ಭಾರತದಲ್ಲಿ ಎಚ್‌ಐವಿ ತಪಾಸಣೆ ಪ್ರಯೋಗಾಲಯಗಳ ಜಾಲ ಮತ್ತು ತಪಾಸಣೆ ಪ್ರಕ್ರಿಯೆ


Team Udayavani, Dec 6, 2020, 8:12 PM IST

ಭಾರತದಲ್ಲಿ ಎಚ್‌ಐವಿ ತಪಾಸಣೆ  ಪ್ರಯೋಗಾಲಯಗಳ ಜಾಲ ಮತ್ತು ತಪಾಸಣೆ ಪ್ರಕ್ರಿಯೆ

ಹ್ಯೂಮನ್‌ ಇಮ್ಯುನೊಡಿಫೀಶಿಯೆನ್ಸಿ ವೈರಸ್‌ (ಎಚ್‌ಐವಿ)ಯಿಂದ ಮನುಷ್ಯರಿಗೆ ಸೋಂಕು ತಗಲಿದ ಮೊದಲ ಪ್ರಕರಣವು ಮೊದಲಿಗೆ ಅಮೆರಿಕದಲ್ಲಿ 1981ರಲ್ಲಿ ಮತ್ತು ಭಾರತದಲ್ಲಿ 1986ರಲ್ಲಿ ಪತ್ತೆಯಾಯಿತು. 1981ರಿಂದ ಈಚೆಗೆ ಜಾಗತಿಕವಾಗಿ ಸುಮಾರು 7.6 ಕೋಟಿ ಮಂದಿ ಎಚ್‌ಐವಿ ಸೋಂಕಿಗೆ ತುತ್ತಾಗಿದ್ದಾರೆ ಮತ್ತು ಸುಮಾರು 3.9 ಕೋಟಿ ಮಂದಿ ಇದರಿಂದಾಗಿ ಸಾವಿಗೀಡಾಗಿದ್ದಾರೆ. ಎಚ್‌ಐವಿ/ ಏಡ್ಸ್‌ ಇಂದಿಗೂ ಜಾಗತಿಕ ಮಟ್ಟದಲ್ಲಿ ಒಂದು ಪ್ರಧಾನ ಅನಾರೋಗ್ಯವಾಗಿ ಉಳಿದುಕೊಂಡಿದೆ. 2019ರ ಅಂತ್ಯದ ಹೊತ್ತಿಗೆ ಜಾಗತಿಕವಾಗಿ 3.8 ಕೋಟಿ ಮಂದಿ ಮತ್ತು ಭಾರತದಲ್ಲಿ 23.5 ಲಕ್ಷ ಮಂದಿ ಎಚ್‌ಐವಿ ಸೋಂಕು ಪೀಡಿತರಿದ್ದಾರೆ ಎಂದು ಅಂದಾಜಿಸಲಾಗಿದೆ. 2019ರಲ್ಲಿ ಭಾರತದಲ್ಲಿ ಪ್ರತೀ ದಿನ 190ರಷ್ಟು ಹೊಸ ಎಚ್‌ಐವಿ ಪ್ರಕರಣಗಳು ಕಂಡುಬಂದಿವೆ. ಸರಕಾರವು ಆರಂಭಿಸಿರುವ ಎಚ್‌ಐವಿ ನಿಯಂತ್ರಣ ಕಾರ್ಯಕ್ರಮದ ಮೂಲಕ ನಡೆದಿರುವ ಸತತ ಪ್ರಯತ್ನಗಳಿಂದಾಗಿ ವಾರ್ಷಿಕವಾಗಿ ಕಂಡುಬರುವ ಹೊಸ ಎಚ್‌ಐವಿ ಸೋಂಕು ಪ್ರಕರಣಗಳ ಸಂಖ್ಯೆಯು 2010ರ ಸಂಖ್ಯೆಗಳಿಗೆ ಹೋಲಿಸಿದರೆ ಶೇ. 37ರಷ್ಟು ಇಳಿಕೆ ಕಂಡಿದೆ. ನಮ್ಮ ದೇಶದಲ್ಲಿ 2019ರಲ್ಲಿ 59 ಸಾವಿರದಷ್ಟು ಎಚ್‌ಐವಿ ಸಂಬಂಧಿ ಮರಣಗಳು ವರದಿಯಾಗಿವೆ. 2010ರ ಅಂಕಿ ಅಂಶಗಳಿಗೆ ಹೋಲಿಸಿದರೆ ಮರಣ ಪ್ರಮಾಣವೂ ಜಾಗತಿಕ ಮಟ್ಟದಲ್ಲಿರುವ ಶೇ. 51ಕ್ಕೆ ಎದುರಾಗಿ ಶೇ. 66ರಷ್ಟು ಇಳಿಕೆ ಕಂಡಿದೆ. 2030ರ ಹೊತ್ತಿಗೆ ಏಡ್ಸ್‌ನ್ನು ನಿರ್ಮೂಲಗೊಳಿಸುವ ಗುರಿಯನ್ನು ಸಾಧಿಸುವುದಕ್ಕೆ ನಾವು ಇನ್ನೂ ಬಹಳ ದೂರ ಕ್ರಮಿಸಬೇಕಾಗಿದೆ. ಆದರೆ ನಾವು ಸರಿಯಾದ ದಿಕ್ಕಿನಲ್ಲಿಯೇ ಸಾಗುತ್ತಿದ್ದೇವೆ.

