ಆತಂಕ/ಗಾಬರಿ/ಭಯವೂ ಕಾಯಿಲೆ
Team Udayavani, Jun 10, 2018, 6:00 AM IST
ಹಿಂದಿನ ವಾರದಿಂದ- ಈ ತೊಂದರೆಗೆ ದೊರಕುವ ಚಿಕಿತ್ಸೆಗಳೆಂದರೆ, ಮಾತ್ರೆಗಳು, ಮನೋಚಿಕಿತ್ಸೆ (ಸೈಕೊಥೆರಪಿ). ಸೈಕೊಥೆರಪಿಯಲ್ಲಿ ಸಾಮಾಜಿಕ ಸನ್ನಿವೇಶಗಳಲ್ಲಿ ಮಾತಾಡುವುದು ಹೇಗೆ, ಈ ಸಂದರ್ಭಗಳನ್ನು ಎದುರಿಸುವುದು ಹೇಗೆ, ಸಾಮಾಜಿಕ ಕೌಶಲಗಳನ್ನು ಬೆಳೆಸಿಕೊಳ್ಳಲು ತರಬೇತಿ ನೀಡಲಾಗುವುದು, ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಲು ವಿಧಾನಗಳನ್ನು ತಿಳಿಹೇಳಲಾಗುವುದು, ರಿಲ್ಯಾಕ್ಸ… ಮಾಡುವ ವಿಧಾನಗಳನ್ನು ಕಲಿಸಿ ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಹೇಗೆ ಎನ್ನುವುದನ್ನು ಕಲಿಸಿಕೊಡಲಾಗುವುದು. ಚಿಕಿತ್ಸೆಯ ಅನಂತರ ಇದು ಮರುಕಳಿಸುವ ಸಾಧ್ಯತೆಗಳಿರುತ್ತವೆ, ಈ ಮರುಕಳಿಕೆಯನ್ನು ತಡೆಗಟ್ಟಲು ಕಾಯಿಲೆಯ ಲಕ್ಷಣಗಳಿಗೆ ತಕ್ಕಂತೆ ಸೂಕ್ತಮಾಹಿತಿ ನೀಡಲಾಗುವುದು.
3. ಯಾವಾಗಲೂ ಆತಂಕ/ ಟೆನ್Ïನ್/ಗಾಬರಿಯಿರುವ ಕಾಯಿಲೆ (ಜನರಲೈಸ್ಡ್ ಆಂಕ್ಸೆçಟಿ ಡಿಸೊರ್ಡರ್): ಈ ಕಾಯಿಲೆಯಲ್ಲಿ ವ್ಯಕ್ತಿಯು ಯಾವಾಗಲೂ, ಎಲ್ಲ ಸಂದರ್ಭಗಳಲ್ಲಿ ಆತಂಕ ಅಥವಾ ಗಾಬರಿಯಲ್ಲಿರುತ್ತಾನೆ. ಈ ಕಾಯಿಲೆಯಲ್ಲಿ ಕಂಡೂಬರುವ ಲಕ್ಷಣಗಳೆಂದರೆ, ಯಾವಾಗಲೂ ಆತಂಕವಿರುವುದು, ಗಂಟಲು ಒಣಗುವುದು, ಏದುಸಿರು ಬಿಡುವುದು, ಕೈ-ಕಾಲು ನಡುಗುತ್ತಿರುವುದು, ಎದೆ ಡಬ-ಡಬ ಎಂದು ಜೋರಾಗಿ ಹೊಡೆದುಕೊಳ್ಳುತ್ತಿರುವುದು, ತಲೆ ಭಾರ ಅನ್ನಿಸುವುದು, ಬೆವರು ಬಿಡುವುದು, ಹೊಟ್ಟೆಯಲ್ಲಿ ಸಂಕಟವಾಗುವುದು. ಈ ವ್ಯಕ್ತಿಯು ತನಗೆ ಅಥವಾ ತನ್ನ ಸಂಬಂಧಿಕರಿಗೆ ಏನಾದರೂ ಕೆಟ್ಟದಾಗಬಹುದೆಂದು ಗಾಬರಿಗೊಂಡಿರುತ್ತಾನೆ ಮತ್ತು ಜೀವನದ ಎಲ್ಲಾ ಸನ್ನಿವೇಶಗಳಲ್ಲಿ ತನಗೆ ಸೋಲಾಗುತ್ತದೆಯೇನೋ, ತನ್ನಿಂದ ಮಾಡಲಿಕ್ಕಾಗದೆ ಹೋದರೆ ಏನು ಮಾಡುವುದು ಎಂದೆಲ್ಲಾ ಯಾವಾಗಲೂ ಚಿಂತೆಯಲ್ಲಿಯೇ ಮುಳುಗಿರುತ್ತಾನೆ. ಉದಾ: ಬೆಳಗ್ಗೆ ಎದ್ದ ಕೂಡಲೇ ಆತನ ಚಿಂತೆ/ಗಾಬರಿ ಶುರುವಾಗಿಬಿಡುತ್ತದೆ. ಇವತ್ತು ನಾನು ಏನೇನೆಲ್ಲಾ ಮಾಡಬೇಕು ಅದೆಲ್ಲಾ ಸರಿಯಾಗದಿದ್ದರೆ ಹೇಗೆ, ಮಕ್ಕಳು ಶಾಲೆಗೆ ಹೋಗಬೇಕು ಅವರಿಗೆ ತೊಂದರೆಯಾದರೆ ಅಥವಾ ಅವರು ಸರಿಯಾಗಿ ಓದದಿದ್ದರೆ, ಆಫೀಸಿಗೆ ಹೋಗಲು ಬಸ್ಸು ಸಿಗದಿದ್ದರೆ ಅಥವಾ ತಡವಾದರೆ ಬಾಸ್ ಬಯ್ಯುತ್ತಾರೆ ಆಗ ನನ್ನ ಬಗ್ಗೆ ಕೆಟ್ಟ ಅಭಿಪ್ರಾಯ ಬರುವುದೇನೋ, ಅನಂತರ ನನಗೆ ಪ್ರಮೋಷನ್ ಸಿಗದೆ ಹೋದರೆ, ಆಫೀಸಿನಲ್ಲಿ ಎಷ್ಟೊಂದು ಜವಾಬ್ದಾರಿಯಿದೆ ಅದನ್ನು ನೆರವೇರಿಸುವುದು ಹೇಗೆ, ತಂದೆ-ತಾಯಿ ಮನೆಯಲ್ಲೇ ಇರುತ್ತಾರೆ ಅವರಿಗೇನಾದರೂ ಆದರೆ, ಸಾಯಂಕಾಲ ಮನೆಗೆ ಬಂದ ಕೂಡಲೇ ಮಕ್ಕಳು ಹೋಮ್ ವರ್ಕ್ ಮಾಡದಿದ್ದರೆ ಏನು ಮಾಡುವುದು, ಅವರ ಭವಿಷ್ಯ ಏನಾಗುತ್ತದೆ, ಇದೇ ರೀತಿ ಎಲ್ಲಾ ಸಣ್ಣ-ದೊಡ್ಡ ಸಂದರ್ಭಗಳನ್ನು ಕಲ್ಪಿಸಿಕೊಂಡು ಸದಾ ಆತಂಕದಲ್ಲಿರುವುದು ಈ ಕಾಯಿಲೆಯ ಲಕ್ಷಣ. ಆ ವ್ಯಕ್ತಿಯು ಮಲಗುವಾಗಲೂ ಚಿಂತೆ/ಗಾಬರಿಯಲ್ಲಿಯೇ ಮಲಗುತ್ತಾನೆ ಮತ್ತು ಯಾವುದೇ ಸನ್ನಿವೇಶದಲ್ಲಿ/ ರಜಾ ದಿನದಲ್ಲೂ ಕೂಡ ವಿಶ್ರಾಂತಿ ತೆಗೆದುಕೊಳ್ಳಲು/ ರಿಲ್ಯಾಕ್ಸ್ ಮಾಡಲು ಆಗುವುದೇ ಇಲ್ಲ. ತಮ್ಮ ಗಾಬರಿ ಕಡಿಮೆ ಮಾಡಿಕೊಳ್ಳಲು ಈ ವ್ಯಕ್ತಿಗಳು ಮದ್ಯಪಾನ ಅಥವಾ ನಿದ್ದೆ ಮಾತ್ರೆಗಳನ್ನು ತೆಗೆದುಕೊಳ್ಳಲಾರಂಭಿಸುತ್ತಾರೆ.
ಸಾಧಾರಣವಾಗಿ ಈ ತರಹದ ಕಾಯಿಲೆಯು ಹದಿಹರೆಯ ವಯಸ್ಸಿನಲ್ಲಿ ಅಥವಾ ಯೌವ್ವನದಲ್ಲಿ ಶುರುವಾಗುತ್ತದೆ ಅನಂತರ ಕ್ರಮೇಣವಾಗಿ ಹೆಚ್ಚಾಗುತ್ತಾ ಹೋಗುತ್ತದೆ. ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡದಿದ್ದರೆ ಇದರಿಂದಾಗಿ ವ್ಯಕ್ತಿ ಮಾನಸಿಕವಾಗಿ ನರಳುವುದಲ್ಲದೇ, ದೈಹಿಕ ಕಾಯಿಲೆಗಳಾದ ರಕ್ತದೊತ್ತಡ, ಮಧುಮೇಹ, ಹೃದಯ ಸಂಬಂಧಿ ಕಾಯಿಲೆಗಳಿಗೆ ತುತ್ತಾಗುತ್ತಾನೆ.
ಜನರು/ಕುಟುಂಬದವರು/ಸ್ನೇಹಿತರು ಈತನನ್ನು, ಯಾವಾಗಲೂ ಟೆನ್Ïನ್ ಮಾಡಿಕೊಳ್ಳುವ ವ್ಯಕ್ತಿಯೆಂದು ಗುರುತಿಸುತ್ತಾರೆ. ಆದರೆ, ಕಾಯಿಲೆ ಶುರುವಾದಾಗಲೇ ಮಾನಸಿಕ ರೋಗ ಚಿಕಿತ್ಸಾ ವಿಭಾಗಕ್ಕೆ ಕರೆದುಕೊಂಡು ಹೋಗುವುದು ಉತ್ತಮ. ಮೇಲೆ ನಮೂದಿಸಿದ ಹಾಗೆ ಈ ತೊಂದರೆಗೆ ದೊರಕುವ ಚಿಕಿತ್ಸೆಗಳೆಂದರೆ, ಮಾತ್ರೆಗಳು, ಮನೋಚಿಕಿತ್ಸೆ (ಸೈಕೊಥೆರಪಿ). ಈ ಚಿಕಿತ್ಸೆಗೆ ಹಲವು ದಿನಗಳು ಬೇಕಾಗುವುದರಿಂದ ಒಳರೋಗಿಗಳಾಗಿ ಚಿಕಿತ್ಸೆ ಪಡೆಯುವುದು ಉತ್ತಮ, ಇದು ಸಾಧ್ಯವಾಗದಿದ್ದರೆ, ಹೊರರೋಗಿಗಳಾಗಿ ವಾರಕ್ಕೊಮ್ಮೆಯೋ-ಎರಡು ಬಾರಿಯೋ ಬಂದು ಚಿಕಿತ್ಸೆ ಮುಂದುವರಿಸಬಹುದು.
