Yakshagana: ಚಪ್ಪಾಳೆಗಾಗಿ ರಸಾಭಾಸ ಮಾಡಬಾರದು
ಪ್ರಸಿದ್ಧ ಸ್ತ್ರೀವೇಷಧಾರಿ, ಪ್ರಸಂಗಕರ್ತ ಎಂ.ಕೆ. ರಮೇಶ್ ಆಚಾರ್ಯ
Team Udayavani, Jun 30, 2024, 2:27 PM IST
ಹಿರಿಯ ಯಕ್ಷಗಾನ ಕಲಾವಿದ ಎಂ.ಕೆ.ರಮೇಶ್ ಆಚಾರ್ಯ ಅವರು ತಮ್ಮ ಅನುಭವದ ಮಾತುಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ. ಬದಲಾಗುತ್ತಿರುವ ಕಾಲಘಟ್ಟದಲ್ಲಿ ಯಕ್ಷಗಾನ ರಂಗದಲ್ಲಾಗುತ್ತಿರುವ ಬೆಳವಣಿಗೆಗಳ ಬಗೆಗೆ ತಮ್ಮ ಬೇಸರ ವ್ಯಕ್ತಪಡಿಸುತ್ತಲೇ ಇಂದಿನ ಯುವ ಕಲಾವಿದರಿಗೆ ಕೆಲವು ಕಿವಿಮಾತುಗಳನ್ನು ಹೇಳಿದ್ದಾರೆ.
ಇತ್ತೀಚೆಗೆ ಸ್ತ್ರೀವೇಷಧಾರಿಗಳಿಗೆ ನೃತ್ಯವಷ್ಟೇ ಸಾಕು, ವಾಚಿಕದ ಅಗತ್ಯವಲ್ಲ ಎಂಬಂತಹ ಭಾವನೆ ಬಂದಂತಿದೆಯಲ್ಲ?
ಅಳತೆಮೀರಿ ನೃತ್ಯ ಆರಂಭವಾಗಿದೆ. ಹಿತಮಿತವಾದ ನೃತ್ಯ ಒಳ್ಳೆಯದು. ಕಲಾವಿದ ಯಾವುದೇ ಪಾತ್ರದ ಒಳತಳ ತಿಳಿದಿರಬೇಕು. ಯುವ ಕಲಾವಿದರಿಗೆ ಚಂದದ ವೇಷ ಪ್ರವೇಶ ಆಗಿ ಹೆಚ್ಚು ಹೊತ್ತು ಕುಣಿದರೆ ಚಪ್ಪಾಳೆ ಬರುತ್ತದೆ ಎಂದಾಗಿದೆ. ಜನರನ್ನು ರಂಜಿಸುವುದೇ ಮುಖ್ಯ ಅಲ್ಲ, ಪಾತ್ರದ ಔಚಿತ್ಯ ಮೀರದೇ ಇರುವುದೂ ಮುಖ್ಯ. ಕುಣಿತವಷ್ಟೇ ಪ್ರಧಾನವಾದರೆ ಪಾತ್ರ ಮರೆಯಾಗಿ ನೃತ್ಯಗಾತಿಯ ಪಾತ್ರವಾಗುತ್ತದೆ. ಸುಧನ್ವಾರ್ಜುನದಲ್ಲಿ “ಸತಿ ಶಿರೋಮಣಿ ಪ್ರಭಾವತಿ’ ಹಾಡಿಗೆ ಹೆಚ್ಚು ಕುಣಿದರೆ ಪ್ರಭಾವತಿ ಬದಲು ನೃತ್ಯಗಾತಿಯಾಗಿಯೂ, ದೇವಿಮಹಾತೆ¾ಯ ಮಾಲಿನಿ ಕುಣಿತ ಹೆಚ್ಚಾದರೆ; “ಚೆಲುವಿಕೆ ಯೌವನದಿಂದ’ ಎಂಬ ಪದ್ಯದಲ್ಲಿ ಇಳೆಯ ಕಾಮುಕರಿಂದ ಆಗುವ ಆಕೆಯ ಆತಂಕ ಮರೆಯಾಗುತ್ತದೆ. “ಅಹುದೇ ಎನ್ನಯ ರಮಣ’ ಎಂದು ಸಖೀಯ ಬಳಿ ಚಿತ್ರಾಂಗದೆ ಪ್ರಶ್ನಿಸುವಾಗ ಅರಮನೆಯ ನೃತ್ಯಕಲಾವಿದೆಯಂತೆ ಕುಣಿದರೆ ಹೇಗಾದೀತು? ಪದ್ಯದ ಉದ್ದೇಶ ಮರೆಗೆ ಸರಿಯುತ್ತದೆ. ಚಪ್ಪಾಳೆಗಾಗಿ ರಸಾಭಾಸ ಮಾಡಬಾರದು. ಕುಣಿಯುವ ಮುನ್ನ ಪಾತ್ರದ ವಯಸ್ಸಿನ ಅರಿವೂ, ಮಹಾರಾಣಿಯೋ, ಗರತಿಯೋ, ಸಖೀಯೋ, ದೇವೀ ಪಾತ್ರವೋ ಎಂಬ ಪಾತ್ರಘನತೆಯೂ ತಿಳಿದಿರಬೇಕು.