1998ರಿಂದ ಆರಂಭಿಸಿ, ಪ್ರತೀ ವರ್ಷ ಡಿಸೆಂಬರ್‌ ತಿಂಗಳ 1ನೇ ದಿನಾಂಕದಂದು ಜಾಗತಿಕ ಏಡ್ಸ್‌ ದಿನ ಎಂಬುದಾಗಿ ಆಚರಿಸಿ ಕೊಂಡು ಬರಲಾಗುತ್ತಿದೆ. ಎಚ್‌ಐವಿ/ ಏಡ್ಸ್‌ ಬಗ್ಗೆ ಸಮಾಜದಲ್ಲಿ ತಿಳಿವಳಿಕೆಯನ್ನು ಹೆಚ್ಚಿಸುವುದು ಈ ದಿನಾಚರಣೆಯ ಗುರಿಯಾಗಿದೆ. ಎಚ್‌ಐವಿ ವೈರಸ್‌, ಅದರ ಸೋಂಕು, ಅದು ಹರಡುವ ಬಗೆ ಮತ್ತು ಬಹಳ ಮುಖ್ಯವಾಗಿ ಎಚ್‌ಐವಿ ಹೇಗೆ ಹರಡುವುದಿಲ್ಲ, ರೋಗದ ವಿವಿಧ ಹಂತಗಳು, ಎಚ್‌ಐವಿಯನ್ನು ಪತ್ತೆ ಹಚ್ಚುವುದು ಹೇಗೆ, ನಮ್ಮ ಸುತ್ತಮುತ್ತ ಇರುವ ಎಚ್‌ಐವಿ ಪರೀಕ್ಷೆ ಮತ್ತು ಚಿಕಿತ್ಸಾ ಸೌಲಭ್ಯಗಳು, ಎಚ್‌ಐವಿ ಸೋಂಕುಪೀಡಿತರಿಗೆ ಲಭ್ಯವಿರುವ ವಿವಿಧ ಬಗೆಯ ವೈದ್ಯಕೀಯ ಮತ್ತು ಸಾಮಾಜಿಕ ನೆರವು ಕಾರ್ಯಕ್ರಮಗಳು ಮತ್ತು ಎಚ್‌ಐವಿಯಿಂದ ಸುರಕ್ಷಿತವಾಗಿ ಇರುವುದು ಹೇಗೆ ಎಂಬ ಬಗ್ಗೆ ಪ್ರಜ್ಞಾವಂತ ನಾಗರಿಕರಾಗಿ ನಾವು ಜ್ಞಾನವನ್ನು ಪ್ರಸಾರ ಮಾಡಬೇಕಾಗಿದೆ.  ದೇಶದ ಪ್ರಜ್ಞಾವಂತ ನಾಗರಿಕರಾಗಿ ಎಚ್‌ಐವಿ ಸೋಂಕಿನ ಬಗ್ಗೆ ಸಮಾಜದಲ್ಲಿರುವ ತಪ್ಪು ತಿಳಿವಳಿಕೆಗಳನ್ನು ನಿವಾರಿಸುವ ಕೆಲಸದಲ್ಲಿಯೂ ನಾವು ಕೈಜೋಡಿಸಬೇಕಾಗಿದೆ. ಸೋಂಕುಪೀಡಿತ ವ್ಯಕ್ತಿಯೊಂದಿಗೆ ಅಸುರಕ್ಷಿತ ಲೈಂಗಿಕ ಸಂಪರ್ಕ ವನ್ನು ಹೊಂದುವುದು, ಸೋಂಕಿನಿಂದ ಕಲುಷಿತಗೊಂಡಿರುವ ಸೂಜಿ ಮತ್ತಿತರ ಸಲಕರಣೆಗಳನ್ನು ಉಪಯೋಗಿಸುವುದು, ಅಸುರಕ್ಷಿತ ಇಂಜೆಕ್ಷನ್‌ಗಳನ್ನು, ಎಚ್‌ಐವಿ ಸೋಂಕಿತ ರಕ್ತವನ್ನು ಪರೀಕ್ಷೆ ಮಾಡದೆ ಸ್ವೀಕರಿಸುವುದು, ಪ್ಯಾಶ್ಚರೀಕರಿಸಿಲ್ಲದ ಸಲಕರಣೆಗಳಿಂದ ಹಚ್ಚೆ ಹಾಕಿಸಿಕೊಳ್ಳುವುದು, ಆರೋಗ್ಯ ಕಾರ್ಯಕರ್ತರು, ಸಿಬಂದಿಯಲ್ಲಿ ಆಕಸ್ಮಿಕವಾಗಿ ಸೂಜಿ ಅಥವಾ ಇತರ ಸಲಕರಣೆಗಳಿಂದ ಗಾಯವಾಗುವುದು ಹಾಗೂ ಸೋಂಕುಪೀಡಿತ ತಾಯಿ

