ಕ್ಯಾನ್ಸರ್ ಚಿಕಿತ್ಸೆಯಲ್ಲಿ ಬ್ರ್ಯಾಕಿಥೆರಪಿ
Team Udayavani, May 8, 2022, 3:02 PM IST
ಕ್ಯಾನ್ಸರ್‌ಗೆ ನೀಡಲಾಗುವ ಪ್ರಮುಖ ಚಿಕಿತ್ಸಾ ವಿಧಾನಗಳಲ್ಲಿ ರೇಡಿಯೋಥೆರಪಿ ಕೂಡ ಒಂದು. ರೇಡಿಯೋಥೆರಪಿಯನ್ನು ಎರಡು ವಿಧಾನಗಳಲ್ಲಿ ನೀಡಬಹುದಾಗಿದೆ: ಎಕ್ಸ್‌ಟರ್ನಲ್ ಬೀಮ್ ರೇಡಿಯೇಶನ್ ಥೆರಪಿ ಮತ್ತು ಬ್ರ್ಯಾಕಿಥೆರಪಿ (ಇಂಟರ್ನಲ್ ರೇಡಿಯೇಶನ್ ಥೆರಪಿ). ಎಕ್ಸ್‌ಟರ್ನಲ್ ಬೀಮ್ ರೇಡಿಯೇಶನ್ ಥೆರಪಿಯಲ್ಲಿ ವಿಕಿರಣದ ಮೂಲವು ಕ್ಯಾನ್ಸರ್ ಗಡ್ಡೆಯಿಂದ ದೂರದಲ್ಲಿರುತ್ತದೆ (ಸಾಮಾನ್ಯವಾಗಿ 100 ಸೆಂ.ಮೀ.ಗಳಷ್ಟು ದೂರ). ಆದರೆ ಬ್ರ್ಯಾಕಿಥೆರಪಿಯಲ್ಲಿ ವಿಕಿರಣಶೀಲ ಮೂಲಗಳನ್ನು ಕ್ಯಾನ್ಸರ್ ಗಡ್ಡೆಯ ಒಳಗೆ ಇರಿಸಲಾಗುತ್ತದೆ. ಮುಚ್ಚಿದ ಈ ವಿಕಿರಣಶೀಲ ಪದಾರ್ಥಗಳು ಸಾಮಾನ್ಯವಾಗಿ ಸಣ್ಣ ನಿಧಾನವಾಗಿರುವುದು ತರಬೇತಿ ಕಾರ್ಯಕ್ರಮ ಕ್ಯಾನ್ಸ ರ್ ಚಿಕಿತ್ಸೆಯಲ್ಲಿ ಬ್ರ್ಯಾಕಿಥೆರಪಿ ಗಾತ್ರದವಾಗಿದ್ದು, ತಂತಿಗಳು ಅಥವಾ ಬೀಜದ ಆಕಾರದಲ್ಲಿರುತ್ತವೆ. ಚಿಕಿತ್ಸೆ ಸಂಪೂರ್ಣವಾದ ಬಳಿಕ ಅವುಗಳನ್ನು ತೆಗೆದುಹಾಕಲಾಗುತ್ತದೆ. (ಚಿತ್ರ 1) ಆಧುನಿಕ ಬ್ರ್ಯಾಕಿಥೆರಪಿ ಚಿಕಿತ್ಸಾ ವಿಧಾನದಲ್ಲಿ ಒಂದೇ ವಿಕಿರಣಶೀಲ ಪದಾರ್ಥವನ್ನು ಬಳಸಲಾಗುತ್ತಿದ್ದು, ಅದನ್ನು ಕಂಪ್ಯೂಟರ್ ನಿಯಂತ್ರಣದ ಮೂಲಕ ಗಡ್ಡೆಯ ಒಳಗೆ ಅಳವಡಿಸಲಾದ ಉಪಕರಣದ ವಿವಿಧ ಭಾಗಗಳಲ್ಲಿ ಇರಿಸಲಾಗುತ್ತದೆ. ಬ್ರ್ಯಾಕಿಥೆರಪಿಯ ಮೂಲಕ ಅತ್ಯಂತ ನಿಖರ ಸ್ಥಳ ನಿರ್ದಿಷ್ಟವಾಗಿ ಕ್ಯಾನ್ಸರ್ ಗಡ್ಡೆಗೆ ವಿಕಿರಣ ಚಿಕಿತ್ಸೆಯನ್ನು ನೀಡಬಹುದಾಗಿದ್ದು, ಸುತ್ತಲಿನ ಸಹಜ ಆರೋಗ್ಯದ ಜೀವವ್ಯವಸ್ಥೆಗಳು ಅಬಾಧಿತವಾಗಿ ಉಳಿಯುತ್ತವೆ. ಬ್ರ್ಯಾಕಿಥೆರಪಿಯನ್ನು ಏಕ ಚಿಕಿತ್ಸೆಯಾಗಿ ಉಪಯೋಗಿಸಬಹುದು ಅಥವಾ ಶಸ್ತ್ರಚಿಕಿತ್ಸೆ ಮತ್ತು ಬಾಹ್ಯ ರೇಡಿಯೇಶನ್‌ನಂತಹ ಇತರ ಚಿಕಿತ್ಸೆಗಳ ಜತೆಗೆ ಸಂಯೋಜಿತವಾಗಿಯೂ ಬಳಸಬಹುದು. ಈ ತಂತ್ರಜ್ಞಾನವನ್ನು ಗರ್ಭಕಂಠ, ಸ್ತ್ರೀಜನನಾಂಗ, ಚರ್ಮ, ಗುದನಾಳ, ಪ್ರೊಸ್ಟೇಟ್, ಕಣ್ಣಿನ ಕ್ಯಾನ್ಸರ್ ಮತ್ತು ಕೆಲವೊಮ್ಮೆ ಸ್ತನ, ಅನ್ನನಾಳ, ತುಟಿ, ನಾಲಗೆ ಇತ್ಯಾದಿಗಳ ಕ್ಯಾನ್ಸರ್ ಚಿಕಿತ್ಸೆಯಲ್ಲಿಯೂ ಉಪಯೋಗಿಸುತ್ತಾರೆ. (ಚಿತ್ರ 2) ಬ್ರ್ಯಾಕಿಥೆರಪಿಯಲ್ಲಿಯೂ ವಿಕಿರಣವನ್ನು ದೇಹದ ಒಳಭಾಗದಲ್ಲಿ ಅಳವಡಿಸುವ ವಿಧಾನಗಳನ್ನು ಆಧರಿಸಿ ಹಲವು ವಿಧಗಳಿವೆ.
ಬ್ರ್ಯಾಕಿಥೆರಪಿ ಕಾರ್ಯವಿಧಾನ ರೋಗಿಯನ್ನು ತಯಾರುಗೊಳಿಸುವುದು
ಓಂಕಾಲಜಿಸ್ಟ್ ರೋಗಿಯನ್ನು ತಪಾಸಿಸುತ್ತಾರೆ, ವಿಶ್ಲೇಷಣೆ ನಡೆಸುತ್ತಾರೆ, ನೀಡಬೇಕಾಗಿರುವ ಚಿಕಿತ್ಸೆಯನ್ನು ಗುರುತಿಸುತ್ತಾರೆ ಮತ್ತು ಸೂಕ್ತವಾದ ಚಿಕಿತ್ಸೆ ಹಾಗೂ ರೇಡಿಯೇಶನ್ ಡೋಸ್ ಬಗ್ಗೆ ನಿರ್ಧರಿಸುತ್ತಾರೆ. ಕೆಲವು ಪ್ರಕರಣಗಳಲ್ಲಿ ಚಿಕಿತ್ಸೆಯ ಉಪಕರಣವನ್ನು ರೋಗಿಯ ದೇಹದ ಒಳಭಾಗದಲ್ಲಿ ಅಳವಡಿಸಲು ಶಸ್ತ್ರಚಿಕಿತ್ಸಾ ತಜ್ಞ ವೈದ್ಯರು ಸಹಾಯ ಮಾಡುತ್ತಾರೆ. ಚಿಕಿತ್ಸೆಯ ವಿಧಾನವನ್ನು ಆಧರಿಸಿ ಇದಕ್ಕೆ ಮುನ್ನ ರೋಗಿಗೆ ಅದಕ್ಕೆ ಬೇಕಾದ ತಯಾರಿಗಳ ಬಗ್ಗೆ ವಿವರಿಸಲಾಗುತ್ತದೆ. ತಾತ್ಕಾಲಿಕ ಬ್ರ್ಯಾಕಿಥೆರಪಿ ಇಂಪ್ಲಾಂಟ್‌ಗಳ ಸಂದರ್ಭದಲ್ಲಿ ವಿಶೇಷ ಸಲಕರಣೆಗಳು, ಸೂಜಿಗಳು ಮತ್ತು ಕ್ಯಾಥೆಟರ್ (ರೇಡಿಯೇಶನ್ ಮೂಲವನ್ನು ರೋಗಿಯ ದೇಹದೊಳಕ್ಕೆ ಸೇರಿಸಲು ಅನುವು ಮಾಡಿಕೊಡುವ ಕೊಳವೆಯಂತಹ ಉಪಕರಣ)ಗಳನ್ನು ನಿಖರವಾಗಿ ಚಿಕಿತ್ಸೆ ನೀಡಬೇಕಾದ ದೇಹಭಾಗದಲ್ಲಿ ಸ್ಥಾಪಿಸಲಾಗುತ್ತದೆ. (ಚಿತ್ರ 3) ಸಾಮಾನ್ಯವಾಗಿ ಕ್ಯಾಥೆಟರ್ ಅಥವಾ ವಿಶೇಷ ಸಲಕರಣೆಗಳನ್ನು ರೋಗಿಗೆ ಅರಿವಳಿಕೆ ನೀಡಿಯೇ ಸ್ಥಾಪಿಸಲಾಗುತ್ತದೆ. ಕೆಲವೊಮ್ಮೆ ಈ ಕ್ಯಾಥೆಟರ್‌ಗಳು ಅಥವಾ ಸಲಕರಣೆಗಳನ್ನು ಗಡ್ಡೆಯೊಳಗೆ ನಿಖರವಾಗಿ ಸ್ಥಾಪಿಸಲು ಅಲ್ಟ್ರಾಸೌಂಡ್ ಸ್ಕ್ಯಾನ್ ಗಳನ್ನು ಬಳಸಲಾಗುತ್ತದೆ.
ಸಿಮ್ಯುಲೇಶನ್ ಮತ್ತು ಚಿಕಿತ್ಸಾ ಯೋಜನೆ
ಕ್ಯಾಥೆಟರ್ ಅನ್ನು ಅಳವಡಿಸಿದ ಬಳಿಕ ರೋಗಿಯನ್ನು ಸಿಟಿ ಸ್ಕ್ಯಾನ್‌ಗೆ ಒಳಪಡಿಸಲಾಗುತ್ತದೆ. ಈ ಸ್ಕ್ಯಾನ್ ಇಮೇಜ್‌ಗಳನ್ನು ವಿಶೇಷ ಸಾಫ್ಟ್ ವೇರ್ ಆಧಾರಿತ ಕಂಪ್ಯೂಟರ್ ವ್ಯವಸ್ಥೆಗೆ ವರ್ಗಾಯಿಸಲಾಗುತ್ತದೆ. ಇದರಲ್ಲಿ ಓಂಕಾಲಜಿಸ್ಟ್ ಚಿಕಿತ್ಸೆಗೆ ಒಳಗಾಗಬೇಕಾದ ಕ್ಯಾನ್ಸರ್ ಇರುವ ಸ್ಥಳ ಮತ್ತು ಸಮೀಪದ ಸ್ಥಳಗಳನ್ನು ಗುರುತಿಸುತ್ತಾರೆ ಹಾಗೂ ವಿಕಿರಣದಿಂದ ಹೊರಗೆ ಉಳಿಯಬೇಕಾದ ಗಡ್ಡೆಯ ಸಮೀಪದ ಸ್ಥಳಗಳನ್ನು ಗುರುತಿಸುತ್ತಾರೆ. ಇದಾದ ಬಳಿಕ ಚಿಕಿತ್ಸೆಯ ಯೋಜನೆ ಪ್ರಕ್ರಿಯೆಯನ್ನು ಮೆಡಿಕಲ್ ಫಿಸಿಸಿಸ್ಟ್‌ಗಳು ನಡೆಸುತ್ತಾರೆ. ಯೋಜನೆಯ ಸಂದರ್ಭದಲ್ಲಿ ಸ್ಥಳೀಯ ನಿರ್ದಿಷ್ಟವಾದ ಅತ್ಯುಚ್ಚ ಡೋಸ್‌ನ ವಿಕಿರಣವು ಗಡ್ಡೆಗೆ ಮಾತ್ರ ರವಾನೆಯಾಗುವಂತೆ ಮತ್ತು ಸುತ್ತಲಿನ ಸಹಜ ರಚನೆಗಳಿಗೆ ಅತ್ಯಂತ ಕಡಿಮೆ ಡೋಸೇಜ್ ರವಾನೆಯಾಗುವಂತೆ ಚಿಕಿತ್ಸಾ ತಂಡವು ಪ್ರಯತ್ನಿಸುತ್ತದೆ. ಯೋಜನೆ ಅಂತಿಮ ಗೊಂಡು ಕನ್ಸಲ್ಟಿಂಗ್ ಓಂಕಾಲಜಿಸ್ಟ್ ಅವರು ಅನುಮೋದಿಸಿದ ಬಳಿಕ ಅದೇ ದಿನ ಚಿಕಿತ್ಸೆಯನ್ನು ಆರಂಭಿಸಲಾಗುತ್ತದೆ.
ಚಿಕಿತ್ಸೆ ನೀಡಿಕೆ
ಕಂಪ್ಯೂಟರ್ ನಿಯಂತ್ರಿತ ರಿಮೋಟ್ ಲೋಡಿಂಗ್ ಯಂತ್ರದ ಮೂಲಕ ಚಿಕಿತ್ಸೆಯನ್ನು ನೀಡಲಾಗುತ್ತದೆ. ಈ ಯಂತ್ರದಲ್ಲಿ ವಿಕಿರಣ ಶೀಲ ಮೂಲ ದಾಸ್ತಾನಿರುತ್ತದೆ. ಈ ವಿಕಿರಣ ಶೀಲ ಮೂಲವನ್ನು ಉಪಕರಣ (ಕೆಥೆಟರ್ ಅಥವಾ ನೀಡಲ್) ಮೂಲಕ ಹಾದು ಹೋಗುವಂತೆ ಮಾಡಲಾಗುತ್ತದೆ. (ಚಿತ್ರ ನಾಲ್ಕು). ಆಧುನಿಕ ಬ್ರ್ಯಾಕಿ ಥೆರಪಿ ಚಿಕಿತ್ಸೆಯ ಬಹುತೇಕ ಅವಧಿಗಳು ಹೆಚ್ಚೆಂದರೆ 10 ರಿಂದ 20 ನಿಮಿಷಗಳಷ್ಟಿರುತ್ತದೆ. (ಈ ಚಿಕಿತ್ಸೆಯನ್ನು ಹೈ ಡೋಸ್ ರೇಟ್ ಬ್ರ್ಯಾಕಿ ಥೆರಪಿ ಎಂದು ಕರೆಯಲಾಗುತ್ತದೆ.) ಈ ಚಿಕಿತ್ಸಾ ವಿಧಾನವನ್ನು ಕೆಲವೊಮ್ಮೆ ಒಂದು ದಿನದಲ್ಲಿ ಎರಡು ಬಾರಿ ನೀಡಬಹುದು. ವಿಶಿಷ್ಟ ಬ್ರ್ಯಾಕಿ ಥೆರಪಿಗಳು ಒಂದರಿಂದ ಹಲವಾರು ದಿನಗಳ ಕಾಲ ಇರುತ್ತವೆ, ಇದು ಚಿಕಿತ್ಸೆ ನೀಡುತ್ತಿರುವ ಗಡ್ಡೆ ಮತ್ತು ಚಿಕಿತ್ಸಾ ವಿಧಾನವನ್ನು