ಯುವ ಕಲಾವಿದರಿಗೆ ಹಿರಿ ಕಲಾವಿದರು ಮಾರ್ಗದರ್ಶನ ಮಾಡಬಾರದೇಕೆ?
ಹಾಗಲ್ಲ ಹೀಗೆ ಎಂದರೆ ಕೇಳುವ ಮನಃಸ್ಥಿತಿ ಕಡಿಮೆಯಾಗಿದೆ. ಮೇಳ ತಿರುಗಾಟದಲ್ಲಿ ಇರುವವರ ಪೈಕಿ ಒಳತಳ ತಿಳಿದವರ ಸಂಖ್ಯೆ ಕಡಿಮೆಯಾಗಿದೆ. ಚಪ್ಪಾಳೆಗಾಗಿ, ಅಭಿಮಾನಿಗಳಿಗಾಗಿ, ಪ್ರಚಾರಕ್ಕಾಗಿ ಕುಣಿತ ಎಂಬಂತಾಗಿದೆ. ಅತಿಯಾದ ನೃತ್ಯ ಕಾಲಮಿತಿಯ ಯಕ್ಷಗಾನದಲ್ಲಿ ಇತರ ಪಾತ್ರಗಳ ನಿರ್ವಹಣೆ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಎದುರು ಪಾತ್ರಧಾರಿ ಸಾಮರಸ್ಯ ಇಲ್ಲದ, ಭಾವನೆ ವ್ಯಕ್ತಪಡಿಸಲಾಗದ ಅಸಹಾಯಕತೆಯಿಂದ ಕೈಕಟ್ಟಿ ನಿಲ್ಲಬೇಕಾದ ಸ್ಥಿತಿ ಇರುತ್ತದೆ.
ರಂಗ ನಿರ್ದೇಶಕ ಹೊಣೆಯಿಂದ ಭಾಗವತರಿಗೆ ಮುಕ್ತಿ ದೊರೆತಿದೆಯೇ?
ಯುವ ಭಾಗವತರು ಬಂದಾಗ ಪ್ರಸಿದ್ಧ ವೇಷಧಾರಿಗಳಿದ್ದರೆ ರಂಗ ನಿರ್ದೇಶನ ಮಾಡಲು ಹಿಂದೇಟು ಹಾಕುತ್ತಾರೆ. ವೇಷಧಾರಿ ಹೇಳಿದಂತೆ ಭಾಗವತ ಕೇಳಬೇಕಾಗುತ್ತದೆ. ಅಗರಿ ಶ್ರೀನಿವಾಸ ಭಾಗವತರ ಬಳಿ ಕಲಾವಿದ ಹೋಗಿ “ನನಗೆ ಎಷ್ಟು ಪದ್ಯ’ ಎಂದು ಕೇಳಿದರೆ “ಪದ್ಯಕ್ಕೆ ಇಷ್ಟು ಎಂದು ಸುಂಕ ಕಟ್ಟಲು ಇದೆಯೇ, ಏನು ಹೇಳಬೇಕೆಂದು ಕೇಳಿ ಕಲಿ’ ಎಂದು ಕಳುಹಿಸುತ್ತಿದ್ದರು. ಭಾಗವತರಿಗೆ ಅರ್ಥ ಜ್ಞಾನ ಇರಲೇಬೇಕು. ಈಗ ಭಾಗವತರಿಗೆ ರಂಗದ ಮೇಲೆ ನಿಯಂತ್ರಣ ಇಲ್ಲ. ಮೇಳದ ಯಜಮಾನರ ಹಿಡಿತವೂ ತಪ್ಪಿದೆ. ಮೊದಲಿನ ಭಾಗವತರು ರಂಗದಲ್ಲೇ ನಿಯಂತ್ರಿಸುತ್ತಿದ್ದರು, ತಿದ್ದುತ್ತಿದ್ದರು.
ಕಲಾವಿದರಿಗೆ ಪಾತ್ರೌಚಿತ್ಯ ಪ್ರಜ್ಞೆ ಕಡಿಮೆಯಾಗುತ್ತಿದೆಯೇ?
– ಉದಾ: ದಮಯಂತಿ ಮತ್ತು ಚಂದ್ರಮತಿ ಪಾತ್ರಗಳಿಗೆ ಕರುಣ ರಸ ಎಂದು ಭಾವಿಸಿದವರಿದ್ದಾರೆ. ದಮಯಂತಿ ಭಾವುಕ, ಚಂದ್ರಮತಿ ಧೈರ್ಯಶಾಲಿ. ಪ್ರಸಂಗ ಪದ್ಯದಲ್ಲೂ ಹಾಗೆಯೇ ಇದೆ. ದುಃಖ ಬಂದೊಡನೆ ಕರುಣ ರಸ ಎಂದೇ ಭಾವಿಸಬೇಕಿಲ್ಲ. ಅಭಿವ್ಯಕ್ತಿಯ ಮೂಲಕ ಪ್ರತ್ಯೇಕಿಸಿ ಪ್ರದರ್ಶಿಸಬಹುದು. ಪಾತ್ರದ ಆಳ ಅರಿತು ಪೂರಕ ರಸಾಭಿವ್ಯಕ್ತಿ ಇರಬೇಕು. ಯುವ ಕಲಾವಿದರ ಅಧ್ಯಯನದ ಕೊರತೆ ಇದಕ್ಕೆ ಕಾರಣ. ಯಕ್ಷಗಾನಕ್ಕೆ ಪ್ರಸಂಗಪಠ್ಯವೇ ಆಧಾರ. ಮೂಲಕಥೆಯಲ್ಲಿ ಹೀಗೆ ಇದೆ ಎಂದು ಮಾರ್ಪಾಡು ಮಾಡಬಾರದು. ಹರಿಶ್ಚಂದ್ರನ ಮಗ ಲೋಹಿತಾಶ್ವ ವಯಸ್ಕನಾಗಿದ್ದ ಎಂದು ಮೂಲಕಥೆಯಲ್ಲಿ ಇದ್ದರೂ ರಸೌಚಿತ್ಯಕ್ಕಾಗಿ ಕವಿ ಬಾಲಕ ಎಂದಿದ್ದಾರೆ.
ಈಗ ಸ್ತ್ರಿವೇಷದ ನೃತ್ಯ ಕ್ರಮದಲ್ಲೂ, ವೇಷ ಭೂಷಣದಲ್ಲೂ ಬದಲಾವಣೆ ಆಗಿದೆಯಲ್ಲ?
