ವಾಸುದೇವ ಸಾಮಗರಿಗೆ ಯಕ್ಷ ಸಂಗಮದ ಸಮ್ಮಾನ
Team Udayavani, Jul 27, 2018, 6:00 AM IST
ಮೂಡಬಿದಿರೆಯ ಯಕ್ಷ ಸಂಗಮದ ವಾರ್ಷಿ ಕೋತ್ಸವದಲ್ಲಿ ಈ ವರ್ಷದ ಸಮ್ಮಾನವನ್ನು ತೆಂಕು – ಬಡಗು ತಿಟ್ಟಿನ ಪ್ರಸಿದ್ಧ ಅರ್ಥಧಾರಿ ಹಾಗೂ ವೇಷಧಾರಿ ಮಲ್ಪೆ ವಾಸುದೇವ ಸಾಮಗರಿಗೆ ನೀಡಲಾಗುವುದು.ಜು.28ರಂದು ಕಾರ್ಯಕ್ರಮ ಜರಗಲಿದೆ.
ಸಾಮಗ ಪರಂಪರೆಯಲ್ಲಿ ಬೆಳೆದು ಬಂದ ಅಪ್ರತಿಮ ಅರ್ಥಧಾರಿ ವಾಸುದೇವ ಸಾಮಗರು . ಆದಿ ಉಡುಪಿಯಲ್ಲಿ ಪ್ರಾಥಮಿಕ ಶಿಕ್ಷಣ, ಹೆಜಮಾಡಿಯಲ್ಲಿ ಪಿ.ಯು.ಸಿ. ಪೂರೈಸಿದ ಸಾಮಗರು ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದರು . ಕಾಲೇಜ್ ವಿದ್ಯಾರ್ಥಿ ಜೀವನದಲ್ಲೇ ತಾಳಮದ್ದಳೆ ಕೂಟಗಳಲ್ಲಿ ಭಾಗವಹಿಸುತ್ತಿದ್ದರು.ಸಾಮಗರ ಅರ್ಥಗಾರಿಕೆಯ ಆಳವನ್ನು ಗಮನಿಸಿದ ಯಕ್ಷಗಾನ ಪೋಷಕ ಹಾಗೂ ಸಂಘಟಕರಾದ ಕೋಟ ಶ್ರೀಧರ ಹಂದೆಯವರು ಸಾಮಗರನ್ನು ದೊಡ್ಡ ಕೂಟಕ್ಕೆ ಪ್ರವೇಶ ಕೊಡಿಸಿದರು . ದೊಡ್ಡಪ್ಪ ಶಂಕರನಾರಾಯಣ ಸಾಮಗ , ತಂದೆ ರಾಮದಾಸ ಸಾಮಗ , ಕೆರೆಮನೆ ಮಹಾಬಲ ಹೆಗಡೆಯವರಂಥಹ ಘಟಾನುಘಟಿಗಳಿರುವ ಕೂಟದಲ್ಲಿ ಸಾಮಗರು ಕಾಣಿಸಿಕೊಂಡರು .
ಎರಡು ವರ್ಷ ಅಮೃತೇಶ್ವರಿ ಮೇಳದ ತಿರುಗಾಟದಲ್ಲಿ ಸಾಮಗರಿಗೆ ಶಂಕರನಾರಾಯಣ ಸಾಮಗ , ಚಿಟ್ಟಾಣಿ , ಗೋಡೆಯವರಂಥಹ ಕಲಾವಿದರ ಒಡನಾಟವಾಗಿ ಬೆಳೆಯಲು ಅವಕಾಶ ಆಯಿತು . ಆಗ ಅಮೃತೇಶ್ವರಿ ಮೇಳದ ಪ್ರಧಾನ ಭಾಗವತರಾಗಿದ್ದ ನಾರಣಪ್ಪ ಉಪ್ಪೂರರಲ್ಲಿ ಸಾಮಗರು ಯಕ್ಷಗಾನದ ನಾಟ್ಯವನ್ನು ಕರಗತ ಮಾಡಿಕೊಂಡರು . ತಮ್ಮ ಅಸ್ಖಲಿತ ಮಾತುಗಾರಿಕೆ , ಹದವರಿತ ನಾಟ್ಯ , ಪಾತ್ರಗಳ ಒಳಮರ್ಮ ಅರಿತು ನೀಡುವ ಪಾತ್ರಚಿತ್ರಣ , ಪಾತ್ರಗಳಿಗೆ ನವೀನ ಸ್ಪರ್ಶ ನೀಡುವ ಶೈಲಿ ಎಲ್ಲವೂ ಸಾಮಗರನ್ನು ಎತ್ತರದ ಸಾಲಿಗೆ ಏರಿಸಿದವು .ಮುಂದೆ ಕರ್ಣಾಟಕ , ಇರಾ , ಧರ್ಮಸ್ಥಳ , ಪೆರ್ಡೂರು , ಸಾಲಿಗ್ರಾಮ, ಕದ್ರಿ , ಸುರತ್ಕಲ…, ಬಗ್ವಾಡಿ , ಕಾಟಿಪಳ್ಳ , ಸೌಕೂರು , ಶಿರಸಿ ಮುಂತಾದ ಮೇಳಗಳಲ್ಲಿ ತಿರುಗಾಟ ನಡೆಸಿದರು .
