ಗೀಳು ಮನೋರೋಗ ಅತಿಯಾದ ಶುಚಿತ್ವಕ್ಕಿಂತ ಮಿಗಿಲಾದ ಅನಾರೋಗ್ಯ
Team Udayavani, Dec 19, 2021, 7:30 AM IST
ವ್ಯಕ್ತಿಯೊಬ್ಬ ವಸ್ತುಗಳನ್ನು ಶುಚಿಯಾಗಿ, ಅಚ್ಚುಕಟ್ಟಾಗಿ ಇರಿಸಿಕೊಳ್ಳುತ್ತಿದ್ದರೆ ಜನರು ಅವನಿಗೆ ಗೀಳು ಮನೋರೋಗ (ಒಸಿಡಿ – ಒಬ್ಸೆಸಿವ್ ಕಂಪಲ್ಸಿವ್ ಡಿಸಾರ್ಡರ್) ಇದೆ ಎಂದು ಗೇಲಿ ಮಾಡುವುದನ್ನು ನೀವು ಕೇಳಿರಬಹುದು. ಒಸಿಡಿಯನ್ನು ಅನೇಕರು ತಪ್ಪಾಗಿ ಅರ್ಥ ಮಾಡಿಕೊಂಡಿರುತ್ತಾರೆ. ಶುಚಿಯಾಗಿ, ಅಚ್ಚುಕಟ್ಟಾಗಿ, ವ್ಯವಸ್ಥಿತವಾಗಿ ಇರುವುದಕ್ಕೆ ಆದ್ಯತೆ ನೀಡುವುದನ್ನೇ ಜನರು ಒಸಿಡಿ ಎಂದುಕೊಳ್ಳುತ್ತಾರೆ. ಆದರೆ ಇದು ನಿಜವಲ್ಲ. ಒಸಿಡಿಯ ಬಗ್ಗೆ ವ್ಯಾಪಕವಾಗಿ ಇರುವ ತಪ್ಪು ಕಲ್ಪನೆ ಒಸಿಡಿ ಹೊಂದಿರುವವರು “ಶುಚಿಯಾಗಿರುವುದನ್ನು ಪ್ರೀತಿಸುತ್ತಾರೆ’; ಆದರೆ ಅವರು ಶುಚಿಗೊಳಿಸಿಕೊಳ್ಳಬೇಕು ಎಂಬ ಗೀಳು ಮತ್ತು ಒತ್ತಡದಿಂದ ಹಾಗೆ ಮಾಡುತ್ತಾರೆ ಎಂಬುದೇ ವಿಪರ್ಯಾಸ ಮತ್ತು ನಿಜ.
ಹಾಗಾಗಿ ಒಸಿಡಿ ಎಂಬುದು ಒಂದು ದೀರ್ಘಕಾಲಿಕ ಮನೋರೋಗ. ಅದು ಆಲೋಚನೆಯ ವಿಧಾನವನ್ನು ಬಾಧಿಸುತ್ತದೆ ಮತ್ತು ಇದರಿಂದಾಗಿ ಈ ಬಾಧೆಗೊಳಗಾದ ಜನರಲ್ಲಿ ಋಣಾತ್ಮಕ ಆಲೋಚನೆಗಳು ಹುಟ್ಟಿ ಅವರು ಅಸಹಜವಾಗಿ ನಡೆದುಕೊಳ್ಳಲಾರಂಭಿಸುತ್ತಾರೆ. ಇದು ಎಲ್ಲ ವರ್ಗದ, ಯಾವುದೇ ವಯಸ್ಸಿನ ಜನರನ್ನೂ ಬಾಧಿಸಬಹುದು. ಒತ್ತಡಗಳು ಮತ್ತು ಗೀಳು ಇದರ ಲಕ್ಷಣಗಳು. “ಗೀಳು’ ಅಥವಾ “ಒಬ್ಸೆಶನ್’ ಎಂದರೆ ಗಮನಾರ್ಹ ಯಾತನೆಗೆ ಕಾರಣವಾಗುವ ಒತ್ತಾಯಪೂರ್ವಕ ಅತಾರ್ಕಿಕ ಆಲೋಚನೆಗಳು ಅಥವಾ ಒತ್ತಾಯಗಳು ಎಂದು ವ್ಯಾಖ್ಯಾನಿಸಬಹುದು. ರೋಗಿಯು ಈ ಯಾತನೆಯನ್ನು ಕಡಿಮೆ ಮಾಡಿಕೊಳ್ಳಲು ಆಲೋಚನೆಗಳನ್ನು ಬೇರೆಡೆಗೆ ಹರಿಸಲು ಅಥವಾ ಕ್ರಿಯೆಗಳನ್ನು ನಡೆಸಲು