-ಎಲ್ಲ ವೇಷಕ್ಕೂ ರೆಡಿಮೇಡ್ ಕಚ್ಚೆ ಎಂದಾಗಿದೆ! ಹೊಸ ಪ್ರೇಕ್ಷಕರಿಗೆ ಇದೇ ಯಕ್ಷಗಾನ ಎಂದಾಗುತ್ತಿದೆ. ಡಿಜಿಟಲ್ ದಾಖಲೆಗಳಲ್ಲೂ ಇದೇ ಸಂಗ್ರಹವಾಗುತ್ತಿದ್ದು ಮುಂದಿನ ದಿನಗಳಲ್ಲಿ ಹಳೆಯ ಯಕ್ಷಗಾನದ ವೇಷಭೂಷಣ ಮರೆಯಾಗುವ ಅಪಾಯವೂ ಇದೆ. ಮಾಯಾ ಶೂರ್ಪನಖೀ ಮಾಡಿದರೂ ಸೀರೆಯುಟ್ಟೇ ವೇಷಧರಿಸಿ, ಮಾತಿನಲ್ಲಿ ಕಾಮುಕತನ, ನಟನೆಯಲ್ಲಿ ವಯ್ನಾರ ತೋರಿಸುತ್ತಿದ್ದೆವು. ಈಗ ಸಿನೆಮಾಗಳಂತೆ ಅಂಗಾಂಗ ತೋರಿಸಲಾಗುತ್ತದೆ. ಭರತನಾಟ್ಯ, ಕೂಚುಪುಡಿಯ ನೃತ್ಯ ಅಳವಡಿಸಲಾಗುತ್ತದೆ. ಹಿಂದೆ, ವಿಟ್ಠಲ ಶಾಸ್ತ್ರಿಗಳು ಭರತನಾಟ್ಯದ ನೃತ್ಯ ಹಾಗೂ ನಾಟಕೀಯ ವೇಷಭೂಷಣದ ಬದಲಾವಣೆ ತಂದರೂ ಔಚಿತ್ಯ ಮೀರಿರಲಿಲ್ಲ. ಶಿವನ ತಾಂಡವ ನೃತ್ಯದಂತಹ ದೃಶ್ಯಕ್ಕಷ್ಟೇ ಭರತನಾಟ್ಯ ಬಳಸಿದ್ದರು. ಪ್ರೇಕ್ಷಕರೂ ಈ ಬದಲಾವಣೆಯನ್ನು ಸಕಾರಾತ್ಮಕವಾಗಿ ಸ್ವೀಕರಿಸಿದ್ದರು.
ಸೀಮಿತ ವೇಷಕ್ಕೆ ಕಲಾವಿದರು ಬ್ರಾಂಡ್ ಆಗುತ್ತಿದ್ದಾರೆ. ಸವ್ಯಸಾಚಿಗಳ ಸಂಖ್ಯೆ ಕಡಿಮೆಯಾಗುತ್ತಿದೆಯಲ್ಲ?
-ವೈದ್ಯರಲ್ಲಿ ಒಂದೊಂದು ಅಂಗಕ್ಕೆ ಒಬ್ಬೊಬ್ಬ ವೈದ್ಯರು ಎಂದು ಇದ್ದಂತೆ ನಿರ್ದಿಷ್ಟ ವೇಷಗಳಿಗೆ ನಿರ್ದಿಷ್ಟ ಕಲಾವಿದರು ಎಂದಾಗುತ್ತಿದ್ದಾರೆ. ಹಿಂದೆ ಹೀಗಿರಲಿಲ್ಲ. ಕೋಳ್ಯೂರರಂತಹ ಸವ್ಯಸಾಚಿಗಳು ಎಲ್ಲ ಬಗೆಯ ಮಾತ್ರಗಳಿಗೂ ಮಾದರಿಯಾಗುತ್ತಿದ್ದರು. ಕಲಾವಿದರು ಅಧ್ಯಯನಕ್ಕೆ ಔದಾಸೀನ್ಯ ತೋರಿದರೆ, ಸೀಮಿತ ಪಾತ್ರಗಳ ನಿರ್ವಹಣೆಗೆ ಅಭಿಮಾನಿಗಳಿಂದ ಉತ್ತೇಜನ ದೊರೆತರೆ, ಕೆಲವು ಪಾತ್ರಗಳ ನಿರ್ವಹಣೆಯಲ್ಲೇ ಸೈ ಎನಿಸಿದ್ದು ಉತ್ಕೃಷ್ಟ ಎಂಬ ಭ್ರಮೆಗೆ ಒಳಗಾದರೆ ಹೀಗಾಗುತ್ತದೆ.
ಬಯಲಾಟವೂ ತಾಳಮದ್ದಳೆಯಂತೆ ಮಾತಿನ ಮಂಟಪ ಆಗುತ್ತಿದೆಯಲ್ಲ?
