ಮೂತ್ರಜನಕಾಂಗವ್ಯೂಹ
Team Udayavani, Mar 11, 2018, 6:00 AM IST
ಮೂತ್ರಪಿಂಡಗಳು – ದೇಹದ ರಾಸಾಯನಿಕ ಕ್ರಿಯೆಗಳ ರಕ್ಷಕರು. ಹೆಚ್ಚಿನ ಕಶೇರುಕ ಜೀವಿಗಳಿಗೆ ಇರುವಂತೆಯೇ ಮನುಷ್ಯರಿಗೂ ಸಹ ಮೂತ್ರಪಿಂಡಗಳು ದೈವದತ್ತವಾಗಿ ದೊರಕಿದ್ದು , ಅವು ಬೆನ್ನುಮೂಳೆಯ (ಬೆನ್ನುಹುರಿ) ಎರಡೂ ಬದಿಯಲ್ಲಿ, ಎದೆಗೂಡು ಮತ್ತು ಹೊಟ್ಟೆಯನ್ನು ಬೇರ್ಪಡಿಸುವ ಮಾಂಸಲ ಪರದೆಯಾಗಿರುವ ವಪೆಯ ಕೆಳಭಾಗದಲ್ಲಿ ನೆಲೆಗೊಂಡಿವೆ.
ಮೂತ್ರಪಿಂಡಗಳ ತೂಕ ಸುಮಾರು 150 ಗ್ರಾಂ ಇದ್ದು, ಈ ಮಾಂಸಲ ಅಂಗಗಳು ಅನೇಕ ಪ್ರಾಣಾಧಾರ ಜೈವಿಕ ಕಾರ್ಯಗಳಲ್ಲಿ ಪ್ರಧಾನ ಪಾತ್ರ ವಹಿಸುತ್ತವೆ, ಇವುಗಳಲ್ಲಿ ಅತಿ ಮುಖ್ಯವಾದ ಕಾರ್ಯಗಳೆಂದರೆ ಮೂತ್ರದ ಮೂಲಕ ದೇಹದ ತ್ಯಾಜ್ಯಗಳನ್ನು ಹೊರಹಾಕುವುದು; ಕೆಂಪು ರಕ್ತಕಣಗಳ ಉತ್ಪಾದನೆಗೆ ನೆರವಾಗುವುದು ಮತ್ತು ಮೂಳೆಗಳ ಆರೋಗ್ಯ ನಿರ್ವಹಣೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಮೂತ್ರಪಿಂಡಗಳು ದೇಹದ ರಾಸಾಯನಿಕ ಕ್ರಿಯೆಗಳ ರಕ್ಷಕರು. ಮೂತ್ರಪಿಂಡಗಳಿಗೆ (ಕಿಡ್ನಿ ) ಬೆಂಬಲವಾಗಿ ಇರುವ ಇನ್ನಿತರ ಸಹ ಅಂಗಾಂಶಗಳು ಅಂದರೆ, ಮೂತ್ರನಾಳಗಳೆಂದು ಕರೆಯಲಾಗುವ ಎರಡು ನಾಳಗಳು (ಯುರೇಟರ್), ಮೂತ್ರಕೋಶವೆಂದು (ಬ್ಲಾಡರ್) ಕರೆಯ ಲಾಗುವ ಒಂದು ಮಾಂಸಲ ಕುಹರ ಮತ್ತು ಮೂತ್ರಕೋಶದಿಂದ ಹೊರಡುವ ಮೂತ್ರ ವಿಸರ್ಜನನಾಳ (ಯುರೆಥಾ) ಇವು ಕಾಲಕಾಲಕ್ಕೆ ಮೂತ್ರ ಸಾಗಣೆ, ಸಂಗ್ರಹಣೆ ಮತ್ತು ವಿಸರ್ಜನೆಗೆ ಸಹಾಯ ಮಾಡುತ್ತವೆ.
ಎರಡೂ ಮೂತ್ರಪಿಂಡಗಳು ಪ್ರತಿ ನಿಮಿಷಕ್ಕೆ ಸುಮಾರು ಒಂದು ಲೀಟರ್ ರಕ್ತವನ್ನು ಪಡೆದು ಶೋಧಿಸುತ್ತವೆ ಮತ್ತು 1 ಮಿ.ಲೀ. ಮೂತ್ರವನ್ನು ಉತ್ಪಾದಿಸುತ್ತವೆ. ಎರಡೂ ಜೊತೆಗೂಡಿ, ಪ್ರತಿ 24 ಗಂಟೆಗಳಿಗೊಮ್ಮೆ ಸುಮಾರು 1.5 ರಿಂದ 2 ಲೀಟರ್ ಮೂತ್ರವನ್ನು ಉತ್ಪಾದಿಸುತ್ತವೆ. ಹೀಗೆ ಉತ್ಪಾದಿಸಿದ ಮೂತ್ರವನ್ನು ಮೂತ್ರಪಿಂಡಗಳು ಮೂತ್ರನಾಳಗಳ ಮೂಲಕ ಮೂತ್ರಕೋಶಕ್ಕೆ ಸಾಗಿಸುತ್ತವೆ.
