ಶೃಂಗಾರ ರಸಧಾರೆಯಾದ ಯಕ್ಷ-ನಾದ-ನೂಪುರ
Team Udayavani, Jul 26, 2019, 5:00 AM IST
ವೃತ್ತಿಪರ ಕಲಾವಿದರ ಕೂಡುವಿಕೆಯ ಪ್ರಸ್ತುತಿ
ಹೆಚ್ಚಿನೆಲ್ಲಾ ಹಾಡುಗಳು ಶೃಂಗಾರ ಭರಿತವಾಗಿದ್ದುದರಿಂದ ಅದಕ್ಕೆ ಸರಿಯಾಗಿ ಸ್ಪಂದಿಸಿ ರಂಗಸ್ಥಳದಲ್ಲಿ ಶೃಂಗಾರಕಾವ್ಯವನ್ನೇ ಹರಿಸಿದರು. ಇವರಿಗೆ ದ್ವಂದ್ವ ಭಾಗವತಿಕೆಯಲ್ಲಿ ಸಹಕರಿಸಿದ ಹಿರಿಯ ಭಾಗವತರೀರ್ವರೂ ಅಭಿನಂದನಾರ್ಹರು. ಅವರ ಸುಶ್ರಾವ್ಯ ಕಂಠಸಿರಿಯಲ್ಲಿ
ಮೊಳಗಿದ ಜನಪ್ರಿಯ ಹಾಡುಗಳು ಶ್ರೋತೃಗಳನ್ನು ಮಂತ್ರ ಮುಗ್ಧರನ್ನಾಗಿಸಿತು.
ಮಳೆಗಾಲ ಆರಂಭವಾಯಿತೆಂದರೆ ಯಕ್ಷಗಾನ ಡೇರೆಮೇಳಗಳು ಮರೆಗೆ ಸರಿದು ಸೀಮಿತ ಅವಧಿಯ ಜನಾಕರ್ಷಣೆಯೇ ಪ್ರಧಾನವಾಗುಳ್ಳ ವಿಭಿನ್ನವಾದ ಯಕ್ಷಲೋಕ ಆನಾವರಣಗೊಳ್ಳುತ್ತದೆ. ಇಂತಹ ಒಂದು ಪ್ರಯತ್ನವಾಗಿ ಇತ್ತೀಚೆಗೆ ಕೊಡವೂರಿನ ಮಹತೋಬಾರ ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ವಿವಿಧ ಮೇಳಗಳ ವೃತ್ತಿಪರ ಕಲಾವಿದರ ಕೂಡುವಿಕೆಯಿಂದ “ಯಕ್ಷ-ನಾದ-ನೂಪುರ’ ಎನ್ನುವ ವಿಶಿಷ್ಟ ಮನೋರಂಜನಾ ಕಾರ್ಯಕ್ರಮ ಯಕ್ಷಗಾನದ ಸುಧಾರಿತ ಆವೃತ್ತಿಯಾಗಿ ಮೂಡಿ ಬಂತು. ಮಾರಣಕಟ್ಟೆ ಮೇಳದ ಉಮೇಶ್ ಸುವರ್ಣ ಗೋಪಾಡಿ ಹಾಗೂ ಯಕ್ಷಗುರು ಪ್ರಸಾದ್ ಕುಮಾರ್ ಮೊಗೆಬೆಟ್ಟು ಇವರ ದ್ವಂದ್ವ ಗಾಯನದಿಂದ ಶುಭಾರಂಭಗೊಂಡ ಯಕ್ಷಧ್ವನಿ ಸುಮಾರು ಅರ್ಧತಾಸು ಪೌರಾಣಿಕ ಪ್ರಸಂಗಗಳ ಆಯ್ದ ಸಾಂಪ್ರದಾಯಿಕ ಹಾಡುಗಳಿಂದ ಶ್ರೋತೃಗಳ ಮನಗೆದ್ದಿತು. ಇಬ್ಬರೂ ಭಾಗವತರ ಹೊಂದಾಣಿಕೆ ಅದ್ಭುತವಾಗಿದ್ದು ಒಬ್ಬರಿಗೊಬ್ಬರು ಪೂರಕವಾಗಿ ಹಾಡಿ ಭಾಗವತಿಕೆಯ ಕೌಶಲ್ಯ ಮೆರೆದರು.
