ಸ್ವಲೀನತೆ ಹೊಂದಿರುವ ವ್ಯಕ್ತಿಗಳಲ್ಲಿ ಸಂವಹನ ಅಸಮರ್ಥತೆಗಳು
Team Udayavani, Aug 4, 2019, 5:35 AM IST
ಬೆಳವಣಿಗೆಯ ಸಮಸ್ಯೆ ಎಂಬುದಾಗಿ ಗುರುತಿಸಲಾಗಿರುವ ಆಟಿಸಂ/ ಆಟಿಸಂ ಸ್ಪೆಕ್ಟ್ರಮ್ ಡಿಸಾರ್ಡರ್ ಅಥವಾ ಸ್ವಲೀನತೆಯು ಭಾರತ ಸಹಿತ ಜಗತ್ತಿನಾದ್ಯಂತ ಅತಿ ವೇಗವಾಗಿ ಹೆಚ್ಚುತ್ತಿರುವ ವೈಕಲ್ಯ. ಇಂಥವರ ಸಮಸ್ಯೆಗಳು ತರಹೇವಾರಿಯಾಗಿರ ಬಹುದು. ಇತರರು ಏನು ಹೇಳುತ್ತಾರೆ ಎಂಬುದನ್ನು ಅರ್ಥ ಮಾಡಿಕೊಳ್ಳಲಾಗದ ಸಮಸ್ಯೆ ಕೆಲವರದಾಗಿರ ಬಹುದು, ಸುತ್ತಮುತ್ತಲಿನವರ ಜತೆಗೆ ಸಂಭಾಷಣೆಯನ್ನು ಆರಂಭಿಸುವುದು, ಮುಂದುವರಿಸುವ ಸಮಸ್ಯೆಯನ್ನೂ ಎದುರಿಸುತ್ತಿರ ಬಹುದು. ಸ್ನೇಹಿತರು, ಸುತ್ತಮುತ್ತಲಿನವರಿಗೆ ಹೋಲಿಸಿದರೆ ಅವರ ಭಾಷಿಕ ಬೆಳವಣಿಗೆಯು ನಿಧಾನಗತಿಯದ್ದಾಗಿರಬಹುದು ಮತ್ತು ಕೊನೆಗೆ ಇತರರು ಹೇಳಿದ್ದನ್ನೇ ಪುನರುಚ್ಚರಿಸುವಲ್ಲಿ ಮಾತುಕತೆಯು ಅಂತ್ಯವಾಗಬಹುದು (ಇದನ್ನು ಎಕೊಲಾಲಿಯಾ ಎನ್ನುತ್ತಾರೆ).
ಇಂಥವರು ಜತೆಗಿರುವವರೊಂದಿಗೆ ಸಂಭಾಷಣೆ ನಡೆಸುವ ಅಸಾಮರ್ಥ್ಯವನ್ನು ತೋರ್ಪಡಿಸುತ್ತಾರಲ್ಲದೆ ಇನ್ನೊಬ್ಬ ವ್ಯಕ್ತಿಯ ಭಾವನೆಗಳು, ಅನುಭವಗಳು, ಆಲೋಚನೆಗಳು ಮತ್ತು ವರ್ತನೆಗಳನ್ನು ಅರ್ಥ ಮಾಡಿಕೊಳ್ಳುವ ಅಸಾಮರ್ಥ್ಯವನ್ನು ಹೊಂದಿರುತ್ತಾರೆ. ಇಂಥವರು ಪುನರಾವರ್ತನೆಯ ನಡವಳಿಕೆಯನ್ನು ಪ್ರದರ್ಶಿಸಬಹುದು ಮತ್ತು ಅಂಥವರ ಆಸಕ್ತಿಗಳು ಅವರು ನಡೆಸಬಹುದಾದ ಕೆಲವೇ ಕೆಲವು ವಿಚಾರಗಳತ್ತ ಕೇಂದ್ರೀಕೃತವಾಗಿರುತ್ತವೆ. ಇಂತಹ ಸಮಸ್ಯೆಯುಳ್ಳ ಮಕ್ಕಳಲ್ಲಿ ವೈವಿಧ್ಯಮಯವಾದ ಸಂವಹನ ಅಡಚಣೆಗಳ ಜತೆಗೆ ಇಂದ್ರಿಯ ಜ್ಞಾನ ಸಂಸ್ಕರಣೆಯ ಸಮಸ್ಯೆಗಳನ್ನೂ ಹೊಂದಿರಬಹುದಾಗಿದೆ. ಇಂತಹ ಸಂದರ್ಭದಲ್ಲಿ ಅವರ ಒಂದು ಅಥವಾ ಹೆಚ್ಚು ಜ್ಞಾನೇಂದ್ರಿಯಗಳು (ನೋಡುವುದು, ಆಲಿಸುವುದು, ವಾಸನೆ ಗ್ರಹಣ, ರುಚಿ ಗ್ರಹಣ ಮತ್ತು ಸ್ಪರ್ಶ) ಪ್ರಚೋದನೆಗೆ ಸಹಜಕ್ಕಿಂತ ಕಡಿಮೆ ಅಥವಾ ಹೆಚ್ಚು ಪ್ರತಿಕ್ರಿಯಿಸಬಹುದು. ಸ್ವಲೀನತೆ ಹೊಂದಿರುವ ಮಕ್ಕಳಲ್ಲಿ ನುಂಗುವಿಕೆಯಲ್ಲೂ ಸಮಸ್ಯೆಯಿರಬಹುದು. ಹೆಣ್ಣುಮಕ್ಕಳಿಗಿಂತ ಗಂಡುಮಕ್ಕಳಲ್ಲಿ ಸ್ವಲೀನತೆ ಪತ್ತೆಯಾಗುವ ಸಾಧ್ಯತೆಯು ನಾಲ್ಕರಿಂದ ಐದು ಪಟ್ಟು ಹೆಚ್ಚಾದರೂ ಎಲ್ಲ ಮಕ್ಕಳ ಸ್ವಲೀನತೆಯ ಸಮಸ್ಯೆಗಳು ಒಂದೇ ರೀತಿಯಾಗಿರುವುದಿಲ್ಲ. ಕೆಲವು ಸಮಸ್ಯೆಗಳು ಜೀವಮಾನ ಪರ್ಯಂತ ಇರಬಹುದು. ಸ್ವಲೀನತೆ ಹೊಂದಿರುವವರಲ್ಲಿ ಸಮಸ್ಯೆಗಳ ತೀವ್ರತೆಯೂ ಭಿನ್ನ ಭಿನ್ನವಾಗಿರಬಹುದು. ಅನೇಕ ವೈಕಲ್ಯ ಸ್ಥಿತಿಗಳ ನಡುವೆಯೂ ಕೆಲವು ಸ್ವಲೀನತೆಯುಳ್ಳ ಮಕ್ಕಳು ಕಲೆ, ಗಣಿತ, ಸಂಗೀತದಂತಹ ಕ್ಷೇತ್ರಗಳಲ್ಲಿ ಸಾಮಾನ್ಯ ಮಕ್ಕಳಿಗಿಂತ ಮಿಗಿಲಾದ ಅಸಾಮಾನ್ಯ ಕೌಶಲಗಳನ್ನು ಪ್ರಕಟಿಸಬಹುದು.
