Social Media: ಅತಿಯಾದ ಸಾಮಾಜಿಕ ಮಾಧ್ಯಮ ಬಳಕೆಯಿಂದ ಮಕ್ಕಳ ಹೃದಯದ ಮೇಲೆ ದುಷ್ಪರಿಣಾಮ
ಹೆತ್ತವರು ಏನು ಕ್ರಮ ಕೈಗೊಳ್ಳಬೇಕು ?
Team Udayavani, Nov 5, 2023, 12:18 PM IST
ಪ್ರಸ್ತುತ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳು ನಮ್ಮ ಬದುಕಿನಲ್ಲಿ ಎಷ್ಟರ ಮಟ್ಟಿಗೆ ಹಾಸುಹೊಕ್ಕಾಗಿವೆ ಎಂದರೆ ಸುತ್ತಲಿನ ಜಗತ್ತಿನಲ್ಲಿ ಏನಾಗುತ್ತಿದೆ ಎಂದು ತಿಳಿದುಕೊಳ್ಳುವುಕ್ಕಾಗಿ ಪ್ರತೀ ಕ್ಷಣವೂ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಅಥವಾ ಟ್ವಿಟರ್‌ನಂತಹ ತಾಣಗಳನ್ನು ಗಮನಿಸುತ್ತಲೇ ಇರುತ್ತೇವೆ. ವಿಶ್ವವಿದ್ಯಾನಿಲಯವೊಂದರಲ್ಲಿ ಇತ್ತೀಚೆಗೆ ನಡೆಸಲಾದ ಒಂದು ಅಧ್ಯಯನದಲ್ಲಿ ಕಂಡುಕೊಳ್ಳಲಾಗಿರುವ ಪ್ರಕಾರ, ಸಾಮಾಜಿಕ ಮಾಧ್ಯಮಗಳ ಅತಿಯಾದ ಬಳಕೆಯಿಂದಾಗಿ ದೀರ್ಘಕಾಲೀನ ಉರಿಯೂತಗಳ ಪ್ರಮಾಣ ಹೆಚ್ಚುತ್ತದೆ; ದೇಹದಲ್ಲಿ ಸಿ ರಿಯಾಕ್ಟಿವ್ ಪ್ರೊಟೀನ್ ಉತ್ಪಾದನೆ ಹೆಚ್ಚುತ್ತದೆ.
ಇದರಿಂದಾಗಿ ವ್ಯಕ್ತಿ ಮಧುಮೇಹ, ಕೆಲವು ವಿಧವಾದ ಕ್ಯಾನ್ಸರ್‌ಗಳು ಮತ್ತು ಹೃದಯಕ್ಕೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುವ ಸಾಧ್ಯತೆಗಳು ಹೆಚ್ಚುತ್ತವೆ. ಈ ಅಧ್ಯಯನದಲ್ಲಿ ಪಾಲ್ಗೊಂಡ ಸಾಮಾಜಿಕ ಮಾಧ್ಯಮಗಳನ್ನು ಹೆಚ್ಚು ಉಪಯೋಗಿಸುವ ವ್ಯಕ್ತಿಗಳು ಹೆಚ್ಚು ತಲೆನೋವು, ಎದೆ ಮತ್ತು ಬೆನ್ನುನೋವಿನ ತೊಂದರೆಗಳನ್ನು ಹೊಂದಿರುವುದಾಗಿಯೂ ಹೇಳಿದ್ದಾರೆ; ಇದರಿಂದಾಗಿಯೂ ಅವರ ವೈದ್ಯರ ಭೇಟಿಗಳು ಹೆಚ್ಚಿವೆ.
ಸಾಮಾಜಿಕ ಮಾಧ್ಯಮಗಳ ಅತಿಯಾದ ಬಳಕೆಯಿಂದ ಹದಿಹರಯದವರು ಮತ್ತು ಯುವಜನರಲ್ಲಿ ನಿದ್ರಾಹೀನತೆ, ಭಾವನಾತ್ಮಕ ಏರಿಳಿತಗಳು ಕಾಣಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚಿವೆ. ಈ ವಯಸ್ಸಿನವರಲ್ಲಿ ಆಲೋಚನೆಗಳು ಅಸ್ಥಿರವಾಗಿರುತ್ತವೆ; ಹೀಗಾಗಿ ಸಾಮಾಜಿಕ ಮಾಧ್ಯಮಗಳ ಅತಿ ಬಳಕೆಯಿಂದ ಅನಾರೋಗ್ಯಗಳು ಉಂಟಾಗಬಹುದು.