ಮೂತ್ರವಿಸರ್ಜನನಾಳದಲ್ಲಿ ಏಕಮುಖ ಚಲನೆ ಮಾತ್ರ ಸಾಧ್ಯ, ಅಂದರೆ ವ್ಯಕ್ತಿಗೆ ಮೂತ್ರವಿಸರ್ಜನೆಯ ಪ್ರಕೃತಿದತ್ತ ಕರೆಗೆ ಸೂಕ್ತ ಜೈವಿಕ ಸಂಕೇತ ಸಿಗುವವರೆಗೆ ಮೂತ್ರಕೋಶವು ಮೂತ್ರವನ್ನು ಶೇಖರಿಸಿಟ್ಟುಕೊಳ್ಳುತ್ತದೆ. ಮೂತ್ರಕೋಶದಲ್ಲಿ ಮೂತ್ರವನ್ನು ಸತತವಾಗಿ ಹೆಚ್ಚುತ್ತಿರುವ ಪ್ರಮಾಣದಲ್ಲಿ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವಿದ್ದು ಅದರ ಒಳಭಾಗದಲ್ಲಿ ಯಾವುದೇ ರೀತಿಯ ಒತ್ತಡ ಏರ್ಪಡುವುದಿಲ್ಲ. ಮೂತ್ರಕೋಶದ ಈ ಗುಣವನ್ನು ಸ್ಥಿತಿಸ್ಥಾಪಕತೆ ಎನ್ನುತ್ತಾರೆ. ಮೂತ್ರಕೋಶದ ಈ ಹಿಡಿದಿಟ್ಟುಕೊಳ್ಳುವ ಸ್ವಭಾವದಿಂದ ಮೂತ್ರಕೋಶದಲ್ಲಿ ಯಾವುದೇ ಅನನುಕೂಲತೆಯಿಲ್ಲದೆ ಮೂತ್ರ ಸಂಗ್ರಹವಾಗುತ್ತದೆ, ಒಂದು ವೇಳೆ ಹೀಗಿಲ್ಲದೆ ಇರುತ್ತಿದ್ದರೆ, ನಮ್ಮ ಜೀವಿತದ ಬಹುಕಾಲವನ್ನು ನಾವು ಶೌಚಾಲಯಗಳಲ್ಲಿ ಕಳೆಯಬೇಕಾಗಿ ಬರುತ್ತಿತ್ತೋ ಏನೊ.
ಸಾಮಾನ್ಯ ಮೂತ್ರವಿಸರ್ಜನೆ
ಸಾಮಾನ್ಯ ಮೂತ್ರವು ನೀರು, ಜೈವಿಕ ಮತ್ತು ಅಜೈವಿಕ ವಸ್ತುಗಳು, ಕೆಲವೊಂದು ಕೋಶೀಯ ಘಟಕಗಳು ಮತ್ತು ಜೈವಿಕ-ರಾಸಾಯನಿಕ ಕ್ರಿಯೆಗಳ ಅಂತಿಮ ಉತ್ಪನ್ನಗಳಾಗಿರುವ ಅನೇಕ ಅಂಶಗಳಿಂದ ಆಗಿದೆ. ಸಾಮಾನ್ಯ ಮೂತ್ರದ ನಸು ಹಳದಿ ಬಣ್ಣವು “ಯೂರೋಕ್ರೋಮ್’ ಗಳೆಂದು ಕರೆಯಲಾಗುವ ವರ್ಣದ್ರವ್ಯಗಳಿಂದ ಬರುತ್ತದೆ. ಕೆಲವೊಮ್ಮೆ ಮೂತ್ರದಲ್ಲಿ ಇರುವ ಬಣ್ಣಕಾರಕಗಳಿಂದಾಗಿ (ಸಹಜ ಅಥವಾ ಅಸಹಜ) ಮೂತ್ರವು ಭಿನ್ನ ಬಣ್ಣಗಳನ್ನು ತಳೆಯುತ್ತದೆ. ಉದಾಹರಣೆಗೆ, ಬೀಟ್ ರೂಟ್ ಸೇವನೆಯ ಬಳಿಕ, ಮೂತ್ರದ ಬಣ್ಣವು ಕೆಂಪು (ಹೆಚ್ಚು ಕಡಿಮೆ ರಕ್ತಬಣ್ಣ ) ಛಾಯೆಗೆ ತಿರುಗುತ್ತದೆ.
