ಅಟೆನ್ಶನ್ ಡೆಫಿಸಿಟ್ ಹೈಪರ್ ಆ್ಯಕ್ಟಿವಿಟಿ ಡಿಸಾರ್ಡರ್ -ಎಡಿಎಚ್‌ಡಿ
Team Udayavani, Oct 27, 2019, 4:03 AM IST
ಇದರ ಮುಖ್ಯ ಲಕ್ಷಣಗಳು
– ಗಮನ ಕಾಯ್ದುಕೊಳ್ಳಲು ಆಗದಿರುವುದು.
– ಆವಶ್ಯಕತೆಗಿಂತ ಹೆಚ್ಚಾಗಿ ಚಟುವಟಿಕೆಯಿರುವುದು/ಚುರುಕಾಗಿರುವುದು.
– ಆಲೋಚನೆ ಮಾಡದೆ/ ತತ್‌ಕ್ಷಣ ಕಾರ್ಯೋನ್ಮುಖವಾಗುವುದು.
ಈ ಮಕ್ಕಳು ಆಲೋಚನೆ ಮಾಡದೆ ಮುನ್ನುಗ್ಗುವುದರಿಂದ ಮತ್ತು ಆವಶ್ಯಕತೆಗಿಂತ ಹೆಚ್ಚಾಗಿ ಚಟುವಟಿಕೆಯಲ್ಲಿರುವುದರಿಂದ ಶಾಲೆಯ ವಾತಾವರಣಕ್ಕೆ ತಕ್ಕಂತಿರಲು ಕಷ್ಟವಾಗುತ್ತದೆ. ಇತರ ಮಕ್ಕಳ ಜತೆಗೆ ಹೊಂದಿಕೊಳ್ಳಲೂ ಕಷ್ಟವಾಗುತ್ತದೆ. ಈ ಸಮಸ್ಯೆಗೆ ಅಗತ್ಯ ಸಹಾಯ ಪಡೆಯದೆ ಹೋದರೆ, ಮಕ್ಕಳು ಬೆಳೆಯುತ್ತಾ ಹೋದಂತೆ ಈ ಕಷ್ಟಗಳು ಮುಂದುವರಿಯುತ್ತವೆ ಮತ್ತು ಹೆಚ್ಚಾಗುತ್ತವೆ.
ಕೆಲವು ಮಕ್ಕಳಿಗೆ ಕೇವಲ ಗಮನ ಕೊಡುವ ಮತ್ತು ಗಮನ ಕಾಯ್ದುಕೊಂಡು ಹೋಗುವ ಸಮಸ್ಯೆಯಿರುತ್ತದೆ, ಹೈಪರ್ ಆ್ಯಕ್ಟಿವಿಟಿ ಅಥವಾ ಇಂಪಲ್ಸಿವಿಟಿ ಇರುವುದಿಲ್ಲ; ಇವರಿಗೆ ಅಟೆನ್ಶನ್ ಡೆಫಿಸಿಟ್ ಡಿಸಾರ್ಡರ್ ಇದೆಯೆಂದು ಹೇಳಬಹುದು.
ನೆನಪಿಡಿ: ಎಡಿಎಚ್‌ಡಿ ಎಂದರೆ ಬುದ್ಧಿಮಾಂದ್ಯತೆಯಲ್ಲ; ಇದು ಸಾಮಾನ್ಯ ಬುದ್ಧಿಶಕ್ತಿ ಇರುವವರಲ್ಲಿಯೂ ಮತ್ತು ಬುದ್ಧಿಮಾಂದ್ಯತೆಯಿರುವ ಮಕ್ಕಳಲ್ಲೂ ಹಾಗೂ ವಯಸ್ಕರಲ್ಲೂ ಕಂಡುಬರಬಹುದು.
1. ಗಮನ ಕಾಯ್ದುಕೊಳ್ಳದಾಗದಿರುವುದು
ಒಂದು ಚಟುವಟಿಕೆಯಲ್ಲಿ ಸ್ವಲ್ಪ ಸಮಯದವರೆಗೆ ಮಾತ್ರ ಗಮನ ಕೊಡಲು ಸಾಧ್ಯವಾಗುವುದು. ಬೆಳೆಯುತ್ತಿರುವ ಮಕ್ಕಳಲ್ಲಿ ಇದರಿಂದ ತುಂಬಾ ತೊಂದರೆಗಳಾಗುತ್ತವೆ: ಶೈಕ್ಷಣಿಕ, ಪ್ರಾಯೋಗಿಕ ಮತ್ತು ದೈನಂದಿನ ಜೀವನದ ವಿವಿಧ ಕೌಶಲಗಳನ್ನು ಕಲಿಯುವುದರಲ್ಲಿ ತುಂಬಾ ಕಷ್ಟವಾಗುತ್ತದೆಯಲ್ಲದೆ ಅವರಿಗೆ ಕಡಿಮೆ ಅಂಕಗಳು ಬರುತ್ತವೆ ಅಥವಾ ಫೈಲ್ ಆಗುತ್ತಾರೆ ಅಥವಾ ಓದುವುದರಲ್ಲಿ ತೊಂದರೆ ಅನುಭವಿಸುತ್ತಾರೆ. ಉದಾಹರಣೆಗೆ: ಹೋಮ್ ವರ್ಕ್ ಅರ್ಧ ಮಾಡಿ ಬಿಟ್ಟುಬಿಡುವುದು, ಎಲ್ಲ ಕೆಲಸಗಳನ್ನು ಅರ್ಧಕ್ಕೆ ಬಿಟ್ಟು ಹೋಗುವುದು, ಗಮನ ತತ್‌ಕ್ಷಣ ಬೇರೆ ಕಡೆ ಹೋಗುವುದು ಇತ್ಯಾದಿ.
