ಯುವ ಕಲಾವಿದರ ಶ್ರಾವಣ ಸಂಗೀತೋತ್ಸವ
Team Udayavani, Aug 25, 2017, 6:30 AM IST
ಮಂಗಳೂರಿನ ಸಂಗೀತ ಪರಿಷತ್, ಭಾರತೀಯ ವಿದ್ಯಾಭವನದ ಸಹಯೋಗದಲ್ಲಿ ಆಗಸ್ಟ್ 6ರಂದು ಶ್ರಾವಣ ಸಂಗೀತೋತ್ಸವವನ್ನು ಏರ್ಪಡಿಸಿತ್ತು. ದಿನವಿಡೀ ನಡೆದ ಕಾರ್ಯಕ್ರಮದಲ್ಲಿ ಮೊದಲ ಕಛೇರಿಯಾಗಿ, ಪೂರ್ವಾಹ್ನ ಬೆಂಗಳೂರಿನ ಮಧು ಕಶ್ಯಪ್ ಅವರು ಹಾಡುಗಾರಿಕೆಯನ್ನು ನಡೆಸಿಕೊಟ್ಟರು. ಜನರಂಜನಿಯ ಪಾಹಿಮಾಮ್‌ನೊಂದಿಗೆ ತಮ್ಮ ಕಛೇರಿಯನ್ನು ಆರಂಭಿಸಿದ ಮಧು ಕಶ್ಯಪ್, ಮೊದಲ ಕೃತಿಯಲ್ಲೇ ತಾನೊಬ್ಬ ಸಾಧನೆಯ ಮೆಟ್ಟಿಲುಗಳನ್ನು ಏರುತ್ತಿರುವ ಕಲಾವಿದ ಎಂದು ತೋರ್ಪಡಿಸಿದರು. ಅನಂತರ ಹರಿಕಾಂಭೋಜಿಯ ಎವರಿನೀ ಮತ್ತು ಬಹುದಾರಿಯ ಇರಬೇಕುಗಳನ್ನು ಪ್ರೇಕ್ಷಕರು ತಲೆದೂಗುವಂತೆ ಪ್ರಸ್ತುತಪಡಿಸಿದರು. ತೋಡಿಯ ಆರಾಗಿಂಪವೆ ಯಲ್ಲಿ ರಂಜನೀಯ ರಾಗಾಲಾಪನೆ, ನೆರವಲ್‌ಗಳನ್ನು ಲೀಲಾಜಾಲವಾಗಿ ಹರಿಯಬಿಟ್ಟರು. ದೇವಮನೋಹರಿಯ ಕಣ್ಣತಂಡ್ರಿ ನಾಪೈಯನ್ನು ಹಾಡಿ ಮುಖ್ಯ ರಾಗವಾಗಿ ಕರುಣರಸ ಪ್ರಧಾನವಾದ ಶಹಾನದ ವೈದೇಹಿಯಲ್ಲಿ ಮಾಡಿದ ಸಾರವತ್ತಾದ ಆಲಾಪನೆ, ನೆರವಲ್ ಮತ್ತು ಸ್ವರ ಕಲ್ಪನೆಗಳು ರಸಿಕರಲ್ಲಿ ಲವಲವಿಕೆಯನ್ನುಂಟು ಮಾಡಿದವು. ವಸಂತದ ಸಾರಿ ಬಂದನೆ ಪ್ರಾಣೇಶ ದೇವರನಾಮವನ್ನು ಹಾಡಿ ಸಿಂಹೇಂದ್ರ ಮಧ್ಯಮದ ರಾಗಂ-ತಾನಂ-ಪಲ್ಲವಿ ಜಗನ್ನಾಥ ಸಹಿತೆಯನ್ನು ತಿಶ್ರ ಜಂಪೆ ತಾಳ, ಮಿಶ್ರ ನಡೆಯಲ್ಲಿ ಪ್ರಸ್ತುತಪಡಿಸಿ ತನ್ನ ಸಾಮರ್ಥ್ಯವನ್ನು ರಸಿಕರ ಮುಂದಿಟ್ಟರು. ವಿಸ್ತರಿಸಲಾದ ಬೇರೆ ಬೇರೆ ರಾಗಗಳು, ತಾನಂ, ಗಮಕಕ್ಕೆ ಪ್ರಾಧಾನ್ಯ ನೀಡಿದ ಸ್ವರ ಕಲ್ಪನೆಗಳು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾದವು. ಮೋಹನದ ಸಂಸಾರವೆಂದೆಂಬ ಭಾಗ್ಯವನ್ನು ಭಾವಪೂರ್ಣವಾಗಿ ಪ್ರಸ್ತುತ ಪಡಿಸಿ, ಚಕ್ರವಾಕದ ತಿಲ್ಲಾನದೊಂದಿಗೆ ಕಛೇರಿ ಮುಗಿಸಿದಾಗ ಶ್ರೋತೃಗಳು ಮೆಚ್ಚುಗೆಯಿಂದ ಕರತಾಡನಗೈದರು. ಯುವಗಾಯಕನ ಕಸರತ್ತುಗಳಿಲ್ಲದ ಗಾಯನ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ವಯಲಿನ್ ಪಕ್ಕವಾದ್ಯದಲ್ಲಿ ಅನುಭವಿ ಅಚ್ಯುತ ರಾವ್ ಯುವ ಗಾಯಕರನ್ನು ಅದ್ಭುತವಾಗಿ ಅನುಸರಿಸಿದರು. ನಾಡಿನಾದ್ಯಂತ ಬಹು ಬೇಡಿಕೆಯಲ್ಲಿರುವ ಪುತ್ತೂರಿನ ಯುವ ಕಲಾವಿದ ನಿಕ್ಷಿತ್ ತಮ್ಮ ಲಯಪೂರ್ಣ ಮೃದಂಗವಾದನದೊಂದಿಗೆ ಪ್ರೇಕ್ಷಕರ ಮನಗೆದ್ದರು. ಘಟಂನಲ್ಲಿ ಇನ್ನೋರ್ವ ಯುವಕಲಾವಿದ ಬೆಂಗಳೂರಿನ ಗಣೇಶ್ ಮೂರ್ತಿ ತಾನೊಬ್ಬ ಉದಯೋನ್ಮುಖ ಕಲಾವಿದ ಎಂಬುದನ್ನು ಸಾಬೀತು ಪಡಿಸಿದರು.
ಅಪರಾಹ್ನದ ಮೊದಲ ಕಾರ್ಯಕ್ರಮದಲ್ಲಿ ಹಾಡಿದ ಬೆಂಗಳೂರಿನ ಪದವಿಪೂರ್ವ ಕಾಲೇಜು ವಿದ್ಯಾರ್ಥಿನಿ ಕು| ಅದಿತಿ ಪ್ರಹ್ಲಾದ್, ಕಲಾರಸಿಕರಿಗೆ ತನ್ನ ಗಾಂಭೀರ್ಯ ತುಂಬಿದ ಶಾರೀರ, ಕೃತ್ರಿಮವಿಲ್ಲದ ನಿರೂಪಣೆಯ ಅಚ್ಚ ಪ್ರತಿಭೆಯನ್ನು ಉಣಬಡಿಸಿದರು. ಭೈರವಿ ಅಟ್ಟತಾಳ ವರ್ಣ ವೀರಿಬೋಣಿಯೊಂದಿಗೆ ಕಛೇರಿ ಆರಂಭಿಸಿ ಷಣ್ಮುಖ ಪ್ರಿಯದ ಸಿದ್ಧಿವಿನಾಯಕಂನ್ನು ಮನೋಜ್ಞವಾಗಿ ಹಾಡಿ ಶ್ರೋತೃಗಳ ಮನಗೆದ್ದರು. ಸರಸ್ವತಿ ರಾಗದ ಸರಸ್ವತಿ ನಮೋಸ್ತುತೇಯನ್ನು ಹಾಡಿದ ಅದಿತಿ, ಹರಿಕಾಂಭೋಜಿಯ ಏಮಯ್ಯ ರಾಮವನ್ನು ಸಮರ್ಥವಾಗಿ ನಿರೂಪಿಸಿದರು. ಮೋಹನದ ರಾಮಾ ನಿನ್ನು ಮತ್ತು ಗಾನಮೂತೇìಯ ಗಾನಮೂತೇìಗಳ ಬಳಿಕ, ಪ್ರಧಾನ ರಾಗವಾಗಿ ಪಂತುವರಾಳಿಯ ನಿನ್ನೇರ ನಮ್ಮಿ ನಾನುರದಲ್ಲಿ ತನ್ನ ಸಾಮರ್ಥ್ಯಕ್ಕೆ ತಕ್ಕುದಾದ ಆಲಾಪನೆ, ನೆರವಲ್ ಮತ್ತು ಸ್ವರ ವಿನಿಕೆಗಳನ್ನು ನಿರೂಪಿಸಿದಾಗ ಪ್ರೇಕ್ಷಕರು ಯುವಕಲಾವಿದೆಯ ಪ್ರತಿಭೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ನಳಿನಕಾಂತಿಯ ಮನವ್ಯಾಲಕಿನ್ ಹಾಡಿ, ತೋಡಿಯ ಸರಸಿಜನಾಭದಲ್ಲೂ ಅಚ್ಚುಕಟ್ಟಾದ ರಾಗಸಂಚಾರ, ಸ್ವರ ಕಲ್ಪನೆಗಳನ್ನು ಅಂದವಾಗಿ ನಿರೂಪಿಸಿದರು. ಅನಂತರ ಸಿಂಧು ಭೈರವಿಯ ದೇವರನಾಮ ಮತ್ತು ಧನಶ್ರೀಯ ತಿಲ್ಲಾನದೊಂದಿಗೆ ಕಾರ್ಯಕ್ರಮ ಮುಗಿಸಿದರು. ತನ್ನ ಪ್ರತಿಭೆಯಿಂದ ಕು| ಅದಿತಿ ಪ್ರೇಕ್ಷಕರ ಮನಗೆದ್ದರೂ ಕಛೇರಿಯ ಚೌಕಟ್ಟಿನಲ್ಲಿ ಇನ್ನೂ ಪಳಗಬೇಕಾಗಿದೆ. ಘನ ವಿದ್ವಾಂಸರ ಕಛೇರಿಗಳನ್ನು ನೋಡಿ, ಕೇಳಿ; ಅಭ್ಯಾಸದಿಂದ ಹುರಿಗೊಂಡರೆ ಈಕೆಯ ಭವಿಷ್ಯ ಉಜ್ವಲವಾಗಬಹುದು. ವಯಲಿನ್‌ನಲ್ಲಿ ಕಾರ್ತಿಕೇಯ ಯುವ ಕಲಾವಿದೆಗೆ ಸ್ಫೂರ್ತಿ ತುಂಬುತ್ತಾ ಪ್ರೋತ್ಸಾಹ ನೀಡಿದರು. ಮೃದಂಗದಲ್ಲಿ ನಿಕ್ಷಿತ್ ಮತ್ತು ಘಟಂನಲ್ಲಿ ಗಣೇಶ ಮೂರ್ತಿ ಸಹಕರಿಸಿದ್ದರು.
ಅನಂತರದ ಕಛೇರಿ, ಪಿಟೀಲು ಚೌಡಯ್ಯ ಬಾನಿಯ ನಾಡಿನ ಖ್ಯಾತ ವಯಲಿನ್ ವಾದಕರಾದ ಮೈಸೂರು ನಾಗರಾಜ್ ಮತ್ತು ಮೈಸೂರು ಡಾ| ಮಂಜುನಾಥ್ ಅವರ ಮಕ್ಕಳಾದ ಮೈಸೂರು ಕಾರ್ತಿಕ್ ಮತ್ತು ಮೈಸೂರು ಸುಮಂತ್ ಅವರ ದ್ವಂದ್ವ ವಯಲಿನ್ ವಾದನ. ಕಾನಡ ವರ್ಣದಲ್ಲಿ ಶೀಘ್ರಗತಿಯ ಕೈಚಳಕದೊಂದಿಗೆ ಕಛೇರಿ ಆರಂಭಿಸಿದ ಸಹೋದರರು ತಾವೆಷ್ಟು ನಿಪುಣರು ಎಂದು ಪ್ರೇಕ್ಷಕರಿಗೆ ತೋರಿಸಿಕೊಟ್ಟರು. ನಾಟ ರಾಗದ ಸರಸೀರುಹಾಸನಾಪ್ರಿಯೆ ಮತ್ತು ಜನರಂಜನಿಯ ಗಿರಿರಾಜಾಸುತಗಳನ್ನು ಕರ್ಣಾಂದಕರವಾಗಿ ನುಡಿಸಿದರು. ಬಿಂದುಮಾಲಿನಿಯ ಎಂತ ಮುದ್ದೊ ಏನು ಸೊಗಸು ಮತ್ತು ಸರಸ್ವತಿ ರಾಗದ ಸರಸ್ವತೀ ನಮೋಸ್ತುತೇ ಮಾಧುರ್ಯಪೂರ್ಣವಾಗಿ ಮೂಡಿಬಂದವು. ತ್ವರಿತಗತಿಯಲ್ಲಿ ನಳಿನಕಾಂತಿಯ ಮನವ್ಯಾಲಕಿಂನಲ್ಲಿ ಏಕರೂಪವಾಗಿ ಧ್ವನಿಸಿದ ನುಡಿಸಾಣಿಕೆ ಕೇಳುಗರ ಮನಸೂರೆಗೊಡವು. ಷಣ್ಮುಖಪ್ರಿಯದ ಮರಿವೇರೆಯಲ್ಲಿನ ಭಾವಪ್ರಧಾನವಾದ ಆಲಾಪನೆ, ವೈವಿಧ್ಯಗಳಿಂದ ಮನಸೆಳೆದ ಸ್ವರ ಮಾಲಿಕೆಗಳು, ಜುಗಲ್ಬಂದಿಯ ನುಡಿಸಾಣಿಕೆಯು ನಾವೀನ್ಯದಿಂದ ರಂಜಿಸಿತು. ನೀಲಾಂಬರಿಯ ಮಾಧವ ಮಾಮವ ದೇವಾ ಪ್ರಸ್ತುತಪಡಿಸಿದ ಕಾರ್ತಿಕ್ ಮತ್ತು ಸುಮಂತ್, ನಿಧಾನಗತಿಯ ಬೆರಳುಗಾರಿಕೆ ಯಲ್ಲಿಯೂ ತಾವು ಅನುಭವ ಗಳಿಸುತ್ತಿರುವುದನ್ನು ಶ್ರುತಪಡಿಸಿ ದರು. ಸಿಂಧುಭೈರವಿಯ ತಿಲ್ಲಾನದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು. ಯುವ ಪ್ರತಿಭೆಗಳು ತಮ್ಮ ತಾತ -ಮುತ್ತಾತಂದಿರ ಬಾನಿಯನ್ನು ಮುಂದಿನ ತಲೆಮಾರಿಗೆ ಕೊಂಡೊಯ್ಯುವ ಜವಾಬ್ದಾರಿಯನ್ನು ನಿಭಾಯಿಸುವ ಛಾತಿ ಯನ್ನು ಸ್ಪಷ್ಟವಾಗಿ ನಿರೂಪಿಸಿದ್ದಾರೆ. ಮೃದಂಗದಲ್ಲಿ ಬೆಂಗಳೂರಿನ ಅನಿರುದ್ಧ ಭಟ್ ಹಿತವಾಗಿ ಅನುಸರಿಸಿದರೆ ಖಂಜಿರದಲ್ಲಿ ಸುನಾದ ಅನೂರು ಅವರ ಜೋಶ್ ತುಸು ಹೆಚ್ಚೇ ಆಯಿತೇನೊ ಎಂಬ ಭಾವ ಪ್ರೇಕ್ಷಕರಲ್ಲಿ ಮೂಡಿತು.
ನಾಡಿನ ಯುವ ಪ್ರತಿಭೆಗಳನ್ನು ಗುರುತಿಸಿ, ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ವೇದಿಕೆಯನ್ನು ಒದಗಿಸಿಕೊಡುವ ಶ್ರಾವಣ ಸಂಗೀತೋತ್ಸವ ಆಯೋಜಿಸುತ್ತಿರುವ ಸಂಗೀತ ಪರಿಷತ್ ಕಾರ್ಯ ನಿಜಕ್ಕೂ ಶ್ಲಾಘನೀಯ.
ಕೃತಿ, ಮಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ
ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ
Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್ ಜೈಕಾರ !
Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ
Idu Entha Lokavayya: “ಕೋಸ್ಟಲ್” ನಿಂದ ಕರುನಾಡು!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.