ಇದು ಸಹಜ. ಏಕೆಂದರೆ ಬೀಟ್ ರೂಟ್‌ನಲ್ಲಿರುವ ಬೀಟಾಸಯನಿನ್ ಎಂಬ ರಾಸಾಯನಿಕವು ಮೂತ್ರದ ಮೂಲಕ ವಿಸರ್ಜನೆಯಾಗುತ್ತದೆ. ಕಾಮಾಲೆಪೀಡಿತ ರೋಗಿಗಳಲ್ಲಿ ಪಿತ್ತಕೋಶದ ವರ್ಣದ್ರವ್ಯಗಳು (ಪಿತ್ತಜನಕಾಂಗದ ಪಿತ್ತರಸದಿಂದ ಪಡೆದ, ಸಾಮಾನ್ಯವಾಗಿ ಸಣ್ಣಕರುಳಿಗೆ ಹರಿದುಹೋಗುವ, ಆದರೆ ಕಾಮಾಲೆ ರೋಗಿಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರಕ್ತಪ್ರವಾಹದಲ್ಲಿ ಸೇರಿಹೋಗುವ ತನ್ಮೂಲಕ ಮೂತ್ರದಿಂದ ವಿಸರ್ಜನೆಯಾಗುವ) ಮೂತ್ರಕ್ಕೆ ಗಾಢ ಹಳದಿ ಬಣ್ಣವನ್ನು ನೀಡುತ್ತವೆ. ಸಾಮಾನ್ಯ ಮೂತ್ರವು ಸ್ವಲ್ಪ ವಾಸನೆಯನ್ನು ಹೊಂದಿರುತ್ತದೆ. ಇದಕ್ಕೆ ಮೂತ್ರದಲ್ಲಿರುವ ಬಾಷ್ಪಶೀಲ ಜೈವಿಕ ಪದಾರ್ಥಗಳು ಕಾರಣವಾಗಿವೆ.
ವಾತಾವರಣಕ್ಕೆ ಒಡ್ಡಿದಾಗ ಸಾಮಾನ್ಯ ಮೂತ್ರವು ಅಮೋನಿಯಾದ ವಾಸನೆ ಹೊರಡಿಸುತ್ತದೆ. ಏಕೆಂದರೆ ಮೂತ್ರದಲ್ಲಿನ ಒಂದು ಜೈವಿಕ ಪದಾರ್ಥವಾಗಿರುವ ಯೂರಿಯಾವು ಅಮೋನಿಯಾವಾಗಿ ಪರಿವರ್ತನೆಗೊಳ್ಳುತ್ತದೆ.
ಲಿಂಗ ಭೇದ
ಮೂತ್ರಪಿಂಡ ಮತ್ತು ಮೂತ್ರಾಂಗ ವ್ಯೂಹದ ಸಾಮಾನ್ಯ ರಚನೆ ಮತ್ತು ಕಾರ್ಯದ ಕುರಿತು ಇಷ್ಟೆಲ್ಲ ಹೇಳಿದ ಬಳಿಕ, ಎರಡೂ ಲಿಂಗಗಳಲ್ಲಿ ಕೆಳಮೂತ್ರಾಂಗವ್ಯೂಹದ (ಮೂತ್ರಕೋಶ ಮತ್ತು ಮೂತ್ರವಿಸರ್ಜನ ನಾಳ) ರಚನೆಯಲ್ಲಿನ ವ್ಯತ್ಯಾಸಗಳ ಕುರಿತು ತಿಳಿಯುವುದು ಸೂಕ್ತ.
ಸ್ತ್ರೀಯರಲ್ಲಿ, ಮೂತ್ರಕೋಶದ ಮುಂದುವರಿದ ಭಾಗವಾಗಿ ಚಿಕ್ಕದಾದ ನೇರ ಹೊರಹೋಗುವ ರಚನೆ ಇದ್ದು ಅದನ್ನು ಮೂತ್ರ ವಿಸರ್ಜನನಾಳ ಅನ್ನುತ್ತೇವೆ, ಇದು ಸ್ತ್ರೀ-ಜನನಾಂಗದ (ಗರ್ಭಾಶಯದ ತೆರಪು ತೆರೆದುಕೊಳ್ಳುವ ನಾಲೆ) ಮುಂಭಾಗದಲ್ಲಿದೆ.
ಪುರುಷರಲ್ಲಿ, ಮೂತ್ರ ವಿಸರ್ಜನನಾಳವು ಹೆಚ್ಚು ಉದ್ದವಾಗಿದ್ದು , ಹೆಚ್ಚಿನ ಭಾಗವು ಪುರುಷ-ಜನನಾಂಗದ ಒಳಗಡೆ ಇರುತ್ತದೆ.