ಈ ತೊಂದರೆ ಹೊಂದಿರುವ ಮಕ್ಕಳನ್ನು ಗುರುತಿಸುವುದು ಕೂಡ ಒಂದು ಸವಾಲೇ ಸರಿ. ಮಗುವಿನ ಮೊದಲ ಮೂರು ವರ್ಷಗಳಲ್ಲಿ ಹೆತ್ತವರು ಅಥವಾ ಆರೈಕೆ ಮಾಡುತ್ತಿರುವವರು ಸ್ವಲೀನತೆಯ ಲಕ್ಷಣಗಳನ್ನು ಪತ್ತೆ ಮಾಡುತ್ತಾರೆ. ಈ ವೈಕಲ್ಯದ ಬಗ್ಗೆ ಜನ ಸಮುದಾಯದಲ್ಲಿ ಇರುವ ಅರಿವಿನ ಕೊರತೆಯಿಂದಾಗಿ ಮೂರು ವರ್ಷಗಳ ಬಳಿಕವೂ ಅದು ಗಮನಕ್ಕೆ ಬರುವುದಿದೆ. ಸ್ವಲೀನತೆಯನ್ನು ಪತ್ತೆ ಹಚ್ಚುವಲ್ಲಿ ಮನಶಾÏಸ್ತ್ರಜ್ಞರು ಪ್ರಧಾನ ಪಾತ್ರವನ್ನು ವಹಿಸಬಹುದಾದರೂ ಈ ವೈಕಲ್ಯಕ್ಕೆ ಚಿಕಿತ್ಸೆ ನೀಡುವುದಕ್ಕೆ ಬಹುಶಿಸ್ತೀಯ ವಿಧಾನವನ್ನು ಅನುಸರಿಸಬೇಕಾಗುತ್ತದೆ. ಅಂದರೆ, ಮಕ್ಕಳ ವೈದ್ಯರು, ಕ್ಲಿನಿಕಲ್ ಪೆಥಾಲಜಿಸ್ಟ್‌ಗಳು, ಜನರಲ್ ಫಿಸಿಶಿಯನ್, ಸ್ಪೀಚ್ ಲ್ಯಾಂಗ್ವೇಜ್ ಪೆಥಾಲಜಿಸ್ಟ್, ಆಡಿಯಾಲಜಿಸ್ಟ್, ನ್ಯೂರಾಲಜಿಸ್ಟ್, ಇಎನ್‌ಟಿ, ಆಪ್ತಮಾಲಜಿಸ್ಟ್, ಫಿಸಿಯೋಥೆರಪಿಸ್ಟ್, ಆಕ್ಯುಪೇಶನಲ್ ಥೆರಪಿಸ್ಟ್, ಸೆನ್ಸರಿ ಇಂಟಿಗ್ರೇಶನ್ ಥೆರಪಿಸ್ಟ್, ವಿಶೇಷ ಶಿಕ್ಷಣ ತಜ್ಞರು, ಶಾಲಾ ಶಿಕ್ಷಕರು ಮತ್ತು ಸಾಮಾಜಿಕ ಕಾರ್ಯಕರ್ತರು – ಹೀಗೆ ವಿವಿಧ ಕ್ಷೇತ್ರಗಳಲ್ಲಿ ಪರಿಣತರ ಸಂಯೋಜಿತ ಪ್ರಯತ್ನ ಅಗತ್ಯವಾಗುತ್ತದೆ. ಮಕ್ಕಳ ಬಾಲ್ಯದಲ್ಲಿ ಸ್ವಲೀನತೆಯ ಚಿಹ್ನೆಗಳನ್ನು ಗುರುತಿಸುವವರಲ್ಲಿ ಮಕ್ಕಳ ವೈದ್ಯರು ಮತ್ತು ಶಾಲಾ ಶಿಕ್ಷಕ-ಶಿಕ್ಷಕಿಯರು ಮೊದಲಿಗರಾಗಿರುತ್ತಾರೆ.
ಸ್ವಲೀನತೆಗೆ ಒದಗಿಸುವ ಚಿಕಿತ್ಸೆಯಲ್ಲಿ ಸ್ಪೀಚ್ ಲ್ಯಾಂಗ್ವೇಜ್ ಪೆಥಾಲಜಿಸ್ಟ್‌ಗಳು ಪ್ರಧಾನ ಭೂಮಿಕೆಯನ್ನು ನಿರ್ವಹಿಸುತ್ತಾರೆ. ಪ್ರಮಾಣಪತ್ರ ಹೊಂದಿರುವ ಮತ್ತು ಪರಿಣತರಾಗಿರುವ ಈ ವೃತ್ತಿಪರರು ಸ್ವಲೀನತೆ ಹೊಂದಿರುವ ಮಕ್ಕಳಲ್ಲಿ ಇರಬಹುದಾದ ಸಂವಹನ ಮತ್ತು ನುಂಗುವಿಕೆಯ ಅಡಚಣೆಗಳನ್ನು ಗುರುತಿಸಿ ಚಿಕಿತ್ಸೆ ನೀಡಲು ಅಗತ್ಯವಾದ ತಜ್ಞತೆಯನ್ನು ಹೊಂದಿರುತ್ತಾರೆ. ಸ್ವಲೀನತೆಯುಳ್ಳ ಮಕ್ಕಳಿಗೆ ಸ್ಪೀಚ್ ಲ್ಯಾಂಗ್ವೇಜ್ ಥೆರಪಿಯು ಅವಿಭಾಜ್ಯ ಅಂಗವಾಗಿದ್ದು, ಪರಿಣಾಮಕಾರಿ ಸಂವಹನವನ್ನು ಸಾಧ್ಯವಾಗಿಸಲು ಸಹಾಯ ಮಾಡುತ್ತದೆ. ಅರ್ಥ ಮಾಡಿಕೊಳ್ಳುವುದು ಮತ್ತು ಮಾತುಕತೆಗೆ ಸಂವಹನ ಕೌಶಲವು ಅತ್ಯಂತ ಅವಶ್ಯವಾಗಿರುವುದರಿಂದ ಅದು ಸಮಾಜದ ಭಾಗವಾಗಿದೆ. ಸ್ವಲೀನತೆ ಹೊಂದಿರುವ ಮಕ್ಕಳಿಗೆ ಅದು ತಿಳಿದುಬಂದ ತತ್‌ಕ್ಷಣ ಮತ್ತು ನಿಯಮಿತವಾಗಿ ಸ್ಪೀಚ್ ಲ್ಯಾಂಗ್ವೇಜ್ ಥೆರಪಿಯನ್ನು ಒದಗಿಸುವುದರಿಂದ ಉತ್ತಮ ಸಂವಹನ ಸಾಮರ್ಥ್ಯ ಮತ್ತು ಕಲಿಕೆಯ ಸಾಮರ್ಥ್ಯ ಬೆಳೆದುಬರಲು ಸಾಧ್ಯ. ಆದರೆ, ಸ್ಪೀಚ್ ಥೆರಪಿಯ ಮೂಲಕ ಇಂತಹ ಮಕ್ಕಳ ಪ್ರಗತಿಯು ಚಿಕಿತ್ಸೆಯನ್ನು ಯಾವಾಗ ಆರಂಭಿಸಲಾಯಿತು ಎಂಬುದನ್ನು ಆಧರಿಸಿರುತ್ತದೆ. ಆದ್ದರಿಂದಲೇ ಮಕ್ಕಳಲ್ಲಿ ಈ ಸಮಸ್ಯೆಯನ್ನು ಎಷ್ಟು ಬೇಗನೆ ಪತ್ತೆ ಹಚ್ಚಲಾಯಿತು ಎನ್ನುವುದು ಅವರು ಪಡೆದ ಚಿಕಿತ್ಸೆಯ ಪ್ರಗತಿಯ ಮೇಲೆ ಪರಿಣಾಮ ಬೀರುತ್ತದೆ. ಪ್ರತೀ ವರ್ಷ ಎಪ್ರಿಲ್ 2ನ್ನು ಜಾಗತಿಕವಾಗಿ ಆಟಿಸಂ ಡೇ ಅಥವಾ ಸ್ವಲೀನತೆಯ ದಿನ ಎಂಬುದಾಗಿ ಆಚರಿಸಲಾಗುತ್ತದೆ. ಮಕ್ಕಳಲ್ಲಿ ಆಟಿಸಮ್ ಸ್ಪೆಕ್ಟ್ರಮ್ ಕಾಯಿಲೆಯನ್ನು ಅತಿ ಶೀಘ್ರವಾಗಿ ಪತ್ತೆ ಹಚ್ಚುವುದರ ಪ್ರಾಮುಖ್ಯದ ಬಗ್ಗೆ ಸಾರ್ವಜನಿಕರು, ಜನಸಮುದಾಯದಲ್ಲಿ ಈ ಸಮಸ್ಯೆಯ ಬಗ್ಗೆ ಅರಿವು ಮೂಡಿಸುವುದು ಈ ದಿನಾಚರಣೆಯ ಉದ್ದೇಶವಾಗಿದೆ. ಸಂವಹನದಲ್ಲಿ ಸಮಸ್ಯೆಗಳಿದ್ದರೂ ಇಂತಹ ಮಕ್ಕಳು ಅಪೂರ್ವ ವ್ಯಕ್ತಿತ್ವಗಳನ್ನು ಹೊಂದಿರಲು ಸಾಧ್ಯ. ಅಲ್ಲದೆ ಅವರೊಳಗಿನ ವಿಭಿನ್ನ ಧ್ವನಿಗಳು ಅವರ ಸುತ್ತಲಿನ ಜಗತ್ತು ಕೇಳಿಸಿಕೊಳ್ಳಬೇಕು ಎಂಬುದಾಗಿ ಕಾತರಿಸುತ್ತಲಿರುತ್ತವೆ. ಇಂತಹ ಸಮಸ್ಯೆಯಿಂದ ಬಳಲುತ್ತಿರುವ ಮಕ್ಕಳಿಗೆ ನೀಡಬಹುದಾದ ಅತ್ಯುತ್ತಮ ಚಿಕಿತ್ಸೆಯೆಂದರೆ ಸುತ್ತಮುತ್ತಲೂ ಇರುವವರು ಈ ಮಕ್ಕಳು ಜಗತ್ತನ್ನು ನೋಡುವಂತೆಯೇ ನೋಡಿ ಅರ್ಥ ಮಾಡಿಕೊಳ್ಳುವುದು, ಪ್ರತಿಕ್ರಿಯಿಸುವುದು!
