1ರಿಂದ 14ನೆಯ ರಾಷ್ಟ್ರಪತಿಗಳವರೆಗೆ, ಇಂದಿರಾರಿಂದ ಮೋದಿಯವರೆಗೆ ಪೇಜಾವರ ಪಯಣ…
Team Udayavani, Dec 30, 2019, 6:09 AM IST
ದೇಶದ ಪ್ರಥಮ ರಾಷ್ಟ್ರಪತಿ ಬಾಬುರಾಜೇಂದ್ರ ಪ್ರಸಾದರಿಂದ 14ನೆಯ ರಾಷ್ಟ್ರಪತಿ ರಾಮನಾಥ ಕೋವಿಂದರವರೆಗೆ ಬಹುತೇಕ ರಾಷ್ಟ್ರಪತಿಗಳು ಮತ್ತು ಇಂದಿರಾ ಗಾಂಧಿಯವರಿಂದ ಹಿಡಿದು ನರೇಂದ್ರ ಮೋದಿಯವರೆಗೆ ಬಹುತೇಕ ಪ್ರಧಾನಿಗಳ ಸಂಪರ್ಕ ಹೊಂದಿದ, ಸಮಕಾಲೀನ ಪ್ರಪಂಚ ಕಂಡ ಅಪರೂಪದ ಸ್ವಾಮೀಜಿ ಶ್ರೀವಿಶ್ವೇಶತೀರ್ಥರು. ರಾಜೇಂದ್ರಪ್ರಸಾದ್ ಅವರು ರಾಷ್ಟ್ರಪತಿಯಾದಾಗ ಪೇಜಾವರ ಶ್ರೀಗಳು ಹೈದರಾಬಾದ್‌ನಲ್ಲಿ ಆಯೋಜಿ ಸಿದ ತಣ್ತೀಜ್ಞಾನ ಸಮ್ಮೇಳನವನ್ನು ಉದ್ಘಾಟಿಸಿದ್ದರು.
ಗ್ಯಾನಿ ಜೈಲ್ ಸಿಂಗ್ ರಾಷ್ಟ್ರಪತಿಗಳಾಗಿದ್ದ ಸಂದರ್ಭ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದಾಗ ಪೇಜಾವರ ಶ್ರೀಗಳ ವಿದ್ಯಾಗುರು ಶ್ರೀ ಪಲಿಮಾರು ಮಠದ ಶ್ರೀ ವಿದ್ಯಾಮಾನ್ಯತೀರ್ಥರು ಪರ್ಯಾಯ ಪೀಠಾರೂಢರಾಗಿದ್ದರು (1986-87). ರಾಮನಾಥ ಕೋವಿಂದರು ಉಡುಪಿಗೆ 2018ರ ಡಿ. 27ರಂದು ಬಂದಾಗಲೂ ಶ್ರೀ ವಿದ್ಯಾಮಾನ್ಯರ ಶಿಷ್ಯ ಶ್ರೀ ವಿದ್ಯಾಧೀಶತೀರ್ಥರು ಪರ್ಯಾಯ ಸ್ವಾಮಿಗಳು. ಇವೆರಡೂ ಸಂದರ್ಭದಲ್ಲಿ ಪೇಜಾವರ ಶ್ರೀಗಳು ಉಪಸ್ಥಿತರಿದ್ದರು.
ಪೇಜಾವರ ಶ್ರೀಗಳ ಐದನೆಯ ಪರ್ಯಾಯದ ಅವಧಿಯ ಕೊನೆಯಲ್ಲಿ ಮತ್ತು ರಾಷ್ಟ್ರಪತಿ ಅವಧಿಯ ಕೊನೆಯಲ್ಲಿ ಪ್ರಣವ್ ಮುಖರ್ಜಿ ಶ್ರೀ ಕೃಷ್ಣಮಠಕ್ಕೆ ಬಂದರು. ಇದು 2017ರ ಜೂನ್ 18ರಂದು. ಮುಖರ್ಜಿ ಅವರ ಉತ್ತರಾಧಿಕಾರಿ ರಾಮನಾಥ ಕೋವಿಂದರು ಪ್ರಣವ್ ಮುಖರ್ಜಿಯವರು ಬಂದ ಒಂದೇ ವರ್ಷದಲ್ಲಿ ಮತ್ತು ಕ್ಯಾಲೆಂಡರ್ ವರ್ಷದ ಉತ್ತರಾರ್ಧದಲ್ಲಿ ಉಡುಪಿಗೆ ಬಂದದ್ದು ವಿಶೇಷ.