ಮುಂದಾಗುತ್ತಾನೆ. “ಒತ್ತಾಯಗಳು’ ಎಂದರೆ ರೋಗಿಯಲ್ಲಿ ಗೀಳಿನಿಂದ ಉಂಟಾಗುವ ಆತಂಕ/ಯಾತನೆಗೆ ಪ್ರತಿಕ್ರಿಯೆಯಾಗಿ ಅಥವಾ ಅದರಿಂದ ಅಸಹಜ ಸ್ಥಿತಿ ಉಂಟಾಗದಿರಲಿ ಎಂದು ಯಾವುದೋ ಕ್ರಿಯೆಯನ್ನು ನಡೆಸಲು ಉಂಟಾಗುವ ಒತ್ತಡ. ಈ ಒತ್ತಾಯಗಳು ಅತಾರ್ಕಿಕವಾಗಿರಬಹುದು ಅಥವಾ ಅತಿಯಾಗಿರಬಹುದು.
ಫ್ರಾಯ್ಡನಿಂದ 1895ರಲ್ಲಿ “ಒಬ್ಸೆಶನಲ್ ನ್ಯೂರೋಸಿಸ’ ಎಂದು ಕರೆಸಿಕೊಂಡ ಒಸಿಡಿಗೆ ಶತಮಾನಗಳ ಇತಿಹಾಸ ವಿದೆ. ಒಸಿಡಿಯು ವ್ಯಕ್ತಿಯ ಸಾಮಾಜಿಕ ಪ್ರೌಢತೆ ಮತ್ತು ಬೆಳವಣಿಗೆಗಳನ್ನು ಬಾಧಿಸುವುದರಿಂದ ಇದು ಆರ್ಥಿಕ ನಷ್ಟ ಮತ್ತು ಜೀವನ ಗುಣಮಟ್ಟ ಕುಗ್ಗಲು ಕಾರಣವಾಗುವ ಹತ್ತು ಅತ್ಯಂತ ದುಷ್ಪರಿಣಾಮಕಾರಿ ಅನಾರೋಗ್ಯಗಳಲ್ಲಿ ಒಂದು ಎಂದು ವಿಶ್ವ ಆರೋಗ್ಯ ಸಂಸ್ಥೆ ಪರಿಗಣಿಸಿದೆ.
ಮನುಷ್ಯನ ಮಿದುಳು ಒಂದು “ಸೂಪರ್ ಕಂಪ್ಯೂಟರ್’ ಇದ್ದಂತೆ. ಮನುಷ್ಯನ ಮಿದುಳಿನಲ್ಲಿ ವಿವಿಧ ಭಾಗಗಳಿದ್ದು, ಇವು ಮಾಹಿತಿ ಸಂಸ್ಕರಣೆ, ಸ್ವೀಕೃತವಾಗುವ ದತ್ತಾಂಶಗಳನ್ನು ವರ್ಗೀಕರಿಸುವುದು, ಸಂಸ್ಕರಿಸುವುದು, ಆದ್ಯತೆ ನೀಡುವುದು ಇತ್ಯಾದಿ ಮಾಡುವುದರ ಜತೆಗೆ ಆಲೋಚನೆಗಳನ್ನು ಭಾವನಾತ್ಮಕ ಪ್ರತಿಕ್ರಿಯೆಗಳಾಗಿ ಪರಿವರ್ತಿಸುತ್ತವೆ. ಮಿದುಳಿನ ವಿವಿಧ ಭಾಗಗಳ ನಡುವೆ ಇರುವ ಸಂವಹನ ವ್ಯವಸ್ಥೆಯಲ್ಲಿ ತೊಂದರೆ ಉಂಟಾದಾಗ ಮಾಹಿತಿಯು ಸರಿಯಾಗಿ ಸಂಸ್ಕರಣೆ ಆಗುವುದಿಲ್ಲ ಮತ್ತು ಇದರಿಂದ ಮಿದುಳು ತಪ್ಪುಗಳನ್ನು ಮಾಡಲಾರಂಭಿಸುತ್ತದೆ. ಒಸಿಡಿಯಲ್ಲಿ ಆಗುವುದು ಇದೇ. ನಾವು ಬಹುತೇಕರು ನಮ್ಮನ್ನು ಬಾಧಿಸುವ ಯಾವುದೋ ಒಂದು ತೊಂದರೆ ದಾಯಕ ಆಲೋಚನೆ ಅಥವಾ ನಂಬಿಕೆಯನ್ನು ಬದಿಗೆ ಸರಿಸಿಬಿಡುತ್ತೇವೆ. ಆದರೆ ಒಸಿಡಿಗೆ ಒಳಗಾಗಿರುವ ವ್ಯಕ್ತಿಗೆ ಈ ಗೀಳನ್ನು ನಿಯಂತ್ರಿಸಲು ಸಾಧ್ಯವಾಗುವುದಿಲ್ಲ.
