ಯಕ್ಷ ವರ್ಷಾದಲ್ಲಿ ಮೂರು ಆಖ್ಯಾನಗಳು
Team Udayavani, Sep 1, 2017, 1:45 PM IST
ಉಡುಪಿ – ಕೋಟದ ಯಕ್ಷ ಮಹಿಳಾ ಬಳಗದವರು ಕಳೆದ ನಾಲ್ಕು ವರುಷಗಳಿಂದ ತಾಳಮದ್ದಲೆ ಕೂಟ, ಯಕ್ಷಗಾನ ಕಾರ್ಯಕ್ರಮಗಳನ್ನು ಜಿಲ್ಲೆಯಾದ್ಯಂತ ಹಾಗೂ ಮುಂಬಯಿ, ಬೆಂಗಳೂರಿನಂಥ ಮಹಾನಗರಗಳಲ್ಲೂ ನೀಡುತ್ತಾ ಜನಮನ್ನಣೆ ಗಳಿಸಿದ್ದಾರೆ. ಈ ಬಾರಿ ಹೊಸ ಹುರುಪಿನೊಂದಿಗೆ ವರ್ಷಧಾರೆಯ ಈ ದಿನಗಳಲ್ಲಿ ಯಕ್ಷ ವರ್ಷಾ ಎನ್ನುವ ತ್ರಿವಳಿ ಯಕ್ಷಗಾನೋತ್ಸವ ವನ್ನು ಹಮ್ಮಿಕೊಂಡು ವಾಲಿವಧೆ, ಸುಧನ್ವ ಕಾಳಗ ಮತ್ತು ರತ್ನಾವತೀ ಕಲ್ಯಾಣ ಎಂಬ ಮೂರು ಆಖ್ಯಾನಗಳನ್ನು ಚೇಂಪಿ-ಸಾಲಿಗ್ರಾಮದ ಯಕ್ಷಗಾನ ಕಲಾಕೇಂದ್ರದ ಸದಾನಂದ ರಂಗ ಮಂಟಪದಲ್ಲಿ ಪ್ರದರ್ಶಿಸಿದರು.
ವಾಲಿವಧೆಯಲ್ಲಿ ಆಂಜನೇಯನಾಗಿ ಉಷಾರಾಣಿ ಸಾಗರ ತಮ್ಮ ಪಾತ್ರವನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಿದರು. ಶ್ರೀರಾಮನಾಗಿ ಸುಧಾ ಮಣೂರು, ಸುಗ್ರೀವನಾಗಿ ನಾಗರತ್ನಾ ಹೇಳೆì ಪಾತ್ರೋಚಿತ ಮಾತುಗಳೊಂದಿಗೆ ಸೊಗಸಾಗಿ ನಿರ್ವಹಿಸಿದರೆ, ಭಾಗೀರಥಿ ಎಂ. ರಾವ್ ಅವರು ವಾಲಿಯ ರೋಷ, ದ್ವೇಷ ಮತ್ತು ಶ್ರೀರಾಮನ ಚರಣಗಳಲ್ಲಿ ತನ್ನ ಕೊನೆಯ ಕ್ಷಣಗಳನ್ನು ಕಳೆಯುವ ದೈನ್ಯತೆಯ ಭಾವಾಭಿನಯದೊಂದಿಗೆ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾದರು. ಲಕ್ಷ್ಮಣ ಮತ್ತು ಅಂಗದನಾಗಿ ಕು| ವಿಶ್ರುತಾ ಹೇಳೆì, ತಾರೆಯಾಗಿ ಗಾಯತ್ರಿ ಶಾಸ್ತ್ರಿ ಪಾತ್ರ ನಿರ್ವಹಿಸಿದ್ದರು.