ಪುರುಷರಲ್ಲಿ ಮೂತ್ರವಿಸರ್ಜನನಾಳದ ಆರಂಭಿಕ ಭಾಗವು ಪ್ರೊಸ್ಟೇಟ್ ಗ್ರಂಥಿಯಿಂದ ಸುತ್ತುವರಿದಿರುತ್ತದೆ, ಇದು ವೃಷಣಗಳು ಮತ್ತು ಇತರ ಬೆಂಬಲಕಾರಿ ಗ್ರಂಥಿಗಳೊಂದಿಗೆ, ಪುರುಷರ ಲೈಂಗಿಕ ಸ್ರವಿಕೆಯಾಗಿರುವ ವೀರ್ಯವನ್ನು ಉತ್ಪಾದಿಸುತ್ತದೆ.
ಮೂತ್ರ ಮತ್ತು ವೀರ್ಯವು ಒಂದೇ ಕಡೆಯಿಂದ ಹೊರಹೋಗುತ್ತದೆ ಎಂಬುದು ಈಗ ಸ್ಪಷ್ಟವಾಗಿದ್ದರೂ ಸಹ, ಸ್ವಾಭಾವಿಕವಾಗಿ ಮೂತ್ರವಿಸರ್ಜನೆ ಹಾಗೂ ವೀರ್ಯಸ್ಖಲನವು (ಲೈಂಗಿಕ ಕ್ರಿಯೆ ಅಥವಾ ಹಸ್ತಮೈಥುನದ ಸಂದರ್ಭದಲ್ಲಿ ವೀರ್ಯ ಹೊರಚೆಲ್ಲುವ ಪ್ರಕ್ರಿಯೆ) ಒಂದೇ ಸಮಯದಲ್ಲಿ ನಡೆಯುವುದು ಸಾಧ್ಯವಿಲ್ಲ. ಒಮ್ಮೆಗೆ ಒಂದು ಕಾರ್ಯ ಮಾತ್ರ ಸಂಭವಿಸಲು ಸಾಧ್ಯ.
ಕಾಯಿಲೆಗಳು ಹಾಗೂ ತಜ್ಞರು
ಇತರ ಯಾವುದೇ ಅಂಗರಚನಾ ವ್ಯವಸ್ಥೆಯಲ್ಲಿರುವಂತೆ, ಮೂತ್ರಾಂಗವ್ಯೂಹಕ್ಕೂ ಸಹ ಅಪಾಯಗಳು ಮತ್ತು ಕಾಯಿಲೆಗಳು ತಪ್ಪಿದ್ದಲ್ಲ. ಅರ್ಥಮಾಡಿಕೊಳ್ಳಲು ಅನುಕೂಲವಾಗುವ ದೃಷ್ಟಿಯಿಂದ ಮೂತ್ರಪಿಂಡಗಳು ಮತ್ತು ಮೂತ್ರಾಂಗವ್ಯೂಹಕ್ಕೆ ಸಂಬಂಧಿಸಿದ ವಿವಿಧ ಬಾಧೆಗಳನ್ನು “ವೈದ್ಯಕೀಯ’ “ಶಸ್ತ್ರ ವೈದ್ಯಕೀಯ’ ಎಂಬುದಾಗಿ ವರ್ಗೀಕರಿಸಲಾಗಿದೆ.
ವೈದ್ಯಕೀಯ ಕಾಯಿಲೆಗಳೆಂದರೆ ಔಷಧಿ ಮಾತ್ರದಿಂದಲೇ ಅಥವಾ ಕೆಲವೊಮ್ಮೆ ಡಯಾಲಿಸಿಸ್‌ನಿಂದಲೇ (ಮೂತ್ರಪಿಂಡಗಳು ಶೋಧಿಸುವಿಕೆಯ ಕಾರ್ಯಗಳನ್ನು ನಡೆಸಲು ಅಸಮರ್ಥವಾದಾಗ, ಈ ಕೆಲಸವನ್ನು ಯಂತ್ರದ ಮೂಲಕ ನಡೆಸುವ ತಂತ್ರಜ್ಞಾನ) ಚಿಕಿತ್ಸೆ ನೀಡಬಹುದಾದ ಕಾಯಿಲೆಗಳು. ಮೂತ್ರಪಿಂಡದ ವೈದ್ಯಕೀಯ ಕಾಯಿಲೆಗಳಿಗೆ ಚಿಕಿತ್ಸೆ ನೀಡುವ ತಜ್ಞರನ್ನು “ನೆಫ್ರಾಲಜಿಸ್ಟ್’ ಎಂಬುದಾಗಿ ಕರೆಯುತ್ತಾರೆ.