ಲಕ್ಷಣಶಾಸ್ತ್ರದ ನಿಟ್ಟಿನಲ್ಲಿ ಹೇಳುವುದಾದರೆ, ಒಸಿಡಿಯು ವಿಸ್ತಾರವಾದ ರೀತಿಯ ಗೀಳುಗಳು ಮತ್ತು ಒತ್ತಾಯಗಳನ್ನು ಹೊಂದಿರುವ ವೈವಿಧ್ಯಮಯ ಮಾನಸಿಕ ಅನಾರೋಗ್ಯ ಸ್ಥಿತಿ. ಇದು ಶುಚಿತ್ವ ಮತ್ತು ತೊಳೆದುಕೊಳ್ಳುವುದು ಮಾತ್ರ ಅಲ್ಲ. ಗೀಳು ಮತ್ತು ಒತ್ತಾಯಗಳು ಸ್ಥೂಲವಾಗಿ ವಿವಿಧ ಸ್ವರೂಪ ಮತ್ತು ವಸ್ತುಗಳನ್ನು ಹೊಂದಿರಬಹುದು. ಸ್ವರೂಪಗಳನ್ನು ಆಧರಿಸಿ ಗೀಳುಗಳಲ್ಲಿ ಮುಖ್ಯವಾಗಿ ಐದು ವಿಧಗಳಿದ್ದು, ಸಂಶಯಗಳು, ಆಲೋಚನೆಯ ಗೀಳು, ಭಯ, ಪ್ರಚೋದನೆಗಳು ಮತ್ತು ಚಿತ್ರಗಳು ಆಗಿವೆ. ಒತ್ತಾಯಗಳಲ್ಲಿ, ಮುಖ್ಯವಾಗಿ ಎರಡು ವಿಧ- ಬಗ್ಗುವ ವಿಧ ಮತ್ತು ನಿಯಂತ್ರಕ ವಿಧ. ವಸ್ತುಗಳನ್ನು ಆಧರಿಸಿ ಹಲವಾರು ವಿಧಗಳಿದ್ದು, ಕೊಳಕು ಮತ್ತು ಅನೈರ್ಮಲ್ಯ, ಆಕ್ರಮಣ ಶೀಲತೆ, ಲೈಂಗಿಕ, ನಿರ್ಜೀವ, ಮಾರುವ್ಯಕ್ತಿತ್ವ, ಸಂಖ್ಯೆಗಳು, ಅನಾರೋಗ್ಯ, ಧರ್ಮನಿಂದನೆ, ಧಾರ್ಮಿಕ ಮತ್ತಿತರ ಇವುಗಳಲ್ಲಿ ಕೆಲವು. ಸ್ವರೂಪಗಳು ಆಂತರಿಕ ಅಂಶಗಳಿಂದ ಪ್ರಭಾವಿತವಾಗಿದ್ದರೆ, ವಸ್ತುಗಳು ಬಾಹ್ಯ ಅಂಶಗಳಿಂದ ಪ್ರಭಾವಿತವಾಗಿರುತ್ತವೆ.