ಸುಧನ್ವಾರ್ಜುನದಲ್ಲಿ ಹಂಸಧ್ವಜನ ಘನತೆ, ಗಾಂಭೀರ್ಯಗಳನ್ನು ಸುಧಾ ಮಣೂರು ಅಭಿವ್ಯಕ್ತಿಗೊಳಿಸಿದರೆ, ಸುಧನ್ವನ ಶೌರ್ಯ, ಪರಾಕ್ರಮಗಳನ್ನು ಭಾಗೀರಥಿ ಎಂ. ರಾವ್ ಅವರು ಸೊಗಸಾಗಿ ಅನಾವರಣಗೊಳಿಸಿದರು. ಸುಗಭೆìಯಾಗಿ ಗಾಯತ್ರಿ ಶಾಸ್ತ್ರಿಯವರು ಮಾತೃ ಹೃದಯದ ಮಿಡಿತವನ್ನು ಮಾತಿನಲ್ಲಿ ತೋರ್ಪಡಿಸಿದರು. ಪ್ರಭಾವತಿಯ ಅಂತರಾಳದ ನೋವು ಮತ್ತು ಭಾವನೆಗಳನ್ನು ಪತಿಯೊಂದಿಗೆ ಹಂಚಿಕೊಳ್ಳುವ ಸನ್ನಿವೇಶಗಳನ್ನು ಬಹಳ ಮಾರ್ಮಿಕವಾಗಿ ಉಷಾರಾಣಿ, ಸಾಗರ ಅವರು ಅಭಿವ್ಯಕ್ತಿಗೊಳಿಸಿದರು. ಅರ್ಜುನನಾಗಿ ಸುಧಾ ಮಣೂರು, ಚಾರಕ ಮತ್ತು ಕೃಷ್ಣನ ಪಾತ್ರದಲ್ಲಿ ನಾಗರತ್ನ ಹೇಳೆì, ಪ್ರದ್ಯುಮ್ನನಾಗಿ ಕು| ಅಶ್ವಿನಿ ಶಾಸ್ತ್ರಿಯವರು ಪಾತ್ರಕ್ಕೆ ನ್ಯಾಯ ಒದಗಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಾಯೋಜಕತ್ವದಲ್ಲಿ ನಡೆದ ಮೂರನೆಯ ದಿನದ ಕಾರ್ಯಕ್ರಮ ರತ್ನಾವತಿ ಕಲ್ಯಾಣದಲ್ಲಿ ರತ್ನಾವತಿಯ ಚೆಲುವಿಗೆ ಮನಸೋತ ಭದ್ರಸೇನ ತನ್ನ ಮನದಿಚ್ಛೆಯನ್ನು ಆಕೆಯಲ್ಲಿ ಭಿನ್ನವಿಸುವ ರೀತಿ, ದೃಢವರ್ಮನಿಂದ ತಿರಸ್ಕರಿಸಲ್ಪಟ್ಟಾಗ ಕ್ರೋಧಗೊಳ್ಳುವ ಸಂದರ್ಭವನ್ನು ಬಹಳ ಆಳವಾಗಿ ಭಾಗೀರಥಿ ಎಂ. ರಾವ್ ಅವರು ಅಭಿವ್ಯಕ್ತಿಗೊಳಿಸಿದ್ದಾರೆ. ಕಾಡಿನರಮನೆಯಲ್ಲಿ ಕಂಡ ರತ್ನಾವತಿಯ ಚೆಲುವಿಕೆಗೆ ಮನಸೋತ ವತ್ಸಾಖ್ಯನಾಗಿ ಉಷಾರಾಣಿ ಸಾಗರ ಅವರ ಅಭಿನಯ ಪ್ರೇಕ್ಷಕರನ್ನು ಮೋಡಿಗೊಳಿಸಿತು. ರತ್ನಾವತಿಯ ಮುಗ್ಧತೆಯನ್ನು ನಾಗರತ್ನ ಹೇಳೆìಯವರು ತೋರ್ಪಡಿಸಿದರೆ, ವಿದ್ಯುಲ್ಲೋಚನನಾಗಿ ಬಣ್ಣದ ವೇಷದಲ್ಲಿ ಸುಧಾ ಮಣೂರು, ದೃಢವರ್ಮನಾಗಿ ಗಾಯತ್ರಿ ಶಾಸ್ತ್ರೀ, ಭದ್ರಸೇನನ ಮಂತ್ರಿ ಕುವರ ಚಿತ್ರಧ್ವಜನಾಗಿ ಸಹನಾ ಶಾಸ್ತ್ರಿ ಇವರುಗಳು ಪಾತ್ರಕ್ಕೆ ಜೀವ ತುಂಬಿದರು.