ಇದಕ್ಕೆ ವ್ಯತಿರಿಕ್ತವಾಗಿ ಮೂತ್ರಪಿಂಡ ಹಾಗೂ ಮೂತ್ರಾಂಗ ವ್ಯೂಹದ ಇನ್ನೂ ಹಲವಾರು ಕಾಯಿಲೆಗಳಿದ್ದು ಅವುಗಳಿಗೆ ಎಂಡೋಸ್ಕೋಪಿಕ್ ಚಿಕಿತ್ಸೆ, ಕೀಹೋಲ್ ಶಸ್ತ್ರಚಿಕಿತ್ಸೆ, ಔಷಧಿಗಳೊಂದಿಗೆ ಸಾಂಪ್ರದಾಯಿಕ ಶಸ್ತ್ರ ಚಿಕಿತ್ಸೆಯಂತಹ ಹಸ್ತಕ್ಷೇಪ ಸಹಿತ (ಇಂಟರ್ವೆನನಲ್) ಪ್ರಕ್ರಿಯೆಗಳ ಆವಶ್ಯಕತೆಯಿರುತ್ತದೆ. ಇವುಗಳಿಗೆ ಸೂಕ್ತ ಚಿಕಿತ್ಸೆ ನೀಡುವ ತಜ್ಞರುಗಳಿಗೆ “ಯೂರಾಲಜಿಸ್ಟ್’ ಗಳು ಎಂದು ಕರೆಯುತ್ತಾರೆ. ಮೂತ್ರಪಿಂಡ ಹಾಗೂ ಮೂತ್ರಾಂಗವ್ಯೂಹವನ್ನು ಬಾಧಿಸುವ ಕೆಲವು ವೈದ್ಯಕೀಯ ಮತ್ತು ಶಸ್ತ್ರ ವೈದ್ಯಕೀಯ ಕಾಯಿಲೆಗಳ ಕೆಲವು ಮುಖ್ಯ ಉದಾಹರಣೆಗಳು ಈ ಕೆಳಗಿನಂತಿವೆ:
ವೈದ್ಯಕೀಯ (ನೆಫ್ರಾಲಜಿ ಸಂಬಂಧಿತ)
– ಗ್ಲಾಮೆರುಲೊನೆಫ್ರೆ„ಟಿಸ್ (ಉರಿಯೂತ ಕಾಯಿಲೆ)
– ಪೈಯೆಲೊನೆಫ್ರೆ„ಟಿಸ್ (ಸೆಪ್ಟಿಕ್ ಸ್ಥಿತಿ)
– ಗ್ಲಾಮೆರುಲೊಸ್ಕೆರೊಸಿಸ್ (ದೀರ್ಘಕಾಲೀನ ಅಧಿಕ ರಕ್ತದೊತ್ತಡದ ಸಂಕೀರ್ಣತೆಗಳು)
– ಮಧುಮೇಹ ನ್ಯೂರೋಪತಿ
(ದೀರ್ಘಕಾಲೀನ ಮಧುಮೇಹದಲ್ಲಿ ಮೂತ್ರಪಿಂಡ ಕಾಯಿಲೆ)
– ಬ್ಲಾಕ್ ವಾಟರ್ ಫೀವರ್ (ಫಾಲ್ಸಿಪಾರಮ್ ಮಲೇರಿಯಾ ಉಲ್ಬಣಗೊಳ್ಳುವುದು)
ಶಸ್ತ್ರ ವೈದ್ಯಕೀಯ
(ಯೂರೋಲಾಜಿಕಲ್)
– ಜನ್ಮಜಾತ ವೈಕಲ್ಯಗಳು
– ಅಡಚಣೆಗಳು
– ಸೋಂಕುಗಳು
– ಗಡ್ಡೆಗಳು
– ಕಲ್ಲುಗಳು
– ಹಾನಿಗಳು
ಒಬ್ಬ ವ್ಯಕ್ತಿಯ ದೈನಂದಿನ ಮೂತ್ರವಿಸರ್ಜನಾ ಪರಿಪಾಠದಲ್ಲಿ ಬದಲಾವಣೆಗಳು (ಉದಾ. ಆಗಾಗ್ಗೆ ಮೂತ್ರವಿಸರ್ಜನೆ) 24 ತಾಸುಗಳಲ್ಲಿ ಮೂತ್ರವಿಸರ್ಜನೆಯ ಪ್ರಮಾಣದಲ್ಲಿ ಹೆಚ್ಚಳ ಅಥವಾ ಇಳಿಕೆ; ಮೂತ್ರವಿಸರ್ಜಿಸಲು ತಿಣುಕಾಡುವುದು; ಮೂತ್ರದ ಹರಿವು ತಗ್ಗಿರುವುದು, ಪೂರ್ತಿಯಾಗಿ ಮೂತ್ರ ಖಾಲಿಯಾಗದಿರುವುದು ಇತ್ಯಾದಿ); ಜ್ವರ, ಆಗೊಮ್ಮೆ ಈಗೊಮ್ಮೆ ಕಾಣಿಸಿಕೊಳ್ಳುವ ನೋವು; ಕೆಳ ಬೆನ್ನಿನ ಅಸ್ವಸ್ಥತೆ; ರಕ್ತದ ಛಾಯೆಯ ಮೂತ್ರ; ಮೂತ್ರವಿಸರ್ಜನೆಯ ಸಮಯದಲ್ಲಿ ತೀವ್ರ ನೋವು; ಮೂತ್ರದಲ್ಲಿ ಕಲ್ಲಿನ ವಿಸರ್ಜನೆ; ಅಸಹ್ಯ ವಾಸನೆಯಿರುವ ಮೂತ್ರವಿಸರ್ಜನೆ ಇವು ಮೂತ್ರಾಂಗವ್ಯೂಹದ ಕಾಯಿಲೆಗಳ ಕೆಲವು ಸಾಮಾನ್ಯ ರೋಗಲಕ್ಷಣಗಳು.