2. ಆವಶ್ಯಕತೆಗಿಂತ ಹೆಚ್ಚಾಗಿ ಚಟುವಟಿಕೆಯಿರುವುದು/ಚುರುಕಾಗಿರುವುದು
ಈ ಸಮಸ್ಯೆಯಿರುವ ಮಕ್ಕಳ ಪೋಷಕರು ಸಾಮಾನ್ಯವಾಗಿ ಹೇಳುವುದೇನೆಂದರೆ: ಒಂದು ಕಡೆ ಕುಳಿತುಕೊಳ್ಳುವುದಿಲ್ಲ, ಯಾವಾಗಲೂ ಆಚೀಚೆ ಓಡಾಡುತ್ತಿರುತ್ತಾನೆ; ಅತಿಯಾಗಿ ಗಡಿಬಿಡಿ ಮಾಡುತ್ತಿರುತ್ತಾನೆ; ಕ್ಲಾಸ್ ರೂಮಿನಲ್ಲಿಯೂ ಒಂದು ಕಡೆ ಕುಳಿತುಕೊಳ್ಳದೆ ತಿರುಗುತ್ತಿರುತ್ತಾನೆ, ಇತರ ಮಕ್ಕಳ ಚಟುವಟಿಕೆಗಳಲ್ಲಿ ಅಡ್ಡಿಯಾಗುತ್ತಾನೆ; ಕೂತಲ್ಲಿಯೂ ಸುಮ್ಮನೆ ಕೂತುಕೊಳ್ಳದೆ ಅಲುಗಾಡುತ್ತಿರುತ್ತಾನೆ, ಕೈ-ಕಾಲು ಅಲುಗಾಡಿಸುತ್ತಾನೆ; ಮೇಜಿನ ಮೇಲಿನ ಸಾಮಾನುಗಳನ್ನೆಲ್ಲ ಒಂದಾದ ಅನಂತರ ಒಂದಾಗಿ ತೆಗೆದುಕೊಳ್ಳುತ್ತಾನೆ; ಶಾಲೆಯಲ್ಲಿ ತುಂಬಾ ತುಂಟತನ ಮಾಡುತ್ತಾನೆ ಇತ್ಯಾದಿ.
3. ಆಲೋಚನೆ ಮಾಡದೆ ತತ್‌ಕ್ಷಣ ಮುನ್ನುಗ್ಗುವುದು, ಕಾರ್ಯೋನ್ಮುಖವಾಗುವುದು
ದುಡುಕುತನವೆಂದರೆ ಮುಂದಾಲೋಚನೆ ಮಾಡದೆ ಮುನ್ನುಗ್ಗಿ ಏನೋ ಮಾಡಿಬಿಡುವುದು. ಉದಾಹರಣೆಗೆ: ಈ ಮಕ್ಕಳು ಯಾವುದೇ ಕೆಲಸದಲ್ಲಿ ತಮ್ಮ ಸರದಿ ಬರುವವರೆಗೆ ಕಾಯುವುದೆಂದರೆ ಅವರಿಗೆ ತುಂಬಾ ಕಷ್ಟವೆನಿಸುತ್ತದೆ; ಮನಸ್ಸಿಗೆ ಬಂದುದನ್ನು/ಮಾಡಬೇಕೆನಿಸಿದ್ದನ್ನು ಯಾವುದೇ ಆಲೋಚನೆ ಮಾಡದೆ ತತ್‌ಕ್ಷಣವೇ ಹೇಳಿಬಿಡುವುದು/ಮಾಡಿಬಿಡುವುದು ಇತ್ಯಾದಿ.
ಇದರಿಂದಾಗುವ ಸಾಮಾಜಿಕ ಸಮಸ್ಯೆಗಳೇನು?