ಯಿಂದ ಮಗುವಿಗೆ ಗರ್ಭಧಾರಣೆಯ ಅವಧಿ ಮತ್ತು ಶಿಶುವಿಗೆ ಹಾಲೂಡುವ ಸಮಯದಲ್ಲಿ ಸೋಂಕು ಪ್ರಸಾರವಾಗುತ್ತದೆ. ದೈನಿಕ ಬದುಕಿನ ಸಾಮಾನ್ಯ ಸಂಪರ್ಕಗಳಾದ ತಬ್ಬಿಕೊಳ್ಳುವುದು, ಕೈಕುಲುಕುವುದು, ಶೌಚಾಲ ಯಗಳನ್ನು ಹಂಚಿಕೊಳ್ಳುವುದು, ಪಾತ್ರೆ, ತಟ್ಟೆಗ ಳನ್ನು ಹಂಚಿಕೊಳ್ಳುವಂತಹ ಕ್ರಿಯೆಗಳಿಂದ ಸೋಂಕು ಹರಡುವುದಿಲ್ಲ ಎಂಬುದನ್ನು ನಾವು ತಿಳಿದುಕೊಳ್ಳುವ ಅಗತ್ಯವಿದೆ. ಎಚ್‌ಐವಿಯು ಕಣ್ಣೀರು, ಬೆವರು ಅಥವಾ ಗಾಳಿ ಅಥವಾ ಸೊಳ್ಳೆ ಮತ್ತಿತರ ಕ್ರಿಮಿಕೀಟಗಳ ಕಡಿತದಿಂದಲೂ ಎಚ್‌ಐವಿಯು ಪ್ರಸಾರವಾಗುವುದಿಲ್ಲ. ಸೋಂಕಿತ ವ್ಯಕ್ತಿಯ ರಕ್ತದಲ್ಲಿ ಎಚ್‌ಐವಿಯ ವೈರಾಣು ಲೋಡ್‌ ಹೆಚ್ಚು ಇದ್ದಲ್ಲಿ ಪ್ರಸರಣದ ಅಪಾಯ ಹೆಚ್ಚು ಇರುತ್ತದೆ. ಸೋಂಕು ಪೀಡಿತ ವ್ಯಕ್ತಿಯು ಲೈಂಗಿಕವಾಗಿ ಹರಡುವ ಇತರ ಕಾಯಿಲೆಗಳನ್ನು ಹೊಂದಿದ್ದಲ್ಲಿ ಆ ವ್ಯಕ್ತಿಯು ಎಚ್‌ಐವಿ ಸೋಂಕಿಗೆ ತುತ್ತಾಗುವ ಅಥವಾ ಪ್ರಸಾರ ಮಾಡುವ ಸಾಧ್ಯತೆ ಹೆಚ್ಚು ಇರುತ್ತದೆ. ಮದ್ಯ ಅಥವಾ ಮಾದಕವಸ್ತುಗಳ ಅಮಲಿನಲ್ಲಿದ್ದುಕೊಂಡು ಅಪಾಯಕಾರಿ ಲೈಂಗಿಕ ಪ್ರವೃತ್ತಿಯಲ್ಲಿ ತೊಡ ಗುವ ವ್ಯಕ್ತಿಯು ಎಚ್‌ಐವಿ ಪ್ರಸಾರ ಮಾಡುವ ಅಥವಾ ಸೋಂಕಿಗೆ ತುತ್ತಾಗುವ ಅಪಾಯ ಹೆಚ್ಚು ಇರುತ್ತದೆ.