ಮೂತ್ರಪಿಂಡ ವೈಫಲ್ಯ ಮೂತ್ರಪಿಂಡ ಮತ್ತು ಮೂತ್ರಾಂಗ ವ್ಯೂಹದ ಒಂದು ಅಥವಾ ಹೆಚ್ಚು ಕಾಯಿಲೆಗಳು ಅಥವಾ
ಸಮಸ್ಯೆಗಳು ಮೂತ್ರಪಿಂಡಗಳು ತಮ್ಮ ಕಾರ್ಯಕ್ಷಮತೆಯನ್ನು ಕಳೆದುಕೊಳ್ಳುವಂತೆ ಮಾಡುತ್ತವೆ.
ಸಾಮಾನ್ಯ ಸಂದರ್ಭಗಳಲ್ಲಿ ಎರಡೂ ಮೂತ್ರಪಿಂಡಗಳ ಕಾರ್ಯ ಕ್ಷಮತೆಯನ್ನು 100% ಎಂಬುದಾಗಿ ಗಣನೆಗೆ ತೆಗೆದುಕೊಂಡಲ್ಲಿ, ಅದರ 80-90% ರಷ್ಟು ಕಾರ್ಯಕ್ಷಮತೆ ಕುಂಠಿತವಾದಲ್ಲಿ, ಮೂತ್ರಪಿಂಡ ವೈಫಲ್ಯದ ಸಮಸ್ಯೆ ಆರಂಭವಾಗಿದೆ ಎಂಬುದಾಗಿ ತಿಳಿದುಕೊಳ್ಳಬೇಕು. ಒಟ್ಟು ಕಾರ್ಯಕ್ಷಮತೆಯಲ್ಲಿ ಹೆಚ್ಚಿನದನ್ನು ಕಳೆದುಕೊಳ್ಳುವುದು ಮೂತ್ರಪಿಂಡ ವೈಫಲ್ಯಕ್ಕೆ ಕಾರಣವಾಗುತ್ತದೆ.
ಸಾಮಾನ್ಯವಾಗಿ “ಒಂದು ಮೂತ್ರಪಿಂಡದ ವೈಫಲ್ಯ’ ಎಂಬುದು ಇರುವುದಿಲ್ಲ. ಒಂದು ಮೂತ್ರಪಿಂಡವು ಕೆಟ್ಟುಹೋದಲ್ಲಿ ಅಥವಾ ಪೂರ್ತಿಯಾಗಿ ತನ್ನ ಕೆಲಸವನ್ನು ನಿಲ್ಲಿಸಿಬಿಟ್ಟಲ್ಲಿ, ಆವಾಗ ನಾವು ಬಲ ಅಥವಾ ಎಡ ಮೂತ್ರಪಿಂಡವು ಕೆಟ್ಟುಹೋಗಿದೆ ಎಂಬುದಾಗಿ ಹೇಳಬಹುದು. ಮನುಷ್ಯನಿಗೆ ಆರೋಗ್ಯಪೂರ್ಣ ಜೀವನ ನಡೆಸಲು ಒಂದು ಸಹಜ ಮೂತ್ರಪಿಂಡ ಸಾಕಾಗುತ್ತದೆ.
