Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ
ಪ್ರಸಂಗದ ಪ್ರಯೋಗದಿಂದಷ್ಟೇ ಕಲಾವಿದನ ಉನ್ನತಿ, ಭವಿಷ್ಯ
Team Udayavani, Jul 28, 2024, 10:30 AM IST
ತನ್ನ ಅಭಿಜಾತ ಕಲಾ ಪ್ರತಿಭೆಯಿಂದ ಕಲಾರಸಿಕರ ಹೃದಯಕ್ಕೆ ಲಗ್ಗೆ ಇಟ್ಟು “ಅರುವ’ ಎಂಬ ತನ್ನ ಊರ ಹೆಸರಿನಿಂದಲೇ
ಜನಮಾನಸರಾದ, ತುಳು ಯಕ್ಷರಂಗದ ಖಳನಾಯಕ, ಕಾಡಮಲ್ಲಿಗೆಯ ಬೀರಣ್ಣೆ ಖ್ಯಾತಿಯ, ಅರುವ ಕೊರಗಪ್ಪ ಶೆಟ್ಟಿ ಅವರದು
ತೆಂಕುತಿಟ್ಟು ಯಕ್ಷಗಾನದಲ್ಲಿ ವಿಶಿಷ್ಟವಾದ ಹೆಸರು. ತುಳು ಮತ್ತುಕನ್ನಡದ ಪ್ರಸಂಗಗಳಲ್ಲಿ ಖಳನಾಯಕನಾಗಿ ಜನಮನ್ನಣೆಗೆ
ಪಾತ್ರರಾದವರು.
1940ರ ನವೆಂಬರ್ 24ರಂದು ಸುಬ್ಬಯ್ಯ ಶೆಟ್ಟಿ ಮತ್ತು ಕಾಂತಕ್ಕ ಶೆಟ್ಟಿ ದಂಪತಿಯ ಪುತ್ರರಾಗಿ ಬೆಳ್ತಂಗಡಿ ತಾಲೂಕಿನ ಅರುವದಲ್ಲಿ ಜನಿಸಿದ ಕೊರಗಪ್ಪ ಶೆಟ್ಟರು ಓದಿದ್ದು 5ನೇ ತರಗತಿ. ಬಾಲ್ಯದಲ್ಲಿಯೇ ಯಕ್ಷಗಾನದತ್ತ ಆಕರ್ಷಿತರಾದ ಇವರು, ವೆಂಕಟರಮಣ ಭಟ್ಟ, ಕೃಷ್ಣರಾಜ ಅಜಿಲ, ಮುತ್ತಯ್ಯ ಹೆಗಡೆ ಅವರ ಪ್ರೋತ್ಸಾಹದಿಂದ, ಯಕ್ಷದ್ರೋಣರೆಂದೇ ಖ್ಯಾತಿಯನ್ನು ಪಡೆದ ಪಡ್ರೆ ಚಂದು ಅವರಲ್ಲಿ ಯಕ್ಷಗಾನ ನಾಟ್ಯಾಭ್ಯಾಸವನ್ನು ಮಾಡಿ 13ರ ಹರೆಯದಲ್ಲೇ ಕಟೀಲು ಮೇಳದ ಮೂಲಕ ಯಕ್ಷಗಾನ ರಂಗವನ್ನು ಪ್ರವೇಶಿಸಿದರು.