ನಮ್ಮ ದೇಶದಲ್ಲಿ ಎಚ್‌ಐವಿ ನಿಯಂತ್ರಣಕ್ಕೆ ನಾಯಕತ್ವವನ್ನು ನೀಡುತ್ತಿರುವುದು ಭಾರತ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಧೀನದಲ್ಲಿರುವ ರಾಷ್ಟ್ರೀಯ ಏಡ್ಸ್‌ ನಿಯಂತ್ರಣ ಸಂಸ್ಥೆ (ನ್ಯಾಕೊ). ಎಚ್‌ಐವಿ ತಪಾಸಣ ಸೌಲಭ್ಯಗಳು ಖಾಸಗಿ ಮತ್ತು ಸರಕಾರಿ ವಲಯಗಳೆರಡರಲ್ಲೂ ಲಭ್ಯವಿವೆ. ಎಚ್‌ಐವಿ ಪರೀಕ್ಷೆಗೆ ವ್ಯಕ್ತಿಯ ಮಾಹಿತಿಯುಕ್ತ ಸಮ್ಮತಿ ಅಗತ್ಯವಾಗಿದೆ. ದೇಶಾದ್ಯಂತ ಸಾರ್ವಜನಿಕ ವಲಯದಲ್ಲಿ ನಾಲ್ಕು ಸ್ತರಗಳ ಅತ್ಯುತ್ತಮವಾಗಿ ಕಾರ್ಯಾ ಚರಿಸುವ, ಗುಣಮಟ್ಟದ, ವಿಸ್ತೃತವಾದ ಪ್ರಯೋಗಾಲಯ ಜಾಲವನ್ನು ಸ್ಥಾಪಿಸುವಲ್ಲಿ ನ್ಯಾಕೊ ಸಫ‌ಲವಾಗಿದೆ. ದೇಶಾದ್ಯಂತ ಹರಡಿರುವ 18 ಸಾವಿರಕ್ಕೂ ಅಧಿಕ ಸಮಗ್ರ ಆಪ್ತಸಮಾಲೋಚನೆ ಮತ್ತು ಪರೀಕ್ಷಾ ಕೇಂದ್ರ (ಐಸಿಟಿಸಿ)ಗಳ ಮೂಲಕ ಎಚ್‌ಐವಿ ತಪಾಸಣೆ ಮತ್ತು ಆಪ್ತಸಮಾಲೋಚನೆ ಸೇವೆಯನ್ನು ಒದಗಿಸಲಾಗುತ್ತದೆ. ವೈದ್ಯಕೀಯ ಕಾಲೇಜುಗಳ ಸಾಮಾನ್ಯ ಹೊರರೋಗಿ ವಿಭಾಗ ಅಥವಾ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ ವಿಭಾಗಗಳಲ್ಲಿ ಅಥವಾ ಜಿಲ್ಲಾಸ್ಪತ್ರೆಯಲ್ಲಿ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಐಸಿಟಿಸಿಗಳು ಕಾರ್ಯಾಚರಿಸುತ್ತವೆ. ಕರ್ನಾಟಕ ರಾಜ್ಯ ಏಡ್ಸ್‌ ನಿಯಂತ್ರಣ ಸೊಸೈಟಿ (ಕೆಎಸ್‌ಎಪಿಎಸ್‌) ದ ಅಂಕಿಅಂಶಗಳ ಪ್ರಕಾರ, ರಾಜ್ಯದ ಐಸಿಟಿಸಿಗಳಲ್ಲಿ 2019-20ನೇ ಸಾಲಿನಲ್ಲಿ ಸರಿಸುಮಾರು 40 ಲಕ್ಷ ಎಚ್‌ಐವಿ ಪರೀಕ್ಷೆಗಳನ್ನು ನಡೆಸಲಾಗಿದೆ. ಈ ಐಸಿಟಿಸಿಗಳಿಂದ ಕ್ಲಪ್ತ ಕಾಲದಲ್ಲಿ ನಿಖರವಾದ ಮತ್ತು ವಿಶ್ವಾಸಾರ್ಹ ವರದಿಗಳನ್ನೇ ನೀಡುವಂತೆ ಖಾತರಿಪಡಿಸಲಾಗಿದೆ. ರಾಜ್ಯ ರೆಫ‌ರೆನ್ಸ್‌ ಪ್ರಯೋಗಾಲಯಗಳು (ಎಸ್‌ಆರ್‌ಎಲ್‌- 117), ರಾಷ್ಟ್ರೀಯ ರೆಫ‌ರೆನ್ಸ್‌ ಪ್ರಯೋಗಾಲಯಗಳು (ಎನ್‌ಆರ್‌ಎಲ್‌-13) ಮತ್ತು ಪುಣೆಯಲ್ಲಿರುವ ರಾಷ್ಟ್ರೀಯ ಏಡ್ಸ್‌ ಸಂಶೋಧನ ಸಂಸ್ಥೆಯ ಸರ್ವೋಚ್ಚ ಪ್ರಯೋಗಾಲಯಗಳನ್ನು ಒಳಗೊಂಡ ಸರಪಣಿಯ ಮೂಲಕ ಪ್ರಯೋಗಾಲಯಗಳ ಗುಣಮಟ್ಟವನ್ನು ಖಾತರಿಪಡಿಸಲಾಗಿದೆ. ರಾಜ್ಯದ ರಾಷ್ಟ್ರೀಯ ರೆಫ‌ರೆನ್ಸ್‌ ಪ್ರಯೋ ಗಾಲಯವು ಬೆಂಗಳೂರಿನ ನಿಮ್ಹಾನ್ಸ್‌ನ ನ್ಯುರೊವೈರಾಲಜಿ ವಿಭಾಗದ ಅಧೀನದಲ್ಲಿದೆ. ನಮ್ಮ ರಾಜ್ಯದ ರಾಜ್ಯ ಮಟ್ಟದ ಎಲ್ಲ 10 ರೆಫ‌ರೆನ್ಸ್‌ ಪ್ರಯೋಗಾಲಯಗಳೂ ವೈದ್ಯಕೀಯ ಕಾಲೇಜುಗಳಲ್ಲಿವೆ. ಮಣಿಪಾಲದ ಕೆಎಂಸಿ ಆಸ್ಪತ್ರೆ ಯಲ್ಲಿ ಮೈಕ್ರೊಬಯಾಲಜಿ ವಿಭಾಗದಲ್ಲಿರುವ ರಾಜ್ಯ ರೆಫ‌ರೆನ್ಸ್‌ ಪ್ರಯೋಗಾಲಯವು 2006ರಿಂದೀಚೆಗೆ ಕಾರ್ಯಾಚರಿಸುತ್ತಿದೆ. ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯು ಪೂರ್ಣ ಪ್ರಮಾಣದ ಪ್ರಯೋಗಾಲಯ ತಂತ್ರಜ್ಞರು ಮತ್ತು ಆಪ್ತ ಸಮಾಲೋಚಕರನ್ನು ಹೊಂದಿದ್ದು, ಅತ್ಯುತ್ತಮವಾಗಿ ಕಾರ್ಯಾಚರಿಸುತ್ತಿರುವ ಎರಡು ಐಸಿಟಿಸಿಗಳನ್ನು ಹೊಂದಿದೆ. ಇವುಗಳಲ್ಲಿ ಒಂದು ಸಾರ್ವಜನಿಕರಿಗಾಗಿದ್ದರೆ ಇನ್ನೊಂದು ಗರ್ಭಿಣಿಯರ ತಪಾಸಣೆಗಾಗಿದೆ. ಎಚ್‌ಐವಿ ತಪಾಸಣ ಪ್ರಯೋಗಾಲಯಗಳ ತಾಂತ್ರಿಕ ಗುಣಮಟ್ಟದ ಬಗ್ಗೆ ನ್ಯಾಶನಲ್‌ ಅಕ್ರೆಡಿಟೇಶನ್‌ ಬೋರ್ಡ್‌ ಫಾರ್‌ ಟೆಸ್ಟಿಂಗ್‌ ಆ್ಯಂಡ್‌ ಕ್ಯಾಲಿ ಬರೇಶನ್‌ ಲ್ಯಾಬೊರೇಟರೀಸ್‌ (ಎನ್‌ಎಬಿ ಎಲ್‌) ತೃತೀಯ ಪಕ್ಷದ ವಿಶ್ಲೇಷಣೆಯನ್ನು ನಡೆಸುತ್ತದೆ. ಎಲ್ಲ ರಾಷ್ಟ್ರೀಯ ರೆಫ‌ರೆನ್ಸ್‌ ಪ್ರಯೋಗಾಲಯಗಳು ಮತ್ತು ಬಹುತೇಕ (86) ರಾಜ್ಯ ರೆಫ‌ರೆನ್ಸ್‌ ಪ್ರಯೋಗಾಲಯಗಳು ಎನ್‌ಎಬಿಎಲ್‌ನ ಮಾನ್ಯತೆ ಹೊಂದಿವೆ. ಐಸಿಟಿಸಿ ಪ್ರಯೋಗಾಲಯಗಳಿಗೂ ಎನ್‌ಎಬಿಎಲ್‌ ಮಾನ್ಯತೆ ಒದಗಿಸುವ ನಿಟ್ಟಿನಲ್ಲಿ ನ್ಯಾಕೊ ಪ್ರಯತ್ನ ನಡೆಸುತ್ತಿದೆ.