ಇದರಿಂದ ಬಳಲುತ್ತಿರುವ ಮಕ್ಕಳು ಇತರ ಮಕ್ಕಳಿಂದ ತಿರಸ್ಕೃತರಾಗುತ್ತಾರೆ. ಯಾಕೆಂದರೆ ಈ ಮಕ್ಕಳು ಇತರ ಮಕ್ಕಳ ವಿವಿಧ ಆಟಗಳಲ್ಲಿ/ಚಟುವಟಿಕೆಗಳಲ್ಲಿ ಅಡ್ಡಿಯುಂಟು ಮಾಡಿರುತ್ತಾರೆ ಅಥವಾ ಇತರರ ಆಟದ ಮತ್ತು ಇತರ ಸಾಮಾನುಗಳನ್ನು ಈ ಮಕ್ಕಳು ಹಾಳು ಮಾಡಿರುತ್ತಾರೆ. ಸಹಜವಾಗಿ ಎಲ್ಲರೂ ತಿಳಿದುಕೊಳ್ಳುವುದೇನೆಂದರೆ: ಈ ತರಹದ ಮಕ್ಕಳು ತುಂಬಾ ತುಂಟಾಟ ಮಾಡುವಂತಹ ಮಕ್ಕಳೆಂದುಕೊಳ್ಳುವುದು ಅಥವಾ ಪೋಷಕರು ತುಂಬಾ ಸಲಿಗೆ ಕೊಟ್ಟದ್ದಾರೆ ಎಂದುಕೊಳ್ಳುವುದು ಅಥವಾ ಪೋಷಕರು ಮಕ್ಕಳಿಗೆ ಎಲ್ಲಿ ಹೇಗೆ ನಡೆದುಕೊಳ್ಳಬೇಕೆಂದು ಕಲಿಸಿಕೊಡಲಿಲ್ಲ ಎಂದುಕೊಳ್ಳುವುದು ಅಥವಾ ಪೋಷಕರು ಇದೆಲ್ಲ ತಮ್ಮದೇ ತಪ್ಪೆಂದು ಚಿಂತಿಸುವುದು ಇತ್ಯಾದಿ.
ಇದರ ಇನ್ನೊಂದು ಆಯಾಮವೆಂದರೆ, ಇದರಿಂದ ಬಳಲುತ್ತಿರುವ ಮಗುವಿಗೆ ತನ್ನ ನಡವಳಿಕೆ ಬಗ್ಗೆ ಅರಿವಿರದಿರುವುದು. ಆ ಮಗುವಿಗೂ ಕೂಡ ಇತರ ಮಕ್ಕಳ ಹಾಗೆ ಬೇರೆಯವರ ಜತೆಗೆ ಬೆರೆಯಬೇಕು, ಮಾತನಾಡಬೇಕು, ಆಟವಾಡಬೇಕೆಂಬ ಆಸೆಯಿರುತ್ತದೆ. ಆದರೆ ತನ್ನ ನಡವಳಿಕೆಯಿಂದ ಇತರರಿಗೆ ತೊಂದರೆಯುಂಟಾಗುತ್ತಿದೆ ಎನ್ನುವುದರ ಬಗ್ಗೆ ಮಗುವಿಗೆ ಅರ್ಥವಾಗುವುದಿಲ್ಲ/ಮನವರಿಕೆಯಾಗುವುದಿಲ್ಲ.
ಇದನ್ನು ಪತ್ತೆಹಚ್ಚುವುದು ಹೇಗೆ?
ಇದನ್ನು ಪತ್ತೆಹಚ್ಚಲು ಯಾವುದೇ ನಿಖರವಾದ ರಕ್ತಪರೀಕ್ಷೆಗಳು ಅಥವಾ ಸ್ಕ್ಯಾನ್‌ಗಳಿಲ್ಲ. ಲಭ್ಯವಿರುವ ಮಾಹಿತಿಯ ಮೂಲಕ ಇದನ್ನು ಪತ್ತೆಹಚ್ಚಬಹುದು. ಸಾಮಾನ್ಯವಾಗಿ ಕಂಡುಬರುವ ಸಮಸ್ಯೆಯ ಸೂಚಕಗಳೆಂದರೆ:
– ನೀಡಿದ ಆದೇಶ/ಸೂಚನೆಗಳನ್ನು ಪಾಲಿಸಲು ಕಷ್ಟವಾಗುವುದು ಅಥವಾ ನೀಡಿದ ಕೆಲಸವನ್ನು ಪೂರ್ತಿಗೊಳಿಸದಿರುವುದು
– ಒಂದೇ ಚಟುವಟಿಕೆಯಲ್ಲಿ ತೊಡಗಿರಲು ಸಾಧ್ಯವಾಗದಿರುವುದು. ತುಂಬಾ ಹೊತ್ತು ಕೂತುಕೊಂಡು ಮಾಡುವ ಚಟುವಟಿಕೆಗಳನ್ನು ಇಷ್ಟಪಡದಿರುವುದು
– ಹಂತ ಹಂತವಾಗಿ ಮಾಡುವ ಚಟುವಟಿಕೆಗಳನ್ನು ಮಾಡಲಾಗದಿರುವುದು ಅಥವಾ ಅರ್ಧಕ್ಕೆ ಬಿಡುವುದು