ಬಾಲಗೋಪಾಲ ವೇಷದಿಂದ ತೊಡಗಿ ಎದುರು ವೇಷದವರೆಗೆ ಹಂತಹಂತವಾಗಿ ಬೆಳೆಯುತ್ತಾ ಬಂದು ಕಟೀಲು, ಕುತ್ಯಾಳ, ಕುಂಡಾ ವು, ಕರ್ನಾಟಕ, ಎಡನೀರು, ಮಂಗಳಾದೇವಿ, ಬಪ್ಪನಾಡು.. ಹೀಗೆ ವಿವಿಧ ಮೇಳಗಳಲ್ಲಿ ಒಟ್ಟಾರೆ ಏಳು ದಶಕಗಳ ಸುದೀರ್ಘ ಕಾಲ ಯಕ್ಷಗಾನ ತಿರುಗಾಟ ನಡೆಸಿದ ಕಲಾತಪಸ್ವಿ. ಕಂಸ, ಕರ್ಣ, ಇಂದ್ರಜಿತು, ಕೌರವ ಮೊದಲಾದ ಖಳ ಪಾತ್ರ
ಗಳಲ್ಲದೆ ಬಬ್ರುವಾಹನ, ಸುಧನ್ವ, ಶ್ರೀವಿಷ್ಣು, ಶ್ರೀಕೃಷ್ಣ, ವಿಶ್ವಾಮಿತ್ರ, ದ್ರೋಣ, ರೂಕ್ಷ ಮತ್ತಿತರ ವೈವಿಧ್ಯಮಯ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಅವರ ಬೀರಣ್ಣೆ, ಕೋಟಿ, ಕಾಂತುಪೂಂಜ, ದೇವುಪೂಂಜ ಪಾತ್ರಗಳು ಜನಮನ್ನಣೆ ಗಳಿಸಿವೆ. ದ್ರೌಪದಿ ವಸ್ತ್ರಾಪಹಾರ ಅಥವಾ ಅಕ್ಷಯಾಂಬರ ವಿಲಾಸ ಪ್ರಸಂಗದ ದುಶ್ಯಾಸನ ಪಾತ್ರವಂತೂ ಅರುವ ಕೊರಗಪ್ಪ ಶೆಟ್ಟಿ ಅವರನ್ನು ಪ್ರಸಿದ್ಧಿಯ ಉತ್ತುಂಗಕ್ಕೇರಿಸಿದೆ.
ಪತ್ನಿ ಮಹಾಲಕ್ಷ್ಮೀ ಅವರ ಜತೆಗೂಡಿ 2009-10ರಲ್ಲಿ ಅರುವ ಕೊರಗಪ್ಪ ಶೆಟ್ಟಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.) ಅರುವ ಎನ್ನುವ
ಸಂಸ್ಥೆಯೊಂದನ್ನು ಹುಟ್ಟುಹಾಕಿ ಕಲಾವಿದರಿಗೆ ನೆರವು, ಹೆಣ್ಣು ಮಕ್ಕಳ ಮದುವೆಗೆ ನೆರವು, ವಿದ್ಯಾರ್ಥಿ ವೇತನ ಸಹಿತ 70 ಲಕ್ಷ ರೂ. ವರೆಗೆ ನೆರವು ನೀಡಿದ ಧೀಮಂತ ಕಲಾವಿದ. ಪ್ರಸಕ್ತ ಅವರು ಅರುವ ಖುಷಿ ಕಟ್ಟಹುಣಿ ಮನೆಯಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಎಡನೀರು ಪ್ರಶಸ್ತಿ, ಶ್ರೀ ಪೇಜಾವರ ಮಠದ ರಾಮವಿಠಲ ಪ್ರಶಸ್ತಿ, ಮಾಣಿಲ ಪ್ರಶಸ್ತಿ, ಉಡುಪಿ
ಯಕ್ಷಗಾನ ಕಲಾ ರಂಗದ ಡಾ| ಬಿ.ಬಿ. ಶೆಟ್ಟಿ ಪ್ರಶಸ್ತಿ, ಜಾನಪದ ಶ್ರೀ ಪ್ರಶಸ್ತಿ ಸೇರಿ ಹಲವಾರು ಪ್ರಶಸ್ತಿ, ಪುರಸ್ಕಾರಗಳು ಅವರನ್ನು
ಅರಸಿಕೊಂಡು ಬಂದಿವೆ. ಅಭಿನಯ ವಿಶಾರದ, ರಂಗಸ್ಥಳದ ರಾಜ, ನಟಭಯಂಕರ, ರಂಗಶಿಲ್ಪ ಬಿರುದುಗಳಿಗೂ ಪಾತ್ರರಾಗಿದ್ದಾರೆ.
ಬದಲಾದ ಕಾಲಘಟ್ಟದಲ್ಲಿ ಯಕ್ಷ ಕಲಾವಿದನ ಪಾತ್ರದ ಹೊಳಪು ಮಾಸುತ್ತಿದೆಯೇ?