ಈ ಕಾರಣಕ್ಕಾಗಿಯೇ ಮೂತ್ರಪಿಂಡ ವೈಫಲ್ಯ ಹೊಂದಿರುವ ರೋಗಿಯ ರಕ್ತ ಸಂಬಂಧಿಕರು ತಮ್ಮ ಜೀವಿತಕಾಲದಲ್ಲಿ ಒಂದು ಮೂತ್ರಪಿಂಡವನ್ನು ರೋಗಿಗೆ ದಾನವಾಗಿ ನೀಡಬಹುದು. ಉಳಿದ ಎಲ್ಲ ಅಂಗಾಂಗಗಳನ್ನು ಮರಣದ ನಂತರವೆ ದಾನಮಾಡಬಹುದು.
ಮೂತ್ರಪಿಂಡ ವೈಫಲ್ಯವು ಎರಡು ಬಗೆಯದ್ದಾಗಿರುತ್ತದೆ, ಅದೆಂದರೆ ತಾತ್ಕಾಲಿಕ ಮತ್ತು ದೀರ್ಘಕಾಲೀನ. ಮೊದಲಿನದು ಸಾಮಾನ್ಯವಾಗಿ ತಾತ್ಕಾಲಿಕವಾಗಿದ್ದು ಈ ವಿಧದಲ್ಲಿ ಉಪಶಮನದ ಸಾಧ್ಯತೆ ಹೆಚ್ಚು ಇರುತ್ತದೆ. ವಿಷ ಸೇವನೆ, ಹಾವು ಕಡಿತ, ಹಾನಿ, ಫಾಲ್ಸಿಪಾರಮ್ ಮಲೇರಿಯಾದಿಂದಾಗುವ ಮೂತ್ರಪಿಂಡ ವೈಫಲ್ಯವು ಈ ಗುಂಪಿಗೆ ಸೇರುತ್ತದೆ.
ಮತ್ತೂಂದು ಕಡೆ, ಮಧುಮೇಹ ಮತ್ತು ರಕ್ತದೊತ್ತಡದಂತಹ ದೀರ್ಘಾವಧಿಯ ಕಾಯಿಲೆಗಳು ದೀರ್ಘಕಾಲೀನ ವೈಫಲ್ಯವನ್ನುಂಟುಮಾಡುತ್ತವೆ. ಈ ವಿಧದ ಮೂತ್ರಪಿಂಡ ವೈಫಲ್ಯದ ಕಾಯಿಲೆಯಲ್ಲಿ ದೀರ್ಘಾವಧಿಯ ಡಯಾಲಿಸಿಸ್ ಹಾಗೂ ಮೂತ್ರಪಿಂಡ ಕಸಿಯ ಆವಶ್ಯಕತೆ ಬೀಳುತ್ತದೆ. ವಿವಿಧ ಪರೀಕ್ಷೆಗಳು ಮೂತ್ರಪಿಂಡಗಳು ಮತ್ತು ಮೂತ್ರಾಂಗವ್ಯೂಹ ನಮ್ಮ ದೇಹದಲ್ಲಿ ಅತಿ ಆಳದಲ್ಲಿ ನೆಲೆಯಾಗಿರುವ ಸಂರಚನೆಗಳು. ಮಾಮೂಲಿ ರಕ್ತ ಮತ್ತು ಮೂತ್ರ ತಪಾಸಣೆಗಳಿಂದ ಅವುಗಳನ್ನು ಬಾಧಿಸುವ ಕಾಯಿಲೆಗಳನ್ನು ತಿಳಿಯಲು ನೆರವಾದರೂ, ಅವುಗಳ ಪೂರ್ಣ ಪರೀಕ್ಷೆಗಾಗಿ ವಿಶೇಷ ಪ್ರತಿಬಿಂಬ ಅಧ್ಯಯನಗಳಾದ ಎಕ್ರೆಟೊರ್ನಿ ಯೂರೊಗ್ರಾಮ್ಸ್, ಅಲ್ಟ್ರಾಸೌಂಡ್, ಸಿ.ಟಿ. ಸ್ಕ್ಯಾನ್, ಎಂ.ಆರ್. ಸ್ಕ್ಯಾನ್, ರೀನಲ್ ಆಂಜಿಯೋಗ್ರಾಂ ಮತ್ತು ರೇಡಿಯೋ ನ್ಯೂಕ್ಲೈಡ್ ಅಧ್ಯಯನಗಳು ಇತ್ಯಾದಿ ಆವಶ್ಯಕವಾಗಿರುತ್ತವೆ.
ಯಾವ ಸನ್ನಿವೇಶದಲ್ಲಿ ಯಾವ ಪರೀಕ್ಷೆಯು ಸೂಕ್ತವಾಗಿರುತ್ತದೆ ಎಂಬುದರ ಕುರಿತು ಒಬ್ಬ ತಜ್ಞರು ನುರಿತ ಮಾರ್ಗದರ್ಶನ ಮತ್ತು ಸಲಹೆ ನೀಡಬಲ್ಲರು.