– ಸುಲಭವಾಗಿ ಗಮನ ಬೇರೆ ಕಡೆ ಹೋಗಿಬಿಡುವುದು ಅಥವಾ ಮರೆತುಬಿಡುವುದು
– ಯಾರಾದರೂ ಏನಾದರೂ ಹೇಳುತ್ತಿರುವಾಗ ಹೆಚ್ಚಾಗಿ ಪೂರ್ತಿ ಕೇಳದಿರುವುದು
– ಕುಳಿತಲ್ಲಿಯೂ ಸುಮ್ಮನೆ ಕೂರಲಾಗದೆ ಅಲುಗಾಡುತ್ತಿರುವುದು, ಚಡಪಡಿಸುತ್ತಿರುವುದು
– ಮಾತನಾಡುವುದನ್ನು ನಿಲ್ಲಿಸಲು ಕಷ್ಟವಾಗುವುದು ಮತ್ತು ಇತರರು ಮಾತನಾಡುತ್ತಿರುವಾಗ ಪೂರ್ತಿ ಕೇಳದೆ ಅಡ್ಡ ಬಾಯಿ ಹಾಕುವುದು
– ಅನಾವಶ್ಯಕವಾಗಿ ಆಚೀಚೆ ಓಡುತ್ತಿರುವುದು
– ಪ್ರಶ್ನೆ ಮುಗಿಯುವವರೆಗೆ ಕಾಯದೇ ಉತ್ತರ ಹೇಳುವುದು
– ತನ್ನ ಸರದಿ ಬರುವವರೆಗೆ ಕಾಯಲು ಕಷ್ಟವಾಗುವುದು
– ಪದೇಪದೇ ತನ್ನ ಸಾಮಾನುಗಳನ್ನು ಎಲ್ಲೋ ಮರೆತುಬಿಡುವುದು
ಇದರಿಂದ ಎಷ್ಟು ಜನ ಬಳಲುತ್ತಿದ್ದಾರೆ?
ಇದರ ನಿಖರವಾದ ಅಂಕಿಅಂಶಗಳು ಲಭ್ಯವಿಲ್ಲ. ಆದರೆ, ಪ್ರಪಂಚಾದ್ಯಂತ ಶೇ. 5ರಿಂದ 7ರಷ್ಟು ಮಕ್ಕಳು ಮತ್ತು ಶೇ. 4ರಿಂದ 6ರಷ್ಟು ವಯಸ್ಕರು ಇದರಿಂದ ಬಳಲುತ್ತಿ¨ªಾರೆ. ಇದು ಯಾವುದೇ ಜಾತಿ, ಧರ್ಮ, ಅಂತಸ್ತಿಗೆ ಸೀಮಿತವಾಗದೆ ಎಲ್ಲರಲ್ಲೂ ಕಂಡುಬರುವಂತಹ ಸಮಸ್ಯೆಯಾಗಿದೆ. ಇದೇನು ಇತ್ತೀಚಿನ ದಿನಗಳಲ್ಲಿ ಕಂಡುಬರುತ್ತಿರುವ ಸಮಸ್ಯೆಯಲ್ಲ. ಇತಿಹಾಸದ ಪುಟಗಳನ್ನು ತಿರುವಿದಾಗ ಹಲವು ಖ್ಯಾತರು ಇದರಿಂದ ಬಳಲುತ್ತಿರುವುದು ಕಂಡುಬರುತ್ತದೆ: ಒಲಿಂಪಿಕ್ ಬಂಗಾರ ಪದಕ ವಿಜೇತ ಈಜುಗಾರ ಮೈಕಲ್ ಪೆಲ್ಪ್, ಅಲ್ಬರ್ಟ್ ಐನ್‌ಸ್ಟಿàನ್, ಬಾಸ್ಕೆಟ್ ಬಾಲ್ ಆಟಗಾರ ಮೈಕಲ್ ಜೊರ್ಡಾನ್, ಬಿಲ್ ಗೇಟ್ಸ್ ಇತ್ಯಾದಿ.
ಇದು ಬರಲು ಕಾರಣಗಳೇನು?
ಇದು ಬರಲು ನಿಖರವಾಗಿ ಇದೇ ಕಾರಣವೆಂದು ಹೇಳುವುದು ಕಷ್ಟ. ಆದರೆ ಇದನ್ನು ಆನುವಂಶಿಕ ಮತ್ತು ವಾತಾವರಣದ ಸಮ್ಮಿಶ್ರಣದ ಫಲ ಎಂದು ಅರ್ಥಮಾಡಿಕೊಳ್ಳಲಾಗಿದೆ.
– ಆನುವಂಶಿಕತೆ: ಸಂಬಂಧಿಯೋರ್ವ ಇದರಿಂದ ಬಳಲುತ್ತಿದ್ದರೆ ಮಗುವಿಗೆ ಬರುವ ಸಾಧ್ಯತೆ ಹೆಚ್ಚಿರುತ್ತದೆ. ಆದರೆ ನಿಖರವಾಗಿ ಬಂದೇ ಬರುತ್ತದೆ ಅಥವಾ ಇದೇ ಜೀನಿನಿಂದ ಬರುತ್ತದೆ ಎಂದು ಹೇಳುವುದು ಕಷ್ಟ.