ಇಂದು ಶುದ್ಧ ಯಕ್ಷಗಾನ ಮರೆಯಾಗುತ್ತಿದೆ. ಸಿನೆಮಾ, ನಾಟಕದ ಕಲಾವಿದರು ಬಂದು ಯಕ್ಷಗಾನ ಮಾಡಬಹುದು ಎಂಬಷ್ಟರ ಮಟ್ಟಿಗೆ ಬಂದು ತಲುಪಿದೆ. ಇಂದು ಕಲಾವಿದ ಯಕ್ಷಗಾನಕ್ಕೆ ತಕ್ಕುದಾದ ಪಾತ್ರ ಮಾಡುತ್ತಿಲ್ಲ, ಬದಲಾಗಿ ಅವರಿಗೆ ಸಾಧ್ಯವಾದದ್ದಷ್ಟನ್ನೇ ಮಾಡುತ್ತಿದ್ದಾರೆ. ಕಲಾವಿದ ವೇಷಧಾರಿಯಾಗಬಾರದು, ಕಲಾವಿದನಾಗಬೇಕು. ಧರ್ಮಸ್ಥಳ ಮೇಳ ನಡೆಸುತ್ತಿದ್ದ ಕುರಿಯ ವಿಟ್ಠಲ ಶಾಸ್ತ್ರಿ ಅವರ ಅವಧಿಯಲ್ಲಿ ಟೆಂಟ್ ಮೇಳ ಆರಂಭಿಸಿದರು. ಅಂದು ಧರ್ಮಸ್ಥಳ, ಕೂಡ್ಲು, ಸಾಲಿಗ್ರಾಮ ಮೂರೇ ಟೆಂಟ್ ಮೇಳಗಳಿದ್ದವು. ಅಲ್ಲಿ ಪ್ರಯೋಗಗಳಾಗುತ್ತಿದ್ದವು, ಅದರಿಂದ ಹರಿಶ್ಚಂದ್ರ, ಭಸ್ಮಾಸುರ ಬಹಳ ಪ್ರಸಿದ್ಧಿ ಪಡೆಯಿತು. ಅದನ್ನು ಎಲ್ಲರೂ ಅನುಕರಿಸಲು ಆರಂಭಿಸಿದರು. ಆ ಸಮಯದಲ್ಲಿ ನಾನು ನೃತ್ಯವನ್ನು ಅಳವಡಿಸಿಕೊಂಡೆ. ಅದೆಲ್ಲ ಪ್ರಸಿದ್ಧಿಯಾಯಿತು.
ಕರ್ನಾಟಕ ಮೇಳದೊಂದಿಗೆ ಮೂರು ದಶಕಗಳ ಸುದೀರ್ಘ ಒಡನಾಟದ ಮೆಲುಕು?
ಕರ್ನಾಟಕ ಮೇಳ ಸುಮಾರು 60 ವರ್ಷ ನಡೆದಿದೆ. ನಾನು ಕರ್ನಾಟಕದ ಮೇಳ ಬಿಟ್ಟ ಒಂದು ವರ್ಷದಲ್ಲೇ ಕಲಾವಿದರ ಶೂನ್ಯತೆಯ ಕಾರಣದಿಂದಾಗಿ ಮೇಳ ಬಡವಾಯಿತು. ಅಂದು ಕಲಾನೈಪುಣ್ಯ ಹೊಂದಿದ್ದ ಕಲಾವಿದರು ನಮ್ಮೊಂದಿಗಿದ್ದರು, ಕಲಾ ಗೌರವ, ಸಹ ಕಲಾವಿದರಿಗೆ ಸಿಗುವ ಪ್ರಾಶಸ್ತ್ಯ ವೇ ಬೇರೆಯಿತ್ತು. ಬಳಿಕ ನೈಪುಣ್ಯದ ಕಲಾವಿದರ ಕೊರತೆ ಕಾಡಿತ್ತು. ಅಂದಿನ ಅವಧಿಯಲ್ಲಿ ನಾನು ಸಂಬಳ ತೆಗೆದುಕೊಳ್ಳದೆ ಐದು ವರ್ಷ ಕ್ಯಾಂಟೀನ್ ನಡೆಸಿ ಪಾತ್ರಗಳನ್ನು ನಿರ್ವಹಿಸಿದ್ದೆ. ಇಂದು ಜೀವನ ಭದ್ರತೆ ಬೇಕಿದೆ, ಹಾಗಾಗಿ ಕಲೆ ಆದಾಯದ ಪರಿಧಿಗೆ ಬಂದಿದೆ. ಕಲೆ ಇಂದು ಕಲೆಯಾಗಿ ಉಳಿದಿಲ್ಲ. ನನಗೆ ಇಂದೂ ಬೇಡಿಕೆಯಿದೆ, ನಾನು ಅಭಿನಯಿಸುವೆ ಎಂದರೂ ನನ್ನ ವಯೋಸಹಜ ಅಳುಕು ನನ್ನನ್ನು ನಿವೃತ್ತಿಯಾಗಿಸಿದೆ.