ಮುಕ್ತಾಯ
ವೈದ್ಯಕೀಯ ಜ್ಞಾನದಲ್ಲಿ ಚೆನ್ನಾಗಿ ಅರ್ಥಮಾಡಿಕೊಳ್ಳಲು ಮತ್ತು ಚಿಕಿತ್ಸೆ ನೀಡಲು, ಮೂತ್ರಪಿಂಡ ಮತ್ತು ಮೂತ್ರಾಂಗವ್ಯೂಹದಷ್ಟು ಸಾಧ್ಯತೆಗಳು ಬೇರಾವ ಅಂಗ ವ್ಯವಸ್ಥೆಯಲ್ಲಿಯೂ ಇಲ್ಲ ಎನ್ನಬಹುದು. ಮೂತ್ರಾಂಗವ್ಯೂಹದ ಪ್ರತಿಯೊಂದು ಸೂಕ್ಷ್ಮ ಅಂಶಗಳ ಪ್ರತಿಬಿಂಬವನ್ನೂ ನಾವಿಂದು ಪಡೆಯಬಹುದು ಮತ್ತು ನೋಡಬಹುದು.
ತಾಂತ್ರಿಕ ಬೆಳವಣಿಗೆಗಳ ಕಾರಣದಿಂದಾಗಿ ಮೂತ್ರಾಂಗವ್ಯೂಹ ಸಂಬಂಧಿತ ತೊಂದರೆಗಳಿಗೆ, ಸಮಸ್ಯೆಗಳಿಗೆ ಕಡಿಮೆ ಛೇಧನಾವಶ್ಯಕತೆಯ ಕೀ ಹೋಲ್ ಮತ್ತು ಎಂಡೋಸ್ಕೋಪಿಕ್ ಶಸ್ತ್ರ ಚಿಕಿತ್ಸೆಗಳು ಸಾಧ್ಯವಾಗಿವೆ. ಆದರೆ ಒಂದಾನೊಂದು ಕಾಲದಲ್ಲಿ ಇವೇ ಅಸ್ವಸ್ಥತೆಗಳಿಗೆ ತೆರೆದ ಶಸ್ತ್ರಚಿಕಿತ್ಸೆಗಳು ಅನಿವಾರ್ಯವೆನಿಸಿದ್ದವು.
ಇವುಗಳಲ್ಲಿ ಅಂಗಾಂಗ ಕಸಿ, ಮೂತ್ರಪಿಂಡ ಕಸಿಗಳು ಬಹಳ ಯಶಸ್ವಿಯಾದವುಗಳು. ಒಟ್ಟಾಗಿ ಹೇಳುವುದಾದರೆ, ಮೂತ್ರ ಜನಕಾಂಗವ್ಯೂಹಕ್ಕೆ ಚಿಕಿತ್ಸೆ ನೀಡುವಂತಹ ಸುಸಜ್ಜಿತವಾದ ಮತ್ತು ಆಧುನಿಕ ಚಿಕಿತ್ಸಾ ವಿಧಾನಗಳು ಈಗ ಲಭ್ಯ ಇವೆ!
– ಡಾ| ಜಿ.ಜಿ. ಲಕ್ಷ್ಮಣ ಪ್ರಭು,
ಯುರಾಲಜಿ ವಿಭಾಗ,ಕೆ.ಎಂ.ಸಿ., ಅಂಬೇಡ್ಕರ್ ವೃತ್ತ,
ಅತ್ತಾವರ, ಮಂಗಳೂರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Snuff: ನಶ್ಯ ತಂದಿಟ್ಟ ಸಮಸ್ಯೆ
Heart Rate Control: ಹೃದಯ ಬಡಿತದ ನಿಯಂತ್ರಣದಲ್ಲಿ ಆಧುನಿಕ ಹೃದಯ ಲಯ ಸಾಧನಗಳ ಅಗತ್ಯ ಪಾತ್ರ
Cosmetic surgery:ಸೌಂದರ್ಯವರ್ಧಕ ಶಸ್ತ್ರಚಿಕಿತ್ಸೆ ಮತ್ತು ಭಾರತೀಯ ಜನಸಮುದಾಯದ ಮೇಲೆ ಪರಿಣಾಮ
Manipal ಪಾಯ್ಸನ್ ಇನ್‌ಫಾರ್ಮೇಶನ್ ಸೆಂಟರ್; ಸಮುದಾಯಕ್ಕೊಂದು ಉಪಕಾರಿ ಸೇವೆ
Bronchiolitis: ಮಕ್ಕಳಲ್ಲಿ ಬ್ರೊಂಕೊಲೈಟಿಸ್; ಹೆತ್ತವರು ತಿಳಿದಿರಬೇಕಾದ ಅಂಶಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.