ಇತ್ತೀಚೆಗಿನ ಅಂದಾಜಿನಂತೆ, 59 ಮಕ್ಕಳಲ್ಲಿ ಒಂದು ಮಗು ಈ ವೈಕಲ್ಯದೊಂದಿಗೆ ಜನಿಸುತ್ತದೆ. ಇದು 2012 (ಸೆಂಟರ್ ಫಾರ್ ಡಿಸಾರ್ಡರ್ ಕಂಟ್ರೋಲ್, 2018)ರ ಅಂಕಿಅಂಶಕ್ಕಿಂತ ಶೇ.15ರಷ್ಟು ಹೆಚ್ಚು. ಭಾರತದಲ್ಲಿ ಸ್ವಲೀನತೆಯಿಂದ ಬಳಲುವವರು 20 ಲಕ್ಷಕ್ಕಿಂತಲೂ ಹೆಚ್ಚು ಮಂದಿ ಇರಬಹುದು ಎಂಬುದಾಗಿ ಅಧ್ಯಯನಗಳು ಸೂಚಿಸಿವೆ.
ಸ್ವಲೀನತೆ ಉಂಟಾಗಲು ಮೂಲ ಕಾರಣವೇನು ಎನ್ನುವುದನ್ನು ಇದುವರೆಗೂ ಖಚಿತವಾಗಿ ಕಂಡು ಹಿಡಿಯಲಾಗಿಲ್ಲ. ವಂಶವಾಹಿ, ನರಶಾಸ್ತ್ರೀಯ, ಪಾರಿಸರಿಕ ಇತ್ಯಾದಿ ಸಂಭಾವ್ಯ ಕಾರಣಗಳನ್ನು ಮಾತ್ರ ಹೇಳಲಾಗುತ್ತದೆ.
ಡಾ| ಸುಧಿನ್ ಕರುಪ್ಪಳ್ಳಿ
ಆಡಿಯಾಲಜಿ ಮತ್ತು ಸ್ಪೀಚ್ ಲ್ಯಾಂಗ್ವೇಜ್ ಪೆಥಾಲಜಿ ವಿಭಾಗ, ಕಸ್ತೂರ್ಬಾ ಆಸ್ಪತ್ರೆ, ಮಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ನಾನು ಶೀಶಮಹಲ್ ಕಟ್ಟಿಲ್ಲ, ಜನರಿಗೆ ಮನೆ ಕಟ್ಟಿಸಿದ್ದೇನೆ: ಕೇಜ್ರಿವಾಲ್ ಗೆ ಮೋದಿ ಟಾಂಗ್
Venur; ಚಿರತೆ ಓಡಾಟ; ಸಾರ್ವಜನಿಕರಲ್ಲಿ ಆತಂಕ; ಅರಣ್ಯಾಧಿಕಾರಿ- ಸಾರ್ವಜನಿಕರ ಸಭೆ
Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ
Governor: ಮಣಿಪುರದ 19 ನೇ ರಾಜ್ಯಪಾಲರಾಗಿ ಅಜಯ್ ಭಲ್ಲಾ ಪ್ರಮಾಣ ವಚನ ಸ್ವೀಕಾರ
Bidar; ಗುತ್ತಿಗೆದಾರ ಸಚಿನ್ ಕೇಸ್; ತನಿಖೆ ಆರಂಭಿಸಿದ ಸಿಐಡಿ ತಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.