ಆಧರಿಸಿರುತ್ತದೆ. ಬಹುತೇಕ ಸಂದರ್ಭಗಳಲ್ಲಿ ವ್ಯಕ್ತಿ ಹೊರರೋಗಿಯಾಗಿದ್ದುಕೊಂಡೇ ಬ್ರ್ಯಾಕಿ ಥೆರಪಿ ಪಡೆಯಬಹುದು. ಆದರೆ ಕೆಲವೊಮ್ಮೆ ಒಳರೋಗಿಯಾಗಿ ದಾಖಲಿಸಿಕೊಂಡು ಚಿಕಿತ್ಸೆ ಪಡೆಯಬೇಕಾಗಬಹುದು. ಇದು ಚಿಕಿತ್ಸೆ ನೀಡಬೇಕಾದ ಅಂಗ ಮತ್ತು ಚಿಕಿತ್ಸೆಯ ವಿಧಾನವನ್ನು ಆಧರಿಸಿರುತ್ತದೆ. ಚಿಕಿತ್ಸೆ ಸಂಪೂರ್ಣವಾದ ಬಳಿಕ ಅಪ್ಲಿಕೇಟರ್ ಗಳನ್ನು ರೋಗಿಯ ದೇಹದಿಂದ ಹೊರತೆಗೆಯಲಾಗುತ್ತದೆ. ರೋಗಿ ಅದೇ ದಿನ ಮನೆಗೆ ಮರಳಬಗಹುದಾಗಿದೆ. ಈ ಚಿಕಿತ್ಸೆಯ ಅಡ್ಡ ಪರಿಣಾಮಗಳು ಸಾಮಾನ್ಯವಾಗಿ ಲಘು ಸ್ವರೂಪದಲ್ಲಿರುತ್ತವೆ. ಅತ್ಯುತ್ತಮವಾಗಿ ಆಯ್ಕೆ ಮಾಡಲಾದ ರೋಗಿಗಳಿಗೆ ಬ್ರ್ಯಾಕಿಥೆರಪಿಯು ಅತ್ಯುತ್ತಮವಾದ ವಿಕಿರಣ ಚಿಕಿತ್ಸೆಯ ತಂತ್ರವಾಗಿದೆ; ಕ್ಯಾನ್ಸರ್ ಗಡ್ಡೆಗೆ ನಿಖರವಾಗಿ ವಿಕಿರಣ ನೀಡುವುದು ಕಿರು ಚಿಕಿತ್ಸೆಯ ಅವಧಿ ಮತ್ತು ವಿಕಿರಣ ಡೋಸ್ ಪಾತ ಅತ್ಯುತ್ತಮವಾಗಿರುವುದು ಮಾತ್ರವಲ್ಲದೇ ದೇಹದ ಇತರ ಭಾಗಗಳು ವಿಕಿರಣಕ್ಕೆ ತುತ್ತಾಗುವುದು ಅತೀ ಕನಿಷ್ಠ ಎಂಬುದು ಇದಕ್ಕೆ ಕಾರಣ.
ಶಾಂಭವಿ ಅಸಿಸ್ಟೆಂಟ್ ಪ್ರೊಫೆಸರ್, ಸೀನಿಯರ್ ಸ್ಕೇಲ್, ಮೆಡಿಕಲ್ ರೇಡಿಯೇಶನ್ ಫಿಸಿಕ್ಸ್ ವಿಭಾಗ, ಎಂಸಿಎಚ್‌ಪಿ, ಮಾಹೆ, ಮಣಿಪಾಲ
ಜ್ಯೋತಿ ಸೀನಿಯರ್ ಗ್ರೇಡ್ ಲೆಕ್ಚರರ್, ರೇಡಿಯೋಥೆರಪಿ ಮತ್ತು ಓಂಕಾಲಜಿ ವಿಭಾಗ, ಕೆಎಂಸಿ, ಮಾಹೆ, ಮಣಿಪಾಲ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.