ಸಾಮಗರು ನಿರ್ವಹಿಸಿದ ಕೆಲವು ಪಾತ್ರಗಳಂತೂ ಅನನ್ಯ. ತಪಸ್ವಿ ತರಂಗಿಣಿ ಪ್ರಸಂಗದಲ್ಲಿ ಹೆಣ್ಣು ಎಂದರೆ ಏನೆಂದೇ ಅರಿಯದ ಮುಗ್ಧ ಋಷ್ಯಶೃಂಗನ ಪಾತ್ರಕ್ಕೆ ಮೂಲ ಚಿತ್ರಣ ಕೊಟ್ಟವರು ಸಾಮಗರು. ಗೋಗ್ರಹಣ ಪ್ರಸಂಗದ ಉತ್ತರಕುಮಾರನ ಪೌರುಷ, ಪಟ್ಟಾಭಿಷೇಕ ಪ್ರಸಂಗದಲ್ಲಿ ದಶರಥನ ಮಾನಸಿಕ ತುಮುಲ , ಕರ್ಮಬಂಧನದಲ್ಲಿ ಧರ್ಮ ಪ್ರಜ್ಞೆಯ ಭೀಷ್ಮ , ಗದಾಯುದ್ಧದ ದುರಂತ ಕೌರವ , ಕಟಿಲತೆಯ ಮಂಥರೆ , ಕೈಕೇಯಿ , ಮಹಾಕವಿ ಕಾಳಿದಾಸ ಪ್ರಸಂಗದ ದುಷ್ಟಮಂತ್ರಿ , ಅಂಬೆ , ಶೂರ್ಪನಖೀ ,ಶ್ರೀಕೃಷ್ಣ ಈ ಎಲ್ಲಾ ಪಾತ್ರಗಳು ಸಾಮಗರಿಗೆ ಅಪಾರ ಪ್ರಸಿದ್ಧಿ ನೀಡಿ ಮಾಸ್ಟರ್‌ಪೀಸ್ ಎಂದು ಪರಿಗಣಿಸಲ್ಪಟ್ಟಿವೆ .ವಿತಂಡವಾದಕ್ಕೆ ಅವಕಾಶವಿರುವ ಪೌಂಢಕ , ಕೌರವ , ಉತ್ತರ ಕುಮಾರ , ಮಂಥರೆ , ಸಾಲ್ವ , ದಕ್ಷ ಮುಂತಾದ ಪಾತ್ರಗಳು ಸಿಕ್ಕರಂತೂ ಪ್ರೇಕ್ಷಕರಿಗೆ ರಸಕವಳ .
ಪ್ರಸ್ತುತ ತಮ್ಮದೇ ಆದ ಸಂಯಮಂ ಎಂಬ ತಂಡ ಕಟ್ಟಿ ತಾಳಮದ್ದಳೆ ಪ್ರದರ್ಶನ ನೀಡುತ್ತಿದ್ದಾರೆ.ಅಪರೂಪಕೊಮ್ಮೆ ಹರಿಕಥೆಯಲ್ಲೂ ತೊಡಗಿಸಿಕೊಂಡಿದ್ದಾರೆ .
ಎಂ.ಶಾಂತರಾಮ ಕುಡ್ವ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.