ಆರ್. ವೆಂಕಟರಾಮನ್ ಅವರು ಉಪರಾಷ್ಟ್ರಪತಿ ಗಳಾಗಿರುವಾಗ ಪೇಜಾವರ ಶ್ರೀಗಳ ಮೂರನೆಯ ಪರ್ಯಾಯದಲ್ಲಿ (1984-85 ಅವಧಿ, 7 -12- 1985ರಂದು) ಶ್ರೀಕೃಷ್ಣಧಾಮ ಛತ್ರವನ್ನು ಉದ್ಘಾಟಿಸಿದ್ದರು. ಪೇಜಾವರ ಶ್ರೀಗಳವರನ್ನು ಡಾ| ಶಂಕರದಯಾಳ್ ಶರ್ಮ ದಿಲ್ಲಿಯಲ್ಲಿ, ಡಾ| ಎ.ಪಿ.ಜೆ. ಅಬ್ದುಲ್ ಕಲಾಂ ಬೆಂಗಳೂರಿನ ವಿದ್ಯಾಪೀಠದಲ್ಲಿ, ದಿಲ್ಲಿಯಲ್ಲಿ, ವಿ.ವಿ. ಗಿರಿಯವರು ರಾಷ್ಟ್ರಪತಿಯಾಗಿರುವಾಗ ಹೈದರಾಬಾದ್‌ನಲ್ಲಿ ಭೇಟಿ ಮಾಡಿದ್ದರು. ಮಾಜಿ ಉಪರಾಷ್ಟ್ರಪತಿ ಕೃಷ್ಣಕಾಂತ್ ಅವರು ಶ್ರೀಗಳಿಗೆ ನಿಕಟವರ್ತಿಗಳಾಗಿದ್ದರು.
ಇಂದಿರಾ ಜತೆ ಮುಕ್ತ ಚರ್ಚೆ: ಇಂದಿರಾ ಗಾಂಧಿಯವರು 1975ರಲ್ಲಿ ತುರ್ತುಪರಿಸ್ಥಿತಿ ಜಾರಿಗೊಳಿಸಿದಾಗ ಅದನ್ನು ವಿರೋಧಿಸಿ ದವರು ಪೇಜಾವರ ಶ್ರೀಗಳು. ಆದರೆ ಆರ್ಥಿಕ ಸಮಾನತೆಯನ್ನು ಜಾರಿಗೊಳಿಸಲು ಸರ್ವಾಧಿಕಾರ ಬೇಕು ಎಂದು ಇಂದಿರಾ ಗಾಂಧಿ ಸಮರ್ಥಿಸಿದ್ದರು. ಸರ್ವಾಧಿಕಾರದ ಅವಧಿಯಲ್ಲಿ ಅಧಿಕಾರಿ ವರ್ಗ ದವರು ಜನರ ಜತೆ ಹೇಗೆ ವ್ಯವಹರಿ ಸುತ್ತಾರೆಂಬುದು ಸರ್ವಾಧಿಕಾರಿಗೆ ಗೊತ್ತಾಗುವುದಿಲ್ಲ ಎಂದು ಪೇಜಾವರ ಶ್ರೀಗಳು ಹೇಳಿದ್ದರು.
ತುರ್ತುಪರಿಸ್ಥಿತಿ ಹೋದ ಬಳಿಕ 1977ರಲ್ಲಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಇಂದಿರಾ ಗಾಂಧಿಯವರು ಸ್ಪರ್ಧಿಸಿದ್ದರು. ಕಾರ್ಕಳಕ್ಕೆ ಪ್ರಚಾರಕ್ಕೆ ಬಂದ ಇಂದಿರಾ ಗಾಂಧಿಯವರು ಕಾರ್ಕಳ ರಾಘವೇಂದ್ರ ಮಠದಲ್ಲಿ ಪೇಜಾವರ ಶ್ರೀಗಳೊಂದಿಗೆ ಮಾತುಕತೆ ನಡೆಸಿದ್ದರು. ಗೆದ್ದ ಬಳಿಕ ವಿಜಯೋತ್ಸವ ನಡೆಯುವಾಗ ಚಿಕ್ಕಮಗಳೂರಿನ ಮಾರ್ಗವಾಗಿ ಪೇಜಾವರ ಶ್ರೀಗಳು ತೆರಳುತ್ತಿದ್ದರು. ಆಗ ಇಂದಿರಾ ಅವರು ಭೇಟಿಯಾದರು. ಆಗ ದೇವರಾಜ ಅರಸು ಮುಖ್ಯಮಂತ್ರಿಗಳು. ಮಣಿಪಾಲ ಆಸ್ಪತ್ರೆಯ ಉದ್ಘಾಟನೆಗೆ ಬಂದ ಸಂದರ್ಭ ಇಂದಿರಾ ಗಾಂಧಿಯವರು ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ್ದರು.