– ಪದ್ಯದ ಸರಳಾನುವಾದವೇ ಅರ್ಥಗಾರಿಕೆ. ಅಗರಿಯವರು ಹೇಳಿದಂತೆ ಪದ್ಯ ಎಷ್ಟು ಹೊತ್ತು ಇತ್ತೋ ಅಷ್ಟು ಹೊತ್ತು ಅರ್ಥ ಎಂದಾಗಬೇಕು. ಮೊದಲು ಹಾಗಿತ್ತು. ಆಮೇಲೆ ವಿಶ್ಲೇಷಣೆ ಆರಂಭವಾಯಿತು. 20 ನಿಮಿಷದ ಕುಣಿತ ಒಂದೆರಡು ವಾಕ್ಯದ ಅರ್ಥ ಎಂದೂ ಆಗಬಾರದು. ತಾಸುಗಟ್ಟಲೆ ಅರ್ಥ ಎಂದೂ ಆಗಬಾರದು. ಪದ್ಯದಷ್ಟೇ ಹೊತ್ತು ಅರ್ಥ ಎಂಬುದನ್ನು ಶೇಣಿ, ಸಾಮಗತ್ರಯರು ಮೀರಿದರೂ ಜನ ಸಹಿಸಿದ್ದರು. ಈಗ ಬಯಲಾಟವೇ ತಾಳಮದ್ದಳೆ ರೂಪ ಪಡೆಯುತ್ತಿದೆ. ತಾಳಮದ್ದಳೆಯ ಪ್ರೇಕ್ಷಕರಲ್ಲಿ ಸಾಹಿತ್ಯಾಭಿಮಾನಿಗಳು ಜಾಸ್ತಿ. ಬಯಲಾಟದ ಪ್ರೇಕ್ಷಕರಲ್ಲಿ ಮನರಂಜನೆ ಬಯಸುವವರು ಜಾಸ್ತಿ.
ನಿಮ್ಮ ಮೆಚ್ಚಿನ ಪಾತ್ರ ಯಾವುದು?
– ನನಗೆ ಹಿತ, ನೆಮ್ಮದಿ ನೀಡಿದ್ದು ವಸ್ತ್ರಾಪಹಾರದ ದ್ರೌಪದಿ, ದಮಯಂತಿ, ಚಂದ್ರಮತಿ, ಸೈರಂಧ್ರಿ ಮೊದಲಾದವು. ಮೀನಾಕ್ಷಿಯಂತಹ ಪಾತ್ರಗಳನ್ನು ತೃಪ್ತಿಯ ಸುಲವಾಗಿ ಅಲ್ಲದಿದ್ದರೂ ಜನರ ಸಲುವಾಗಿ ಹೆಚ್ಚು ಬಾರಿ ಮಾಡಬೇಕಾಗಿ ಬಂದಿದೆ.
ಇಷ್ಟದ ಕಲಾವಿದರು ಯಾರು?
-ತೆಂಕಿನಲ್ಲಿ ಜತೆ ವೇಷಧಾರಿಗಳಾಗಿದ್ದ ಶೇಣಿ, ತೆಕ್ಕಟ್ಟೆ, ಕುಂಬಳೆ, ಸೂರಿಕುಮೇರಿ, ನಾರಾಯಣ ಹೆಗ್ಡೆ, ಎಂಪೆಕಟ್ಟೆ ಮೊದಲಾದವರು. ಬಡಗಿನಲ್ಲಿ ಶಂಭು ಹೆಗಡೆ, ಮಹಾಬಲ ಹೆಗಡೆ, ಹಾರಾಡಿ ರಾಮ ಗಾಣಿಗ ಮೊದಲಾದವರು.
ಪ್ರಸಿದ್ಧ ಸ್ತ್ರೀವೇಷಧಾರಿ, ಪ್ರಸಂಗಕರ್ತ, ತೆಂಕು -ಬಡಗು ಉಭಯತಿಟ್ಟಿನ ಕಲಾವಿದ ಎಂ.ಕೆ. ರಮೇಶ್ ಆಚಾರ್ಯ 1949ರಲ್ಲಿ ತೀರ್ಥಹಳ್ಳಿಯಲ್ಲಿ ಜನಿಸಿದರು. 4ನೇ ತರಗತಿವರೆಗೆ ವಿದ್ಯಾಭ್ಯಾಸ. ಅಪ್ಪ, ದೊಡ್ಡಪ್ಪ ಆರಂಭಿಸಿದ ಜಗದಂಬಾ ಯಕ್ಷಗಾನ ಮೇಳದಲ್ಲಿ ಕೋಡಂಗಿ ವೇಷಧಾರಿಯಾಗಿ ರಂಗಸ್ಥಳಕ್ಕೆ ಪದಾರ್ಪಣೆ ಮಾಡಿ 12ನೇ ವಯಸ್ಸಿಗೆ ಮಂದಾರ್ತಿ ಮೇಳಕ್ಕೆ ಸೇರ್ಪಡೆಯಾದರು. ಆರಂಭದ ನಾಟ್ಯಗಾರಿಕೆ ಹಳ್ಳಾಡಿ ಮಂಜಯ್ಯ ಶೆಟ್ಟರಿಂದ, ಬಡಗಿನಲ್ಲಿ ಗುರು ವೀರಭದ್ರ ನಾಯ್ಕ, ತೆಂಕಿನಲ್ಲಿ ಗುರು ಕುರಿಯ ವಿಟ್ಠಲ ಶಾಸ್ತ್ರಿ ಶಿಷ್ಯರಾಗಿ ಹೆಜ್ಜೆಯ ಮೇಲೆ ಹೆಜ್ಜೆ ಇಟ್ಟು, ವಾಕ³ಟುತ್ವ ಸಿದ್ಧಿಸಿಕೊಂಡು ಶೇಣಿ, ತೆಕ್ಕಟ್ಟೆ, ಸಾಮಗತ್ರಯರು, ಶಿರಿಯಾರ ಮಂಜು ನಾಯ್ಕ, ಹಾರಾಡಿ ರಾಮ ಗಾಣಿಗ ಮೊದಲಾದ ಪ್ರಬುದ್ಧ ಹಿರಿಯ ಕಲಾವಿದರ ಒಡನಾಟದ ತಿರುಗಾಟದ ಮೂಲಕ ಯಕ್ಷಗಾನದಲ್ಲಿ ಭದ್ರ ನೆಲೆಯೂರಿದರು. ಮಂದಾರ್ತಿ, ಧರ್ಮಸ್ಥಳ, ಸುರತ್ಕಲ್, ಸಾಲಿಗ್ರಾಮ, ಪೆರ್ಡೂರು, ನೀಲಾವರ, ಗೋಳಿಗರಡಿ, ಮಂಗಳಾದೇವಿ, ಸುಂಕದಕಟ್ಟೆ, ಹನುಮಗಿರಿ ಮೇಳದಲ್ಲಿ ಒಟ್ಟು 57 ವರ್ಷಗಳ ಪಯಣ. ನೂರಕ್ಕೂ ಅಧಿಕ ಪ್ರಸಂಗಗಳಿಗೆ ಪದ್ಯರಚನೆ. 20ರಷ್ಟು ಪ್ರಸಂಗ ರಚನೆ. ಕರ್ನಾಟಕ ರಾಜ್ಯೋತ್ಸವ ಪುರಸ್ಕಾರ ಸಹಿತ ವಿವಿಧ ಪ್ರಶಸ್ತಿ ಭಾಜನರು.
-ಲಕ್ಷ್ಮೀ ಮಚ್ಚಿನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ
ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ
Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್ ಜೈಕಾರ !
Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ
Idu Entha Lokavayya: “ಕೋಸ್ಟಲ್” ನಿಂದ ಕರುನಾಡು!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
9/11-ಶೈಲಿಯಲ್ಲಿ ರಷ್ಯಾದ ವಸತಿ ಕಟ್ಟಡಗಳ ಮೇಲೆ ಉಕ್ರೇನ್ ನಿಂದ ಸರಣಿ ಡ್ರೋನ್ ದಾಳಿ!
ಬೆಳಪು ಸಹಕಾರಿ ಸಂಘ: ಡಾ.ದೇವಿಪ್ರಸಾದ್ ಶೆಟ್ಟಿ ನೇತೃತ್ವದ ತಂಡಕ್ಕೆ 8ನೇ ಬಾರಿ ಚುಕ್ಕಾಣಿ
Chikkamagaluru: ಪ್ರವಾಸಕ್ಕೆ ಬಂದಿದ್ದ ಶಾಲಾ ಮಕ್ಕಳ ವ್ಯಾನ್ ಪಲ್ಟಿ; ಗಾಯ
Mandya; ಭೀಕರ ಅಪಘಾ*ತದಲ್ಲಿ ಮೂವರು ವಿದ್ಯಾರ್ಥಿಗಳು ಮೃ*ತ್ಯು
ತಾಯಿಯ ಕ್ಯಾನ್ಸರ್ ಚಿಕಿತ್ಸೆಗೆ ಕೂಡಿಟ್ಟ ಹಣದಲ್ಲೇ ರಮ್ಮಿ ಆಡಿದ ಮಗ.. ಕೊನೆಗೆ ಜೀವ ಕಳೆದುಕೊಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.