ಮೂರು ಆಖ್ಯಾನಗಳ ಪೂರ್ವರಂಗದ ಬಾಲಗೋಪಾಲ ಮತ್ತು ಪೀಠಿಕಾ ಸ್ತ್ರೀ ವೇಷದ ಹೆಜ್ಜೆಗಳನ್ನು ಕು| ವಿಶ್ರುತಾ ಮತ್ತು ಕು| ಸಹನಾ ಶಾಸಿŒ ನಿರ್ವಹಿಸಿದರು. ಹಿಮ್ಮೇಳದಲ್ಲಿ ಭಾಗವತರಾಗಿ ಕೆ. ಪಿ. ಹೆಗಡೆ, ಉದಯ ಕುಮಾರ ಹೊಸಾಳ ಮತ್ತು ವಂದನಾ ಹೆಬ್ಟಾರ್, ಮದ್ದಲೆಯಲ್ಲಿ ರಾಘವೇಂದ್ರ ಹೆಗಡೆ, ಯಲ್ಲಾಪುರ ಮತ್ತು ಕೃಷ್ಣ ಆಚಾರ್ ಹಾಗೂ ಚೆಂಡೆಯಲ್ಲಿ ಕೃಷ್ಣಾನಂದ ಶೆಣೈ, ಶಿರಿಯಾರ ಇವರುಗಳು ಸಹಕರಿಸಿದರು. ವೇಷಭೂಷಣ ಬಾಲಕೃಷ್ಣ ನಾಯಕ್, ಹಂದಾಡಿ ಅವರದಾಗಿತ್ತು. ತ್ರಿವಳಿ ಯಕ್ಷಗಾನೋತ್ಸವನ್ನು ವೀಕ್ಷಿಸಿದ ಪ್ರೇಕ್ಷಕರು ಈ ಮಹಿಳಾ ಮಣಿಗಳ ಸಾಧನೆಗೆ ತಮ್ಮ ಅಭಿನಂದನೆಯನ್ನು ಕರತಾಡನದ ಮೂಲಕ ಸೂಚಿಸಿದರು. ಗುರುಗಳಾದ ಸೀತಾರಾಮ ಶೆಟ್ಟಿ ಕೊçಕೂರು, ಸುಜಯೀಂದ್ರ ಹಂದೆ, ನರಸಿಂಹ ತುಂಗ, ಪ್ರಸಾದ್ ಮೊಗೆಬೆಟ್ಟು ಇವರ ಗರಡಿಯಲ್ಲಿ ಪಳಗಿದ ಈ ಮಹಿಳೆಯರ ಸಾಧನೆಯು ಮುಂದುವರಿಯಲಿ.
ಕೆ. ದಿನಮಣಿ ಶಾಸ್ತ್ರೀ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Punjalkatte: ಬೈಕ್ ಢಿಕ್ಕಿ; ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು
Shivamogga: ಆಸ್ಪತ್ರೆಯಲ್ಲಿನ ತೆರೆದ ನೀರಿನ ತೊಟ್ಟಿಗೆ ಬಿದ್ದು ಮಗು ಮೃತ್ಯು!
Padubidri: ನವವಿವಾಹಿತೆಗೆ ಕಿರುಕುಳ; ಪತಿಯ ಮನೆಮಂದಿ ವಿರುದ್ಧ ದೂರು
Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ
Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.