ಸೋಂಕು ಸ್ಥಿತಿಗಾಗಿ ತಪಾಸಣೆಯು ರೋಗ ತಡೆಯಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ. ವ್ಯಕ್ತಿಗೆ ತಾನು ಎಚ್‌ಐವಿ ಸೋಂಕು ಹೊಂದಿರುವ ಬಗ್ಗೆ ಅರಿವು ಇಲ್ಲದೆ ಇದ್ದರೆ ಸೋಂಕು ಇತರರಿಗೆ ಹರಡದಂತೆ ಮುನ್ನೆಚ್ಚರಿಕೆ ವಹಿಸುವ ಸಾಧ್ಯತೆಗಳು ಕಡಿಮೆ ಇರುತ್ತದೆ. ಪರೀಕ್ಷೆಯ ಮೂಲಕ ಸೋಂಕು ಇರುವುದು ಖಚಿತವಾದರೆ ಸೋಂಕು ಪೀಡಿತ ವ್ಯಕ್ತಿಗೆ ಜೀವನ ಪರ್ಯಂತ ಎಚ್‌ಐವಿ ಔಷಧ ಸಲಹೆ ನೀಡಲಾಗುತ್ತದೆ ಮತ್ತು ಇದರಿಂದ ಸೋಂಕು ನಿಯಂತ್ರಣ ಸಾಧ್ಯವಾಗುತ್ತದೆ. ಶಿಫಾರಸು ಮಾಡಿರುವಂತೆ ಎಚ್‌ಐವಿ ಔಷಧವನ್ನು ಸೇವಿಸಿದರೆ ರಕ್ತದಲ್ಲಿ ಇರುವ ವೈರಾಣು ಪ್ರಮಾಣವನ್ನು ಅತ್ಯಂತ ಕಡಿಮೆ ಮಟ್ಟದಲ್ಲಿ ಇರಿಸುವುದು ಸಾಧ್ಯ. ಮಾಲೆಕ್ಯುಲಾರ್‌ ಪಿಸಿಆರ್‌ ಪರೀಕ್ಷೆಯಲ್ಲಿ ಪತ್ತೆಯಾಗದಷ್ಟು ಕಡಿಮೆ ಮಟ್ಟದಲ್ಲಿ ವೈರಾಣು ಲೋಡ್‌ ಇದ್ದಾಗ ಅಂಥವರನ್ನು ವೈರಾಣು ದಮನಕ್ಕೆ ಒಳಗಾದವರು ಎಂದು ಕರೆಯಲಾಗುತ್ತದೆ. ವೈರಾಣು ದಮನವನ್ನು ಸಾಧಿಸಿದವರು ಎಚ್‌ಐವಿ ಸಂಬಂಧಿ ಅನಾರೋಗ್ಯಕ್ಕೆ ತುತ್ತಾಗುವುದು ಕಡಿಮೆ ಪ್ರಮಾಣದಲ್ಲಿರುತ್ತದೆ ಮತ್ತು ಅಂಥವರು ಇತರರಿಗೆ ಸೋಂಕು ಪ್ರಸಾರ ಮಾಡುವ ಸಾಧ್ಯತೆಯೂ ಕಡಿಮೆ ಇರುತ್ತದೆ. ಆದ್ದರಿಂದ ಎಚ್‌ಐವಿ ಸೋಂಕಿನ ಹರಡುವಿಕೆ ಕಡಿಮೆಯಾಗುವುದಕ್ಕೆ ಶೀಘ್ರ ತಪಾಸಣೆಯು ಅತ್ಯಂತ ಮುಖ್ಯವಾಗಿದೆ. ಎಚ್‌ಐವಿ ಸೋಂಕಿಗೆ ತುತ್ತಾದವರಲ್ಲಿ ಶೇ. 90ರಷ್ಟು ಮಂದಿ ತಮ್ಮ ಸೋಂಕು ಸ್ಥಿತಿಗತಿಯ ಬಗ್ಗೆ ಅರಿವು ಹೊಂದಿರಬೇಕು, ಇವರಲ್ಲಿ ಶೇ. 90 ಮಂದಿಯನ್ನು ಎಚ್‌ಐವಿ ಔಷಧ ಚಿಕಿತ್ಸೆಗೆ ಒಳಪಡಿಸಬೇಕು ಹಾಗೂ ಇವರಲ್ಲಿ ಶೇ. 90 ಮಂದಿ ವೈರಾಣು ದಮನಕ್ಕೆ ಒಳಪಟ್ಟಿರಬೇಕು ಎಂಬುದು ಸದ್ಯದ ಗುರಿಯಾಗಿದೆ. ಇದನ್ನು 90-90-90 ಕಾರ್ಯತಂತ್ರ ಎಂದು ಕರೆಯಲಾಗಿದೆ. 2019ರ ಅಂತ್ಯದ ಹೊತ್ತಿಗೆ ಎಚ್‌ಐವಿ ಸೋಂಕಿನೊಂದಿಗೆ ಜೀವಿಸುತ್ತಿರುವವರಲ್ಲಿ ಐದನೇ ಒಂದರಷ್ಟು ಮಂದಿ ತಮಗಿರುವ ಸೋಂಕಿನ ಬಗ್ಗೆ ತಿಳಿವಳಿಕೆ ಹೊಂದಿಲ್ಲ ಎಂದು ಅಂದಾಜಿಸಲಾಗಿದೆ.