4. ಕೆಲವು ಸನ್ನಿವೇಶಗಳಲ್ಲಿ ಮಾತ್ರ ಆಗುವ ಆತಂಕ (ಸ್ಪೆಸಿಫಿಕ್ ಫೋಬಿಯಾ): ಈ ಕಾಯಿಲೆಯಲ್ಲಿ ವ್ಯಕ್ತಿಯು ಕೆಲವು ಸಂದರ್ಭಗಳಲ್ಲಿ ಮಾತ್ರ ಆತಂಕ ಅಥವಾ ಗಾಬರಿಯಾಗುತ್ತಾನೆ. ಉದಾ: ಕೆಲವು ಪ್ರಾಣಿಗಳಿಂದ, ರಕ್ತ ಕಂಡಾಗ, ಇಂಜೆಕ್ಷನ್ ಕಂಡಾಗ, ಕತ್ತಲೆಯಿಂದ, ಎತ್ತರದ ಸ್ಥಳದಲ್ಲಿರುವುದರಿಂದ, ಹಾರಾಟದಿಂದ, ಎಲ್ಲಾ ಕಡೆಗಳಿಂದ ಮುಚ್ಚಿದ ಸ್ಥಳಗಳಿಂದ, ಸಾರ್ವಜನಿಕ ಶೌಚಾಲಯಗಳಿಂದ, ತನಗೆ ಏಡ್ಸ್ ತರಹದ ಕಾಯಿಲೆ ಬರುತ್ತದೆಯೆಂದು ಈ ತರಹ ವಿವಿಧ ಸನ್ನಿವೇಶಗಳಲ್ಲಿ ಬಂದಾಗ ಮಾತ್ರ ವ್ಯಕ್ತಿಗೆ ಅತೀ ಆತಂಕ ಶುರುವಾಗುತ್ತದೆ, ಮೇಲೆ ನಮೂದಿಸಿದಂತೆ, ಕೈ-ಕಾಲು ನಡುಗುವುದು, ಗಂಟಲು ಒಣಗುವುದು, ಎದೆ ಡಬ-ಡಬ ಎಂದು ಜೋರಾಗಿ ಹೊಡೆದುಕೊಳ್ಳುವುದು, ಇನ್ನೇನೋ ತನಗೆ ಆಗಿಬಿಡುತ್ತದೆಯೆಂದು ಬೆಚ್ಚಿಬೀಳುತ್ತಾನೆ ಕೆಲವೊಮ್ಮೆ ಪ್ರಜ್ಞೆ ತಪ್ಪಿ ಬೀಳಲೂಬಹುದು. ಈ ಅಹಿತಕರ ಅನುಭವಗಳನ್ನು ತಪ್ಪಿಸಲು ವ್ಯಕ್ತಿಯು, ಗಾಬರಿಯನ್ನುಂಟುಮಾಡುವ ಸನ್ನಿವೇಶಗಳಿಂದ ದೂರವಿರುತ್ತಾನೆ. ಉದಾ: ಎತ್ತರದ ಸ್ಥಳದ ತೊಂದರೆಯಿರುವವನು ಮೊದಲನೇ ಮಹಡಿಗೆ ಹೋಗುವುದಿಲ್ಲ, ಹಾರಾಟದಿಂದ ಭಯವಾಗುವವರು ವಿಮಾನ ಪ್ರಯಾಣ ಮಾಡುವುದಿಲ್ಲ, ನಾಯಿಯನ್ನು ಕಂಡಕೂಡಲೇ ಬೆಚ್ಚಿಬೀಳುವವರು ನಾಯಿಯಿಂದ ಆದಷ್ಟು ದೂರವಿದ್ದು ನಾಯಿಗಳಿರದಂತಹ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಾರೆ.
ಇವುಗಳೆಲ್ಲಾ ಏನೋ ಅಹಿತಕರ ಘಟನೆಯಿಂದಾಗಿ ಶುರುವಾಗಬಹುದು ಅಥವಾ ಹಾಗೆಯೇ ಶುರುವಾಗಬಹುದು. ಇವುಗಳು ಕೆಲವೊಮ್ಮೆ ವ್ಯಕ್ತಿಯ ಜೀವನದಲ್ಲಿ ತೊಂದರೆಯನ್ನುಂಟುಮಾಡುತ್ತವೆ ಉದಾ: ಎತ್ತರದ ಸ್ಥಳಗಳಿಂದ ಭಯವಿರುವ ವ್ಯಕ್ತಿಗೆ ಕೆಲಸ ಮೂರನೇ ಮಹಡಿಯ ಆಫೀಸಿನಲ್ಲಿದ್ದರೇ ಆತ ಗಾಬರಿಯನ್ನು ತಪ್ಪಿಸಲು ಕೆಲಸ ಬಿಡಲೂ ಮುಂದಾಗುತ್ತಾನೆ. ಈ ತರಹದ ತೊಂದರೆಗಳಿಗೆ ಮುಖ್ಯವಾಗಿರುವ ಚಿಕಿತ್ಸೆಯೆಂದರೆ ಮನೋಚಿಕಿತ್ಸೆ (ಸೈಕೊಥೆರಪಿ). ಇದರಲ್ಲಿ ಗಾಬರಿಯನ್ನುಂಟು ಸನ್ನಿವೇಶದ ಬಗ್ಗೆ ವಿವರವಾಗಿ ತಿಳಿದುಕೊಂಡು, ಸನ್ನಿವೇಶದ ಯಾವ ಅಂಶದಿಂದ ಭಯವಾಗುತ್ತಿದೆ ಎನ್ನುವುದನ್ನು ಅರಿತುಕೊಳ್ಳಲಾಗುತ್ತದೆ. ಅನಂತರ ಕ್ರಮೇಣವಾಗಿ ಆ ಸನ್ನಿವೇಶಕ್ಕೆ ಸ್ವಲ್ಪ-ಸ್ವಲ್ಪ ಒಳಪಡಿಸಿ ಗಾಬರಿಯನ್ನು ಅಳತೆ ಮಾಡಲಾಗುತ್ತದೆ. ಈ ತರಹದ ಗಾಬರಿಯಾದಾಗ ರಿಲ್ಯಾಕ್ಸ… ಮಾಡಲು ವಿಧಾನಗಳನ್ನು ಕಲಿಸಿಕೊಡಲಾಗುತ್ತದೆ. ಅನಂತರ ಈ ಗಾಬರಿಯ ಸನ್ನಿವೇಶಗಳಲ್ಲಿ ಬರುವ ಆಲೋಚನೆಗಳನ್ನು ಹತೋಟಿಯಲ್ಲಿಟ್ಟುಕೊಳ್ಳಲು, ಬದಲಾಯಿಸಲು ಮತ್ತು ಅವುಗಳ ಸತ್ಯಾಸತ್ಯತೆಯನ್ನು ವಿಮರ್ಶಿಸಲು ತರಬೇತಿ ನೀಡಲಾಗುತ್ತದೆ.
ಗಾಬರಿ/ಭಯ ಎನ್ನುವುದು ಎಲ್ಲ ಜೀವಿಗಳ ಅವಿಭಾಜ್ಯ ಅಂಗ. ಇದು ಅಗತ್ಯಕಿಂತ ಹೆಚ್ಚಾದಾಗ ಕಾಯಿಲೆ ಸ್ವರೂಪ ಪಡೆಯುತ್ತದೆ ಹಾಗೂ ನಾನಾ ರೀತಿಯ ಲಕ್ಷಣಗಳು ಕಂಡುಬರುತ್ತವೆ. ಅನಂತರ ಸೂಕ್ತ ಚಿಕಿತ್ಸೆ ಪಡೆಯದಿದ್ದರೆ, ಕಾಯಿಲೆ ಹೆಚ್ಚಾಗುತ್ತಾ ಹೋಗಿ ವ್ಯಕ್ತಿಯ ಮಾನಸಿಕ ಹಾಗೂ ದೈಹಿಕ ಸ್ಥಿತಿ ಹದಗೆಡುತ್ತದೆ. ವ್ಯಕ್ತಿಯಲ್ಲದೇ, ಕುಟುಂಬದವರು ಕೂಡ ಇದರ ಬಗ್ಗೆ ಅರ್ಥಮಾಡಿಕೊಂಡು ಸೂಕ್ತ ಚಿಕಿತ್ಸೆ ನೀಡುವುದು ಅತ್ಯವಶ್ಯಕ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Snuff: ನಶ್ಯ ತಂದಿಟ್ಟ ಸಮಸ್ಯೆ
Heart Rate Control: ಹೃದಯ ಬಡಿತದ ನಿಯಂತ್ರಣದಲ್ಲಿ ಆಧುನಿಕ ಹೃದಯ ಲಯ ಸಾಧನಗಳ ಅಗತ್ಯ ಪಾತ್ರ
Cosmetic surgery:ಸೌಂದರ್ಯವರ್ಧಕ ಶಸ್ತ್ರಚಿಕಿತ್ಸೆ ಮತ್ತು ಭಾರತೀಯ ಜನಸಮುದಾಯದ ಮೇಲೆ ಪರಿಣಾಮ
Manipal ಪಾಯ್ಸನ್ ಇನ್‌ಫಾರ್ಮೇಶನ್ ಸೆಂಟರ್; ಸಮುದಾಯಕ್ಕೊಂದು ಉಪಕಾರಿ ಸೇವೆ
Bronchiolitis: ಮಕ್ಕಳಲ್ಲಿ ಬ್ರೊಂಕೊಲೈಟಿಸ್; ಹೆತ್ತವರು ತಿಳಿದಿರಬೇಕಾದ ಅಂಶಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.