ಜನರಲ್ಲಿ ಯಕ್ಷಗಾನದ ಅಭಿರುಚಿ ಮೂಡಿಸುವಲ್ಲಿ ಕಲಾವಿದನ ಶೈಲಿ ಹೇಗೆ ಪ್ರಾಮುಖ್ಯ ವಹಿಸುತ್ತದೆ?
ಕಾಡಮಲ್ಲಿಗೆಯಲ್ಲಿ ನಾನು ನಿರ್ವಹಿಸಿದ ಖಳನಾಯಕ ಪಾತ್ರದಿಂದ ನಾಲ್ಕು ಸಾವಿರ ಪ್ರಯೋಗ ಕಂಡಿದೆ. ದ್ರೌಪದಿ ವಸ್ತ್ರಾಪಹಾರದ ದುಶ್ಯಾಸನ 2,000 ಪ್ರಯೋಗ ಕಂಡಿದೆ. ಕಲಾವಿದನಾದವ ರಾಮ ಕಥಾನಾಯಕ-ರಾವಣ ಖಳನಾಯಕ ಎಂಬ ಪಾತ್ರವನ್ನು ಅವರ ಸ್ವಭಾವದಾಚೆ ಅರಿತಾಗ ಮಾತ್ರ ಪಾತ್ರಕ್ಕೆ ಜೀವ ತುಂಬಲು ಸಾಧ್ಯ. ಪ್ರೇಕ್ಷಕ ಆ ಪಾತ್ರ ಮಾಡಿದವ ಯಾರು ಎಂದು ಕೇಳುವಂತಿರಬೇಕು, ಮತ್ತೂಮ್ಮೆ ನೋಡುವಂತಿರಬೇಕು. ನನ್ನ ಕಾಡಮಲ್ಲಿಗೆ ಪಾತ್ರವನ್ನು ಒಬ್ಬ ಪ್ರೇಕ್ಷಕ 90 ಬಾರಿ ನೋಡಿದ ದಾಖಲೆಯಿದೆ. ಅದು ಪಾತ್ರದ ಭಿನ್ನತೆ ಮತ್ತು ಪ್ರಯೋಗವಾಗಿದೆ. ಹಾಗಾಗಿ ನನ್ನ ಪಾತ್ರಕ್ಕಾಗಿ ಬೇಡಿಕೆ ಬರುತ್ತಿತ್ತು.
ಹಿಂದೆ ಸೀಮಿತ ಟೆಂಟ್ ಮೇಳಗಳಿದ್ದರೂ ಸಿಗುತ್ತಿದ್ದ ಪ್ರಚಾರ ಇಂದು ಬಯಲಾಟಗಳಿಗೆ ಸಿಗುತ್ತಿಲ್ಲವಲ್ಲ?
ಜನರಿಗೆ ಯಕ್ಷಗಾನದ ಅಭಿರುಚಿ ಹುಟ್ಟಬೇಕು. ಪ್ರತಿಭೆ ವಿಭಿನ್ನ ಅವಕಾಶಗಳನ್ನು ಹುಟ್ಟು ಹಾಕುತ್ತದೆ ಎಂಬ ಜ್ಞಾನ ಕಲಾವಿದನಲ್ಲೂ ಬೆಳೆಯಬೇಕು. ಹಿಂದೆ ಕಲಾವಿದರು ಪ್ರಸಂಗವನ್ನು ಯಶಸ್ವಿಗೊಳಿಸುತ್ತಿದ್ದರು. ಹಿಂದೆ ತೆಂಕುತಿಟ್ಟಿನಲ್ಲಿ ಕರ್ನಾಟಕ ಮೇಳ, ಸುರತ್ಕಲ್, ಧರ್ಮಸ್ಥಳ ಮೇಳ ಪ್ರಸಿದ್ಧ ಟೆಂಟ್ ಮೇಳಗಳಾಗಿದ್ದವು. ಮೂರು ಮೇಳದಲ್ಲೂ ಭಿನ್ನ ಪ್ರಸಂಗಗಳು ಪ್ರದರ್ಶನವಾಗುತ್ತಿತ್ತು. ಆಗ ಜನ ಈ ವರ್ಷ ಯಾವ ಪ್ರಸಂಗ ಎಂದು ಹುಡುಕಿ ಬರುತ್ತಿದ್ದರು.
ಟೆಂಟ್ ಮೇಳ ಬದುಕುಳಿಯುತ್ತಿದ್ದುದು ಪ್ರಸಂಗದ ಪ್ರಯೋಗದಿಂದ. ಬಡಗುತಿಟ್ಟಿನ ಸಾಲಿಗ್ರಾಮ, ಪೆರ್ಡೂರು ಮೇಳಗಳು ಪ್ರಯೋಗದಿಂದಲೇ ಯಶಸ್ವಿಯಾಗಿವೆ. ಆದರೆ ನಮ್ಮಲ್ಲಿ ಟೆಂಟ್ ಮೇಳಗಳೇ ಇಲ್ಲ. ಉದಾಹರಣೆಗೆ ಕಟೀಲು 6 ಮೇಳಗಳಲ್ಲೂ ದೇವಿಮಹಾತ್ಮೆಯೊಂದೇ… ಬಯಲಾಟ ಗಳು ದೇವರ ಹರಕೆ ಆಟಕ್ಕಷ್ಟೆ ಸೀಮಿತವಾದಂತಿವೆ. ಅಂದು ಟೆಂಟ್ ಮೇಳಗಳ ಪ್ರಸಂಗಗಳ ಪ್ರಯೋಗ ಯಕ್ಷಗಾನವನ್ನು ಹೊಸ ಆಯಾಮಕ್ಕೆ ಕೊಂಡೊಯ್ಯುತ್ತಿತ್ತು. ಟೆಂಟ್ ಮೇಳದಲ್ಲಿ ಮೆರೆದವ ಕಡೇ ತನಕ ಮೆರೆದಿದ್ದಾನೆ. ಬಯಲಾಟದಲ್ಲಿ ಸೀಮಿತ ವ್ಯಾಪ್ತಿಯಲ್ಲಿ ಪ್ರಸಿದ್ಧಿ ಪಡೆದಿದ್ದಾರೆ.
ಯಕ್ಷಗಾನದಲ್ಲಿ ಪ್ರಬುದ್ಧ ಕಲಾವಿದರ ಕೊರತೆ, ಸಾಹಿತ್ಯದ ಕೊರತೆ ಕಾಡುತ್ತಿದೆಯಲ್ಲಾ?
ಇಂದು ಯಕ್ಷಗಾನದಲ್ಲಿ ಸಾಹಿತ್ಯವಿಲ್ಲ ಹೌದು, ಇಂದು ಒಬ್ಬ ಕಲಾವಿದನ ಬಗ್ಗೆ ಜನ ಮಾತಾಡುತ್ತಿಲ್ಲ ಎಂದಾದರೆ ವೇಷದಲ್ಲಿ, ಕಲಾವಿದನಲ್ಲಿ ಶೂನ್ಯತೆಯಿದೆ ಎಂಬುದು ಸ್ಪಷ್ಟ. ಶೇಣಿ ಗೋಪಾಲಕೃಷ್ಣ ಭಟ್ಟರು, ಸಾಮಗರು ಸಾಹಿತ್ಯ ಪೂರ್ಣ ಹಾಸ್ಯ ಅಳವಡಿಸಿ ಪ್ರೇಕ್ಷಕರನ್ನು ಹಿಡಿದಿಟ್ಟುಕೊಂಡು ಅಪಾರ ಅಭಿಮಾನಿಗಳನ್ನು ಗಳಿಸಿದ್ದರು. ಉದಾಹರಣೆಗೆ ಶೇಣಿ ಅವರ ಬಪ್ಪ ಬ್ಯಾರಿ ಬಹಳ ಖ್ಯಾತಿ ಗಳಿಸಿತ್ತು, ಕಾರಣ ಅವರು ಬ್ಯಾರಿ ಭಾಷೆ ಮಾತನಾಡುತ್ತಿದ್ದರು. ಆ ಸಾಮರ್ಥ್ಯ ಇಂದಿನ ಕಲಾವಿದರಲ್ಲಿ ಬೆಳೆಯಬೇಕು. ಮೇಳ ಪ್ರಸಿದ್ಧಿಯಿದ್ದರೂ ಇವರೇ ಬೇಕು ಎಂದು ಡಿಮಾಂಡ್ ಮಾಡುವ ಕಲಾವಿದರು ಹುಟ್ಟುತ್ತಿಲ್ಲ. ಹಿಂದೆ ಕಲಾವಿದನಲ್ಲಿ ಸಂಭಾಷಣೆ ಇದ್ದರೆ, ಇಂದು ಕೇವಲ ಭಾಷಣವಷ್ಟೆ ಇದೆ. ಮಾತಾಡಲು ಗೊತ್ತಿದ್ದರೆ ಸಾಲದು, ಸರ್ವಾಂಗೀಣ ಕಲಾವಿದರಾಗಬೇಕು.