ಅನಾರೋಗ್ಯದ ಆರಂಭ ಕಾಲದಲ್ಲಿ ಕೆಲವು ವಾರಗಳ ಅವಧಿಯ ಲಘು ಅನಾರೋಗ್ಯದ ಬಳಿಕ ಎಚ್‌ಐವಿ ಸೋಂಕಿಗೆ ಈಡಾದ ವ್ಯಕ್ತಿಗಳು 6ರಿಂದ 10 ವರ್ಷಗಳ ಕಾಲ ಲಕ್ಷಣರಹಿತರಾಗಿ ಇರುತ್ತಾರೆ. ಇದಾದ ಬಳಿಕ ಅವರ ರೋಗನಿರೋಧಕ ಶಕ್ತಿ ಕುಸಿಯಲಾರಂಭಿಸಿ ಅವಕಾಶವಾದಿ ಸೋಂಕು ರೋಗಗಳ ಲಕ್ಷಣಗಳನ್ನು ಹೊಂದಲಾರಂಭಿಸುತ್ತಾರೆ. ಸೋಂಕನ್ನು ಕ್ಷಿಪ್ರವಾಗಿ ಪತ್ತೆ ಹಚ್ಚುವುದು ಮತ್ತು ಸೂಕ್ತವಾದ ಎಚ್‌ಐವಿ ಔಷಧಗಳನ್ನು ಒದಗಿಸುವುದು ಮತ್ತು ಅದನ್ನು ಜೀವನಪರ್ಯಂತ ಅನುಸರಿಸುವುದರಿಂದ ಎಚ್‌ಐವಿ ಸಂಬಂಧಿ ಅನಾರೋಗ್ಯಗಳು ಮತ್ತು ಮೃತ್ಯುವನ್ನು ತಡೆಗಟ್ಟಲು ಸಹಾಯವಾಗುತ್ತದೆ. ಐಸಿಟಿಸಿಗಳಲ್ಲಿ ಎಚ್‌ಐವಿ ಪರೀಕ್ಷೆ, ಪರೀಕ್ಷಾಪೂರ್ವ ಮತ್ತು ಪರೀಕ್ಷೆಯ ಬಳಿಕದ ಆಪ್ತ ಸಮಾಲೋಚನೆಗಳನ್ನು ಒದಗಿಸಲಾಗುತ್ತದೆ. ತಮಗೆ ಎಚ್‌ಐವಿ ಸೋಂಕು ತಗಲಿರಬಹುದು ಎಂಬ ಸಂಶಯವನ್ನು ಹೊಂದಿ, ಪರೀಕ್ಷೆ ಮಾಡಿಸಿಕೊಳ್ಳಲು ಮುಂದೆ ಬರುವ ವ್ಯಕ್ತಿಗಳು ಐಸಿಟಿಸಿಗಳನ್ನು ಸಂಪರ್ಕಿಸಬಹುದು. ಇಲ್ಲಿ ಉಚಿತವಾಗಿ ಪರೀಕ್ಷೆ ಮತ್ತು ಆಪ್ತಸಮಾಲೋಚನೆ ಸೇವೆಗಳನ್ನು ಒದಗಿಸಲಾಗುತ್ತದೆ.