ಯಕ್ಷನಾದದ ಝೇಂಕಾರದಿಂದ ಅನುರಣನಗೊಂಡ ರಂಗಸ್ಥಳ ಮುಂದೆ ಯಕ್ಷನೂಪುರದ ಧ್ವನಿಗಾಗಿ ಸಜ್ಜುಗೊಂಡಿತು. ಮಂದಾರ್ತಿ ಮೇಳದ ದಿನಕರ ಕುಂದರ್ ನಡೂರು ತ್ರಿಪುರಸುಂದರಿಯಗಿ ಭರ್ಜರಿ ಪ್ರವೇಶಕೊಟ್ಟರು. ವಿವಿಧ ಹಾವಭಾವ, ವೈವಿಧ್ಯಮಯ ಹೆಜ್ಜೆ-ನೋಟಗಳಿಂದ ಕರತಾಡನ ಗಿಟ್ಟಿಸಿದರು. ಮುಂದೆ ಅವರನ್ನು ಕೂಡಿಕೊಂಡ ಪುರುಷ ವೇಷಧಾರಿ ಸಾಲಿಗ್ರಾಮ ಮೇಳದ ಹರೀಶ್ ಮೊಗವೀರ ಜಪ್ತಿ ರಂಗಸ್ಥಳದಲ್ಲಿ ತಾನೇ ತಾನಾಗಿ ವಿಜೃಂಭಿಸಿದರು. ಶ್ವೇತಕುಮಾರ ಚರಿತ್ರೆ ಪ್ರಸಂಗದ ಕೆಲವೊಂದು ಹಾಡುಗಳಿಗೆ ಹೆಜ್ಜೆ ಹಾಕಿದ ಇವರೀರ್ವರೂ ಅತ್ಯುತ್ತಮ ನಿರ್ವಹಣೆ ನೀಡಿ ನಿರ್ಗಮಿಸಿದರು. ಮುಂದೆ ಪಾಂಚಜನ್ಯ ಪ್ರಸಂಗದ ಹಸಿಕೆ ಕೃಷ್ಣ ಜೋಡಿಯಾಗಿ ಸಾಲಿಗ್ರಾಮ ಮೇಳದ “ನವಯುವತಿ’ ಗೋವಿಂದ ಮೊಗವೀರ ವಂಡಾರು ಹಾಗೂ ಪೆರ್ಡೂರು ಮೇಳದ ಪ್ರಕಾಶ್ ಮೊಗವೀರ ಕಿರಾಡಿ ನಾಟ್ಯ ಚಾತುರ್ಯದಿಂದ ರಂಗಸ್ಥಳದಲ್ಲಿ ಮೆರೆದಾಡಿದರು. ಅದರಲ್ಲೂ ಹುಸಿನಿದ್ದೆಯಲ್ಲಿ ಮಲಗಿದ್ದ ಕೃಷ್ಣನನ್ನು ಕಂಡ ಹಸಿಕೆ ತನ್ನ ಅನಿಸಿಕೆಯನ್ನು ವ್ಯಕ್ತಪಡಿಸಿದ ರೀತಿ ಅತ್ಯದ್ಭುತವಾಗಿತ್ತು. ಸುಮಾರು ಅರ್ಧ ಘಂಟೆಗೂ ಮಿಕ್ಕಿ ರಂಗವನ್ನಾಳಿದ ಇವರೀರ್ವರೂ ತಮ್ಮ ಸಾಮರ್ಥ್ಯಕ್ಕನುಗುಣವಾಗಿ ಉತ್ತಮ ಪ್ರದರ್ಶನ ನೀಡಿದರು. ಮುಂದಿನ ಸರದಿಯಲ್ಲಿ ಮೃಗಾವತಿಯಾಗಿ ಅಮೃತೇಶ್ವರಿ ಮೇಳದ ವಿಶ್ವನಾಥ ಕಿರಾಡಿ ಹಾಗೂ ಸಹಸ್ರಾನಿಕನಾಗಿ ಸಾಲಿಗ್ರಾಮ ಮೇಳದ ಹರೀಶ್ ಮೊಗವೀರ ಜಪ್ತಿ ರಂಗವನ್ನಾಕ್ರಮಿಸಿ ಕೊಂಡರು. ಮೃಗಾವತಿಯ ರಂಗಪ್ರವೇಶ ನಯನ ಮನೋಹರವಾಗಿತ್ತು. ಹೆಣ್ಣಿನ ನಯ-ನಾಜೂಕನ್ನು ಮೈಗೂಡಿಸಿಕೊಂಡು ಒನಪು-ವಯ್ನಾರಗಳಿಂದ, ವೈವಿಧ್ಯಮಯ ಭಾವ-ಭಂಗಿಗಳಿಂದ ಪ್ರೇಕ್ಷಕರ ಮನ ಸೆಳೆದರು. ಅಷ್ಟೇ ಸಮರ್ಥವಾಗಿ ಇವರಿಗೆ ಸರಿಸಾಟಿಯಾಗುವಂತೆ ನರ್ತಿಸಿದ ಹರೀಶ್ ಜಪ್ತಿ ಸೈ ಎನಿಸಿಕೊಂಡರು.