ಯಕ್ಷಗಾನಕ್ಕೆ ಅಳಿವಿಲ್ಲ, ಆದರೆ ಕಲಾವಿದ ಹಾಗೂ ಪ್ರೇಕ್ಷಕನದ್ದೇ ಸವಾಲು ಎಂಬ ಮಾತುಗಳು ಕೇಳಿ ಬರುತ್ತಿವೆಯಲ್ಲಾ?
ಯಕ್ಷಗಾನಕ್ಕೆ ಎಂದೂ ಅಳಿವಿಲ್ಲ, ಆದರೆ ಕಲಾವಿದನಿಗೆ ಅಳಿವಾಗಿದೆ. ಅದರ ಪರಿಣಾಮ ಕಲಾವಿದನ ಹೊರತಾಗಿ ಇತ್ತೀಚಿನ ದಿನಗಳಲ್ಲಿ ಭಾಗವತನಿಗೆ ಬೇಡಿಕೆ ಹೆಚ್ಚಾಗುತ್ತಿರುವುದು ಕಾಣಬಹುದು. ಬಯಲಾಟದಲ್ಲೂ ಕಲಾವಿದರಾಗ ಬೇಕಾದರೆ, ಕಲಾಪೂರ್ಣ ಜ್ಞಾನ ಪಡೆಯಬೇಕು. ಪಾತ್ರ ವಿಷಯದಲ್ಲಿ ಪರಕಾಯ ಪ್ರವೇಶ ಬೇಕು. ಲೌಕಿಕತೆ, ಸಮಾಜದ ವ್ಯವಸ್ಥೆ, ಭಾಷೆ ಎಲ್ಲದರ ಆಗುಹೋಗುಗಳು ತಿಳಿದಿದ್ದರೆ ಮಾತ್ರ ಆತ ಕಲಾವಿದನಾಗಿ ಪ್ರಸಿದ್ಧಿ ಪಡೆಯಲು ಸಾಧ್ಯ.
- ಚೈತ್ರೇಶ್ ಇಳಂತಿಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Pro Kabaddi: ಪಾಟ್ನಾ-ಗುಜರಾತ್ ಟೈ
BBK11: ನಿಮ್ಮ ಉಸ್ತುವಾರಿ ನೋಡಿ ಹೇಸಿಗೆ ಆಯಿತು.. ಚೈತ್ರಾ ಬಾಯಿ ಮುಚ್ಚಿಸಿದ ಕಿಚ್ಚ
C.T.Ravi issue: ಕೋರ್ಟ್‌ನಲ್ಲಿರುವ ವಿಚಾರದ ಬಗ್ಗೆ ಚರ್ಚಿಸುವುದು ಸರಿಯಲ್ಲ: ಜಿ.ಪರಮೇಶ್ವರ್
Padubidri: ದ್ವಿಚಕ್ರ ವಾಹನಕ್ಕೆ ಲಾರಿ ಢಿಕ್ಕಿ; ಸಹ ಸವಾರ ಸಾವು
Kundapura: ತ್ರಾಸಿ ಕಡಲ ಕಿನಾರೆಯಲ್ಲಿ ಮಗುಚಿದ ಜೆಟ್ ಸ್ಕೀ ಬೋಟ್; ರೈಡರ್ ನಾಪತ್ತೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.