ಆಗ ಅದಮಾರು ಮಠದ ಶ್ರೀ ವಿಬುಧೇಶತೀರ್ಥ ಶ್ರೀಪಾದರ ಪರ್ಯಾಯ (1972-73) ನಡೆಯುತ್ತಿತ್ತು. ತುರ್ತು ಪರಿಸ್ಥಿತಿ ಹೋಗಿ ಮೊರಾರ್ಜಿ ದೇಸಾಯಿ ಪ್ರಧಾನಿಯಾಗಿದ್ದಾಗ ಇಂದಿರಾ ಗಾಂಧಿಯವರು ಪೇಜಾವರ ಶ್ರೀಗಳವರನ್ನು ಚೆನ್ನೈಯಲ್ಲಿ ಭೇಟಿ ಯಾಗಿ ಹಿಂದೆ ತಾನು ಹೇಳಿದ ಸರ್ವಾಧಿಕಾರ- ಪ್ರಜಾ ಪ್ರಭುತ್ವದ ವಾದವನ್ನು ಮತ್ತೆ ನೆನಪಿಸಿಕೊಂಡರು. “ಹಿಂದೂ ಸಮಾಜಕ್ಕೆ ತೊಂದರೆಯಾದರೆ ನಾನು ಸದಾ ನಿಮ್ಮೊಂದಿಗೆ ಇರುತ್ತೇನೆ’ ಎಂದು ಇಂದಿರಾ ಹೇಳಿದ್ದನ್ನು ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಸದಾ ಭಾಷಣದಲ್ಲಿ ನೆನಪಿಸಿಕೊಳ್ಳುತ್ತಿದ್ದರು.
ಪಿ.ವಿ. ನರಸಿಂಹ ರಾವ್, ವಿ.ಪಿ. ಸಿಂಗ್, ಎಚ್.ಡಿ. ದೇವೇಗೌಡ, ಮನಮೋಹನ್ ಸಿಂಗ್ ಪ್ರಧಾನಿ ಯಾಗಿದ್ದಾಗ ಅಯೋಧ್ಯೆ ರಾಮಮಂದಿರ ವಿವಾದದ ಕುರಿತು ಸಂಧಾನಸಭೆಗಳಲ್ಲಿ ಪೇಜಾವರ ಶ್ರೀಗಳು ಮುಂಚೂಣಿ ಪಾತ್ರ ವಹಿಸುತ್ತಿದ್ದರು. ದೇವೇಗೌಡರು ಕರ್ನಾಟಕದವರಾದ ಕಾರಣ ಅವರ ನಿಕಟ ಸಂಪರ್ಕವಿತ್ತು ಮತ್ತು ಅನೇಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದರು. 2000-01 ರಲ್ಲಿ ನಡೆದ ನಾಲ್ಕನೆಯ ಪರ್ಯಾಯ ಅವಧಿ ಪೇಜಾವರ ಶ್ರೀಗಳು ಶ್ರೀಕೃಷ್ಣ ಮಠದಲ್ಲಿ ನಿರ್ಮಿಸಿದ ಸುಸಜ್ಜಿತ ರಾಜಾಂಗಣವನ್ನು ಪ್ರಧಾನಿ ಅಟಲ್‌ಬಿಹಾರಿ ವಾಜಪೇಯಿ ಉದ್ಘಾಟಿಸಿದ್ದರು.
ಪ್ರಧಾನಿ ನರೇಂದ್ರ ಮೋದಿಯವರ ಜತೆಗೂ ಪೇಜಾವರ ಶ್ರೀಗಳ ಆತ್ಮೀಯ ಸಂಪರ್ಕವಿತ್ತು. ಎರಡೂ ಬಾರಿ ಮೋದಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುವಾಗಲೂ ವಿಶೇಷ ಆಹ್ವಾನದ ಮೇರೆಗೆ ಪೇಜಾವರ ಶ್ರೀಗಳು ಉಪಸ್ಥಿತರಿದ್ದರು. ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳ ನಾಯಕರು ಶ್ರೀಗಳವರನ್ನು ಸಂಪರ್ಕಿಸಿ ಆಗಾಗ್ಗೆ ಸಲಹೆಗಳನ್ನು ಪಡೆಯುತ್ತಿದ್ದರು. ಇಷ್ಟೆಲ್ಲ ಪ್ರಭಾವಿ ನಾಯಕರ ಸಂಪರ್ಕವಿದ್ದರೂ ಜನಸಾಮಾನ್ಯರು ಅವರನ್ನು ಅತಿ ಸುಲಭದಲ್ಲಿ ಮಾತನಾಡಿಸಿ ಪ್ರಸಾದ ಮಂತ್ರಾಕ್ಷತೆಯನ್ನು ಪಡೆಯಬಹುದಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.