– ಮಿದುಳಿನ ಗಾಯ: ಇನ್‌ಫೆಕ್ಷನ್‌ನಿಂದ ಅಥವಾ ಗಾಯದಿಂದ ಮಿದುಳಿಗೆ ಗಾಯವಾದ ಮಕ್ಕಳಲ್ಲಿ ಇದು ಕಂಡುಬಂದಿದೆ. ಹಾಗಾಗಿ ಮಿದುಳಿನ ಗಾಯ ಒಂದು ಕಾರಣವಾಗಿ ಹೊರಹೊಮ್ಮಿದೆ.
– ವಾತಾವರಣದ ಅಂಶಗಳು: ವಾತಾವರಣದಲ್ಲಿನ ವಿಷಗಳಾದ ಲೆಡ್ ಮತ್ತಿತರ ರಸಾಯನಗಳಿಗೆ ಮಕ್ಕಳು ತುತ್ತಾಗುವುದು.
– ಪೋಷಕರಲ್ಲಿನ ಕಾರಣಗಳು: ಗರ್ಭಿಣಿಯಾಗಿರುವಾಗ ತಾಯಿ ಮದ್ಯಪಾನ ಮಾಡುವುದು, ಸಿಗರೇಟ್ ಸೇದುವುದು, ಮಾದಕ ವಸ್ತುಗಳನ್ನು ಉಪಯೋಗಿಸುವುದು
-ಹೆರಿಗೆ ಸಮಯದಲ್ಲಿ ತೊಂದರಗಳಾಗುವುದು: ಇದರಿಂದ ಮಗುವಿನ ಮಿದುಳಿಗೆ ಆಮ್ಲಜನಕ/ರಕ್ತಸಂಚಾರದ ಕೊರತೆಯಾಗಿ ಮಿದುಳಿಗೆ ಹಾನಿಯಾಗುವುದು.
ಹಾಗಾದರೆ ಪೋಷಕರೇನು ಮಾಡಬೇಕು?
ಪೋಷಕರ ಮುಖ್ಯ ಜವಾಬ್ದಾರಿಯೆಂದರೆ ಈ ಲಕ್ಷಣಗಳ ಬಗ್ಗೆ ತಿಳಿದುಕೊಳ್ಳುವುದು ಮತ್ತು ಈ ತರಹದ ಲಕ್ಷಣಗಳು ತಮ್ಮ ಮಗುವಿನಲ್ಲಿ ಇವೆಯೇ ಎನ್ನುವುದನ್ನು ಗುರುತಿಸುವುದು. ಅನಂತರ ಪರಿಶೀಲನೆಗಾಗಿ ಮನೋರೋಗ ಚಿಕಿತ್ಸಕರ ಬಳಿಗೆ ಕರೆದುಕೊಂಡು ಹೋಗುವುದು. ಪರಿಶೀಲನೆಯ ಅನಂತರ ಪೋಷಕರಿಗಾಗಿ ಹಲವು ಮಾಹಿತಿಗಳನ್ನು ನೀಡಲಾಗುತ್ತದೆ.
ಇದರ ಚಿಕಿತ್ಸೆ ಹೇಗೆ?
ಚಿಕಿತ್ಸೆ ಪ್ರಾರಂಭಿಸುವ ಮುನ್ನ ಇದು ಇತರ ಕಾಯಿಲೆಗಳ ಭಾಗವಾಗಿಲ್ಲ ಎನ್ನುವುದನ್ನು ಮೊದಲು ಮನೋವೈದ್ಯರು ದೃಢೀಕರಿಸುತ್ತಾರೆ. ಅನಂತರ ಮಾತ್ರೆ ಮತ್ತು ಇತರ ಚಿಕಿತ್ಸೆಗಳ ಬಗ್ಗೆ ತಿಳಿಸುತ್ತಾರೆ.
ಮಾತ್ರೆಗಳ ಪಾತ್ರ
ಇದರಿಂದ ಬಳಲುತ್ತಿರುವ ಹೆಚ್ಚಿನವರಿಗೆ ಮಾತ್ರೆ ತುಂಬಾ ಉಪಯೋಗಕರವಾಗಿದೆ. ಮಾತ್ರೆಗಳ ಬಳಕೆಯಿಂದ ಅವರ ಗಮನ ಕೊಡುವ ಸಾಮರ್ಥ್ಯ ಹೆಚ್ಚಾಗುತ್ತದೆ, ಆಚೀಚೆ ಅನವಶ್ಯಕವಾಗಿ ಓಡಾಡುವುದು ಕಡಿಮೆಯಾಗುತ್ತದೆ ಮತ್ತು ದುಡುಕುತನ ಕಡಿಮೆಯಾಗುತ್ತದೆ. ಈ ಬೌದ್ಧಿಕ ಆಯಾಮಗಳಲ್ಲಿ ಸುಧಾರಣೆಯಾದಾಗ ಓದಿನಲ್ಲಿ, ಕಲಿಕೆಯಲ್ಲಿ, ಕೆಲಸದಲ್ಲಿ ಮಹತ್ತರ ಬದಲಾವಣೆಯನ್ನು ನೋಡಬಹುದು. ವಿವಿಧ ಬಗೆಯ ಮಾತ್ರೆಗಳನ್ನು ಲಕ್ಷಣಗಳಿಗೆ ಅನುಗುಣವಾಗಿ ಉಪಯೋಗಿಸಲಾಗುತ್ತದೆ.
1. ಸ್ಟಿಮ್ಯುಲೆಂಟ್ಸ್: ಈ ಮಾತ್ರೆಗಳು ಮಿದುಳಿನಲ್ಲಿನ ಡೊಪಮಿನ್ ಎನ್ನುವ ನರವಾಹಕವನ್ನು ಹೆಚ್ಚಿಸುತ್ತವೆ. ಇದರಿಂದಾಗಿ ಗಮನ ಕೊಡುವ ಮತ್ತು ಆಲೋಚಿಸುವ ಸಾಮರ್ಥ್ಯದಲ್ಲಿ ಸುಧಾರಣೆ ಕಂಡುಬರುತ್ತದೆ. ಉದಾ: ಮಿಥೈಲ್ ಫೆನಿಡೇಟ್.
2. ನಾನ್ ಸ್ಟಿಮ್ಯುಲಂಟ್ಸ್: ಈ ಮಾತ್ರೆಗಳು ಸ್ಟಿಮ್ಯುಲಂಟ್ಸ್ ಮಾತ್ರೆಗಳಿಗಿಂತ ಸ್ವಲ್ಪ ನಿಧಾನವಾಗಿ ಕಾರ್ಯನಿರ್ವಹಿಸಲು ಪ್ರಾರಂಭಿಸುತ್ತವೆ. ಆದರೆ ಇವುಗಳೂ ಕೂಡ ಗಮನಕೊಡುವ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ ಮತ್ತು ದುಡುಕುತನವನ್ನು ಕಡಿಮೆ ಮಾಡುತ್ತವೆ. ಹೆಚ್ಚಾಗಿ ಸ್ಟಿಮ್ಯುಲಂಟ್ಸ್ ಮಾತ್ರೆಗಳಿಂದ ಹೆಚ್ಚಿನ ಬದಲಾವಣೆ ಕಂಡುಬಾರದಿದ್ದಾಗ ಅಥವಾ ಸ್ವಲ್ಪ ಬದಲಾವಣೆ ಮಾತ್ರ ಕಂಡುಬಂದಾಗ ಅಥವಾ ಹೆಚ್ಚಿನ ಸುಧಾರಣೆಗಾಗಿ ನಾನ್ ಸ್ಟಿಮ್ಯುಲಂಟ್ಸ್ ಮಾತ್ರೆಗಳನ್ನು ಉಪಯೋಗಿಸಲಾಗುತ್ತದೆ. ಉದಾ: ಆಟೊಮೊಕ್ಸಿಟಿನ್, ಕ್ಲೊನಿಡಿನ್.
ಈ ಕೆಳಗಿನ ಲಕ್ಷಣಗಳನ್ನು ಗಮನಿಸಿ:
ಒಂದೇ ಚಟುವಟಿಕೆಯಲ್ಲಿ ಅಗತ್ಯವಿರುವಷ್ಟು ಗಮನ ಕೊಟ್ಟು ಕುಳಿತುಕೊಳ್ಳಲು ಆಗದಿರುವುದು, ಅಂದರೆ ಗಮನ ಕಾಯ್ದುಕೊಳ್ಳಲು ಆಗದಿರುವುದು.
ಒಂದು ಕಡೆ ಕುಳಿತುಕೊಳ್ಳದಾಗದೆ ಅನವಶ್ಯಕವಾಗಿ ಆಚೀಚೆ ಓಡಾಡುತ್ತಿರುವುದು.
ಪದೇ ಪದೆ ಇತರರ ಚಟುವಟಿಕೆಗಳಲ್ಲಿ ಅಡ್ಡಿಪಡಿಸುವುದು.
ಈ ರೀತಿಯ ಲಕ್ಷಣಗಳು ಮುಂದುವರಿಯುತ್ತಿದ್ದು ದೈನಂದಿನ ಜೀವನದ ವಿವಿಧ ಆಯಾಮಗಳಲ್ಲಿ ಅಡ್ಡಿಯುಂಟುಮಾಡುತ್ತಿದ್ದರೆ, ಆ ಮಗುವು/ವ್ಯಕ್ತಿಯು ಅಟೆನ್ಶನ್ ಡೆಫಿಸಿಟ್ ಹೈಪರ್ ಆ್ಯಕ್ಟಿವಿಟಿ ಡಿಸಾರ್ಡರ್ (ಎಡಿಎಚ್‌ಡಿ) ಕಾಯಿಲೆಯಿಂದ ಬಳಲುತ್ತಿರಬಹುದೆಂದು ಊಹಿಸಬಹುದು.