ಸಾಕಷ್ಟು ಹೊತ್ತು ಉತ್ತಮ ಗುಣಮಟ್ಟದ ನಿದ್ದೆ ಮಾಡುವುದು ವ್ಯಕ್ತಿಯೊಬ್ಬನ ಹೃದಯ ಮತ್ತು ಮೆದುಳಿನ ಆರೋಗ್ಯಕ್ಕೆ ಅತ್ಯಗತ್ಯ. 16ರಿಂದ 24 ವರ್ಷ ವಯೋಮಾನದವರಲ್ಲಿ ನಡೆಸಲಾದ ಒಂದು ಅಧ್ಯಯನದ ಪ್ರಕಾರ, ದಿನಕ್ಕೆ 7.5 ತಾಸುಗಳಿಗಿಂತ ಹೆಚ್ಚು ಕಾಲ ಎಲೆಕ್ಟ್ರಾನಿಕ್ ಮಾಧ್ಯಮ ಉಪಕರಣ ಬಳಕೆ (ಇಎಂಡಿಯು) ಮಾಡುವವರಲ್ಲಿ ನಿದ್ದೆ ಬರುವ ತೊಂದರೆ, 15 ನಿಮಿಷಗಳಿಗಿಂತ ಹೆಚ್ಚು ಕಾಲದ ಸುಪ್ತ ನಿದ್ರೆ ಮತ್ತು ಒಟ್ಟು ನಿದ್ದೆಯ ಅವಧಿ 6 ತಾಸುಗಳಿಗಿಂತ ಕಡಿಮೆ ಇರುವುದು ಕಂಡುಬಂದಿದೆ.
ನಿರಂತರವಾದ ನಿದ್ರಾಭಂಗವು ಪ್ರತಿಕೂಲವಾದ, ಸತತವಾದ ದೈಹಿಕ ಪರಿವರ್ತನೆಗಳನ್ನು ಉಂಟುಮಾಡಬಲ್ಲದಾಗಿದ್ದು, ಅಂತಿಮವಾಗಿ ಹೃದಯ ಅನಾರೋಗ್ಯಗಳು ಉದ್ಭವಿಸಲು ಪೂರಕ ಸ್ಥಿತಿಯನ್ನು ಸೃಷ್ಟಿಸುತ್ತದೆ. ಅಸಮರ್ಪಕ ಪ್ರಮಾಣ ಮತ್ತು ಕಳಪೆ ಗುಣಮಟ್ಟದ ನಿದ್ದೆ ಹಾಗೂ ಬೊಜ್ಜು ಮತ್ತು ಮಧುಮೇಹಕ್ಕೂ ನಿಕಟ ಸಂಬಂಧ ಇರುವುದನ್ನು ರೋಗಶಾಸ್ತ್ರೀಯ ದತ್ತಾಂಶಗಳು ಸಾಬೀತು ಪಡಿಸಿದ್ದು, ಇವೆರಡೂ ಕಾಯಿಲೆಗಳು ಹೃದ್ರೋಗಗಳು ತಲೆದೋರಲು ಅನುಕೂಲಕರ ಪರಿಸ್ಥಿತಿಯನ್ನು ಸೃಷ್ಟಿಸುತ್ತವೆ.
ದೈಹಿಕ ಚಟುವಟಿಕೆಯ ಕೊರತೆ, ಆಲಸ್ಯ ಮತ್ತು ಕಡಿಮೆ ದೈಹಿಕ ಸಾಮರ್ಥ್ಯಗಳಿಂದ ಬೊಜ್ಜು ಮತ್ತು ಹೃದ್ರೋಗಗಳು ತೀರಾ ಸಣ್ಣ ವಯಸ್ಸಿನಲ್ಲಿಯೇ ಆರಂಭವಾಗುತ್ತವೆ. ಅಧಿಕ ಸಮಯ ಸಾಮಾಜಿಕ ಮಾಧ್ಯಮಗಳನ್ನು ಉಪಯೋಗಿಸುವವರಲ್ಲಿ ಬೇಕಾಬಿಟ್ಟಿ ತಿಂಡಿ ತಿನಿಸು ಸೇವನೆಯ ಅಭ್ಯಾಸವೂ ಇರುತ್ತದೆ. ಸಾಮಾಜಿಕ ಮಾಧ್ಯಮಗಳನ್ನು ತೀವ್ರವಾಗಿ ಬಳಸುವವರಲ್ಲಿ ರಾತ್ರಿ ಸಮಯ ರಕ್ತದೊತ್ತಡ ಅಧಿಕವಾಗುತ್ತದೆ.