ಮೂರು ಸ್ತ್ರೀ-ಪುರುಷ ಜೋಡಿಗಳು ವಿರಾಮರಹಿತವಾದ, ನವರಸಭರಿತವಾದ ಗೆಜ್ಜೆ-ಹೆಜ್ಜೆಯೊಂದಿಗೆ ಪ್ರೇಕ್ಷಕರನ್ನು ಕಲ್ಪನಾ ಲೋಕಕ್ಕೆ ಕೊಂಡೊಯ್ಯುವಲ್ಲಿ ಯಶಸ್ವಿಯಾದವು. ಹೆಚ್ಚಿನೆಲ್ಲಾ ಹಾಡುಗಳು ಶೃಂಗಾರ ಭರಿತವಾಗಿದ್ದುದರಿಂದ ಅದಕ್ಕೆ ಸರಿಯಾಗಿ ಸ್ಪಂದಿಸಿ ರಂಗಸ್ಥಳದಲ್ಲಿ ಶೃಂಗಾರಕಾವ್ಯವನ್ನೇ ಹರಿಸಿದರು. ಇವರಿಗೆ ಸಮರ್ಪಕವಾಗಿ ದ್ವಂದ್ವ ಭಾಗವತಿಕೆಯಲ್ಲಿ ಸಹಕರಿಸಿದ ಹಿರಿಯ ಭಾಗವತರೀರ್ವರೂ ಅಭಿನಂದನಾರ್ಹರು. ಅವರ ಸುಶ್ರಾವ್ಯ ಕಂಠಸಿರಿಯಲ್ಲಿ ಮೊಳಗಿದ ಜನಪ್ರಿಯ ಹಾಡುಗಳು ಶ್ರೋತೃಗಳನ್ನು ಮಂತ್ರ ಮುಗ್ಧರನ್ನಾಗಿಸಿತು. ಏಳು ಮದ್ದಲೆಗಳೊಂದಿಗೆ ಒಂದು ಭ್ರಮಾಲೋಕವನ್ನೇ ಸೃಷ್ಟಿಸಿದ ಮಂದಾರ್ತಿ ಮೇಳದ ಮಹೇಶ್ ಮೊಗವೀರ ಮಂದಾರ್ತಿ ಕೈಚಳಕ ಮೆಚ್ಚುವಂಥಾದ್ದು. ತನ್ನ ಗುಂಗುರು ಉದ್ದಕೂಲನ್ನು ಹಾರಿಸುತ್ತಾ ಒಂಭತ್ತು ಚೆಂಡೆಗಳನ್ನು ಏಕಕಾಲಕ್ಕೆ ಬಾರಿಸುತ್ತಿದ್ದ ಚೆಂಡೆಮಾಂತ್ರಿಕ ದಿ| ಆನಂದ ಗಾಣಿಗರನ್ನು ನೆನಪಿಸುವ ರೀತಿಯಲ್ಲಿ ಐದು ಚೆಂಡೆಗಳನ್ನು ಉಪಯೋಗಿಸಿ ಚಾಕಚಕ್ಯತೆ ಮೆರೆದ ಪೆರ್ಡೂರು ಮೇಳದ ಯುವ ಕಲಾವಿದ ಸುಜನ್ ಹಾಲಾಡಿಗೂ ಅಭಿನಂದನೆಗಳು ಸಲ್ಲಬೇಕು. ಮಳೆಗಾಲದ ಈ ಮಹೋನ್ನತ ಕಾರ್ಯಕ್ರಮ ಆಯೋಜಿಸಿದ ಸುವರ್ಣ ಕಲಾಶ್ರೀ ಯಕ್ಷ ಪ್ರಿಯರು, ಮಲ್ಪೆ ಇದರ ದಿನೇಶ್ ಸುವರ್ಣರ ಶ್ರಮ ಫಲಿಸಿತು ಎನ್ನಲಡ್ಡಿಯಿಲ್ಲ.
ಜನನಿ ಭಾಸ್ಕರ ಕೊಡವೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru: ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ಜೀವ ಉಳಿಸಿದ ಸಂಚಾರ ಪೊಲೀಸರು
Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!
BBK11: ಅಸಲಿ ಆಟ ಶುರು ಮಾಡಿದ ಧನರಾಜ್: ಮೋಕ್ಷಿತಾಳಿಗೆ ಅಹಂಕಾರ ಇದೆ ಎಂದ ಸೈಲೆಂಟ್ ಕಿಲಾಡಿ
Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್ ಗೆ 10 ಕೋಟಿ ರೂಪಾಯಿ ಪಂಗನಾಮ!
Zebra: ಡಾಲಿ ಜೀಬ್ರಾಗೆ ಮೆಗಾಸ್ಟಾರ್ ಸಾಥ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.