ಎಚ್‌ಐವಿ ಪರೀಕ್ಷಾಪೂರ್ವ ಆಪ್ತಸಮಾಲೋಚನೆಯ ಸಂದರ್ಭದಲ್ಲಿ ಎಚ್‌ಐವಿ, ಏಡ್ಸ್‌ ಎಂದರೆ ಏನು, ಅದು ಪ್ರಸಾರವಾಗುವ ಮಾರ್ಗಗಳು, ಎಚ್‌ಐವಿ ಪರೀಕ್ಷೆ ಮಾಡಿಸಿಕೊಳ್ಳುವುದರಿಂದ ಆಗುವ ಪ್ರಯೋಜನಗಳು, ಜನನಾಂಗಗಳು, ಋತುಚಕ್ರ, ಲೈಂಗಿಕ ಬದುಕಿಗೆ ಸಂಬಂಧಿಸಿದ ನೈರ್ಮಲ್ಯ ಕ್ರಮಗಳು ಇತ್ಯಾದಿಗಳ ಮಾಹಿತಿಗಳನ್ನು ಒದಗಿಸಲಾಗುತ್ತದೆ. ಎಚ್‌ಐವಿ ಪರೀಕ್ಷೆಯ ಫ‌ಲಿತಾಂಶಗಳನ್ನು ಗೌಪ್ಯವಾಗಿ ಇರಿಸಿಕೊಳ್ಳುವ ಖಾತರಿಯನ್ನು ರೋಗಿಗೆ ನೀಡಲಾಗುತ್ತದೆ. ಕ್ಷಯ ಅಥವಾ ಲೈಂಗಿಕವಾಗಿ ಹರಡುವ ಯಾವುದೇ ಕಾಯಿಲೆಗಳು, ಪ್ರಜನನಾಂಗ ವ್ಯೂಹದ ಸೋಂಕುಗಳ ಪರೀಕ್ಷೆಗಳನ್ನು ಕೂಡ ನಡೆಸಲಾಗುತ್ತದೆ. ಅದೇ ದಿನ ಪರೀಕ್ಷಾ ವರದಿಗಳನ್ನು ಒದಗಿಸುವ ಖಾತರಿಯನ್ನು ನೀಡಲಾಗುತ್ತದೆ. ಆಪ್ತಸಮಾಲೋಚಕರು ವ್ಯಕ್ತಿಗೆ ಪರೀಕ್ಷೆಯ ವರದಿಗಳನ್ನು ನೀಡುತ್ತಾರೆ ಮತ್ತು ಪರೀಕ್ಷೆಯ ಬಳಿಕದ ಆಪ್ತ ಸಮಾಲೋಚನೆಯನ್ನು ಒದಗಿಸುತ್ತಾರೆ. ಪರೀಕ್ಷೆಯ ಬಳಿಕದ ಆಪ್ತಸಮಾಲೋಚನೆಯ ಸಂದರ್ಭದಲ್ಲಿ ಪರೀಕ್ಷೆಯ ಫ‌ಲಿತಾಂಶಗಳು ಮತ್ತು ರೋಗನಿದಾನದ ಬಗ್ಗೆ ವ್ಯಕ್ತಿಗೆ ಮಾಹಿತಿ ನೀಡಲಾಗುತ್ತದೆ. ಪಾಸಿಟಿವ್‌ ಫ‌ಲಿತಾಂಶ ಬಂದಿದ್ದಲ್ಲಿ, ಅದನ್ನು ಸ್ವೀಕರಿಸಲು ಮತ್ತು ಎಚ್‌ಐವಿ ಸೋಂಕು ತಗಲಿರುವ ಮಾಹಿತಿ ತಿಳಿದ ಬಳಿಕ ಉಂಟಾಗಬಹುದಾದ ಭಾವನಾತ್ಮಕ ಏರುಪೇರುಗಳ ಜತೆಗೆ ಹೊಂದಾಣಿಕೆ ಮಾಡಿಕೊಳ್ಳಲು ಸಾಕಷ್ಟು ಸಮಯ ನೀಡಲಾಗುತ್ತದೆ. ಸರಕಾರದಿಂದ ಲಭ್ಯವಿರುವ ಸಂಪೂರ್ಣ ಉಚಿತವಾದ ಎಚ್‌ಐವಿ ಚಿಕಿತ್ಸೆಯ ಬಗ್ಗೆ ಅವರಿಗೆ ಸರಿಯಾದ ಮತ್ತು ವಿವರವಾದ ಮಾಹಿತಿಯನ್ನು ಒದಗಿಸಲಾಗುತ್ತದೆ. ಅಲ್ಲದೆ ಅವರನ್ನು ಅವರಿಗೆ ಸನಿಹದ ಎಚ್‌ಐವಿ ಚಿಕಿತ್ಸಾ ಕೇಂದ್ರ (ಎಆರ್‌ಟಿ ಕೇಂದ್ರ)ಗಳಿಗೆ ಸಂಪರ್ಕಿಸಲಾಗುತ್ತದೆ.

ಎಚ್‌ಐವಿ ಪಾಸಿಟಿವ್‌ ಕಂಡುಬಂದ ಮಹಿಳೆಯ ವ್ಯಕ್ತಿಯ ಪರೀಕ್ಷೆಗೊಳಪಡದ ಲೈಂಗಿಕ ಸಂಗಾತಿ/ಗಳು/ ಮಕ್ಕಳಿಗೆ (14 ವರ್ಷ ವಯಸ್ಸಿನವರೆಗಿನ ಮಕ್ಕಳು) ಕೂಡ ಎಚ್‌ಐವಿ ಪರೀಕ್ಷೆಯನ್ನು ಒದಗಿಸಲಾಗುತ್ತದೆ. ಸಂದರ್ಭಕ್ಕೆ ಸರಿಯಾಗಿ ವ್ಯಕ್ತಿಗಳ ಬಗ್ಗೆ ಕ್ಷಯ ರೋಗ ಪತ್ತೆ ಮತ್ತು ಚಿಕಿತ್ಸೆ, ಅವಕಾಶವಾದಿ ಸೋಂಕುತಡೆಗಾಗಿ ಪ್ರೊಫಿಲ್ಯಾಕ್ಸಿಸ್‌, ಆಪ್ತಸಮಾಲೋಚನೆ, ಲೈಂಗಿಕವಾಗಿ ಹರಡುವ ಸೋಂಕುರೋಗಗಳ ಪರೀಕ್ಷೆ ಮತ್ತು ಚಿಕಿತ್ಸೆ, ಸಂತಾನನಿರೋಧಕ ಕ್ರಮಗಳು, ಒಪಿಯೋಯಿಡ್‌ ಸಬ್‌ಸ್ಟಿಟ್ಯೂಶನ್‌ ಥೆರಪಿ, ಶುದ್ಧೀಕರಿಸಿದ ಸೂಜಿ ಮತ್ತು ಸಿರಿಂಜ್‌ಗಳ ಒದಗಣೆ ಇತ್ಯಾದಿ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ. ತಮಗಿರುವ ಸಂಶಯಗಳು, ತಪ್ಪು ಮಾಹಿತಿಗಳು, ಪ್ರಶ್ನೆಗಳನ್ನು ಬಗೆಹರಿಸಿಕೊಳ್ಳುವುದಕ್ಕಾಗಿ ಪ್ರಶ್ನೆಗಳನ್ನು ಕೇಳುವ ಅವಕಾಶವನ್ನು ಒದಗಿಸಲಾಗುತ್ತದೆ.