ಜರ್ನಲ್ ಆಫ್ ಸೋಶಿಯಲ್ ಆ್ಯಂಡ್ ಕ್ಲಿನಿಕಲ್ ಸೈಕಾಲಜಿಯ ಪ್ರಕಾರ, ದಿನಕ್ಕೆ 30 ನಿಮಿಷಗಳಷ್ಟು ಸಮಯವನ್ನು ಮಾತ್ರವೇ 3 ಆ್ಯಪ್‌ಗ್ಳಲ್ಲಿ ವಿಭಜಿಸಿ ವಿನಿಯೋಗಿಸಬೇಕು. ಸಾಮಾಜಿಕ ಮಾಧ್ಯಮಗಳ ನೊಟಿಫಿಕೇಶನ್‌ಗಳನ್ನು ಮ್ಯೂಟ್ ಮಾಡುವುದು, ಸ್ಕ್ರೀನ್ ಸಮಯವನ್ನು ಕಡಿಮೆ ಮಾಡುವಂತಹ ಸಾಮಾಜಿಕ ಮಾಧ್ಯಮ ವ್ಯಸನವನ್ನು ನಿಯಂತ್ರಿಸುವ ವಿಧಾನಗಳು ಇದಕ್ಕೆ ಸಹಕಾರಿ.
ಸಾಮಾಜಿಕ ಮಾಧ್ಯಮಗಳ ಪ್ರತಿಕೂಲ ಪರಿಣಾಮಗಳನ್ನು ಕಡಿಮೆ ಮಾಡಲು ದೈಹಿಕ ಚಟುವಟಿಕೆಗಳನ್ನು ದಿನಂಪ್ರತಿ ಕಡ್ಡಾಯವಾಗಿ ನಡೆಸಬೇಕು. ಹೊಸ ಹವ್ಯಾಸಗಳನ್ನು ಬೆಳೆಸಿಕೊಳ್ಳುವುದು, ಹೊಸ ಗೆಳೆಯ-ಗೆಳತಿಯರನ್ನು ಮಾಡಿಕೊಳ್ಳುವುದು, ದೈಹಿಕವಾಗಿ ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗಿಯಾಗುವುದು ವರ್ಚುವಲ್ ವಿಧಾನಗಳಿಗಿಂತ ಅತ್ಯುತ್ತಮ ಮಾರ್ಗೋಪಾಯಗಳಾಗಿವೆ.
ಸೈಬರ್ ಕ್ರಾಂತಿಯು ನಮ್ಮ ಜೀವನವನ್ನು ಸುಲಭಗೊಳಿಸಿದೆ ಎಂಬುದೇನೋ ನಿಜ. ಆದರೆ ಪ್ರತಿಯೊಂದಕ್ಕೂ ನಿಯಮ ಮತ್ತು ಷರತ್ತುಗಳಿದ್ದೇ ಇರುತ್ತವೆ. ಅತಿಯಾದರೆ ಅಮೃತವೂ ವಿಷವೇ. ಹಾಗಾಗಿ ಸಾಮಾಜಿಕ ಮಾಧ್ಯಮಗಳ ಬಳಕೆಯಿಂದ ಋಣಾತ್ಮಕ ಪರಿಣಾಮಗಳು ಉಂಟಾಗುವುದನ್ನು ತಡೆಯಲು ಮಿತಬಳಕೆ ಮತ್ತು ಸಮತೋಲನ ಸಾಧಿಸುವುದೇ ಕೀಲಿಕೈ.
-ಡಾ| ನರಸಿಂಹ ಪೈ,
ಮುಖ್ಯಸ್ಥರು, ಕಾರ್ಡಿಯಾಲಜಿ ವಿಭಾಗ,
ಕೆಎಂಸಿ ಆಸ್ಪತ್ರೆ, ಮಂಗಳೂರು
(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಕಾರ್ಡಿಯಾಲಜಿ ವಿಭಾಗ, ಕೆಎಂಸಿ ಆಸ್ಪತ್ರೆ, ಮಂಗಳೂರು)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.