ಯೋಚನೆ, ಯೋಜನೆಯಿಂದ ಪರಿಪೂರ್ಣ ಪ್ರದರ್ಶನವಾದ ತೆಂಕು – ಬಡಗು ಕೂಡಾಟ
Team Udayavani, Jul 5, 2019, 5:00 AM IST
ಸದಭಿರುಚಿಯ ಯಕ್ಷಗಾನಕ್ಕೆ ಪ್ರೇಕ್ಷಕರ ಕೊರತೆ ಇದೆ ಎಂಬ ಕೂಗನ್ನು ಸುಳ್ಳಾಗಿಸಿದ್ದು ಉಡುಪಿ ರಾಜಾಂಗಣದಲ್ಲಿ ಇಡೀರಾತ್ರಿ ನಡೆದ ಯಕ್ಷಗಾನ. ಪ್ರದರ್ಶನಕ್ಕೆ ಯೋಗ್ಯವಾದ ಪ್ರಸಂಗವನ್ನು ಆಯ್ದು ಕೊಂಡು ಸರಿಯಾದ ಸಮಯಕ್ಕೆ ಪ್ರಸ್ತುತಪಡಿಸಿದ್ದು, ಯೋಗ್ಯ ಕಲಾವಿದರನ್ನು ತೊಡಗಿಸಿದ್ದ ಸಂಘಟಕರ ಯೋಜನೆ ಹಾಗೂ ಯೋಚನೆಗೆ ತಲೆಬಾಗಲೇಬೇಕು.
ಬಡಗಿನ ಶ್ರೇಷ್ಠ ಕಲಾವಿದರ ಕೂಡುವಿಕೆಯಲ್ಲಿ ಪ್ರಾರಂಭದ ಪ್ರಸಂಗ ಕಾರ್ತವೀರ್ಯಾರ್ಜುನ. ನಾಯಕ ಹಾಗೂ ಪ್ರತಿನಾಯಕ ಎರಡೂ ಪಾತ್ರಗಳನ್ನು ಸಮದಂಡಿಯಾಗಿ ನಿರ್ವಹಿಸಬಲ್ಲ ಕೊಂಡದಕುಳಿ ರಾಮಚಂದ್ರ ಹೆಗಡೆಯವರ ಕಾರ್ತವೀರ್ಯ ಮತ್ತು ಅಷ್ಟೇ ಉತ್ಕೃಷ್ಟ ಮಟ್ಟದ ಕಲಾವಿದ ಬಳ್ಕೂರು ಕೃಷ್ಣ ಯಾಜಿಯವರ ರಾವಣ ಚೆನ್ನಾಗಿ ಮೂಡಿ ಬಂತು. ಸಖೀಯರಾಗಿ ತೆಂಕುತಿಟ್ಟಿನ ಕಲಾವಿದ ಮಹೇಶ ಸಾಣೂರು ಮತ್ತು ಬಡಗಿನ ಸುಧೀರ್ ಉಪ್ಪೂರರು ನೀರ ಲಾಲಿಸಿ ಕೇಳು ನೀರಿಲ್ಲವಲ್ಲ, ನೀರಿಲ್ಲವಾದರೆ ನೀರಾಟ ಸಲ್ಲ ಎಂಬುದನ್ನು ಕಾರ್ತವೀರ್ಯನಲ್ಲಿ ಕೇಳಿದ ರೀತಿ, ಐದುನೂರು ಕೈಗಳಿಂದ ನೀರಿಗೆ ಒಡ್ಡನ್ನು ಕಟ್ಟಿ ಉಳಿದ ಐನೂರು ಕೈಗಳಿಂದ ಜಲಕ್ರೀಡೆಯಾಡಿದುದು ಮನಕ್ಕೆ ಮುದ ನೀಡಿತು. ಜನ್ಸಾಲೆಯವರ ಹಾಡು ಭಾವ ಸು#ರಿಸಿದರೆ ರಂಗದಲ್ಲಿದ್ದ ಮೂವರ ನರ್ತನ ಅದಕ್ಕೆ ವಿಶೇಷ ಮೆರಗು ಕೊಟ್ಟಿತು. ಸಂದೇಶವಾಹಕನಾಗಿ ಕಾಸರಕೋಡು ಶ್ರೀಧರ ಭಟ್ ಅವರ ಹಾಸ್ಯವು ಎಲ್ಲೂ ಎಲ್ಲೆ ಮೀರದೆ ನಗೆಗಡಲಲ್ಲಿ ಮುಳುಗಿಸಿತು. ಪ್ರಸ್ತುತ ಕಾಲಮಾನದ ಬೇಡಿಕೆಯ ಹಿಮ್ಮೇಳ ಕಲಾವಿದರಾದ ಜನ್ಸಾಲೆ ರಾಘವೇಂದ್ರ ಆಚಾರ್ಯರ ಸುಶ್ರಾವ್ಯ ಭಾಗವತಿಕೆಗೆ ಮದ್ದಳೆಯಲ್ಲಿ ಸುನಿಲ್ ಭಂಡಾರಿ ಕಡತೋಕ, ಚೆಂಡೆಯಲ್ಲಿ ಸುಜನ್ ಹಾಲಾಡಿ ಇದ್ದರು.
ಆ ನಂತರ ಕಾವು ಏರಿದ್ದು ರಂಗನಾಯಕ ಕುರಿಯ ಗಣಪತಿ ಶಾಸ್ತ್ರಿಗಳ ಸಾರಥ್ಯದ ಭಾರ್ಗವ ವಿಜಯ ಪ್ರಸಂಗ. ಕುದ್ರೆಕೋಡ್ಲು ಮೂರ್ತಿ ಮತ್ತು ಜಯರಾಮ ಚೆಳಾÂರುರವರು ಮದ್ದಳೆ ಮತ್ತು ಚಂಡೆಯಲ್ಲಿ ಸಹಕರಿಸಿದರು. ಭಾರ್ಗವ ಪಾತ್ರಕ್ಕೆ ಜೀವ ತುಂಬಿದ್ದು ಗುಂಡಿಮಜಲು ಗೋಪಾಲ ಭಟ್. ಇಂತಹ ಪಾತ್ರಕ್ಕೆ ಹೇಳಿ ಮಾಡಿಸಿದಂತೆ ಶಾರೀರ್ಯವನ್ನು ಹೊಂದಿದ ಇವರು ಅಶ್ವತ್ಥಾಮ, ವಿಶ್ವಾಮಿತ್ರ, ದೂರ್ವಾಸನಂತಹ ಪಾತ್ರಗಳನ್ನು ಮಾಡಿ ಹೆಸರುವಾಸಿಯಾದವರು. ಇದು ಪೂರ್ಣ ತೆಂಕಿನದ್ದಾದರೆ ನಂತರ ತೆಂಕು ಬಡಗಿನ ಕೂಡಾಟ. ಇಡೀ ರಾತ್ರಿಯ ಆಟದಲ್ಲಿ ಒಟ್ಟಂದದಲ್ಲಿ ಗಮನ ಸೆಳೆದದ್ದು ಧರ್ಮಾಂಗದ ದಿಗ್ವಿಜಯ ಮತ್ತು ಹರಿ ದರ್ಶನ ಪ್ರಸಂಗಗಳು. ಧರ್ಮಾಂಗದನಾಗಿ ಅಮ್ಮುಂಜೆ ಮೋಹನ ಕುಮಾರ್ ಮತ್ತು ಭರತನಾಗಿ ಜಲವಳ್ಳಿ ವಿದ್ಯಾಧರ ರಾವ್ ಅವರು ಪಾತ್ರಕ್ಕೆ ಜೀವ ತುಂಬಿಸುವ ಮೂಲಕ ಯಶಸ್ವಿಯಾಗಿಸಿದರು.