ಮೇಲೆ ಹೇಳಲಾಗಿರುವುದನ್ನು ಕೆಲವು ಉದಾಹರಣೆಗಳ ಮೂಲಕ ವಿವರಿಸುವುದಾದರೆ,
ಕೆಲವು ಸಾಮಾನ್ಯ ಗೀಳುಗಳು ಎಂದರೆ:
– ಕೊಳಕಾಗುವುದು, ಕೊಳಚೆ, ಕೀಟಾಣುಗಳ ಭಯ
– ಯಾವುದೋ ಒಂದನ್ನು ಮರೆತುಬಿಡುವ ಭಯ (ಗ್ಯಾಸ್ ಸ್ಟವ್ ಬಂದ್ ಮಾಡುವುದು ಇತ್ಯಾದಿ)
– ಸ್ವಯಂ ಅಥವಾ ಇತರರನ್ನು ಗಾಯಗೊಳಿಸುವ ಭಯ
– ಆಕ್ರಣಮಣಶೀಲತೆಯ ಅಥವಾ ಲೈಂಗಿಕ ನಡವಳಿಕೆ ಬೇಡದ ಆಲೋಚನೆಗಳು
– ಪರಿಪೂರ್ಣವಾಗಿರುವ ಅಥವಾ ಅಚ್ಚುಕಟ್ಟಾಗಿರುವುದರ ಪ್ರಾಮುಖ್ಯದ ಬಗ್ಗೆ ಅತಿಯಾದ ನಂಬಿಕೆ
– ನೈತಿಕತೆ ಅಥವಾ ಧರ್ಮದ ಬಗ್ಗೆ ಅತಿಯಾದ ನಂಬಿಕೆ
– ಅತಿಯಾದ ಮೂಢನಂಬಿಕೆಗಳು (ಪಾದಚಾರಿ ಮಾರ್ಗದ ಬಿರುಕಿನ ಮೇಲೆ ಕಾಲಿರಿಸಿದರೆ ಮಗುವಿಗೆ ಹಾನಿಯಾಗುತ್ತದೆ ಎಂಬ ನಂಬಿಕೆಯಂಥವು)
ಹೀಗೆಯೇ ಅಂತರ್ಗತ ಗೀಳುಗಳನ್ನು ಆಧರಿಸಿ ಒತ್ತಾಯಗಳು ವೈವಿಧ್ಯಮಯವಾಗಿ ಪ್ರಕಟಗೊಳ್ಳಬಹುದು. ಉದಾಹರಣೆಗೆ, ಕೀಟಾಣುಗಳ ಭಯದ ಗೀಳು ಒತ್ತಾಯಪೂರ್ವಕವಾದ, ಪದೇಪದೆ ನಡೆಯುವ ಕೈ ತೊಳೆದು ಕೊಳ್ಳುವ ಕ್ರಿಯೆಯಾಗಿ ಪ್ರಕಟವಾಗಬಹುದು. ತಲೆಯಲ್ಲಿ ಒಂದು ಪದವನ್ನು ಹತ್ತು ಬಾರಿ ಪುನರಾವರ್ತಿಸುವಂತಹ ಮಾನಸಿಕ ನಡವಳಿಕೆ ಅಥವಾ ಮೇಜನ್ನು ಹತ್ತು ಬಾರಿ ಬಡಿಯುವಂತಹ ದೈಹಿಕ ನಡವಳಿಕೆಗಳನ್ನು ಒತ್ತಾಯಗಳು ಒಳಗೊಳ್ಳಬಹುದು. ಕೆಲವು ಸಾಮಾನ್ಯ ಒತ್ತಾಯಗಳು ಎಂದರೆ:
– ಎಣಿಕೆ ಮಾಡುವುದು, ಪದಗಳನ್ನು ಅಥವಾ ಬಡಿಯುವುದನ್ನು ಪುನರಾವರ್ತಿಸುವುದು
– ಸ್ಟವ್ ಸ್ವಿಚ್, ಬಾಗಿಲಿನ ಬೀಗ, ದೀಪದ ಸ್ವಿಚ್‌ಗಳನ್ನು ಪದೇಪದೆ ಪರಿಶೀಲಿಸುವುದು
– ಅತಿಯಾಗಿ ಶುಚಿಗೊಳಿಸುವುದು, ತೊಳೆಯುವುದು
– ಆರೋಗ್ಯ ಮತ್ತು ಕ್ಷೇಮವನ್ನು ಖಾತರಿಪಡಿಸಿಕೊಳ್ಳುವುದಕ್ಕಾಗಿ ಕುಟುಂಬಸ್ಥರು ಮತ್ತು ಗೆಳೆಯರನ್ನು ಪದೇಪದೆ ಸಂಪರ್ಕಿಸುವುದು
– ವಸ್ತುಗಳನ್ನು ನಿರ್ದಿಷ್ಟ ಮಾದರಿಯಲ್ಲಿ ಇರಿಸುವುದು ಅಥವಾ ಒಂದೇ ಮಾದರಿಯಲ್ಲಿ ವ್ಯವಸ್ಥೆಗೊಳಿಸುವುದು
– ನಿರ್ದಿಷ್ಟ ರೂಢಿ ಅಥವಾ ಕ್ರಿಯೆಯನ್ನು ಅನುಸರಿಸುವುದು
– ಹಳೆಯ ರದ್ದಿ ದಿನಪತ್ರಿಕೆಗಳು ಅಥವಾ ಹಾಲಿನ ಖಾಲಿ ತೊಟ್ಟೆಗಳಂತಹ ಎಸೆಯಬೇಕಾದ ವಸ್ತುಗಳನ್ನುಸಂಗ್ರಹಿಸಿ ಇರಿಸಿಕೊಳ್ಳುವುದು ಇದು ಒಸಿಡಿಯ ಸಂಪೂರ್ಣ ಯಾದಿ ಅಲ್ಲವೇ ಅಲ್ಲ; ಇಲ್ಲಿ ಹೇಳದಂತಹ ಅದೆಷ್ಟೋ ಬಗೆಯ ಒಸಿಡಿಗಳು ಇರಬಹುದು. ಇಲ್ಲಿ ಹೇಳಿರುವುದಕ್ಕಿಂತ ಬೇರೆಯಾದ ಯಾವುದಾದರೂ ಕಿರಿಕಿರಿದಾಯಕ ಅಥವಾ ಬೇಡದ ಗೀಳುಗಳು ಯಾರಿಗಾದರೂ ಇದ್ದಲ್ಲಿ ಅದು ಒಸಿಡಿ ಅಲ್ಲ ಎಂದರ್ಥವಲ್ಲ. ಅದರಿಂದ ಯಾರಿಗಾದರೂ ದೈನಿಕ ಕಾರ್ಯಚಟುವಟಿಕೆಗಳಿಗೆ ಗಮನಾರ್ಹ ತೊಂದರೆ ಉಂಟಾಗುತ್ತಿದ್ದಲ್ಲಿ, ದಿನದ ಬಹುಭಾಗ ವನ್ನು ಇದುವೇ ಆಕ್ರಮಿಸಿಕೊಳ್ಳುತ್ತಿದ್ದಲ್ಲಿ, ಕೆಲಸ, ಶಾಲಾ ಚಟುವಟಿಕೆಗಳನ್ನು ಬಾಧಿಸುತ್ತಿದ್ದಲ್ಲಿ ಅದು ಒಸಿಡಿಯ ವೈದ್ಯಕೀಯ ರೋಗಪತ್ತೆಯ ಭಾಗವಾಗಬಹುದಾಗಿದೆ. ಆದ್ದರಿಂದ ಅಂಥವರು ಸರಿಯಾದ ವೈದ್ಯಕೀಯ ರೋಗ ಪತ್ತೆಗಾಗಿ ಸರಿಯಾದ ವೈದ್ಯರನ್ನು ಕಾಣುವುದು ಸೂಕ್ತವಾಗಿದೆ.
-ಡಾ| ಕೃತಿಶ್ರೀ ಸೋಮಣ್ಣ
ಕನ್ಸಲ್ಟಂಟ್ ಸೈಕಿಯಾಟ್ರಿಸ್ಟ್,
ಕೆಎಂಸಿ ಆಸ್ಪತ್ರೆ, ಮಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.