ಮನಸೂರೆಗೊಂಡ ತೆಂಕು-ಬಡಗು ಗಾನ ವೈಭವ
Team Udayavani, Feb 22, 2019, 12:30 AM IST
ಕಾರ್ಕಳ ಮಾರಿಗುಡಿ ಆವರಣದಲ್ಲಿ ಇತ್ತೀಚೆಗೆ ಕಾರ್ಕಳದ ಯಕ್ಷ ಕಲಾರಂಗದ ಆಸರೆಯಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮಂಗಳೂರು ಇದರ ಕಾರ್ಕಳ ಘಟಕದ ತೃತೀಯ ವಾರ್ಷಿಕೋತ್ಸವದಂಗವಾಗಿ ನಡೆದ ತೆಂಕು- ಬಡಗು ಗಾನ ವೈಭವ ಹೃನ್ಮನ ಸೂರೆಗೊಳ್ಳುವಲ್ಲಿ ಯಶಸ್ವಿಯಾಯಿತು.
“ವೀರಮಣಿ ಕಾಳಗ’ದ ಒಡ್ಡೋಲಗದ ಸನ್ನಿವೇಶದ ತುರಗವನ್ನು ಶೃಂಗರಿಸಿ ಪದ್ಯದೊಂದಿಗೆ ಬಡಗಿನ ಸುರೇಶ ಶೆಟ್ಟಿ ಶಂಕರ ನಾರಾಯಣ, ರಾಮಕೃಷ್ಣ ಹೆಗಡೆ ಹಿಲ್ಲೂರುರವರ ಗಾನ ವೈಭವವನ್ನು ಆರಂಭಿಸಿ ಮುಂದೆ ತೆಂಕಿನಲ್ಲಿ ಕು| ಕಾವ್ಯ ಶ್ರೀ ಅಜೇರು ಇವರು ಮಾಗಧ ವಧೆ ಪ್ರಸಂಗದ ಪೊಡವಿ ಪತಿ ಪದ್ಯವನ್ನು ಹೃದಯಂಗವಾಗಿ ಅನಾವರಣಗೊಳಿಸಿದರು. ಹೊಸ್ತೋಟ ಮಂಜುನಾಥ ಭಾಗವತರ ರಾಮ ನಿರ್ಯಾಣ ಪ್ರಸಂಗದ ಕೇಳಯ್ಯ ರಾಮ ಪದ್ಯದ ಸಾಲುಗಳನ್ನು ರಾಮಕೃಷ್ಣ ಹಿಲ್ಲೂರು ಹಾಡಿದರು.
“ದûಾಧ್ವರ’ ಪ್ರಸಂಗದ “ನೋಡಿ ದ್ವಿಜರು ಪೋಪುದು’ ಎಂಬ ಪದ್ಯವನ್ನು ಸತ್ಯನಾರಾಯಣ ಪುಣಿಂಚಿತ್ತಾಯರು ಹಾಡಿದರು. ಸುರೇಶ ಶೆಟ್ಟಿ, ರಾಮಕೃಷ್ಣ ಹಿಲ್ಲೂರು “ಶಶಿಪ್ರಭ ಪರಿಣಯ’ದ “ಯಾರಿವನು ಸುಂದರ ಪುರುಷ’, ” ರತ್ನಾವತಿ ಕಲ್ಯಾಣ’ದ “ಹೇಗೆ ಪೇಳುವರೆ ಸಖೀ’, “ಭೀಷ್ಮಾರ್ಜುನ’ದ “ಶ್ರೀ ಮನೋಹರ’ ಪದ್ಯವನ್ನು ಸೊಗಸಾಗಿ ಹಾಡಿ ಕಳೆಗಟ್ಟುವಂತೆ ಮಾಡಿದರು. ಅಗರಿ ಶ್ರೀನಿವಾಸ ಭಾಗವತರ “ಶ್ರೀದೇವಿ ಮಹಾತ್ಮೆ ಪ್ರಸಂಗ’ ವೀರರಸದ ಕದಂಬ ವನದ ಸನ್ನಿವೇಶದ “ಶುಂಭನ’ ಕುರಿತಾಗಿ ಭಾಮಿನಿಯಲ್ಲಿ ಸತ್ಯನಾರಾಯಣ ಪುಣಿಂಚಿತ್ತಾಯ, ಕಾವ್ಯಶ್ರೀ ಅಜೇರು (ತೆಂಕು) ರಾಮಕೃಷ್ಣ ಹೆಗಡೆ ಹಿಲ್ಲೂರು ಸುರೇಶ ಶೆಟ್ಟಿ (ಬಡಗು) ಒಟ್ಟಾಗಿ ಹಾಡಿ ತೆಂಕು ಬಡಗುಗಳ ಹಾಡಿನ ವೈಭವ ಕೇಳುಗರ ಕಿವಿಯಾಲಿಗಳಿಗೆ ಕರ್ಣನಂದಕರವಾಗಿತ್ತು. ಕಾವ್ಯಶ್ರೀ ಅಜೇರು ಇವರು “ಮಾನಿಷಾ’ದ ಪ್ರಸಂಗದ ಶೃಂಗಾರ ರಸದ ಪದ್ಯ “ಪರಮಲಕ್ಷ್ಯವ ತೊರೆದು’ ಸತ್ಯನಾರಾಯಣ ಪುಣಿಂಚಿತ್ತಾಯರ ನರಕಾಸುರ ವಧೆಯ “ಹರುಷವಾಯಿತು’ ಪದ್ಯವನ್ನು ಬಡಗಿನ ಶೈಲಿಯಲ್ಲಿ ಹಾಡಿ ತೆಂಕು- ಬಡಗು ತಿಟ್ಟುಗಳ ಸಮನ್ವತೆಯ ಭಾಗವತರಾಗಿ ಕಾಣಿಸಿಕೊಂಡರು. ಕೊನೆಯಲ್ಲಿ “ಸ್ಮರಿಸಯ್ಯ ರಾಮ ಮಂತ್ರ’ವ ಪದ್ಯ ಪ್ರೇಕ್ಷಕರ ತಲೆದೂಗವಂತೆ ಮಾಡಿ ಪ್ರೇಕ್ಷಕರ ಕೋರಿಕೆಯ ಮೇರೆಗೆ “ಉಂದು ತುಳುನಾಡ್’ ಮತ್ತು “ನಾಗತಂಬಿಲ’ ತುಳು ಪ್ರಸಂಗದ “ತೆರಿಯೊಡು’ ಪದ್ಯವನ್ನು ತುಳುವಿನಲ್ಲಿ ಸತ್ಯನಾರಾಯಣ ಪುಣಿಂಚಿತ್ತಾಯ, ಕಾವ್ಯಶ್ರೀಯವರು ಹಾಡಿ ಗಾನ ವೈಭವಕ್ಕೆ ತೆರೆಯೆಳೆದರು.
ಬಡಗಿನ ಚಂಡೆಯಲ್ಲಿ ಕೋಟ ಶಿವಾನಂದರು ಏಕ ಕಾಲದಲ್ಲಿ ನಾಲ್ಕು ಚೆಂಡೆ ಹಾಗೂ ತೆಂಕಿನ ಚೆಂಡೆಯಲ್ಲಿ ಮಿಜಾರು ದೇವಾನಂದ ಭಟ್ ಬೆಳುವಾಯಿ ಇವರು ಆರುಚೆಂಡೆ ಬಾರಿಸಿ ಕೈಚಳಕ ಮೆರೆದರು. ತೆಂಕಿನ ಮೃದಂಗದಲ್ಲಿ ಯಕ್ಷಗುರು ಪದ್ಮನಾಭ ಉಪಾಧ್ಯಾಯ ಉಡುಪಿ ಹಾಗೂ ಬಡಗಿನ ಮದ್ದಳೆಯಲ್ಲಿ ಶಶಿ ಆಚಾರ್ಯ ಬೆಳ್ಕಳೆ ಉಡುಪಿ, ಚಕ್ರತಾಳದಲ್ಲಿ ಕಲ್ಲಡ್ಕದ ರಾಜೇಂದ್ರ ಕೃಷ್ಣ ಸಹಕರಿಸಿದರು.
ಕೆ. ದಯಾನಂದ ಪೈ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.