ಜಾಗತಿಕವಾಗಿ ಈಗ ಅನುಸರಿಸಲಾಗುತ್ತಿರುವ ಎಚ್‌ಐವಿ ಪ್ರತಿಬಂಧಕ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವುದನ್ನು ಮುಂದುವರಿಸಿದರೆ ಜಗತ್ತನ್ನು ಏಡ್ಸ್‌ ಮುಕ್ತಗೊಳಿಸುವುದು ಸಾಧ್ಯ ಎಂಬ ಭರವಸೆ ಇದೆ. ಎಚ್‌ಐವಿ ಸೋಂಕಿನ ಬಗ್ಗೆ ನಾವೆಲ್ಲರೂ ಅರಿವನ್ನು ಬೆಳೆಸಿಕೊಳ್ಳೋಣ ಮತ್ತು ನಮ್ಮ ಸುತ್ತಮುತ್ತಲೂ ಆ ಅರಿವನ್ನು ಪ್ರಸಾರ ಮಾಡೋಣ. ಆ ಮೂಲಕ ಜಗತ್ತನ್ನು ಏಡ್ಸ್‌ಮುಕ್ತಗೊಳಿಸುವ ಹೋರಾಟದಲ್ಲಿ ನಾವೂ ಕೈಜೋಡಿಸೋಣ. ಎಚ್‌ಐವಿಯ ಕುರಿತಾದ ಅಪನಂಬಿಕೆಗಳು, ತಪ್ಪು ಮಾಹಿತಿ, ಅಸ್ಪೃಶ್ಯತಾ ಭಾವನೆಗಳನ್ನು ದೂರೀಕರಿಸುವುದರ ಮೂಲಕ ಅದನ್ನು ಪ್ರತಿಬಂಧಿಸಿ ಜಗತ್ತನ್ನು ಎಚ್‌ಐವಿ ಮುಕ್ತಗೊಳಿಸೋಣ.

 

ಡಾ| ಶಶಿಧರ್‌ ವಿ.

ಪ್ರೊಫೆಸರ್‌, ಮೈಕ್ರೊಬಯಾಲಜಿ ವಿಭಾಗ,

ಕೆಎಂಸಿ, ಮಣಿಪಾಲ

ಅನುರಾಧಾ ವಿ. ಎಸ್‌.

ಟೆಕ್ನಿಕಲ್‌ ಆಫೀಸರ್‌, ಸ್ಟೇಟ್‌ ರೆಫ‌ರೆನ್ಸ್‌ ಲ್ಯಾಬೊರೇಟರಿ (ನ್ಯಾಕೊ), ಮೈಕ್ರೊಬಯಾಲಜಿ ವಿಭಾಗ, ಕೆಎಂಸಿ, ಮಣಿಪಾಲ

ಟಾಪ್ ನ್ಯೂಸ್

1-chali

Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!

Hemmadi-Sevantige

Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ

rain-dk

Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ

1-puri

Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ

tirupati

Tirupati; ದೇವಸ್ಥಾನದಲ್ಲೂ ಶೀಘ್ರ ಎಐ ಚಾಟ್‌ಬಾಟ್‌!

RD-Parede

Parade: ಗಣರಾಜ್ಯೋತ್ಸವಕ್ಕೆ 15 ಸ್ತಬ್ಧಚಿತ್ರ ಆಯ್ಕೆ: ಮತ್ತೆ ದೆಹಲಿಗೆ ಕೊಕ್‌

YOutube

Click Bite: ಹಾದಿ ತಪ್ಪಿಸಿದರೆ ವೀಡಿಯೋ ಡಿಲೀಟ್‌: ಯೂಟ್ಯೂಬ್‌!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5

Health: ಶೀಘ್ರ ಕ್ಯಾನ್ಸರ್‌ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?

3(1

Hysteroscopy: ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಗೆ ಒಂದು ಅತ್ಯವಶ್ಯಕ ಕಾರ್ಯವಿಧಾನ

1

Healt: ಶಿಶುವಿನ ಹಾಲು ಹಲ್ಲುಗಳು ನೀವು ತಿಳಿದಿರಬೇಕಾದ 9 ಲಕ್ಷಣಗಳು

5–jaundice

Jaundice: ಜಾಂಡಿಸ್‌ ಅಥವಾ ಅರಶಿನ ಕಾಮಾಲೆ

4-oral-cancer-2

Oral cancer: ನಿಶ್ಶಬ್ದ ಅಪಾಯ; ಬಾಯಿಯ ಕ್ಯಾನ್ಸರ್‌ ವಿರುದ್ಧ ಹೋರಾಟ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-chali

Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!

Hemmadi-Sevantige

Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ

rain-dk

Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ

Karnataka; ರಾಜ್ಯದ ಕಾಡಿಗೆ ಕೊಡಲಿ! ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಳ?

Karnataka; ರಾಜ್ಯದ ಕಾಡಿಗೆ ಕೊಡಲಿ! ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಳ?

1-puri

Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.