆಗೆ ಕರೆದೊಯ್ಯುತ್ತಾರೆ.ಅರಮನೆಗೆ ಹೋಗುವ ಮುನ್ನ ತನ್ನ ಕುಮಾರನನ್ನು ಮಾಯದ ಲೋಕಕ್ಕೆ ಕಳಿಸಿಕೊಡುತ್ತಾಳೆ.ಮುಂದೆ ಈಕೆಯ ಸೌಂದರ್ಯವನ್ನು ಕೊಡ್ಸರಾಳ್ವನೆಂಬವನು ಕಂಡು ಮರುಳಾಗಿ ಮದುವೆ ಮಾಡಿಕೊಳ್ಳುವ ಬಯಕೆ ವ್ಯಕ್ತ ಪಡಿಸಿದಾಗ ಅಣ್ಣಂದಿರ ಒಪ್ಪಿಗೆಯಿಂದ ಆಕೆ ಮರು ವಿವಾಹವಾಗುತ್ತಾಳೆ.ನಂತರ ಹೆಣ್ಣು ಮಗುವನ್ನು ಹೆತ್ತು, ಅದನ್ನು ಗಂಡನ ಮೊದಲ ಹೆಂಡತಿಯ ಕೈಯಲ್ಲಿಟ್ಟು ಮಗುವಿಗೆ ಸೊನ್ನೆ ಅಂತ ಹೆಸರು ಸೂಚಿಸಿ ಮಾಯದ ಲೋಕ ಸೇರುತ್ತಾಳೆ.ಸೊನ್ನೆಯ ಮಕ್ಕಳೇ ಅಬ್ಬಗ-ದಾರಗೆಯೆಂಬ ಅವಳಿಜವಳಿ ಹೆಣ್ಣುಮಕ್ಕಳು.ಪೂರ್ಣಿಮಾ ಸುರೇಶ್ ರಂಗ ಅಭಿವ್ಯಕ್ತಿಯಲ್ಲಿ ಹೊಸ ಭರವಸೆ ಮೂಡಿಸಿದ್ದಾರೆ.ಸಮರ್ಥವಾದ ನಿರ್ದೇಶನ, ಹಿನ್ನಲೆ ಸಂಗೀತಗಳಿಂದಾಗಿ ಸಿರಿ ರಂಗದಲ್ಲಿ ಬಹಳ ಶ್ರೀಮಂತವಾಗಿ ಮೂಡಿಬಂತು.ಎನ್.ಪಿ.ರಾವ್ ಅವರ ಕಾದಂಬರಿ ಆಧಾರಿತ ಈ ಏಕವ್ಯಕ್ತಿ ಪ್ರದರ್ಶನವನ್ನು ನಿರ್ದೇಶಿಸಿದವರು ಕೃಷ್ಣಮೂರ್ತಿ ಕವತ್ತಾರ್.ಹಿನ್ನಲೆ ಸಂಗೀತದಲ್ಲಿ ಶೋಧನ್ ಎರ್ಮಾಳ್, ಶಬರಿ ಆರಾಧ್ಯರ ಕೆಲಸ ಬಹಳ ಅಚ್ಚುಕಟ್ಟಾಗಿತ್ತು.ಪ್ರದೀಪ್ ಚಂದ್ರ ಕುದ್ಪಾಡಿ ಬೆಳಕು ಹಾವ ಭಾವಕ್ಕನುಗುಣವಾಗಿತ್ತು.
– ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ
ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ
Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್ ಜೈಕಾರ !
Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ
Idu Entha Lokavayya: “ಕೋಸ್ಟಲ್” ನಿಂದ ಕರುನಾಡು!
MUST WATCH
ಹೊಸ ಸೇರ್ಪಡೆ
Ambedkar row: ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜಕೀಯ ಬಿಟ್ಟು ಹೋಗಲಿ ಎಂದ ಲಾಲು ಪ್ರಸಾದ್
ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಎಲ್ಲಿ, ಏನು ಮಾರ್ಗಸೂಚಿ ಇಳಿದೆ ಮಾಹಿತಿ
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.