3. ಇತರ: ಖನ್ನತೆಗಾಗಿ ಮತ್ತಿತರ ಮಾನಸಿಕ ಸಮಸ್ಯೆಗಳಿಗಾಗಿ ಬಳಸುವ ಮಾತ್ರೆಗಳು ಕೂಡ ಹಲವರಲ್ಲಿ ಉತ್ತಮ ಬದಲಾವಣೆಯನ್ನು ತಂದಿವೆ.
ಆದರೆ ಈ ವ್ಯಕ್ತಿಗೆ ಇದೇ ಮಾತ್ರೆ ಸೂಕ್ತ ಎಂದು ಹೇಳುವುದು ಕಷ್ಟ. ಕೆಲವೊಮ್ಮೆ ಮಾತ್ರೆಗಳನ್ನು ಹಲವು ಬಾರಿ ಬದಲಾಯಿಸಿ ಅಥವಾ ಒಂದಕ್ಕಿಂತ ಹೆಚ್ಚಿನ ಮಾತ್ರೆಗಳನ್ನು ನೀಡಿ ಸುಧಾರಣೆಯನ್ನು ಕಂಡುಕೊಳ್ಳಬಹುದು. ಇದರ ಬಗ್ಗೆ ವೈದ್ಯರು ಪೋಷಕರೊಂದಿಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುತ್ತಾರೆ.
ಇತರ ಚಿಕಿತ್ಸೆಗಳು
ಮಾತ್ರೆಗಳ ಜತೆಗೆ ಇತರ ಹಲವಾರು ಬದಲಾವಣೆಗಳು ಚಿಕಿತ್ಸೆಯ ಭಾಗಗಳಾಗಿವೆ. ಈ ಬದಲಾವಣೆಗಳು ಮನೆಯಿಂದ ಹಿಡಿದು ಶಾಲೆಯಲ್ಲಿ ಮತ್ತು ಕೆಲಸದ ಸ್ಥಳಗಳಲ್ಲಿ ಮಾಡಿಕೊಳ್ಳಬೇಕಾದಂಥವುಗಳು.
ಮಕ್ಕಳು ಮತ್ತು ಹದಿಹರೆಯದವರಲ್ಲಿ: ಮಕ್ಕಳು ಮತ್ತು ಹದಿಹರೆಯದವರನ್ನು ನಿಭಾಯಿಸುವುದರಲ್ಲಿ ಪೋಷಕರ ಮತ್ತು ಶಾಲಾ ಶಿಕ್ಷಕರ ಪಾತ್ರ ಅತ್ಯಂತ ಮಹತ್ವ¨ªಾಗಿದೆ. ಇವರು ಮಕ್ಕಳ ದಿನಚರಿಯು ನಿಯಮಿತವಾಗಿ ನಡೆಯುವಂತೆ, ದೈನಂದಿನ ಚಟುವಟಿಕೆಗಳನ್ನು ಕ್ರಮಬದ್ಧವಾಗಿ ಆಯೋಜಿಸಲು ಹಾಗೂ ಪೂರ್ಣಗೊಳಿಸಲು ಸಹಾಯ ಮಾಡಬೇಕು. ಚಟುವಟಿಕೆ ಪೂರ್ತಿಯಾದಾಗ ಪ್ರಶಂಸಿಸಬೇಕು ಮತ್ತು ಇನ್ನೂ ಸುಧಾರಣೆಗೆ ಸಲಹೆ ನೀಡಬೇಕು. ಇದಕ್ಕಾಗಿ ಪೋಷಕರಿಗೆ ಮತ್ತು ಶಿಕ್ಷಕರಿಗೆ ಮನೋವೈದ್ಯರು ಮತ್ತು ಸೈಕಾಲಾಜಿಸ್ಟರು ವಿವಿಧ ಸಲಹೆಗಳನ್ನು ಮತ್ತು ತರಬೇತಿಯನ್ನು ನೀಡುತ್ತಾರೆ. ಉದಾ: ಪೋಷಣೆಯ ಕೌಶಲದ ತರಬೇತಿ, ಒತ್ತಡ ನಿರ್ವಹಣೆಯ ತರಬೇತಿ, ಸಹಕಾರಿ ಗುಂಪುಗಳು ಇತ್ಯಾದಿ.
ವಯಸ್ಕರಲ್ಲಿ: ಇವರಲ್ಲಿ ಬದಲಾವಣೆಗಾಗಿ ಮನೋವೈದ್ಯರ, ಸೈಕಾಲಾಜಿಸ್ಟರ ಪಾತ್ರ ಮಹತ್ವ¨ªಾಗಿದೆ. ಚಟುವಟಿಕೆಗಳನ್ನು ಯಶಸ್ವಿಯಾಗಿ ನಿರ್ವಹಿಸಲು ವಿವಿಧ ವಿಧಾನಗಳನ್ನು ವ್ಯಕ್ತಿಗೆ ಕಲಿಸಿಕೊಡಲಾಗುತ್ತದೆ.