ಮುಂದಿನ ಹರಿ ದರ್ಶನ (ರುಕ್ಮಾಗದ ಚರಿತ್ರೆ) ವನ್ನು ಮನೋಜ್ಞವಾಗಿ ಪ್ರೇಕ್ಷಕರನ್ನು ಹಿಡಿದಿಟ್ಟದ್ದು ರುಕ್ಮಾಗದನಾಗಿ ಸುಣ್ಣಂಬಳ ಮತ್ತು ಶಶಿಕಾಂತ ಶೆಟ್ಟಿಯವರ ಮೋಹಿನಿ ಪಾತ್ರ. ಎರಡನೇ ಪ್ರಹರದಲ್ಲೂ ಇಂತಹ ಪ್ರಸಂಗಗಳು ಯಶಸ್ವಿಯಾಗಿ ಮನಸೋಲುವ ಹಾಗೆ ಮಾಡಿದ್ದು ಯಕ್ಷಗಾನ ಯಾವಾಗಲೂ ಅಜರಾಮರವಾಗಿರುತ್ತದೆ ಎಂಬುದನ್ನು ಸಾಬೀತುಪಡಿಸಿತು.
ಇದಕ್ಕೆ ಬೆನ್ನೆಲುಬಾಗಿ ನಿಂತದ್ದು ಉತ್ತಮ ತೆಂಕು ಬಡಗು ಹಿಮ್ಮೇಳ. ದಕ್ಷಿಣದ ಮೇರು ಭಾಗವತರಾದ ರವಿಚಂದ್ರ ಕನ್ನಡಿಕಟ್ಟೆ ಮತ್ತು ಉತ್ತರದ ಬೇಡಿಕೆಯ ಭಾಗವತರಾದ ಹಿಲ್ಲೂರು ರಾಮಕೃಷ್ಣ ಹೆಗಡೆ.ಸೌಮ್ಯ ಪ್ರಸಂಗಗಳಿಗೆ ಜಾಗರೂಕತೆಯಿಂದ ನಿರ್ವಹಿಸಲು ಸಹಕಾರಿಯಾಗಿ ಎಚ್ಚರವಹಿಸಿದ್ದು ಚೆ„ತನ್ಯಕೃಷ್ಣ ಪದ್ಯಾಣ ಮತ್ತು ಯನ್. ಜಿ. ಹೆಗಡೆ ಅವರ ಮದ್ದಳೆ.
ಬೆಳಗ್ಗಿನ ಜಾವಕ್ಕೆ ಅನುರೂಪ ಪ್ರಸಂಗ ಕಾಳಿಂಗ ಮರ್ದನ. ರಂಗಪ್ರಸಂಗ ಖ್ಯಾತಿಯ, ಧರ್ಮಸ್ಥಳ ಮೇಳದ ಭಾಗವತ ಸಿರಿಬಾಗಿಲು ರಾಮಕೃಷ್ಣ ಮಯ್ಯರ ಮುನ್ನಡೆಯಲ್ಲಿ ವೇಗವಾಗಿ ತೆಗೆದುಕೊಂಡು ಹೋದ ಕಾರಣ ಎಲ್ಲರನ್ನೂ ಉತ್ಸಾಹದಿಂದ ಪಾಲ್ಗೊಳ್ಳುವ ಹಾಗೆ ನೋಡಿಕೊಂಡರು. ಸುಬ್ರಾಯ ಹೊಳ್ಳರ ಮಿಂಚಿನ ನಡೆಯೊಂದಿಗೆ ಕಾಳಿಂಗ ಪಾತ್ರಕ್ಕೆ ಜೀವ ತುಂಬಿದ್ರೆ ಇಳಿ ವಯಸ್ಸಿನಲ್ಲೂ ಮನಸೋಲುವ ಹಾಗೆ ಮತ್ಸé ರಾಜನಾಗಿ ಪಾತ್ರ ನಿರ್ವಹಿಸಿದ ಅರುವ ಕೊರಗಪ್ಪ ಶೆಟ್ಟಿಯವರು.
ಸಂತೋಷ್ ಕೇಳ್ಕರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ
ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ
Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್ ಜೈಕಾರ !
Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ
Idu Entha Lokavayya: “ಕೋಸ್ಟಲ್” ನಿಂದ ಕರುನಾಡು!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.