ಆಹಾರದಲ್ಲಿ ಬದಲಾವಣೆ: ವಿರಳವಾಗಿ ಕೆಲವು ಮಕ್ಕಳಲ್ಲಿ, ಆಹಾರ ಪದ್ಧತಿಯಲ್ಲಿನ ಬದಲಾವಣೆಗಳು ಅಲ್ಪ ಪ್ರಮಾಣದಲ್ಲಿ ಸಹಕಾರಿಯಾಗಿವೆ.
ಇದು ಒಂದು ಶಾಶ್ವತವಾದ ಕಾಯಿಲೆಯೇ?
ಈ ಪ್ರಶ್ನೆ ಎಲ್ಲ ಪೋಷಕರಲ್ಲಿ ಮೂಡುವುದು ಸಹಜ. ಭವಿಷ್ಯದಲ್ಲಿ ನನ್ನ ಪುತ್ರ/ಪುತ್ರಿ ಹೀಗೆಯೇ ಉಳಿದುಬಿಡುತ್ತಾರಾ? ಅಧ್ಯಯನಗಳ ಪ್ರಕಾರ ಶೇ.70ರಷ್ಟು ಮಕ್ಕಳು ವಯಸ್ಕರಾದಾಗ ಚಿಕಿತ್ಸೆಯಿಂದಾಗಿ ಈ ಸಮಸ್ಯೆ ಇರುವುದಿಲ್ಲ ಅಥವಾ ತುಂಬಾ ಕಡಿಮೆಯಾಗುತ್ತದೆ. ಉಳಿದ ಮಕ್ಕಳು ಇದನ್ನು ನಿರ್ವಹಿಸುವ ವಿವಿಧ ಕೌಶಲಗಳನ್ನು ಬೆಳೆಸಿಕೊಳ್ಳುತ್ತಾರೆ. ನೆನಪಿಡಿ: ಚಿಕಿತ್ಸೆಯು ಕೇವಲ ಇದರ ಲಕ್ಷಣಗಳನ್ನು ಮಾತ್ರ ಗುಣಪಡಿಸುತ್ತದೆಯೇ ವಿನಾ ಇತರ ಕಲಿಕಾ ತೊಂದರೆಗಳು ಅಥವಾ ಬುದ್ಧಿಮಾಂದ್ಯತೆಯನ್ನಲ್ಲ.
ಅಟೆನ್ಶನ್ ಡೆಫಿಸಿಟ್ ಹೈಪರ್ ಆ್ಯಕ್ಟಿವಿಟಿ ಡಿಸಾರ್ಡರ್ (ಎಡಿಎಚ್‌ಡಿ) ಎನ್ನುವುದು ಸಾಮಾನ್ಯವಾಗಿ ಕಂಡುಬರುವ ಸಮಸ್ಯೆಯಾಗಿದೆ. ಇದನ್ನು ಮಕ್ಕಳು ಚಿಕ್ಕವರಿರುವಾಗಲೇ ಪತ್ತೆಹಚ್ಚಿದರೆ, ಪರಿಣಾಮಕಾರಿಯಾಗಿ ಇದನ್ನು ನಿರ್ವಹಿಸಿ ಮಗುವಿನ ಜೀವನವನ್ನು ಸುಗಮಗೊಳಿಸಬಹುದು. ಮಾತ್ರೆಗಳು ಮತ್ತಿತರ ಚಿಕಿತ್ಸೆಗಳು ಉತ್ತಮ ಸುಧಾರಣೆ ನೀಡಬಲ್ಲವು ಎಂದು ಸಂಶೋಧನೆಗಳಿಂದ ತಿಳಿದುಬಂದಿದೆ. ಇದರ ನಿರ್ವಹಣೆಯಲ್ಲಿ ಮುಖ್ಯ ಪಾತ್ರವಹಿಸುವವರು ಪೋಷಕರು ಮತ್ತು ಶಿಕ್ಷಕರು. ಮನೋವೈದ್ಯರ ಮತ್ತು ಸೈಕಾಲಾಜಿಸ್ಟರ ಮುತುವರ್ಜಿಯಲ್ಲಿ ಇದರ ನಿರ್ವಹಣೆಯ ಬಗ್ಗೆ ಪೋಷಕರಿಗೆ ಮತ್ತು ಶಿಕ್ಷಕರಿಗೆ ಅಗತ್ಯ ಸಲಹೆ ಮತ್ತು ತರಬೇತಿಯನ್ನು ನೀಡಲಾಗುತ್ತದೆ. ಇದರ ಬಗ್ಗೆ ಎಲ್ಲರಲ್ಲೂ ಜಾಗೃತಿ ಮೂಡಿಸಲು ಪ್ರತೀ ವರ್ಷ ಸೆಪ್ಟಂಬರ್ 14ನ್ನು ಎಡಿಎಚ್‌ಡಿ ದಿನವೆಂದು ಆಚರಿಸಲಾಗುತ್ತದೆ.
ಡಾ| ರವೀಂದ್ರ ಮುನೋಳಿ, ಸಹ ಪ್ರಾಧ್ಯಾಪಕರು
ಮನೋರೋಗ ಚಿಕಿತ್ಸಾ ವಿಭಾಗ ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.